ಸ್ವಯಂವರ ಪದ್ಧತಿ

 


ಪುರಾಣಗಳಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದಾದದ್ದು ರಾಜಕುಮಾರಿಯರ ಸ್ವಯಂವರಗಳನ್ನು. ಅಂದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ತನಗೆ ಬೇಕಾದ ಮತ್ತು ತನಗೊಪ್ಪುವ ಪುರುಷನನ್ನು ವಿವಾಹಕ್ಕಾಗಿ ತಾವೇ ಆರಿಸಿಕೊಳ್ಳಬಹುದಾಗಿತ್ತು. 


ಈ ಪದ್ಧತಿ ಎಷ್ಟು ಚಂದ ಇತ್ತು ಅನ್ಸುತ್ತೆ ಅಲ್ವಾ? 


ಆದರೆ ಅದು ಕೇವಲ ರಾಜಕುಮಾರರ ಅಂದ-ಚಂದಗಳನ್ನು ನೋಡಿ ಆರಿಸುವ ಕಾರ್ಯಕ್ರಮ ಆಗಿರಲಿಲ್ಲ... ಬದಲಿಗೆ ಸ್ವಯಂವರಗಳಲ್ಲಿ ಸ್ಫರ್ಧೆಗಳು ಸಹ ಇರುತ್ತಿದ್ದವು. ಏಕೆಂದರೆ ಇಲ್ಲಿ ಆಯ್ಕೆಯಾಗುವವನು ಮುಂದೆ ರಾಜ್ಯವನ್ನು ಆಳಬೇಕಾದ್ದರಿಂದ, ಆತ ಅಂದ-ಚಂದ ಇರುವುದರ ಜೊತೆಗೇ ಬುದ್ಧಿವಂತ ಮತ್ತು ಸಾಹಸಿಯೂ ಆಗಿರಬೇಕಾದದ್ದು ಅವಶ್ಯಕವಾಗಿತ್ತು. ಆ ಸ್ಫರ್ಧೆಯಲ್ಲಿ ಗೆದ್ದವನಿಗೆ ರಾಜಕುಮಾರಿ ವಿಜಯದ ಮಾಲೆ ಹಾಕುತ್ತಿದ್ದಳು.

          

ಅಂತಹದ್ದೇ ಒಂದು ಸ್ವಯಂವರ ದ್ರೌಪದಿಯದ್ದು.

          

ಅವಳು ಹುಟ್ಟಿದ್ದೇ ಅರ್ಜುನನಿಗಾಗಿ. ಈ ಸ್ವಯಂವರವೂ ಸಹ ಅವನಿಗಾಗಿಯೇ. ಏಕೆಂದರೆ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಹೋಗಿದ್ದಾರೆ ಅಂತಲೇ ಎಲ್ಲರೂ ತಿಳಿದಿದ್ದರು. ಆದರೆ ದ್ರುಪದ ಮಾತ್ರ ಇದನ್ನು ನಂಬಿರಲಿಲ್ಲ. ಅತ್ಯಂತ ಸಾಹಸಿಗಳಾದ ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಬದುಕಿದ್ದಾರೆ ಎಂದೇ ಅವನ ನಂಬಿಕೆ. 


ಆ ಕಾರಣದಿಂದಲೇ ತನ್ನ ಮಗಳ ಸ್ವಯಂವರದ ಜೊತೆಗೆ ಒಂದು ಬಿಲ್ವಿದ್ಯೆಯ ಸ್ಫರ್ಧೆಯನ್ನು ಸಹ ಇಟ್ಟಿದ್ದ. ಅದೆಂಥಾ ಸ್ಪರ್ಧೆ ಎಂದರೆ ಆ ಸ್ಪರ್ಧೆಯನ್ನು ಅರ್ಜುನ ಮಾತ್ರವೇ ಗೆಲ್ಲಲು ಸಾಧ್ಯವಾಗಬೇಕು ಹಾಗಿತ್ತು. ಹೇಗಿದ್ದರೂ ಬಿಲ್ವಿದ್ಯೆಯಲ್ಲಿ ಅರ್ಜುನನ್ನು ಸೋಲಿಸುವವರು ಯಾರೂ ಇರಲಿಲ್ಲ. ಹಾಗಾಗಿ ಅವನೇ ಈ ಸ್ವಯಂವರ ಗೆಲ್ಲುತ್ತಾನೆ ಎಂದು ಯೋಚಿಸುತ್ತಾ ಎಲ್ಲರೂ ಅರ್ಜುನನಿಗಾಗಿ ಕಾಯುತ್ತಿದ್ದರು.

