ನಳ ದಮಯಂತಿ
"ಪ್ರೇಮವೆಂದರೆ ಹಾಗೆ.. ಅದು ಇರುವುದೇ ಹೀಗೆ" ಪ್ರೇಮ ಕಣ್ಣಿನಿಂದ ಹುಟ್ಟುತ್ತದೆ ಎನ್ನುತ್ತಾರೆ. ಆದರೆ ಪ್ರೇಮ ನಿಜಕ್ಕೂ ಹುಟ್ಟುವುದು ಹೃದಯದಿಂದ. ನಾವು ನೋಡಿಯೂ ಇರದ ವ್ಯಕ್ತಿಯ ಬಗ್ಗೆ ನಮಗೆ ನಮ್ಮ ಅಂತರಾಳದಲ್ಲೊಂದು ಒಲವು ಮೂಡುತ್ತದೆ. ಕಣ್ಣು ಕಾಣದಿದ್ದರೂ ಆ ಒಲವನ್ನು ಮನಸ್ಸು ಅರಿಯುತ್ತದೆ. ದೈವಬಲದಿಂದ ಆ ವ್ಯಕ್ತಿ ಎದುರಾಗಿ ಜೀವನಸಂಗಾತಿಯೂ ಆಗುತ್ತಾರೆ. ಆದರೆ ಹಾಗೆ ಆಗುವ ಮೊದಲು ಎಷ್ಟೆಲ್ಲಾ ಕಠಿಣ ಪರೀಕ್ಷೆಗಳು ಎದುರಾಗುತ್ತವೆ. ಈ ಎಲ್ಲವನ್ನೂ ಯಶಸ್ವಿಯಾಗಿ ಗೆದ್ದವರು ನಿಜವಾದ ಪ್ರೇಮಿಗಳು ಎನ್ನಿಸಿಕೊಳ್ಳುತ್ತಾರೆ. ಮುಖ ನೋಡಿ ಹುಟ್ಟುವ ಪ್ರೀತಿಗಿಂತಲೂ ಮನಸ್ಸನ್ನು ಅರಿತ ಪ್ರೀತಿಯೇ ಶ್ರೇಷ್ಠ ಅಂತ ಇದರಿಂದ ಗೊತ್ತಾಗುತ್ತದೆ. ವಿದರ್ಭ ರಾಜ್ಯದ ರಾಜಕುಮಾರಿಯಾದ ದಮಯಂತಿಗೆ ಅವಳ ಜೀವನದಲ್ಲಿ ಇಂತಹಾ ಅಗ್ನಿಪರೀಕ್ಷೆಗಳು ಎರಡು ಬಾರಿ ಬರುತ್ತವೆ. ಮೊದಲ ಬಾರಿಗೆ ಅವಳ ಸ್ವಯಂವರದ ಸಂದರ್ಭದಲ್ಲಿ ಇದು ಎದುರಾಗುತ್ತದೆ. ಆಕೆ ರಾಜಕುಮಾರ ನಳನನ್ನು ಕಣ್ಣಾರೆ ಕಾಣದಿದ್ದರೂ ಸಹ ಅವರಿವರ ಬಾಯಿಯಿಂದ ಅವನ ಸಾಧನೆಗಳನ್ನು ಕೇಳಿಯೇ ಪ್ರೀತಿಸಿದ್ದಳು. ಮದುವೆಯಾದರೆ ಅವನನ್ನೇ ಎಂದುಕೊಂಡಿದ್ದಳು. ಸ್ವಯಂವರದಲ್ಲಿ ಆತನಿಗೇ ಮಾಲೆ ಹಾಕಬೇಕು ಎಂದುಕೊಂಡಿದ್ದಳು. ಆದರೆ ಸ್ವಯಂವರದ ಸ್ಥಳದಲ್ಲಿ ಆಕೆ ಕಂಡದ್ದೇನು? ನಳನ ರೂಪದ ಐವರು ಅವಳಿಗಾಗಿ ಕಾಯುತ್ತಿದ್ದರು. ಆಕೆ ಅಪರೂಪದ ಸೌಂದರ್ಯವತಿಯಾದುದರಿಂದ ದೇವತೆಗಳೂ ಆಕೆಯನ್ನು ಕಂಡರೆ ಮೋಹಗೊಳ...