ಅಂಬೆ ಎಂಬ ದುರಂತ ನಾಯಕಿ

 


ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವ ಪಡೆದಿದೆ. ಆದರೆ ಕೆಲವು ಪಾತ್ರಗಳು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಪಾತ್ರಗಳು ನೇಪಥ್ಯಕ್ಕೆ ಸರಿಯುತ್ತವೆ. ಹೀಗೆ ನಮಗೇ ಗೊತ್ತಿಲ್ಲದೇ ನಾವು ಮರೆಯುವ ಪಾತ್ರವೆಂದರೆ ಅಂಬೆಯದ್ದು. ಇಡೀ ಮಹಾಭಾರತದ ಆಧಾರ ಸ್ತಂಭವಾದ ಭೀಷ್ಮ ಪಿತಾಮಹನ ಸಾವಿಗೆ ಕಾರಣಳಾದವಳನ್ನು ನಾವು ಪ್ರಾರಂಭದಲ್ಲಿಯೇ ಮರೆತುಬಿಡುತ್ತೇವೆ. ನಂತರ ಆಕೆ ನೆನಪಾಗುವುದು ಕೊನೆಯಲ್ಲಿಯೇ. 

ರೋಷ, ಛಲಗಳಲ್ಲಿ ಒಮ್ಮೊಮ್ಮೆ ದ್ರೌಪದಿಯನ್ನೂ ಮೀರಿಸುವಂತೆ ಕಾಣುತ್ತಾಳೆ ಅಂಬೆ

ಅವಳಿಗೆ ಅತ್ತ ತಾನು ಮೆಚ್ಚಿದ್ದ ಸಾಲ್ವನನ್ನು ಮದುವೆಯಾಗಲು ಆಗಲಿಲ್ಲ, ಇತ್ತ ಭೀಷ್ಮನೂ ತನ್ನನ್ನು ವರಿಸಲು ಒಪ್ಪಲಿಲ್ಲ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕು? ಅವಳ ಜಾಗದಲ್ಲಿ ನಾವು ಇದ್ದಿದ್ದರೆ ಇದು ಹಣೆಯ ಬರಹ ಎಂದೋ, ದೇವರಿಚ್ಚೆ ಎಂದೋ ಬಂದದ್ದನ್ನು ಸ್ವೀಕರಿಸಿ ಈ ಜನ್ಮ ಮುಗಿಸಿ ಸಾಗುತ್ತಿದ್ದೆವು. ಆದರೆ ಅಂಬೆ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಿದಳು. ಮನಸ್ಸು ದೃಢವಾಗಿದ್ದರೆ ನಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸಬಹುದೆಂದು ತೋರಿಸಿದಳು.

ಅಂಬೆಯದ್ದು ಹುಟ್ಟಿದಾಗಿಂದಲೂ ಹೋರಾಟದ ಹಾದಿಯೇನಲ್ಲ

ಆಕೆ ರಾಜಕುಮಾರಿಯಾಗಿ ಸುಖ ಜೀವನ ಕಂಡವಳು. ತಾನು ಪ್ರೀತಿಸಿದ್ದ ಸಾಳ್ವನನ್ನು ಮದುವೆಯಾಗುವುದೇ ಆಕೆಯ ಬಾಳಿನ ಬಹು ದೊಡ್ಡ ಕನಸಾಗಿತ್ತು. 

ಮದುವೆಯಾಗುವುದು, ಮಕ್ಕಳಾಗುವುದು, ನಂತರ ವಯಸ್ಸಾಗುವುದು ಬಿಟ್ಟರೆ ಬೇರೇನೂ ಊಹಿಸಿಯೇ ಇರಲಿಲ್ಲ ಅವಳು. ತನ್ನ ತಂದೆ ತನಗೆ, ಅಂಬಿಕೆ ಮತ್ತು ಅಂಬಾಲಿಕೆಗಾಗಿ ಏರ್ಪಡಿಸಿದ್ದ ಸ್ವಯಂವರದಲ್ಲಿ ಇತರ ರಾಜಕುಮಾರರೊಡನೆ ಆಗಮಿಸುವ ಸಾಳ್ವ ರಾಜನನ್ನು ತಾನು ಆಯ್ಕೆ ಮಾಡಿ ಆತನೊಡನೆ ಮದುವೆಯಾಗಿ ಹೋಗುವ ಕನಸು ಕಾಣುತ್ತಿದ್ದಳು. ಅಷ್ಟರಲ್ಲಿಯೇ ಭೀಷ್ಮ ಮೂವರು ಕನ್ಯೆಯರನ್ನು ಹೊತ್ತೊಯ್ಯಲು ಬಿರುಗಾಳಿಯಂತೆ ಸ್ವಯಂವರಕ್ಕೆ ನುಗ್ಗಿ ಬರುತ್ತಾನೆ. 