          

ಇತ್ತ ದ್ರೌಪದಿ ಸ್ವಯಂವರಕ್ಕೆ ಬಂದವರನ್ನೆಲ್ಲ ನೋಡುತ್ತಲೇ ಇದ್ದಳು. ಆದರೆ ಅವಳ ಕಣ್ಣುಗಳಲ್ಲಿ ಇದ್ದ ನಿರೀಕ್ಷೆ ಅರ್ಜುನಿಗಾಗಿ ಮಾತ್ರ. ಎಂದೂ ಕಾಣದ ಆ ವ್ಯಕ್ತಿಗಾಗಿ ತನ್ನ ಹೃದಯದ ಬಾಗಿಲುಗಳನ್ನು ತೆರೆದು ಕಾದಿದ್ದಳು ದ್ರೌಪದಿ. ತನ್ನ ಸ್ವಯಂವರಕ್ಕೆ ಯಾರು ಆಗಮಿಸಿದರೂ ಇವನೇ ಅರ್ಜುನ ಆಗಿರಬಹುದೇ ಅಂತನಿಸುತ್ತಿತ್ತು ಅವಳಿಗೆ. 


ನಂತರ ಹೊಳಪಿಲ್ಲದ ಅವರ ಮುಖ ನೋಡಿ ಇವನು‌ ಅವನಲ್ಲ ಎಂದುಕೊಳ್ಳುತ್ತಿದ್ದಳು. ವಾಸ್ತವವಾಗಿ ತನ್ನ ತಂದೆಯು ಅರ್ಜು‌ನನ ಬಗ್ಗೆ ವಿವರಿಸಿದ ರೀತಿಯಿಂದ ತನ್ನ ಕಲ್ಪನೆಯಲ್ಲಿ ಒಬ್ಬ ಸುರಸುಂದರಾಂಗ ಚೆಲುವನ ಮೂರ್ತಿ ರೂಪಿಸಿಕೊಂಡಿದ್ದಳು. ಇಲ್ಲಿ ಬಂದವರು ಆ ಕಲ್ಪನಾ ಮೂರ್ತಿಗೆ ಹೊಂದಿಕೆಯಾಗುತ್ತಿರಲಿಲ್ಲ. 


ಹಾಗಾಗಿ ಅವರೆಲ್ಲರೂ ಅವಳ ಕಣ್ಣಿಗೆ ನಿಸ್ತೇಜರಂತೆ ಕಾಣುತ್ತಿದ್ದರು. ಅವರು ಯಾರಿಗೂ ಆ ಸ್ಪರ್ಧೆಯಲ್ಲಿ ಗೆಲ್ಲಲು ಸಹ ಸಾಧ್ಯವಾಗಲಿಲ್ಲವಾದ್ದರಿಂದ ಆಕೆ ಇನ್ನೂ ಬಾರದ ಅರ್ಜುನನಿಗಾಗಿ ವರಮಾಲೆ ಹಿಡಿದು ಕಾಯುತ್ತಾ ನಿಂತಿದ್ದಳು.

         

ದೊಡ್ಡ ದೊಡ್ಡ ಮಹಾವೀರರುಗಳಿಂದ ಆ ಬಿಲ್ವಿದ್ಯೆಯ ಸ್ಫರ್ಧೆ ಗೆಲ್ಲಲಾಗಲಿಲ್ಲವೆಂದಾಗ ದ್ರುಪದ ಸ್ಪರ್ಧೆಯನ್ನು ಜನಸಾಮಾನ್ಯರಿಗೂ ವಿಸ್ತರಿಸಿದ. 


