ಸೈರಂಧ್ರಿ ಎಂಬ ಅಗ್ನಿಕನ್ಯೆ

 

ಅವನು ಅವಳನ್ನು ನೋಡಿಯೂ ಸಹ ಇರಲಿಲ್ಲ. ಸೈರಂದ್ರಿಯನ್ನು ದಿಟ್ಟಿಸಿ ನೋಡುವುದಿರಲಿ, ಕಡೆಗಣ್ಣಿನಿಂದ ನೋಡುವುದಕ್ಕೂ ಅವರು ಅರ್ಹರೆಂದು ಕೀಚಕ ಭಾವಿಸಿರಲಿಲ್ಲ. 


ವಿರಾಟನ ಅರಮನೆಯಲ್ಲಿ ಬೇಕಾದಷ್ಟು ಜನ ಸೈರಂದ್ರಿಯರಿದ್ದರು. ಎಲ್ಲರೂ ಇದ್ಧದ್ದು ಒಂದೇ ರೀತಿಯಲ್ಲಿ... ಪೋಷಣೆಯಿಲ್ಲದೇ ಸೊರಗಿದ ದೇಹ, ಕಾಂತಿಯಿಲ್ಲದ ನಿಸ್ತೇಜ ಕಣ್ಣುಗಳು, ಚುರುಕುತನವಿಲ್ಲದ ನಡಿಗೆ...


ಪಾಪ.. ಅವರು ತಾನೇ ಹೇಗೆ ಖುಷಿಯಾಗಿರುತ್ತಾರೆ?


ಬುದ್ಧಿ ಬಂದಾಗಿನಿಂದಲೂ ಅವರು ಈ ಅರಮನೆಯಲ್ಲಿ ಬಂಧಿಗಳಾಗಿದ್ದಾರೆ. ಮಹಾರಾಣಿ ಸುದೇಷ್ಣೆಯು ವಿರಾಟನನ್ನು ಮದುವೆಯಾಗಿ ಈ ಅರಮನೆಗೆ ಕಾಲಿಟ್ಟಾಗ ಅವಳೊಡನೆ ಬಂದ ಸಖಿಯರ ಪಡೆ ಇದು. ಮಹಾರಾಣಿಯ ಸೇವೆಯೊಂದೇ ಅವರ ಜೀವನದ ಪರಮಗುರಿ.


ಆದರೆ ಇಂತಹ ನಡೆದಾಡುವ ಶವಗಳಂತಿರುವ ಸೈರಂದ್ರಿಯರು ತನ್ನಕ್ಕನನ್ನು ಮಾತ್ರ ಪ್ರತಿನಿತ್ಯವೂ ಮದುಮಗಳ ಹಾಗೆ ಅದು ಹೇಗೆ ಸಿಂಗರಿಸುತ್ತಾರೋ ಎಂದು ಸೋಜಿಗಗೊಳ್ಳುತ್ತಿದ್ದ ಕೀಚಕ. ಹಾಗೆಯೇ ಅಕ್ಕನಿಗೆ ಅಲಂಕಾರ ಮಾಡಿದ ಹಾಗೆ ತಾವು ಯಾಕೆ ಮಾಡಿಕೊಳ್ಳುವುದಿಲ್ಲವೋ ಅಂತಲೂ ಅಂದುಕೊಳ್ಳುತ್ತಿದ್ದ.


ಅನಾಸಕ್ತಿಯೋ.. ಮತ್ತೊಂದೋ..? ಅಥವಾ ಇವರೆಲ್ಲಾ ಸಿಂಗರಿಸಿಕೊಂಡುಬಿಟ್ಟರೆ ತನಗಿಂತಲೂ ಚಂದ ಕಂಡು ಬಿಡುತ್ತಾರೆ ಅಂತ ಅಕ್ಕನಿಗೂ ಹೊಟ್ಟೆಕಿಚ್ಚೋ ಏನೋ? ಒಟ್ಟಿನಲ್ಲಿ ಸುದೇಷ್ಣೆಯ ಅಂತಃಪುರದಲ್ಲಿ ಇರುವಷ್ಟು ಹೊತ್ತು ಅವನು ತನ್ನ ಮತ್ತು ಅಕ್ಕನ ಉಪಸ್ಥಿತಿ‌ ಬಿಟ್ಟರೆ ಬೇರೆ ಯಾರನ್ನೂ ಪರಿಗಣಿಸುತ್ತಲೂ ಇರಲಿಲ್ಲ.


