ಶಾಕುಂತಲೆ-ದುಶ್ಯಂತ


ಮರೆವಿನಲ್ಲಿ ಎರಡು ವಿಧ. ಒಂದು ನಿಜವಾದ ಮರೆವು. ಮತ್ತೊಂದು ಪ್ರಜ್ಞಾ ಪೂರ್ವಕವಾದ ಮರೆವು. ದುಶ್ಯಂತನಿಗೆ ಆವರಿಸಿದ್ದು ಎರಡನೆಯ ವಿಧವಾದ ಮರೆವು. ಗೊತ್ತಿದ್ದೂ ಮರೆತಂತೆ ನಟಿಸಲು ವಿಶೇಷ ಪ್ರತಿಭೆ ಬೇಕು. 


ಕಣ್ಣು ಒಂದು ವಸ್ತುವನ್ನು ಗುರುತಿಸಿದೊಡನೆ ಅದನ್ನು ಬಾಯಿ ಬಿಟ್ಟು ಹೇಳಬೇಕೋ ಬೇಡವೋ ಎಂಬುದನ್ನು ಬುದ್ದಿ ನಿರ್ಧರಿಸುತ್ತದೆ. ತಮ್ಮ ಅಂತಸ್ತಿಗೆ ಅನುಗುಣವಾಗಿ ಕೆಲವರಿಗೆ ಹಳೆಯ ನೆನಪುಗಳು ಮತ್ತೆ ನೆನಪಾಗುತ್ತವೆ. ಹಾಗೆಯೇ ಕೆಲವು ಮರೆತೂ ಹೋಗುತ್ತವೆ. ತಮ್ಮ ಮುಂದಿನ ಜೀವನಕ್ಕೆ ಲಾಭವಾಗುವುದಾದರೆ ಎಲ್ಲವೂ ನೆನಪಾಗುತ್ತದೆ. ಇಲ್ಲದಿದ್ದರೆ ಎದುರಿನವರ ಪ್ರಾಮಾಣಿಕ ಕಣ್ಣುಗಳನ್ನು ಕಂಡೂ ಸಹ ಸುಮ್ಮನಿರಬೇಕಾಗುತ್ತದೆ.


ಮಹರ್ಷಿ ಕಣ್ವರ ಆಶ್ರಮಕ್ಕೆ ದುಶ್ಯಂತ ಬಂದಾಗ ಆ ಹಚ್ಚ ಹಸುರಿನ ಪರಿಸರದ ನಡುವೆ ತರುಣಿ ಶಾಕುಂತಲೆ ಅವನ‌ ಕಣ್ಣಿಗೆ ಅಪ್ಸರೆಯ ಹಾಗೆ ಕಂಡದ್ದು ನಿಜ. ಏಕೆಂದರೆ ಆ ಸಂದರ್ಭವೇ ಹಾಗಿತ್ತು. ಅದು ಅವನ ಅರಮನೆ ಆಗಿರಲಿಲ್ಲ. ಅಲ್ಲಿ ಅವನ ಅವಶ್ಯಕತೆ ಪೂರೈಸುವ ಸಖಿಯರು ಇರಲಿಲ್ಲ. ಸೇವೆ ಮಾಡಲು ದಾಸಿಯರು ಇರಲಿಲ್ಲ. 


ಕೈಗೆ ಸಿಕ್ಕಷ್ಟರಲ್ಲಿ ಅವನು ತೃಪ್ತಿ ಹೊಂದಬೇಕಿತ್ತು. ಅಲ್ಲಿದ್ದ ಹೆಣ್ಣುಗಳ ಪೈಕಿ ಶಾಕುಂತಲೆಯೇ ಎದ್ದು ಕಾಣುತ್ತಿದ್ದುದರಿಂದ ದುಶ್ಯಂತ ಅವಳಿಗೆ ಮನಸೋತ. ಪ್ರೀತಿ ಎಂಬ ಪದದ ಬಲಹೀನತೆ ಅವನಿಗೆ ಚೆನ್ನಾಗಿ ಗೊತ್ತಿತ್ತು ಅಂತನಿಸುತ್ತದೆ. 


ನಮ್ಮ ಅಸ್ತಿತ್ವಕ್ಕಾಗಿ ನಾವು ಒಬ್ಬರನ್ನು ಪ್ರೀತಿಸುತ್ತೇವೆ. ಆದರೆ ಈ ಪ್ರೀತಿ ಎನ್ನುವ ಮಾಯೆ ನಮಗೆ ಗೌರವ ದೊರಕಿಸಿಕೊಡುವ ಬದಲು ನಮ್ಮನ್ನು ಗುಲಾಮರನ್ನಾಗಿಸುವುದೇ ಹೆಚ್ಚು.