ಜನಸಾಮಾನ್ಯರು ಎಂದರೆ ಸಾಮಾನ್ಯರು ಅಷ್ಟೇ. 


ರಾಜ ಮನೆತನದವರಿಗೆ ಅವರುಗಳ ಬಗ್ಗೆ ಅಷ್ಟೇನೂ ಒಳ್ಳೆಯ ಭಾವನೆ ಇರುವುದಿಲ್ಲ. ಜೊತೆಯಲ್ಲಿ ಅವರುಗಳ ಬಗ್ಗೆ ಒಂದು ರೀತಿಯ ತಾತ್ಸಾರ ಕೂಡ ಇರುತ್ತದೆ. ಅದಕ್ಕಾಗಿಯೇ ರಾಜ ವಂಶಸ್ಥನಲ್ಲದ ಕರ್ಣನಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸಲು ದ್ರೌಪದಿ ಬಿಡುವುದಿಲ್ಲ. ರಾಜವಂಶಸ್ಥರು ಮಾತ್ರವೇ ಸಿಂಹಾಸನದಲ್ಲಿ ಕೂರಲು ಅರ್ಹರು ಎಂಬ ಅಲಿಖಿತ ಕಾನೂನು ಇದೆ. ಹಾಗಾಗಿ ರಾಜಕುಮಾರರೆಲ್ಲಾ ಸ್ಪರ್ಧೆಯಲ್ಲಿ ಸೋತಾಗ ಸಾಮಾನ್ಯ ಜನರು ಗೆಲ್ಲಲು ಸಾಧ್ಯವೇ ಎಂಬ ನಿರಾಸೆ ಎಲ್ಲರಲ್ಲಿಯೂ ಕವಿದಿತ್ತು.

         

ಆಗ ಜನರ ನಡುವಿನಿಂದ ಒಬ್ಬ ತೇಜಸ್ಸಿನಿಂದ ಬ್ರಾಹ್ಮಣ ಎದ್ದು ಬಂದ. 'ಬ್ರಾಹ್ಮಣನಾ?' ಎಂದು ಎಲ್ಲರೂ ಮೂಗು ಮುರಿದರು. 


ಆದರೆ ದ್ರೌಪದಿಗೆ ಗೊತ್ತಾಯಿತು ಆತನೇ ತನ್ನ ಮನದರಸ ಅಂತ. ಬ್ರಾಹ್ಮಣನಾಗಿದ್ದರೂ ಆತನ ಮುಖದಲ್ಲಿ ‌ಕ್ಷಾತ್ರ ತೇಜಸ್ಸಿತ್ತು.‌ ಕಣ್ಣುಗಳಲ್ಲಿ ವಿಶೇಷ ಹೊಳಪಿತ್ತು. ಅದನ್ನು ಯಾರೂ ಗಮನಿಸಲಿಲ್ಲ. ಆದರೆ ದ್ರೌಪದಿಗೆ ಗೊತ್ತಾಯಿತು. 


ಅವಳಿಗೆ ಆತ ಅರ್ಜುನ ಹೌದೋ ಅಲ್ಲವೋ ಅಂತ ಗೊತ್ತಾಗದಿದ್ದರೂ ಈತನೇ ತನ್ನ ಬಾಳ ಸಂಗಾತಿ ಅಂತ ಮಾತ್ರ ಹೊಳೆಯಿತು. ಏಕೆಂದರೆ ಅವನನ್ನು ನೋಡಿದ ಕೂಡಲೇ ಆಕೆ್ಗಯಲ್ಲಿ ಇವನಿಗಾಗಿಯೇ ತಾನು‌ ಜನ್ಮ ತಾಳಿರುವುದು, ಇವನಿಗಾಗಿಯೇ ತಾನು ಕಾಯುತ್ತಿರುವುದು ಎಂಬ ಭಾವ ತಾನಾಗಿಯೇ ಉಕ್ಕಿತು. 


