ಧರ್ಮಯುದ್ಧವೂ ಧರ್ಮರಾಯನೂ
ಪರಿಸ್ಥಿತಿ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ . ನಾವು ಹೇಳಿರುವ ಮಾತನ್ನು ನಾವೇ ಮರೆಯುವ ಹಾಗೆ ಮಾಡುತ್ತದೆ. ಇನ್ನೊಬ್ಬರನ್ನು ಸಮಾಧಾನಿಸಲು ನಾವು ಹೇಳಿದ ಮಾತನ್ನು ನಮಗೆ ಅವರೇ ತಿರುಗಿಸಿ ಹೇಳುವ ಹಾಗೆ ಮಾಡುತ್ತದೆ . ಧರ್ಮರಾಯನಂಥಾ ಧರ್ಮರಾಯನಿಗೇ ಧರ್ಮ ಸಂಕಟ ಒದಗುವ ಹಾಗೆ ಮಾಡುತ್ತದೆ . ಪ್ರಸಂಗ ಹೀಗಿದೆ: ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ . ಭೀಮಸೇನ ಒಂದೊಂದು ದಿನ ಯುದ್ಧ ಮುಗಿದಾಗಲೂ ತಾನು ಇಂದು ಇಷ್ಟು ಕೌರವರನ್ನು ಕೊಂದೆ , ಇಷ್ಟು ಜನರನ್ನು ಮುಗಿಸಿದೆ , ಇಷ್ಟು ಕೌರವ ಕುಮಾರರು ಮಾತ್ರ ಬದುಕಿದ್ದಾರೆ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾನೆ . ಇದನ್ನು ಕಂಡ ಧರ್ಮರಾಯ ಹಾಗೆಲ್ಲಾ ಯುದ್ಧವನ್ನು ವೈಯುಕ್ತಿಕವಾಗಿ ನೋಡಬಾರದು , ಏಕೆಂದರೆ ಈ ಯುದ್ಧ ನಡೆಯುತ್ತಿರುವುದು ನ್ಯಾಯ , ಧರ್ಮ , ಸತ್ಯದ ಪುನರ್ ಪ್ರತಿಷ್ಠಾಪನೆಗಾಗಿ ಮಾತ್ರ , ಆ ದೃಷ್ಟಿಯಿಂದ ಯುದ್ಧ ಮಾಡು ಎಂದು ತಿಳಿ ಹೇಳುತ್ತಾನೆ . ಭೀಮ ಒಲ್ಲದ ಮನಸ್ಸಿನಿಂದಲೇ ಅಣ್ಣನಿಗೆ ಪ್ರತಿಮಾತನಾಡದೇ ಸುಮ್ಮನಾಗುತ್ತಾನೆ . ಮುಂದೆ ಕುರುಕ್ಷೇತ್ರ ಯುದ್ಧ ಮುಗಿದು ಕುರುವಂಶದವರೆಲ್ಲಾ ನಾಶವಾದ ಮೇಲೆ ಸತ್ತವರಿಗೆಲ್ಲಾ ತರ್ಪಣ ಕೊಡುವಾಗ ತಾಯಿ ಕುಂತಿಯಿಂದ ಕರ್ಣನೇ ಪಾಂಡವರಲ್ಲಿ ಮೊದಲನೆಯವನು ಎಂದು ತಿಳಿದು ಬರುತ್ತದೆ . ಆಗ ಧರ್ಮಜನಲ್ಲಿ ಕಳವಳ ಶುರುವಾಗ...