ಧರ್ಮ ವ್ಯಾಧ
ಧರ್ಮವನ್ನು ಕುರಿತು ನೂರಾರು ವ್ಯಾಖ್ಯಾನಗಳಿವೆ. ಧರ್ಮವನ್ನು ಆಚರಿಸುವ ಬಗ್ಗೆ ಹಲವಾರು ಪದ್ಧತಿ, ಪುರಾಣಗಳಿವೆ. ಧರ್ಮಕ್ಕೊಂದು ಚೌಕಟ್ಟು ಹಾಕಿ, ಅದನ್ನು ಮೀರಿ ನಡೆದರೆ ಆಗಬಹುದಾದ ಶಿಕ್ಷೆಯ ಬಗ್ಗೆ ವಿವರವಿದೆ ಹೊರತೂ, ಧರ್ಮ ಎಂದರೇನು ಎಂದು ಸ್ಪಷ್ಟವಾಗಿ ಯಾವ ಧರ್ಮವೂ ಇದುವರೆಗೂ ಹೇಳಿಲ್ಲ. ಹುಡುಕಿದರೆ ಸಿಗುವುದೂ ಇಲ್ಲ. ಆದರೆ ಒಬ್ಬ ಮಾಂಸ ಮಾರುವ ಕಟುಕನೊಬ್ಬ ಇದಕ್ಕೆ ಉತ್ತರಿಸಿದ್ದಾನೆ ಎಂದರೆ ಆಶ್ಚರ್ಯವಾಗುತ್ತದೆಯೇ? ಹೌದು. ಮಾಂಸ ಮಾರುವ ಕಟುಕನಿಗೂ, ಧರ್ಮಕ್ಕೂ ಏನು ಸಂಬಂಧ ಅಂತ ನಮಗೆ ಆಶ್ಚರ್ಯವಾಗುತ್ತದೆ. ಆದರೆ ಇವನು ಸಾಮಾನ್ಯ ವ್ಯಾಧನಲ್ಲ, ಧರ್ಮವ್ಯಾಧ. ಧರ್ಮದ ಹುಡುಕಾಟದಲ್ಲಿದ್ದ ಕೌಶಿಕ ಮುನಿ ಸಹ ಈತನಿಂದ ಧರ್ಮೋಪದೇಶ ಪಡೆಯುವಂತಹ ಜ್ಞಾನಿ ಈತ. ಒಮ್ಮೆ ಹೀಗಾಯಿತು. ಒಂದಾನೊಂದು ಕಾಲದಲ್ಲಿ ಕೌಶಿಕನೆಂಬ ಮುನಿಯಿದ್ದ. ಪಂಡಿತನಾಗಿದ್ದ ಆತ ವೇದಗಳನ್ನೆಲ್ಲಾ ಅರೆದು ಕುಡಿದಿದ್ದ. ತನ್ನ ಊರಿನಲ್ಲಿಯೇ ಯಾರೂ ಪಡೆಯಲಾಗದಷ್ಟು ವಿದ್ಯಾಭ್ಯಾಸವನ್ನು ತಾನು ಪಡೆದಿದ್ದೇನೆ ಎಂಬ ಹೆಮ್ಮೆ ಆತನದ್ದಾಗಿತ್ತು. ವಿದ್ಯಾಭ್ಯಾಸದ ನಂತರ ಲೌಕಿಕ ಜೀವನಕ್ಕೆ ಮರಳಲು ಅವನಿಗೆ ಇಷ್ಟವಾಗಲಿಲ್ಲ. ಅದರ ಬದಲು ಮೋಕ್ಷದ ಹಾದಿಯಲ್ಲಿ ಸಾಗಬೇಕು ಎಂಬ ಬಯಕೆಯಿಂದ ಸಂಸಾರವನ್ನು ತ್ಯಜಿಸಿ ತಪಸ್ಸು ಮಾಡಲೆಂದು ಅರಣ್ಯಕ್ಕೆ ಬಂದ. ಒಮ್ಮೆ ಹೀಗೆಯೇ ಒಂದು ಮರದ ಕೆಳಗೆ ಕುಳಿತು ಭಗವಂತನ ಧ್ಯಾನದಲ್ಲಿ ಮಗ್ನನಾಗಿದ್ದಾಗ ಮರದ ಮೇಲಿನಿಂದ ಒಂದು ಕೊಕ್ಕರೆ ಜೋರ...