ನಮ್ಮ ಭಾವ ಪ್ರಪಂಚದಲ್ಲಿ ಹೀಗೊಂದು ನಂಬಿಕೆ ಇದೆ. ನಮ್ಮ ಬಾಳಸಂಗಾತಿ ಆಗುವವರು ಬೇರೆಯವರ ಕಣ್ಣಿಗೆ ಹೇಗೇ ಕಾಣುತ್ತಿರಲಿ, ನಮ್ಮ ಕಣ್ಣಿಗೆ ವಿಶೇಷವಾಗಿ ಕಾಣುತ್ತಾರೆ. ದ್ರೌಪದಿಗೂ ಹೀಗೇ ಆಯ್ತು. ನೋಡನೋಡುತ್ತಲೇ ಅವಳು ಆ ಬ್ರಾಹ್ಮಣ ಕುಮಾರನಿಗೆ ಸೋತಳು. ಅವನು ಬಿಲ್ವಿದ್ಯೆಯಲ್ಲಿ ಗೆಲ್ಲಲಿ ಬಿಡಲಿ ಅವನಿಗೇ ಹಾರ ಹಾಕಬೇಕು ಅಂತ ನಿರ್ಧರಿಸಿದಳು.

          

ಅಷ್ಟರಲ್ಲಿ ಆಶ್ಚರ್ಯಕರ ಘಟನೆ ನಡೆಯಿತು.

          

ಘಟಾನುಘಟಿಗಳಿಗೆ ಸಾಧ್ಯವಾಗದ ಸ್ಪರ್ಧೆಯಲ್ಲಿ ಆ ಬ್ರಾಹ್ಮಣ ಗೆದ್ದು ಬಿಟ್ಟ. ದ್ರುಪದನಿಂದ ಹಿಡಿದು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಒಬ್ಬ ಬ್ರಾಹ್ಮಣನಿಂದ ಇದು ಹೇಗೆ ಸಾಧ್ಯ ಅಂತ. 


ಆದರೆ ಅವನು ಅರಗಿನ ಅರಮನೆಯಿಂದ ತಪ್ಪಿಸಿಕೊಂಡು, ಬ್ರಾಹ್ಮಣನಾಗಿ ವೇಷ ಮರೆಸಿಕೊಂಡಿದ್ದ ಅರ್ಜುನ ಅಂತ ಅವರು ಯಾರಿಗೂ ತಿಳಿಯಲೂ ಇಲ್ಲ, ಹಾಗಂತ ಅವರು ಯಾರೂ ಊಹಿಸಲೂ ಇಲ್ಲ. 


ಆದರೆ ದ್ರೌಪದಿಯ ಹೃದಯ ಅವನನ್ನು ಗುರುತಿಸಿತು. 


ಯಾರು ಹೇಳದಿದ್ದರೂ, ಅವನು ವೇಷ ಮರೆಸಿಕೊಂಡಿದ್ದರೂ ಸಹ ಅವಳ ಕಣ್ಣು ಅವನನ್ನು ಪತ್ತೆ ಮಾಡಿತು. ಯಾರೊಂದಿಗೆ ಮದುವೆಯಾಗಬೇಕು ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದಂತೆ. ಅದಕ್ಕಾಗಿ ತಮ್ಮ ಸಂಗಾತಿಗಳನ್ನು ತಾವೇ ಹುಡುಕಿಕೊಳ್ಳಲಿ ಎಂದೇ ಸ್ವಯಂವರ ಆಯೋಜಿಸುತ್ತಿದ್ದರೇನೋ? ಗಂಡಿಗಿಂತಲೂ ಹೆಣ್ಣು ಸೂಕ್ಷ್ಮ ಮನಸ್ಸಿನವಳಾದ ಕಾರಣಕ್ಕೆ ಹೆಣ್ಣಿಗೆ ಮಾತ್ರವೇ ಸ್ವಯಂವರ ಚಾಲ್ತಿಯಲ್ಲಿದ್ದಿರಬೇಕು.


 ***************


ಕೆ.ಎ.ಸೌಮ್ಯ

ಮೈಸೂರು


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