ಮುಗ್ಧೆ ಶಾಕುಂತಲೆ ದುಶ್ಯಂತನನ್ನು ಪ್ರೀತಿಸಿದ ಮರುಕ್ಷಣವೇ ಅವನ ದಾಸಿಯಂತಾಗಿ ಹೋದಳು. ಅವನ ಸೇವೆ, ಅವನ ಉಪಚಾರ ಮಾಡುವುದು ತನ್ನ ಕರ್ತವ್ಯ ಎಂದು ಭಾವಿಸಿದಳು. ಅದರ ಒಂದು ಭಾಗವಾಗಿ ಅವನನ್ನು ಗಾಂಧರ್ವ ವಿವಾಹವಾಗಿ ಅವನ ದೈಹಿಕ ಅವಶ್ಯಕತೆಯನ್ನೂ ಸಹ ಪೂರೈಸಿದಳು. 


ಅದೃಷ್ಟ ನೋಡಿ ದುಶ್ಯಂತ ಮಹಾರಾಜನದ್ದು. 


ಒಂದು ಪೈಸೆ ಖರ್ಚಿಲ್ಲದೇ ಕೇವಲ ಪ್ರೀತಿಸುವೆನೆಂದು ಹೇಳಿ ಅವಳಿಂದ ಎಲ್ಲಾ ರೀತಿಯ ಸೇವೆ ಪಡೆದ. ನಂತರ ಅವಳನ್ನು ಅರಮನೆಗೆ ಕರೆಸಿಕೊಳ್ಳುತ್ತೇನೆ ಅಂತ ಮಾತು ಕೊಟ್ಟು ತನ್ನೂರಿಗೆ ಹಾರಿದ. ನಂತರ ಇಲ್ಲಿ ನಡೆದ ಎಲ್ಲವನ್ನೂ ಮರೆತು ಹಾಯಾಗಿ ಇದ್ದುಬಿಟ್ಟ.


ಶಾಕುಂತಲೆಯೋ ಮುಗ್ಧರಲ್ಲಿ ಮುಗ್ಧೆ. ತನ್ನನ್ನು ಬಳಸಿಕೊಳ್ಳಲಾಗಿ್ದೆ ಎಂಬ ಅರಿವು ಸಹ ಇಲ್ಲದೇ ಮಾತು ಕೊಟ್ಟು ಹೋದ ಪುರುಷನಿಗಾಗಿ ಕಾದದ್ದೇ ಬಂತು‌ ಆಕೆಗೆ.


ಎಂದೋ ಒಮ್ಮೆ ನಡೆದ ಸಮಾಗಮದಿಂದ ಒಂದು ಮಗುವೂ ಹುಟ್ಟಿ ಅವಳ ಜೀವನವೇ ಏರುಪೇರಾಯಿತು. ಪ್ರೀತಿ ಇಲ್ಲದೇ ಬದುಕುವುದು ಸುಲಭ. ಆದರೆ ಪ್ರೀತಿ ಸಿಕ್ಕ ಮೇಲೆ ಅದನ್ನು ಕಳೆದುಕೊಂಡು ಬದುಕುವುದು ಬಹಳ‌ ಕಷ್ಟ. ಬಹಳಷ್ಟು ಮನೋದಾರ್ಢ್ಯ ಬೇಕಾಗುತ್ತದೆ. ಎಲ್ಲರಿಗೂ ಅದು ಇರುವುದಿಲ್ಲ. ಶಾಕುಂತಲೆಗೂ ಇತ್ತೋ‌ ಇಲ್ಲವೋ? 


ಕಾಯುವಿಕೆ ಎನ್ನುವುದು ಅವಳಿಗೆ ಆ ದಾರ್ಢ್ಯತೆಯನ್ನು ತಂದುಕೊಟ್ಟಿತ್ತು. 


ಈ ಮಿಲನದಿಂದಾಗಿ‌ ಆಕೆ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡಳು. ನಗು, ಉತ್ಸಾಹ, ನಲಿವುಗಳನ್ನು ಬಿಟ್ಟು ಕಾಯುವಿಕೆಯನ್ನೇ ಉಸಿರಾಗಿಸಿಕೊಂಡಳು. ಅವಳ ಜೀವನದ ಖುಷಿಯನ್ನೇ ಬಲಿ ತೆಗೆದುಕೊಂಡ ದುಶ್ಯಂತ ಇದ್ಯಾವುದರ ಚಿಂತೆ ಇಲ್ಲದೇ ಇದ್ದ. ಈ ಮರೆವು ನಿರ್ಲಕ್ಷ್ಯತೆಯ ಪರಮಾವಧಿ.


