ಅಣಿ ಮಾಂಡವ್ಯ
ಹೊಗಳಿಕೆಯನ್ನು ಹೊನ್ನಶೂಲ ಎನ್ನಲಾಗುತ್ತದೆ. ಮನುಷ್ಯರನ್ನು ಏನಾದರೂ ಶೂಲಕ್ಕೇರಿಸಿದರೆ ಪ್ರಾಣವೇ ಹೋಗಿ ಬಿಡುತ್ತದೆ. ಅಷ್ಟಾದರೂ ಜನರು ಹೊಗಳಿಕೆ ಎಂಬ ಹೊನ್ನಶೂಲದ ಮೋಹ ಬಿಡಲಾರರು. ಆದರೆ ಈ ಮೋಹ, ಮದ, ಮತ್ಸರಗಳನ್ನು ಬಿಟ್ಟ ಒಬ್ಬ ಋಷಿಯನ್ನು ಅವರು ಮಾಡದ ತಪ್ಪಿಗೆ ಒಮ್ಮೆ ಶೂಲಕ್ಕೇರಿಸಲಾಗಿತ್ತು. ಅವರು ಮೊದಲೇ ಋಷಿಗಳು. ತಮ್ಮ ಭೌತಿಕ ದೇಹವನ್ನು ದಂಡಿಸಿ ಶಿಸ್ತಾಗಿ ಇಟ್ಟುಕೊಂಡಿದ್ದರು. ಅವರನ್ನು ಆ ಶೂಲದಿಂದ ಏನೂ ಮಾಡಲಾಗಿಲ್ಲ. ಅದರಿಂದ ಅವರು ಸಾಯಲಿಲ್ಲ. ಬದಲಿಗೆ ಆ ಶೂಲವನ್ನೇ ತಮ್ಮೊಂದಿಗೆ ಹೊತ್ತು ತಿರುಗಿದರು. ಅವರೇ ಅಣಿ ಮಾಂಡವ್ಯ ಋಷಿಗಳು. ಒಮ್ಮೆ ಅರಮನೆಯಲ್ಲಿ ಕಳ್ಳತನವಾಗುತ್ತದೆ. ಕಳ್ಳತನ ಮಾಡಿದ ಗುಂಪು ಅರಮನೆಯ ಕಾವಲಿನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾ ಬರುತ್ತಿರುವಾಗ ಎದುರಿನಲ್ಲಿ ಮಾಂಡವ್ಯ ಮಹರ್ಷಿಗಳ ಆಶ್ರಮ ಎದುರಾಗುತ್ತದೆ. ಆಶ್ರಮದಲ್ಲಿ ಅಡಗಿಕೊಂಡರೆ ಬಹುಶಃ ಯಾರಿಗೂ ಕಂಡುಹಿಡಿಯಲಾಗದು ಅಂತ ತಿಳಿದು ಕಳ್ಳರು ಆಶ್ರಮದ ಒಳ ಹೊಕ್ಕು ಅಡಗಿಕೊಳ್ಳುತ್ತಾರೆ. ಆಶ್ರಮದ ಒಳಗೆ ಧ್ಯಾನ ನಿರತರಾಗಿದ್ದ ಮಾಂಡವ್ಯ ಮಹರ್ಷಿಗಳಿಗೆ ಕಳ್ಳರು ಬಂದದ್ದು, ಅಡಗಿದ್ದು ಒಂದೂ ಗೊತ್ತಾಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಸೈನಿಕರು ಕಳ್ಳರನ್ನು ಹುಡುಕುತ್ತಾ ಆಶ್ರಮದ ಒಳಗೇ ಬಂದು ಬಿಡುತ್ತಾರೆ. ಧ್ಯಾನ ಮಾಡುತ್ತಿದ್ದ ಮಾಂಡವ್ಯ ಮಹರ್ಷಿಗಳ ಬಳಿ ಕಳ್ಳರ ಬಗ್ಗೆ ವಿಚಾರಿಸುತ್ತಾರೆ. ಮಹರ್ಷಿಗಳು ಈ ಲೋಕದಲ್ಲಿ ಇದ್ದರೆ ತಾನೇ ಸೈನ...