ತನ್ನ ಪಾಡಿಗೆ ಬಂದು ಅಕ್ಕನ ಕ್ಷೇಮ ವಿಚಾರಿಸಿ ತನ್ನ ಪಾಡಿಗೆ ಹೊರಟು ಹೋಗುತ್ತಿದ್ದ. ಅಂತಹ ಕೀಚಕ ಅಂದು ಅವಳನ್ನು ನೋಡಿದ!!!


ನೋಡಿದ ಅಂತ ಹೇಗೆ ಹೇಳುವುದು?


ಯಾಕೆಂದರೆ ನೋಡಿದ್ದೇನೋ ನಿಜ. ಆದರೆ ಅವನಿಗೆ ಅವಳ ಮುಖವೇ ನೆನಪಿರಲಿಲ್ಲ. ತನ್ನ ಸುತ್ತಮುತ್ತಲಿನ ದಾಸಿಯರನ್ನು ಅವನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿರುವಾಗ ಯಾರೋ ಒಬ್ಬ ದಾಸಿ ಕಟ್ಟ ಕಡೆಯ ಕ್ಷಣದಲ್ಲಿ ಅವನ ಗಮನ ಸೆಳೆದಿದ್ದಳು.


ಆದದ್ದಿಷ್ಟು...


ಒಂದು ದಿನ ಕೀಚಕ ತನ್ನ ಅಕ್ಕನೊಡನೆ ಮಾತನಾಡಿ ಅರಮನೆಯಿಂದ ಹೊರ ಹೊರಟಾಗ ಅವನ ಪಕ್ಕದಲ್ಲಿ ಒಬ್ಬ ದಾಸಿ ಅವನನ್ನು ಹಾದು ಹೋದಳು. ಆಗ ಅವನಿಗೊಂದು ರೀತಿಯ ಶಾಖದ ಅನುಭವವಾಯ್ತು.


'ಅರೆ! ಇದೇನು ಈಕೆ ತನ್ನೊಡನೆ ಹೋಮ ಕುಂಡವನ್ನು ಎತ್ತಿಕೊಂಡು ಓಡಾಡುತ್ತಿರುವಳೇ?' ಅಂತ ಆಶ್ಚರ್ಯದಿಂದ ಹಿಂತಿರುಗಿ ನೋಡಿದ ಕೀಚಕ.


ಆಕೆ ಕಾಣಲಿಲ್ಲ. ಬದಲಿಗೊಂದು ಬೆಳಕಿನ ಜ್ವಾಲೆ ತಟಕ್ಕನೆ ಕಂಡು ಮಾಯವಾದಂತಾಯ್ತು.


'ಅರೆ!' ಎಂದು ಆಶ್ಚರ್ಯದಿಂದ ಅರಮನೆಗೆ ಹಿಂತಿರುಗಿ ಬಂದ. ಎದುರಲ್ಲಿ ನೂರಾರು ದಾಸಿಯರಿದ್ದರು. ಆದರೆ ಆಕೆ ಕಾಣಲಿಲ್ಲ. ಕಾಣುವುದು ಹೇಗೆ? ಇವನು ಅವಳ ಮುಖವನ್ನೇ ಕಂಡಿರಲಿಲ್ಲವಲ್ಲ. ಯಾರೂ ಅವಳ ಹಾಗೆ ಅನ್ನಿಸಲಿಲ್ಲ ಎಂದರೆ ಸೂಕ್ತ‌.


ಎದುರಿಗಿದ್ದ ದಾಸಿಯರದ್ದೋ ಪ್ರೇತ ಕಳೆ ಹೊತ್ತ ಮುಖಗಳು. ನಗುವಿಲ್ಲ, ನಲಿವಿಲ್ಲ.. ಇವರ್ಯಾರೂ ಅಲ್ಲ ಎಂದು ಯೋಚಿಸುತ್ತಾ ಸುದೇಷ್ಣೆಯ ಬಳಿ ಬಂದ. ಊಹೂಂ ಎಷ್ಟು ಹುಡುಕಿದರೂ ಆಕೆ ಸಿಗಲಿಲ್ಲ. ಎರಡು ದಿನ ಕಳೆದರೂ ಆಕೆ ಮತ್ತೆ ಕಣ್ಣಿಗೆ ಬೀಳಲಿಲ್ಲ. ಆಕೆಯ ಶಾಖವೂ ಅನುಭವಕ್ಕೆ ಬರಲಿಲ್ಲ. ಅದಕ್ಕಾಗಿಯೇ ತಾನು ಬರುತ್ತಿದ್ದ ಸಮಯವನ್ನು ಬದಲಾಯಿಸಲಾರಂಭಿಸಿದ.


