ಮಹಾ ಪತಿವ್ರತೆ ಸತಿ
ಅವಳು ಕಾಯುತ್ತಲೇ ಇದ್ದಳು. ಆಹ್ವಾನ ಆಗ ಬರಬಹುದು, ಈಗ ಬರಬಹುದು ಅಂತ. ಕೈಲಾಸಕ್ಕೇನು ಬಾಗಿಲೇ, ಕಿಟಕಿಯೇ, ಮತ್ತೊಂದೇ? ಎಲ್ಲಿಂದ ಕುಳಿತು ನೋಡಿದರೂ ಬರುವವರು ನೇರವಾಗಿ ಕುಳಿತಲ್ಲಿಗೇ ಕಾಣುತ್ತಿದ್ದರು. ಆದರೂ ಯಾರೂ ಬರದೇ ಇರುವುದು ಅವಳ ಆತಂಕ ಹೆಚ್ಚಿಸಿತ್ತು. ಕುಳಿತಿರಲಾರದೇ ಎದ್ದು ಓಡಾಡತೊಡಗಿದಳು. ಯಾರಲ್ಲಿ ಹೇಳಿಕೊಳ್ಳುವುದು ಈ ಆತಂಕವನ್ನು? ಗಂಡನ ಮನೆ ಎಂದಿಗೂ ಗಂಡನ ಮನೆಯೇ... ಅಲ್ಲಿ ಅವಳ ಒಳಮನಸ್ಸಿನ ಮರ್ಮವನ್ನು ತಾವಾಗಿಯೇ ಅರಿತು ಅದಕ್ಕೆ ತಕ್ಕುದಾದ ಮಾತನ್ನಾಡುವವರು ಬಹಳ ವಿರಳ. ಅವಳ ಗಂಡನಿಗೆ ಇದರ ಅರಿವಾಗುತ್ತಿದ್ದರೂ ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದ. ಅವಳು ದಕ್ಷನ ಮಗಳು ದಾಕ್ಷಾಯಿಣಿ. ತನ್ನ ತಂದೆ ಮಾಡಲಿರುವ ಮಹಾನ್ ಯಜ್ಞದ ಆಹ್ವಾನಕ್ಕಾಗಿ ಕಾದು ಕುಳಿತು ಸೋತು ಬೆಂಡಾಗಿದ್ದಳು. ಅವಳಿಗೆ ತನ್ನ ತಂದೆ ಉದ್ದೇಶಪೂರ್ವಕವಾಗಿ ತನ್ನನ್ನು ಕರೆದಿಲ್ಲ ಎಂಬ ಸತ್ಯ ತಿಳಿದಿರಲಿಲ್ಲ. ಕರೆಯಲು ಮರೆತಿರಬಹುದು ಎಂದೊಮ್ಮೆ ಯೋಚಿಸಿದರೆ, ಮಗದೊಮ್ಮೆ ತಂದೆ ಬಾಯಿಬಿಟ್ಟು ಕರೆಯಲು ತಾನೇನು ಹೊರಗಿನವಳೇ, ಮನೆಯವರನ್ನು ಯಾರಾದರೂ ಕರೆಯುತ್ತಾರೆಯೇ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಆದರೂ ಅವರು ಕರೆಯದೇ ತಾನು ಹೋಗಲು ಏನೋ ಒಂದು ಅಳುಕು ಕಾಡುತ್ತಿತ್ತು ಅವಳಿಗೆ. ತಂದೆಯ ಇಚ್ಛೆಗೆ ವಿರುದ್ಧವಾಗಿ ಪರಶಿವನನ್ನು ಮದುವೆಯಾದುದರಿಂದಲೋ ಏನೋ... ತಂದೆಯೊಮ್ಮೆ ಬಾಯ್ತುಂಬಾ "ಬಾ ಮಗಳೇ.." ಅಂತ ಒಮ್ಮೆ ಕರೆದುಬಿಟ್ಟ...