ಎಷ್ಟೆಷ್ಟೋ ರಾಜಕುಮಾರರು ಅಲ್ಲಿ ಉಪಸ್ಥಿತರಿದ್ದರೂ ಸಾಳ್ವ ಮಾತ್ರವೇ ಭೀಷ್ಮನನ್ನು ಎದುರಿಸುತ್ತಾನೆ. ಆದರೆ ನೋಡನೋಡುತ್ತಿದ್ದಂತೆಯೇ ಸಾಳ್ವ ಸೋತು ಮೂರು ಕನ್ಯೆಯರೂ ಭೀಷ್ಮನ ವಶವಾಗಿ ಹೋಗುತ್ತಾರೆ. 

ಈ ಹೆಣ್ಣುಮಗಳ ಮನಸ್ಸು ಅರಿಯದ ಭೀಷ್ಮ ಮೂವರನ್ನೂ ಹಸ್ತಿನಾವತಿಗೆ ಕರೆದೊಯ್ಯುತ್ತಾನೆ. ತನ್ನ ಊಹೆಗೂ ಮೀರಿದ ಈ ಪರಿಸ್ಥಿತಿ ಅವಳನ್ನು ಕಂಗಾಲಾಗಿಸುತ್ತದೆ. ಆದರೂ ಛಲಬಿಡದೇ ಭೀಷ್ಮನಲ್ಲಿ ತಾನು ಸಾಳ್ವನನ್ನು ಪ್ರೀತಿಸುತ್ತಿರುವ ವಿಷಯ ಹೇಳುತ್ತಾಳೆ. 

ವಿಷಯ ತಿಳಿದ ಭೀಷ್ಮ ಅಂಬಿಕೆ, ಅಂಬಾಲಿಕೆಯರ ವಿವಾಹವನ್ನು ಮಾತ್ರ ವಿಚಿತ್ರವೀರ್ಯನೊಡನೆ ನಡೆಸಿ, ಅಂಬೆಯನ್ನು ರಾಜ ಮರ್ಯಾದೆಯೊಡನೆ ಸಾಳ್ವನಲ್ಲಿಗೆ ಕಳಿಸಿಕೊಡುತ್ತಾನೆ. ಆಗ ಆಕೆಯ ಕನಸುಗಳು ಮತ್ತೊಮ್ಮೆ ಗರಿಗೆದರುತ್ತವೆ. ವ್ಯಘ್ರಗೊಂಡಿದ್ದ ಮನಸ್ಸು ಶಾಂತವಾಗಿ ಮತ್ತೆ ಮದುವೆಯ ಸುಮಧುರ ಕನಸು ಕಾಣತೊಡಗುತ್ತದೆ.

ಆ ಕನಸಿಗೆ ಆಯುಷ್ಯ ಬಹಳ ಕಡಿಮೆಯೇನೋ

ಭೀಷ್ಮನಿಂದ ಸೋಲುಂಡಿದ್ದ ಸಾಳ್ವ ಅಂಬೆಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾನೆ. ಒಂದಿಷ್ಟು ಪ್ರತಿಷ್ಟೆ ಬದಿಗಿಟ್ಟು ಯೋಚಿಸಿದ್ದರೆ ಆತ ಅಂಬೆಯನ್ನು ಮನೆತುಂಬಿಸಿಕೊಳ್ಳಬಹುದಿತ್ತು. ಆದರೆ ಆತ ತನ್ನ ಪರಾಜಯದ ವಿರುದ್ಧದ ಸೇಡನ್ನು ಕೈಲಾಗದ ಅಂಬೆಯ ಮೇಲೆ ತೀರಿಸಿಕೊಳ್ಳುತ್ತಾನೆ. ದಾರಿಕಾಣದ ಅಂಬೆ ಪುನಃ ಭೀಷ್ಮನಲ್ಲಿಗೆ ಮರಳುತ್ತಾಳೆ. ಇಷ್ಟಾದರೂ ಆಕೆಗೆ ತನ್ನ ಜೀವನದ ಕುರಿತು ಸ್ಪಷ್ಟತೆ ಇರುವುದಿಲ್ಲ. 

ಭೀಷ್ಮ ವಿಚಿತ್ರವೀರ್ಯನಿಗೆ ಅವಳನ್ನು ಮದುವೆಯಾಗು ಎಂದು ಹೇಳಿದಾಗ ಆತ ಬೇರೊಬ್ಬರನ್ನು ಪ್ರೀತಿಸಿರುವ ಹೆಣ್ಣು ತನಗೆ ಬೇಡ ಎನ್ನುತ್ತಾನೆ. ಅಲ್ಲಿಯೂ ಅಂಬೆ ಹತಾಶಳಾಗುತ್ತಾಳೆ. 

ಕೊನೆಗೆ ತನ್ನನ್ನು ಸ್ವಯಂವರದಲ್ಲಿ ಗೆದ್ದವನು ನೀನು, ನೀನೇ ನನ್ನನ್ನು ಮದುವೆಯಾಗು ಎಂದು ಭೀಷ್ಮನಿಗೆ ಕೇಳುತ್ತಾಳೆ. ಬೇರೆ ಸಂದರ್ಭವಾಗಿದ್ದರೆ ಭೀಷ್ಮ ಒಪ್ಪಿ ಅವಳ ಮದುವೆಯಾಗಿ ಇಬ್ಬರೂ ಸುಖವಾಗಿ ಇರುತ್ತಿದ್ದರೋ ಏನೋ? ಆದರೆ ಭೀಷ್ಮ ತಾನು ಮದುವೆಯಾಗುವುದಿಲ್ಲ ಎಂದು ತನ್ನ ತಾಯಿಯ ಬಳಿ ಪ್ರತಿಜ್ಞೆ ಮಾಡಿರುತ್ತಾನಲ್ಲ. ಆ ಪ್ರತಿಜ್ಞೆಯನ್ನು ಯಾವುದೇ ಕಾರಣಕ್ಕೂ ಆತ ಮುರಿಯಲು ಇಷ್ಟಪಡುವುದಿಲ್ಲವಾದ್ದರಿಂದ ಆತನೂ ಅಂಬೆಯನ್ನು ನಿರಾಕರಿಸುತ್ತಾನೆ. 

ಅಂಬೆಯ ಆಕ್ರೋಶ ಸ್ಫೋಟಿಸುತ್ತದೆ.

ಒಬ್ಬ ಹೆಣ್ಣಿಗೆ ಸಾರ್ಥಕ್ಯ ಇರುವುದೇ ಮದುವೆಯಲ್ಲಿ, ನಂತರ ಸಿಗುವ ತಾಯ್ತನದಲ್ಲಿ. ಅಂತಹಾ ಮುಗ್ಧ ಹೆಣ್ಣನ್ನು ಅನ್ಯಾಯವಾಗಿ ಎತ್ತಿಕೊಂಡು ಬಂದು ಈಗವಳಿಗೆ ಒಂದು ದಾರಿ ತೋರಿಸದೇ ಬೀದಿಪಾಲು ಮಾಡುತ್ತಿರುವ ಭೀಷ್ಮನ ವಿರುದ್ದ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ. 

ಹೇಗೆ ಸೇಡು ತೀರಿಸಿಕೊಳ್ಳುವುದು? 

ಆತನೋ ಸಕಲ ವಿದ್ಯಾ ಪಾರಂಗತ. ಶಸ್ತ್ರ, ಶಾಸ್ತ್ರಗಳನ್ನು ಬಲ್ಲವನು. ಆತನನ್ನು ಏಳು ಮಲ್ಲಿಗೆ ತೂಕದ ತನ್ನಂತಹ ರಾಜಕುಮಾರಿಯಿಂದ ಮಣಿಸಲು ಸಾಧ್ಯವೇ ಇಲ್ಲ ಎಂದು ಯೋಚಿಸಿ ಭೀಷ್ಮನ ಗುರುಗಳಾದ ಪರುಶುರಾಮನಲ್ಲಿಗೆ ಹೋಗಿ ಭೀಷ್ಮನ ವಿರುದ್ಧ ಯುದ್ಧ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಪರಶುರಾಮ ಭೀಷ್ಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. 

ಏಕೆಂದರೆ ಪರಶುರಾಮನಿಗೆ ಇದರಲ್ಲಿ ಭೀಷ್ಮನ ತಪ್ಪಿಗಿಂತಲೂ ಅಂಬೆ ಅನ್ಯಾಯವಾಗಿ ಶಿಕ್ಷೆ ಅನುಭವಿಸುತ್ತಿರುವುದು ಆತನಿಂದ ಸಹಿಸಲಾಗೋಲ್ಲ. ಆದರೆ ಇಪ್ಪತ್ತಮೂರು ದಿನಗಳ ಕಾಲ ಯುದ್ಧ ನಡೆದರೂ ಇಬ್ಬರೂ ಸೋಲುವುದಿಲ್ಲ. 

ಕೊನೆಗೆ ಭೀಷ್ಮ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾದಾಗ ಸ್ವಯಂ ಈಶ್ವರನು ಪ್ರತ್ಯಕ್ಷನಾಗುತ್ತಾನೆ. 

ಮಹಾದೇವನ ಮುಂದೆ ಅಂಬೆಯಿಡುವ ಕೋರಿಕೆಯೊಂದೇ... "ತನ್ನಿಂದ ಭೀಷ್ಮನ ಸಾವು ಸಂಭವಿಸಬೇಕು" ಎನ್ನುವುದು. 