ಪ್ರತೀದಿನ ಕೀಚಕ ತನ್ನ ಅರಮನೆಗೆ ಬರುವುದನ್ನು ನೋಡಿ ಸುದೇಷ್ಣೆಗೇನೋ ವಾಸನೆ ಹೊಡೆಯಿತು. ಅವನು ಯಾರಿಗಾಗಿ ಬರುತ್ತಿರಬಹುದು ಅಂತ ಯೋಚನೆ ಶುರುವಾಯಿತು. ಕೊನೆಗೆ ಅವಳ ಅನುಮಾನದಂತೆಯೇ ಆಯಿತು.


ಒಮ್ಮೆ ಸೈರಂಧ್ರಿ ತನಗಾಗಿ ಕೇಶತೈಲ ಹಚ್ಚುತ್ತಿದ್ದಾಗ ಬಂದ ಕೀಚಕ. ಸೈರಂಧ್ರಿ ಆತನತ್ತ ಕಡೆಗಣ್ಣಿನಿಂದಲೂ ನೋಡಲಿಲ್ಲ. ಯಾವುದೋ ಲೋಕದಲ್ಲಿರುವಂತೆ ತನ್ನ ಪಾಡಿಗೆ ತಾನಿದ್ದಳು. ಒಳ ಬರುತ್ತಿದ್ದ ಕೀಚಕನಿಗೆ ದೂರದಿಂದಲೇ ಶಾಖದ ಅನುಭವ...


'ಈ ಬೆಂಕಿ ಯಾಕಿರಬಹುದು? ಸ್ವಪ್ರೇರಣೆಯೇ? ಪ್ರತೀಕಾರದ ಜ್ವಾಲೆಯೇ? ಆತ್ಮಾಭಿಮಾನದ ದ್ಯೋತಕವೇ?' ಯೋಚಿಸುತ್ತಾ ಬಂದವನಿಗೆ ಸೈರಂದ್ರಿಯ ಮುಖ ನೋಡಿದ ತಕ್ಷಣ ವಿವೇಚನೆಯೆಂಬುದೇ ಮರೆತು ಹೋಯಿತು.


ರೆಪ್ಪೆ ಮಿಟುಕಿಸದೇ ನೋಡುತ್ತಾ ನಿಂತ. ಕಪ್ಪಗಿದ್ದರೂ ಕಟ್ಟುಮಸ್ತಾಗಿದ್ದ ದೇಹ ಸೌಂದರ್ಯ, ಕಣ್ಣಿನ ವಿಶೇಷ ಕಾಂತಿ, ಆ ಕಾಂತಿಯಲ್ಲಿದ್ದ ಛಲ, ಸೌಂದರ್ಯ ಮುಚ್ಚಿಡಲು ಹೆಣಗುತ್ತಿದ್ದ ಅವಯವಗಳು..


ಈ ರತಿದೇವಿಯ ಮುಂದೆ ಸರ್ವಾಲಂಕಾರ ಭೂಷಿತೆಯಾದ ತನ್ನಕ್ಕನೇ ಮುದುಕಿಯ ಹಾಗೆ ಕಂಡಳು ಕೀಚಕನ ಕಣ್ಣಿಗೆ. ಯಾವ ಅಲಂಕಾರವೂ ಇಲ್ಲದೇ ಈಕೆ ಹುಚ್ಚು ಹಿಡಿಸುತ್ತಿರುವಾಗ, ಇನ್ನು ಅಲಂಕಾರ ಮಾಡಿಕೊಂಡರೆ ಹೇಗಿರಬಹುದು ಎಂಬ ಆಲೋಚನೆ ಬಂತು ಅವನಿಗೆ.


ಸುದೇಷ್ಣೆಗೆ ಅವನೇನೂ ಹೇಳಬೇಕಾಗಿಯೇ ಇರಲಿಲ್ಲ.


