ಋಷ್ಯಶೃಂಗನ ಬ್ರಹ್ಮಚರ್ಯ
ಅದು ಅಂಗರಾಜ್ಯ. ಸುಭಿಕ್ಷತೆಯಿಂದ ತುಂಬಿ ತುಳುಕುವ ದೇಶವದು. ರಾಜ ರೋಮಪಾದನ ಆಡಳಿತದಲ್ಲಿ ಪ್ರಜೆಗಳಿಗೆ ಕೊರತೆ ಎನ್ನುವುದೇ ಇರಲಿಲ್ಲ. ಇಡೀ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ ಬೀಳುತ್ತಾ, ಬಂಗಾರದಂತಹ ಬೆಳೆ ಬೆಳೆಯುತ್ತಾ ಪ್ರಜೆಗಳು ಸಂಪ್ರೀತರಾಗಿದ್ದರು. ಲೋಪವೇ ಇಲ್ಲದ ಈ ರಾಜ್ಯ ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿತ್ತು. ಅದೇ ತಪ್ಪಾಯಿತು. ದೇವೇಂದ್ರ ಇದರ ಸುಭಿಕ್ಷ ನೋಡಿ ಕಿಡಿಗಣ್ಣಾದ. ಹೀಗಾದರೆ ಜನರು ತನ್ನನ್ನು ಮರೆತೇ ಬಿಡುತ್ತಾರೆಂದು ಮೋಡಗಳ ಬಳಿ ಅಂಗರಾಜ್ಯದ ಸನಿಹವೂ ಸುಳಿಯಬಾರದೆಂದು ಆಜ್ಞಾಪಿಸಿದ. ಮೋಡಗಳು ಮಳೆ ಸುರಿಸದೇ ಹಿಂದುಳಿದವು. ಹಸಿರಿನಿಂದ ತುಂಬಿ ತುಳುಕುತ್ತಿದ್ದ ರಾಜ್ಯವೀಗ ಮಳೆಯಿಲ್ಲದೇ ಬರಡಾಯ್ತು. ಸುಭಿಕ್ಷವಿದ್ದಾಗ ಶೇಖರಿಸಿಟ್ಟಿದ್ದ ಧಾನ್ಯವೆಲ್ಲಾ ಖರ್ಚಾದರೂ ಸಹ ಮಳೆ ಬರುವ ಸೂಚನೆ ಕಾಣಲಿಲ್ಲ. ಕೆರೆ ಕಟ್ಟೆಗಳೆಲ್ಲಾ ಖಾಲಿಯಾದವು. ಕುಡಿಯಲೂ ಸಹ ನೀರು ಉಳಿದಿರಲಿಲ್ಲ. ಹೀಗೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲ ಅಂತ ಅರಿವಾಯ್ತು ರೋಮಪಾದನಿಗೆ. ಆದರೆ ಮುನಿಸಿಕೊಂಡಿರುವ ದೇವೇಂದ್ರನನ್ನು ಒಲಿಸುವುದು ಅವನಿಂದ ಸಾಧ್ಯವಿರಲಿಲ್ಲ. ಒಂದು ದಿನ ಅರಮನೆಯ ಮುಂದಿನಿಂದ ಸಾಗುತ್ತಿದ್ದ ಸಾಧು ಒಬ್ಬರನ್ನು ಸತ್ಕರಿಸಿ ಮಹಾರಾಜ ತನ್ನ ಸ್ಥಿತಿ ಅರುಹಿದ. ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ತನ್ನ ರಾಜ್ಯ ಮೊದಲಿನಂತೆ ಸುಭಿಕ್ಷವಾಗಲು ಏನು ಮಾಡಬೇಕು ಅಂತ ಕೇಳಿದ. ಆ ಸನ್ಯಾಸಿ ಕ್ಷಣ ಕಾಲ ಕಣ್ಮುಚ್ಚಿ ಯೋಚ...