ಕೊನೆಗೆ ಕಣ್ವ ಮಹರ್ಷಿಗಳು ಆಕೆಯನ್ನೂ, ಆಕೆಯ ಮಗನನ್ನು ದುಶ್ಯಂತನ ಬಳಿ ಕರೆದೊಯ್ದರು. ದುಷ್ಯಂತನ ಕಣ್ಣು ಅವಳನ್ನು ಗುರುತಿಸಲಿಲ್ಲ. ಹೋದ ಕಡೆಯಲ್ಲೆಲ್ಲಾ ಒಬ್ಬೊಬ್ಬ ಹೆಣ್ಣನ್ನು ಪ್ರೀತಿಸಿ ಬರುತ್ತಿದ್ದವನು ಅವನು. ಹೇಗೆ ತಾನೇ ನೆನಪಿರುತ್ತದೆ? 


ಅವನ ಪ್ರಕಾರ ಹೆಣ್ಣೆಂದರೆ ಹೆಣ್ಣಷ್ಟೇ. 


ಪ್ರತ್ಯೇಕವಾದ ಐಡೆಂಡಿಟಿ ಇರಲಿಲ್ಲ ಅವರಿಗೆ. ಆದರೆ ದುಶ್ಯಂತನ ಕಣ್ಣಿಗೆ ಕಾಣದ್ದನ್ನು ಅವನ ಹೃದಯ ಗುರುತಿಸಿತು. ಅವನು ಶಕುಂತಲೆಯೆಡೆಗೆ ತೋರಿಸಿದ್ದ ಪ್ರೀತಿಯಲ್ಲಿ ತೋರಿಕೆ ಇದ್ದಿರಬಹುದು. ಅದರ ಶಾಕುಂತಲೆ ತನ್ನ ಜೀವವನ್ನೇ ಅವನಿಗೆ ಧಾರೆ ಎರೆದಿದ್ದಳು. 


ಆ ನಿಸ್ವಾರ್ಥ ಪ್ರೀತಿಯ ಕಣ್ಣುಗಳನ್ನು ಅವನ ಮನಸ್ಸು ಗ್ರಹಿಸಿತು. ಬುದ್ಧಿ ಅವಳ್ಯಾರೋ ಗೊತ್ತಿಲ್ಲ ಎನ್ನುತ್ತಿದ್ದರೂ ಮನದಾಳದಿಂದ ಇವರು ನಮ್ಮವರು ಎನ್ನುವ ಭಾವ ಉಕ್ಕಿ ಬರತೊಡಗಿತು. ನೆನಪು ಎನ್ನುವುದು ಹೃದಯದಲ್ಲಿ ಮನೆ ಮಾಡುವಂಥದ್ದು. ನೆನಪು ಉಳಿಯಲು ಬುದ್ಧಿಯ ಹಂಗು ಎಂದಿಗೂ ಬೇಡ. ಹಾಗಾಗಿ ಇಬ್ಬರ ಹೃದಯಗಳೂ ಮಾತನಾಡಲು ತೊಡಗಿದಾಗ ಅವನಿಗೆ ತಾನೇ ತಾನಾಗಿ ಹಳೆಯ ನೆನಪಾಯಿತು. ಶಕುಂತಲೆಯನ್ನು ಮನಕ್ಕೆ ಮತ್ತು ಮನೆಗೆ ತುಂಬಿಸಿಕೊಂಡ.


ಮನದಾಳದಿಂದ ಪ್ರೀತಿಸಿದರೆ ನಮಗೆ ಆ ಪ್ರೀತಿ ಸಿಕ್ಕೇ ಸಿಗುತ್ತದೆ ಎನ್ನುವುದು ಒಂದು ನಂಬಿಕೆ. ಆದರೆ ನಾವು ಪ್ರೀತಿಸಿದವರೂ ಸಹ ನಮ್ಮಷ್ಟೇ ಪ್ರಾಮಾಣಿಕರಾಗಿರಬೇಕು. ಇಲ್ಲದಿದ್ರೆ ದುಶ್ಯಂತ ಶಾಕುಂತಲೆಯನ್ನು ಮರೆತ ಹಾಗೆ ಅವರು ನಮ್ಮನ್ನು ಮರೆತು ಮನಸಾಕ್ಷಿಯ ಹಂಗಿಲ್ಲದೇ ತಮ್ಮ ಪಾಡಿಗೆ ಆರಾಮವಾಗಿರುತ್ತಾರೆ. ಹಚ್ಚಿಕೊಂಡ ನಾವು ಪ್ರೀತಿಸಲಾಗದೇ ಬಿಡಲೂ ಆಗದೇ ದಿನದಿನಕ್ಕೂ ವಿರಹದಲ್ಲಿ ಬೆಂದು ಬಸವಳಿಯುತ್ತೇವೆ.

**************
ಕೆ.ಎ.ಸೌಮ್ಯ
ಮೈಸೂರು

Oh Manase 1-15 Dec 2018

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಕುಂತಿ