ರಾಧೆಯ ಪ್ರೀತಿ

 

ರಾಧೆ... ಇಷ್ಟು ಹೇಳಿದರೆ ಸಾಕು. ನಮ್ಮ ಮನಸ್ಸಿನಲ್ಲಿ ಆಕೆಯ ಚಿತ್ರ ಮೂಡುತ್ತದೆ. ರಾಧೆ ಕೊನೆಯವರೆಗೂ ಚಿರ ವಿರಹಿಯಾಗಿ ನಮಗೆ, ನಮ್ಮ ಮನಸ್ಸಿಗೆ ಬಹಳ ಹತ್ತಿರವೆನಿಸುತ್ತಾಳೆ.


ನಮ್ಮೊಳಗೂ ಒಬ್ಬ ರಾಧೆ ಇದ್ದಾಳೆ. ಆಕೆ ಸದಾ ಕಾಲವೂ ತನ್ನ ಪ್ರೀತಿಗಾಗಿ ಕಾಯುತ್ತಲೇ ಇರುತ್ತಾಳೆ. ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿಯಾದರೂ ನಮ್ಮ ಪ್ರೀತಿ‌ ಪಾತ್ರರಿಂದ ವಿರಹವನ್ನು ಅನುಭವಿಸಿದವರೇ ಆಗಿದ್ದೇವೆ. ಹಾಗಾಗಿ ರಾಧೆಯ ವಿರಹ ನಮಗೆ ಬಹಳ ಆಪ್ತ ಎನಿಸುತ್ತದೆ.


ಎಂದಾದರೊಮ್ಮೆ ಅನಿವಾರ್ಯವಾಗಿ ನಾವು ಬಹಳ ಇಷ್ಟಪಡುವವರಿಂದ ದೂರವಾದಾಗ ನಮಗೆ ನೆನಪಾಗುವುದೇ ರಾಧೆ ಮತ್ತು ಆಕೆಯ ವಿರಹ. ಆಕೆ ಈ ವಿರಹದ ಉರಿಯನ್ನು ಹೇಗೆ ಸಹಿಸಿರಬಹುದು ಅಂತ ಆಶ್ಚರ್ಯವಾಗುತ್ತದೆ.


ಏಕೆಂದರೆ ಕೃಷ್ಣನೋ ದೇವ ಪುರುಷ.


ಆದರೆ ರಾಧೆ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯಳು. ಸುಲಭವಾಗಿ ತನ್ನ ನೋವನ್ನು ಮರೆಯುವಂತಹಾ ಅತಿಮಾನುಷಳಲ್ಲ ಆಕೆ. ಆದರೂ ಆಕೆಗೆ ತನ್ನ‌ ಪ್ರೀತಿಯ ಮೇಲಿರುವ ಅತೀವ ವಿಶ್ವಾಸ ಕಂಡು ನಮಗೆ ಬೆರಗಾಗುತ್ತದೆ.


ರಾಧೆ ಎಂದ ಕೂಡಲೇ ನಮಗೆ ನೆನಪಾಗುವುದು ನದಿ ತೀರದಲ್ಲಿಯೋ ಅಥವಾ ಉದ್ಯಾನವನದಲ್ಲಿಯೋ ಕುಳಿತು ಕೃಷ್ಣನಿಗಾಗಿ ಆಕೆ ಕಾಯುತ್ತಿರುವ ಚಿತ್ರ. ಕಾಯುವಿಕೆ ಎನ್ನುವುದು ಆಕೆಯ ಜೀವನದಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ.


ಏಕೆಂದರೆ ಜೀವಮಾನ ಪರ್ಯಂತ ಆಕೆ ಕೃಷ್ಣನಿಗಾಗಿ ಕಾಯುತ್ತಲೇ ಇರುತ್ತಾಳೆ. ಆತ ತನಗೆ ಸಿಗುವುದಿಲ್ಲ ಎಂದು ಗೊತ್ತಿದ್ದೂ ಸಹ ಆಕೆಯ ಪ್ರೀತಿ ಕಡಿಮೆಯಾಗುವುದಿಲ್ಲ. ಎಂದೋ ಚಿಕ್ಕ ವಯಸ್ಸಿನಲ್ಲಿ ಒಡನಾಡಿಯಾಗಿದ್ದ ಗೆಳೆಯನೊಬ್ಬ ಕರ್ತವ್ಯಕ್ಕಾಗಿ ನಮ್ಮಿಂದ ದೂರವಾದಾಗ ಎಷ್ಟು ವರ್ಷಗಳ ಕಾಲ ನಾವು ಅವನನ್ನು ನೆನಪಿಟ್ಟುಕೊಳ್ಳಬಹುದು?


ಹೆಚ್ಚೆಂದರೆ ಒಂದು ಹತ್ತಿಪ್ಪತ್ತು ವರ್ಷ..


ನಂತರ ನಮ್ಮದೇ ಸಂಸಾರದ ಜಂಜಾಟದಲ್ಲಿ ನಾವು ಅವರನ್ನು ಮರೆತೇ ಬಿಡುತ್ತೇವೆ. ಆದರೆ ರಾಧೆ ಕೃಷ್ಣನನ್ನು ಹಾಗೆ ಮರೆಯುವುದಿಲ್ಲ. ತನ್ನ ಕೊನೆಯ ಉಸಿರು ಇರುವವರೆಗೂ ಅವನಿಗಾಗಿಯೇ ಬದುಕುತ್ತಾಳೆ.


ಅವಳ‌ ಪ್ರೀತಿಯಲ್ಲಿ ಸ್ವಲ್ಪವೂ ಏರುಪೇರಾಗುವುದಿಲ್ಲ.


ಎಂದೋ ಕಂಡಿದ್ದ ಕೃಷ್ಣನ ಮುಖವನ್ನು ಹೃದಯದಲ್ಲಿರಿಸಿಕೊಂಡು ಪೂಜಿಸುತ್ತಿರುತ್ತಾಳೆ ಹೊರತು ಆತನನ್ನು ಸಾಕ್ಷಾತ್ ನೋಡಬೇಕೆಂದು ಆಸೆ ಸಹ ಪಡುವುದಿಲ್ಲ. ಅವನು ಎಲ್ಲಿ ಇದ್ದಾನೆಯೋ‌ ಅಲ್ಲಿಯೇ ಸುಖವಾಗಿರಲಿ ಅಂತ ಬಯಸುತ್ತಾಳೆ. ಅದಕ್ಕೇ ಎಲ್ಲರೂ ರಾಧೆಯಂತಹ ಹೆಣ್ಣನ್ನು ಪ್ರೇಯಸಿಯನ್ನಾಗಿ ಬಯಸುವುದು.


ಕೃಷ್ಣನಿಗಿಂತಲೂ ವಯಸ್ಸಿನಲ್ಲಿ ದೊಡ್ಡವಳಾಗಿರುವ ರಾಧೆಗೆ ಆತ ತನಗೆ ಸಿಗುವುದಿಲ್ಲ ಎಂದು ಗೊತ್ತಿರುತ್ತದೆ. ಆದರೂ ಅವನನ್ನು ಇಷ್ಟಪಡುವುದನ್ನು ನಿಲ್ಲಿಸುವುದಿಲ್ಲ. ಬಾಲ್ಯವನ್ನು ನಂದಗೋಕುಲದಲ್ಲಿ ಕಳೆಯುವ ಕೃಷ್ಣ ಯೌವನಕ್ಕೆ ಬಂದಾಗ ಕಾಣದ ಕರೆಗಾಗಿ ಊರು ಬಿಟ್ಟು ಹೊರಡುತ್ತಾನೆ.


ಆತ ರಾಜಧಾನಿಗೆ ಹೊರಟು ನಿಂತಾಗ ಆಕೆಗೆ ಸ್ಪಷ್ಟವಾಗಿ ಗೊತ್ತಿರುತ್ತದೆ ಆತನೆಂದೂ ಮರಳಿ ಬರಲಾರ ಎಂದು. ಆದರೂ ಅವನನ್ನು ತನ್ನ ಮನಸ್ಸಿನಿಂದ ದೂರ ಮಾಡುವುದಿಲ್ಲ ಅವಳು. ಹಿಂತಿರುಗಿ ಬರಲಾರದವನನ್ನು ಜೀವನಪರ್ಯಂತ ಕಾಯುವ ಈಕೆ ಇಂದಿಗೂ ನಿರ್ಮಲ ಪ್ರೀತಿಗೆ ನಿದರ್ಶನವಾಗಿ ಉಳಿದಿದ್ದಾಳೆ.


ಅವಳು ವಿಶೇಷವೆನಿಸುವುದೇ ಈ‌‌ ಕಾರಣಕ್ಕೆ.


ಸಿಗಲಾರದ ವಸ್ತುವಿನ ಮೇಲಿನ ಆಸೆಯನ್ನು ಬಿಟ್ಟು ಸಿಕ್ಕ ವಸ್ತುವಿನ ಜೊತೆ ಜೀವನ ಸಾಗಿಸುತ್ತೇವೆ ನಾವು. ಆದರೆ ಕೃಷ್ಣ ತನಗೆ ಎಂದಿಗೂ ಸಿಗಲಾರ ಎಂದು ಗೊತ್ತಿದ್ದೂ ಸಹ ಆತನ ಮೇಲಿನ‌ ಪ್ರೇಮವನ್ನು ಕೊಂಚವೂ ಕೊಂಕದ ಹಾಗೆ ಕಾಪಾಡಿಕೊಂಡು ಬರುವ ರಾಧೆ ಪ್ರೀತಿ ಮತ್ತು ತ್ಯಾಗದ ಪ್ರತಿರೂಪವಾಗಿ ನಿಲ್ಲುತ್ತಾಳೆ.


ಯಾವುದೇ ಸಂಪರ್ಕ ಸಾಧನಗಳೇ ಇಲ್ಲದ ಆ ಕಾಲದಲ್ಲಿ ತನ್ನ ಮನಸ್ಸನ್ನು ಅಷ್ಟು ಗಟ್ಟಿ ಮಾಡಿಕೊಂಡು ಆತನಿಗಾಗಿ ಬದುಕಿದ್ದು ಪವಾಡವೇ ಸರಿ. ಅದರಲ್ಲಿಯೂ ಆತ ಹದಿನಾರು ಸಾವಿರ ಮಹಿಳೆಯರನ್ನು ಮದುವೆಯಾದ ಸುದ್ದಿ ಬಂದಾಗಲೂ ವಿಚಲಿತಳಾಗುವುದಿಲ್ಲ ಆಕೆ.


ಏಕೆಂದರೆ ಆಕೆಗೆ ತನ್ನ ಪ್ರೇಮದ ಮೇಲಿನ ನಂಬಿಕೆ ಅಂತಹದ್ದು. "ಎಷ್ಟೇ ಜನ ಹೆಣ್ಣುಮಕ್ಕಳು ಕೃಷ್ಣನ ಜೀವನದಲ್ಲಿ ಬರಲಿ.. ತಾನು ಪ್ರೀತಿಸಿದಂತೆ ಅವರು ಯಾರೂ ಪ್ರೀತಿಸಲಾರರು" ಎಂಬ ಬಲವಾದ ವಿಶ್ವಾಸ ಆಕೆಯದು.


ಈ ರೀತಿಯ ನಂಬಿಕೆ ಸಾಮಾನ್ಯವಾಗಿ ನಮ್ಮೆಲ್ಲರಿಗೂ ಇರುತ್ತದೆ. ನಮ್ಮಂತೆ ನಮ್ಮ ಸಂಗಾತಿಯನ್ನು ಬೇರೆ ಯಾರೂ ಪ್ರೀತಿಸಲಾರರು, ಯಾರೂ ಹಚ್ಚಕೊಳ್ಳಲಾರರು ಎಂದು.


ಆದರೆ ಕಾಲಕ್ರಮೇಣ ಆ ವಿಶ್ವಾಸ ಮಂಕಾಗತೊಡಗಿ ಒಂದು ದಿನ ಆ ವಿಶ್ವಾಸವೇ ಮಾಯವಾಗಿಬಿಡುತ್ತದೆ. ಆದರೆ ರಾಧೆ ತನ್ನ ಮೇಲೆ ತನಗಿರುವ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ.


ಪ್ರೀತಿ ಎಂದರೆ ತ್ಯಾಗ.


ನಾವು ಪ್ರೀತಿಸಿದವರು ನಮ್ಮನ್ನೂ ಪ್ರೀತಿಸಬೇಕು ಅಂತೇನೂ ಇಲ್ಲ. ಅವರು ನಮ್ಮನ್ನು ಪ್ರೀತಿಸದಿದ್ದರೂ ನಾವು ಪ್ರೀತಿಸುವ ವ್ಯಕ್ತಿಯ ಒಳಿತನ್ನು ಬಯಸುವುದೇ ನಿಜವಾದ ಪ್ರೀತಿ. ತನಗೆ ಸಿಗಲಿಲ್ಲವೆಂದರೆ ಆತ ಚೆನ್ನಾಗಿರಬಾರದು ಎಂದರ್ಥವಲ್ಲ. ಬದಲಿಗೆ ಪ್ರೀತಿಸಿದ ವ್ಯಕ್ತಿ ಚೆನ್ನಾಗಿರಲಿ ಅಂತ ಹರಸುವುದೇ ಪ್ರೀತಿಯ ನಿಜವಾದ ಗುಣ ಎಂದು ಸಾರಿದವಳು ರಾಧೆ. ಅಕ್ಷರಶಃ ಅದರಂತೆಯೇ ನಡೆದುಕೊಂಡಳು. ಆ ಕಾರಣದಿಂದ ರಾಧೆ ಇಂದಿಗೂ ಪ್ರೀತಿಗೆ ದ್ಯೋತಕವಾಗಿ ನಮ್ಮ ನೆನಪಿನಲ್ಲಿ ಉಳಿದಿದ್ದಾಳೆ.


ಇಂದಿನ ದಿನಗಳಲ್ಲಿ ನಾವು ನಮ್ಮ ಜೀವನದಲ್ಲಿ ತಾತ್ಕಾಲಿಕವಾಗಿ ರಾಧೆಯ ರೂಪ ಧರಿಸುತ್ತಿರುತ್ತೇವೆ. ಕೆಲವೇ ಕ್ಷಣ ಅಥವಾ ದಿನಗಳಲ್ಲಿ ನಮ್ಮ ಮುನಿಸು ಹರಿದು ನಾವು ಒಂದಾಗುತ್ತೇವೆ. ಜೀವಮಾನಪರ್ಯಂತ ಆ ಪ್ರೀತಿ ಸಿಗುವುದಿಲ್ಲ ಅಂತ ಗೊತ್ತಿದ್ದರೂ ನಾವು ಅವರನ್ನು ಅಷ್ಟೇ ಪ್ರೀತಿಸುತ್ತೇವೆಯೇ? ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡರೆ ಉತ್ತರ ಏನಿರುತ್ತದೆ...?


*******

ಕೆ.ಎ.ಸೌಮ್ಯ

ಮೈಸೂರು

(ಓ ಮನಸೇ- ಡಿಸೆಂಬರ್ 2018)


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