ಈಶ್ವರನು ನಗುತ್ತಾ "ಸೃಷ್ಟಿಯ ಪ್ರತಿಯೊಂದು ಜೀವಿಯೂ ತಾನು ಮನದಾಳದಿಂದ ಬಯಸ್ಸಿದ್ದನ್ನು ಪಡೆದೇ ಪಡೆಯುತ್ತಾರೆ, ನೀನೂ ಸಹ ಬೇರೆ ಏನಾದರೂ ಬೇಡಿಕೋ. ಇನ್ನೊಬ್ಬರ ಸಾವನ್ನು ಏಕೆ ಬಯಸುತ್ತೀಯ?" ಎಂದು ಬುದ್ಧಿ ಹೇಳುತ್ತಾನೆ. 

ಆದರೂ ಅಂಬೆ ಕೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಮಹಾದೇವನು ಅವಳಿಚ್ಚೆಯಂತೆಯೇ ಮುಂದಿನ ಜನ್ಮದಲ್ಲಿ ದ್ರುಪದನ ಮಗಳಾಗಿ ಹುಟ್ಟಿ ಭೀಷ್ಮನ ಸಾವಿಗೆ ಕಾರಣವಾಗುವ ವರವನ್ನು ನೀಡುತ್ತಾನೆ. 

ತನಗಿನ್ನು ಈ ಜನ್ಮದಲ್ಲಿ ಏನೇನೂ ಕೆಲಸವಿಲ್ಲ ಎಂದರಿತು ಅಂಬೆ ಆ ಕೂಡಲೇ ಚಿತೆಗೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ನಂತರ ಮುಂದಿನ ಜನ್ಮದಲ್ಲಿ ದ್ರುಪದನ ಮಗಳಾಗಿ ಹುಟ್ಟಿ ತದನಂತರ ಪುರುಷನಾಗಿ ಪರಿವರ್ತಿತಳಾಗಿ ಶಿಖಂಡಿನಿ ಎನಿಸಿಕೊಳ್ಳುತ್ತಾಳೆ. 

ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮ ಹೆಣ್ಣಿನ ಮೇಲೆ ಶಸ್ತ್ರಾಸ್ತ್ರ ಎತ್ತುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದರಿಂದ ಶಿಖಂಡಿಯನ್ನು ಅರ್ಜುನನ ಸಾರಥಿಯನ್ನಾಗಿಸಿ ಭೀಷ್ಮನಿಗೆ ಎದುರಾಗಿ ಯುದ್ಧಕ್ಕೆ ಕಳಿಸಲಾಗುತ್ತದೆ. ಶಿಖಂಡಿಯನ್ನು ಕಂಡಾಕ್ಷಣ ಭೀಷ್ಮ ಶಸ್ತ್ರ ತ್ಯಾಗ ಮಾಡುತ್ತಾನೆ. ಅರ್ಜುನ ಭೀಷ್ಮನ ಮೇಲೆ ಬಾಣ ಪ್ರಯೋಗಿಸಿ ಸೋಲಿಸುತ್ತಾನೆ. ಇಚ್ಛಾಮರಣಿಯಾದ ಭೀಷ್ಮ ಉತ್ತರಾಯಣ ಕಾಲದವರೆಗೂ ಕಾದು ಪ್ರಾಣತ್ಯಾಗ ಮಾಡುತ್ತಾನೆ. 

ಅಲ್ಲಿಗೆ ಅಂಬಾಳ ಸೇಡು ತೀರಿದಂತಾಗುತ್ತದೆ.

ಏನೇ ಆದರೂ ಅವಳ ರೋಷ, ಕಿಚ್ಚು ಮತ್ತು ಹಿಡಿದಿದ್ದನ್ನು ಸಾಧಿಸುವ ತನಕ ಬಿಡದ ಛಲ ನಿಜಕ್ಕೂ ಪ್ರಶಂಸನೀಯವಾದದ್ದು. ಮಹಾದೇವ ಪ್ರತ್ಯಕ್ಷನಾದಾಗ ಆಕೆ ತನಗೆ ಒಳ್ಳೆಯದಾಗುವ ಹಾಗೆ ಕೇಳಿಕೊಂಡು ಸುಖವಾಗಿ ಬಾಳಬಹುದಿತ್ತು. ಆದರೆ ಛಲದ ಹೆಣ್ಣುಮಗಳು ಎಂತಹ ಸಂದರ್ಭದಲ್ಲಿಯೂ ತನ್ನ ಹಠ ಬಿಡದೇ ಭೀಷ್ಮನ ಸಾವು ಒಂದೇ ತನ್ನ ಗುರಿ ಎಂದು ಪಟ್ಟುಬಿಡದೇ ಸಾಧಿಸಿ ತೋರಿಸುತ್ತಾಳೆ.   

************

ಕೆ.ಎ.ಸೌಮ್ಯ, ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