ತಾನೇ ತಾನಾಗಿ ಅವಳಿಗೆ ವಿಷಯ ಗೊತ್ತಾಗಿತ್ತು. ಹಾಗಾಗಿ ಸೈರಂದ್ರಿ ಅಲ್ಲಿಂದ ಹೋದ ನಂತರ ಆಕೆಯ ಬಗ್ಗೆ ಕೀಚಕನಿಗೆ ಹೇಳಿದಳು. "ನೋಡಿದಷ್ಟೂ ನಿಗೂಢ, ಕೆಣಕಿದಷ್ಟೂ ಗಾಢ ಈ ಸೈರಂಧ್ರಿಯ ನಡೆ. ಅವಳ ತಂಟೆಗೆ ಹೋಗಬೇಡ. ತನ್ನ ಇಚ್ಛಾಶಕ್ತಿಯಿಂದಲೇ ಸುಟ್ಟು ಬೂದಿ ಮಾಡಿಬಿಟ್ಟಾಳು" ಎಂದಳು.


ಕೀಚಕ ಅಕ್ಕನ ಮಾತು ಕೇಳಲಿಲ್ಲ.


ಏನಾದರಾಗಲಿ ಅವನ ಪ್ರಕಾರ ಸೈರಂದ್ರಿ ಒಬ್ಬ ಹೆಣ್ಣು ಅಷ್ಟೇ. ತಾನೋ ಗಂಡಸು.. ತಾನು ಬಯಸಿದವರು ತನ್ನ ವಶವಾಗಲೇ ಬೇಕು ಅನ್ನುವುದೊಂದೇ ಆತನ ಗುರಿ. ಅವಳು ದಾಸಿಯೇ ಆಗಿರಲಿ ಅಥವಾ ರಾಜಕುಮಾರಿ. ತಾನು ಬೇಕೆಂದ ಮೇಲೆ ಬೇಕಷ್ಟೇ..


ಹಾಗಾಗಿ ಸುದೇಷ್ಣೆಯ ಎಚ್ಚರಿಕೆಯನ್ನೂ ದಾಟಿ ಅವಳನ್ನು ಬಯಸಿದ. ಅಷ್ಟು ಜನ ನಿಸ್ತೇಜರ ನಡುವೆ ಒಂದು ಫಳಗುಟ್ಟುವ ಒಂಟಿ ನಕ್ಷತ್ರ ಹೇಗೆ ಉದ್ಭವಿಸಿತು ಅಂತ ತಿಳಿಯುವ ವಿವೇಚನೆ ಅವನಿಗಿಲ್ಲದೇ ಹೋಯಿತು. ಕೊನೆಗೆ ತನ್ನನ್ನು ತಾನೇ ಆತ್ಮಾಹುತಿ ಮಾಡಿಕೊಳ್ಳಬೇಕಾಯಿತು.


ಸ್ವಲ್ಪ ವಿವೇಚನೆ ಇದ್ದಿದ್ದರೂ ಪ್ರತೀಕಾರವನ್ನೇ ಉಸಿರಾಡುತ್ತಿದ್ದ ದ್ರೌಪದಿಯ ಸೇಡಿನ ಕಿಚ್ಚು ಅವನ ಗಮನಕ್ಕೆ ಬರುತ್ತಿತ್ತು. ಪತಂಗದ ಹುಳುವಿನಂತೆ ತಾನು ಆ ಬೆಂಕಿಯ ಜ್ವಾಲೆಗೆ ಸಿಕ್ಕು ಬೂದಿಯಾಗಬಹುದು ಎಂಬ ಅರಿವು ಮೂಡುತ್ತಿತ್ತು. ಆದರೆ ಅವನು ಮೇಲ್ನೋಟಕ್ಕೆ ಕಂಡ ದ್ರೌಪದಿಯ ಸೌಂದರ್ಯವನ್ನು ಮಾತ್ರ ಆಸ್ವಾದಿಸಿದ. ಆ ಸೌಂದರ್ಯದ ಹಿಂದಿದ್ದ ಶಾಖದ ಮೂಲವನ್ನು ಅರಿಯಲು ಮರೆತ.


ಮರೆತು ತಾನೇ ಬಲಿಯಾದ.


**************
ಕೆ.ಎ.ಸೌಮ್ಯ
ಮೈಸೂರು

(ಓ ಮನಸೇ- ಅಕ್ಟೋಬರ್ 2018)


Popular posts from this blog

ಶಾಕುಂತಲೆ-ದುಶ್ಯಂತ

ಕುಂತಿ