ಭೀಮ
"ಅವಮಾನವಿದ್ದಲ್ಲಿ ಪ್ರತೀಕಾರವಿರುತ್ತದೆ" ಭೀಮನು ಪಂಚ ಪಾಂಡವರಲ್ಲಿ ಎರಡನೆಯವನು. ಅಷ್ಟೇ ಅಲ್ಲ ದ್ರೌಪದಿಯ ಅಚ್ಚುಮೆಚ್ಚಿನ ಗಂಡ ಇವನು. ಗಂಡನಿದ್ದರೆ ಇಂತವನಿರಬೇಕು ಅಂತ ಎಲ್ಲಾ ಮಹಿಳೆಯರೂ ಬಯಸುವಂತೆ ಇರುವವನು ಭೀಮ. ಕಾರಣವೇನೆಂದರೆ ಇಡೀ ಮಹಾಭಾರತದಲ್ಲಿ ದ್ರೌಪದಿಯ ಎಲ್ಲಾ ಆಸೆಗಳನ್ನು ಯಾಕೆ, ಏನು ಅಂತ ಒಂದು ಮಾತೂ ಕೇಳದೇ ನೆರವೇರಿಸಿದವನು ಭೀಮನೊಬ್ಬನೇ. ಹಾಗಾಗಿ ದ್ರೌಪದಿಗೂ ಇವನ ಬಗ್ಗೆ ಕೊಂಚ ಮೃದು ಧೋರಣೆ ಇತ್ತು. ಇವನು ವಾಯುವಿನ ಮಗ ಆದ್ದರಿಂದ ಮಹಾನ್ ಶಕ್ತಿವಂತ. ಎಷ್ಟೆಂದರೆ ಇವನ ಹುಟ್ಟಿನ ಬಗ್ಗೆಯೇ ಒಂದು ಕಥೆಯಿದೆ. ಇವನು ಹುಟ್ಟಿದ ಕೂಡಲೇ ಹುಲಿಯ ಘರ್ಜನೆ ಕೇಳಿಸಿತೆಂದು ಕುಂತಿ ಮಗುವನ್ನು ಬೆಟ್ಟದ ಮೇಲಿನಿಂದ ಕೆಳಗೆ ಬೀಳಿಸಿಬಿಡುತ್ತಾಳಂತೆ. ಆದರೆ ಕೆಳಗಿಳಿದು ಬಂದು ನೋಡಿದಾಗ ಮಗುವಿಗೆ ಏನೂ ಆಗಿರುವುದಿಲ್ಲ. ಬದಲಿಗೆ ಬಂಡೆಯೇ ಬಿರುಕು ಬಿಟ್ಟಿರುತ್ತದಂತೆ. ಇವನ ಶಕ್ತಿಯ ಪರಿಚಯ ಮತ್ತೊಮ್ಮೆ ನಮಗಾಗುವುದು ಕುರುಕ್ಷೇತ್ರ ಯುದ್ಧದಲ್ಲಿ. ತುಂಬಿದ ಸಭೆಯಲ್ಲಿ ದ್ರೌಪದಿಗೆ ಆದ ಅವಮಾನಕ್ಕೆ ತಕ್ಕ ಪ್ರತೀಕಾರ ತೀರಿಸಲು ಭೀಮನು ಹದಿಮೂರು ವರ್ಷ ತಾಳ್ಮೆಯಿಂದ ಕಾದಿರುತ್ತಾನೆ. ಕಾದಷ್ಟೂ ಸಿಟ್ಟು ಹೆಚ್ಚಾಗುವುದೇ ಹೊರತೂ ಕಡಿಮೆಯಾಗುವುದಿಲ್ಲ. ಮನಸ್ಸಿನೊಳಗೆ ಉರಿವ ಜ್ವಾಲಾಮುಖಿಯನ್ನು ಇರಿಸಿಕೊಂಡೇ ಹನ್ನೆರೆಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮುಗಿಸಿರುತ್ತಾನೆ. ಅವನಿಗಿರುವ ಶಕ್ತಿಗೆ ಒಂದೇ ಬಾರಿಗೆ ಇಡೀ ಕೌರವರನ್ನು...