ಶಾಕುಂತಲೆ-ದುಶ್ಯಂತ
ಮರೆವಿನಲ್ಲಿ ಎರಡು ವಿಧ. ಒಂದು ನಿಜವಾದ ಮರೆವು. ಮತ್ತೊಂದು ಪ್ರಜ್ಞಾ ಪೂರ್ವಕವಾದ ಮರೆವು. ದುಶ್ಯಂತನಿಗೆ ಆವರಿಸಿದ್ದು ಎರಡನೆಯ ವಿಧವಾದ ಮರೆವು. ಗೊತ್ತಿದ್ದೂ ಮರೆತಂತೆ ನಟಿಸಲು ವಿಶೇಷ ಪ್ರತಿಭೆ ಬೇಕು. ಕಣ್ಣು ಒಂದು ವಸ್ತುವನ್ನು ಗುರುತಿಸಿದೊಡನೆ ಅದನ್ನು ಬಾಯಿ ಬಿಟ್ಟು ಹೇಳಬೇಕೋ ಬೇಡವೋ ಎಂಬುದನ್ನು ಬುದ್ದಿ ನಿರ್ಧರಿಸುತ್ತದೆ. ತಮ್ಮ ಅಂತಸ್ತಿಗೆ ಅನುಗುಣವಾಗಿ ಕೆಲವರಿಗೆ ಹಳೆಯ ನೆನಪುಗಳು ಮತ್ತೆ ನೆನಪಾಗುತ್ತವೆ. ಹಾಗೆಯೇ ಕೆಲವು ಮರೆತೂ ಹೋಗುತ್ತವೆ. ತಮ್ಮ ಮುಂದಿನ ಜೀವನಕ್ಕೆ ಲಾಭವಾಗುವುದಾದರೆ ಎಲ್ಲವೂ ನೆನಪಾಗುತ್ತದೆ. ಇಲ್ಲದಿದ್ದರೆ ಎದುರಿನವರ ಪ್ರಾಮಾಣಿಕ ಕಣ್ಣುಗಳನ್ನು ಕಂಡೂ ಸಹ ಸುಮ್ಮನಿರಬೇಕಾಗುತ್ತದೆ. ಮಹರ್ಷಿ ಕಣ್ವರ ಆಶ್ರಮಕ್ಕೆ ದುಶ್ಯಂತ ಬಂದಾಗ ಆ ಹಚ್ಚ ಹಸುರಿನ ಪರಿಸರದ ನಡುವೆ ತರುಣಿ ಶಾಕುಂತಲೆ ಅವನ ಕಣ್ಣಿಗೆ ಅಪ್ಸರೆಯ ಹಾಗೆ ಕಂಡದ್ದು ನಿಜ. ಏಕೆಂದರೆ ಆ ಸಂದರ್ಭವೇ ಹಾಗಿತ್ತು. ಅದು ಅವನ ಅರಮನೆ ಆಗಿರಲಿಲ್ಲ. ಅಲ್ಲಿ ಅವನ ಅವಶ್ಯಕತೆ ಪೂರೈಸುವ ಸಖಿಯರು ಇರಲಿಲ್ಲ. ಸೇವೆ ಮಾಡಲು ದಾಸಿಯರು ಇರಲಿಲ್ಲ. ಕೈಗೆ ಸಿಕ್ಕಷ್ಟರಲ್ಲಿ ಅವನು ತೃಪ್ತಿ ಹೊಂದಬೇಕಿತ್ತು. ಅಲ್ಲಿದ್ದ ಹೆಣ್ಣುಗಳ ಪೈಕಿ ಶಾಕುಂತಲೆಯೇ ಎದ್ದು ಕಾಣುತ್ತಿದ್ದುದರಿಂದ ದುಶ್ಯಂತ ಅವಳಿಗೆ ಮನಸೋತ. ಪ್ರೀತಿ ಎಂಬ ಪದದ ಬಲಹೀನತೆ ಅವನಿಗೆ ಚೆನ್ನಾಗಿ ಗೊತ್ತಿತ್ತು ಅಂತನಿಸುತ್ತದೆ. ನಮ್ಮ ಅಸ್ತಿತ್ವಕ್ಕಾಗಿ ನಾವು ಒಬ್ಬರನ್ನು ಪ್ರೀತಿಸುತ್ತೇವೆ. ಆದರೆ ಈ...