ಅಗ್ರಜನೆದುರು ಸಿಡಿದೆದ್ದ ಅರ್ಜುನ
ನಮ್ಮ ಸುಪ್ತ ಮನಸ್ಸಿನೊಳಗೆ ಏನಿರುತ್ತದೆ ಅಂತ ನಮಗೇ ಗೊತ್ತಿರುವುದಿಲ್ಲ. ಸುಪ್ತ ಮನಸ್ಸು ಸಿಡಿವ ಜ್ವಾಲಾಮುಖಿಯಂತೆ. ಸಿಡಿಯುವ ಮುನ್ನ ಲಾವಾರಸ ಭೂಮಿಯೊಳಗೆ ಶಾಂತವಾಗಿಯೇ ಹರಿಯುತ್ತಿರುತ್ತದೆ. ಆದರೆ ಒಳಗಿನ ಒತ್ತಡ ತಡೆಯದೇ ಯಾವಾಗ ಸ್ಫೋಟಗೊಳ್ಳುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾದ ಸ್ಥಿತಿಯಲ್ಲಿ ಎಲ್ಲರೂ ಸಭ್ಯಸ್ಥರೇ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ನಮ್ಮೊಳಗೆ ಬಚ್ಚಿಕೊಂಡಿರುವ ರಾಗರಸಗಳೆಲ್ಲ ಸಿಡಿದು ಅನಾವರಣಗೊಳ್ಳುತ್ತವೆ. ಅರ್ಜುನ ಪಂಚ ಪಾಂಡವರಲ್ಲಿ ಮಧ್ಯದವನು. ಅಪ್ರತಿಮ ಶೂರ, ಧೀರ, ಅಷ್ಟೇ ಸಂಯಮಿ. ಅಣ್ಣನ ವಾಕ್ಯಗಳನ್ನು ಅಕ್ಷರಶಃ ಪಾಲಿಸುವ ಪ್ರಾಮಾಣಿಕ ಸಹೋದರ. ತಾನು ಗೆದ್ದು ತಂದ ಹೆಣ್ಣನ್ನು ತಾಯಿಯ ಮಾತಿನಂತೆ ತನ್ನ ನಾಲ್ವರು ಸಹೋದರರೊಡನೆ ಹಂಚಿಕೊಂಡ ತ್ಯಾಗಿ. ಭೂಮಂಡಲವೆಲ್ಲವನ್ನೂ ಏಕಾಂಗಿಯಾಗಿಯೇ ಗೆಲ್ಲುವ ಶಕ್ತಿಯಿದ್ದರೂ ಅಜ್ಞಾತವಾಸದ ಸಮಯದಲ್ಲಿ ಬೃಹನ್ನಳೆಯ ವೇಷ ಹಾಕಿದವನು. ಇದೆಲ್ಲವನ್ನೂ ಅವನು ಮಾಡಿದ್ದು ಯುದಿಷ್ಠಿರನಿಗಾಗಿ. ಅವನ ಭಾತೃಪ್ರೇಮ ಅತ್ಯಂತ ಉನ್ನತವಾದದ್ದು. ಆದರೂ ಅರ್ಜುನ ಒಮ್ಮೆ ರಾಗದ್ವೇಷಗಳ ಬಲೆಗೆ ಸಿಕ್ಕು ತನ್ನ ಅಗ್ರಜನನ್ನೇ ಕೊಲ್ಲಲು ಮುಂದಾಗುತ್ತಾನೆ. ಆ ಪ್ರಸಂಗ ಹೀಗಿದೆ.... ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನಿಂದ ಹೊಡೆತ ತಿಂದ ಧರ್ಮರಾಯ ಮೂರ್ಚಿತನಾದ ಎಂಬ ಸುದ್ದಿ ಕೇಳಿ ಗಾಯಗೊಂಡಿರುವ ಅಗ್ರಜನನ್ನು ನೋಡಲು ಕೃಷ್ಣಾರ್ಜುನರಿಬ್ಬರೂ ಬರುತ್ತಾರ...