ಹೆಂಡತಿ ಎಂದರೆ ಹೀಗಿರಬೇಕು! (ದ್ರೌಪದಿಯ ಮನದಾಳದ ಮಾತು)
ನೈವ ಮೇ ಪತಯಸ್ಸಂತಿನ...
ಪುತ್ರಾನ ಚ ಬಾಂಧವಃ|
ನ ಭ್ರಾತರೋ ನ ಚ ಪಿತಾ...
ನೈವಂ ತ್ವಮ್ ಮಧುಸೂದನ||
ಬದುಕಿನುದ್ದಕ್ಕೂ ಅಪಮಾನಗಳನ್ನು ಎದುರಿಸಿದ, ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆದ, ವೀರಾಧಿವೀರರಾದ ಐವರು ಗಂಡಂದಿರು ಇದ್ದರೂ, ಪರಪುರುಷರ ಮುಂದೆ ಅಪಮಾನ ಮಾಡಿಸಿಕೊಂಡ ದ್ರೌಪದಿ, ಕಡೆಗೆ ಹತಾಶಳಾಗಿ ನುಡಿದ ಮಾತಿದು. "ನನಗೆ ಗಂಡಂದಿರೂ ಇಲ್ಲ.. ಪುತ್ರ-ಬಂಧು- ಬಾಂಧವರೂ ಇಲ್ಲ.. ಸೋದರನೂ ಇಲ್ಲ.. ತಂದೆಯೂ ಇಲ್ಲ.. ಕೊನೆಗೆ ನೀನೂ ಇಲ್ಲ ಕೃಷ್ಣ" ಎಂದು ನುಡಿಯುತ್ತಾಳೆ ಆಕೆ.
ದ್ರೌಪದಿ ಆಗಿನ ಕಾಲದ ಸ್ತ್ರೀಯರಲ್ಲಿಯೇ ಅತ್ಯಂತ ಸುಂದರಿಯಾದ ಹೆಣ್ಣು. ಕೊಂಚ ಕಪ್ಪು ವರ್ಣದವಳಾದರೂ, ಬಣ್ಣ ಕಾಣದಷ್ಟು ನಯ-ನಾಜೂಕಿನ ಸುಂದರ ಮೈಮಾಟದವಳು. ವನವಾಸದ ಅವಧಿಯಲ್ಲಿ ಅತ್ಯಂತ ಸರಳ ಉಡುಗೆಯಲ್ಲಿದ್ದರೂ ಕಣ್ಸೆಳೆಯುವಂತಿದ್ದಳು. ಅಗ್ನಿದೇವನ ಪುತ್ರಿಯಾದ ದ್ರೌಪದಿಗೆ ಅವಳ 'ಧೈರ್ಯವೇ' ಮುಖದಲ್ಲಿ ತೇಜಸ್ಸು ಹೆಚ್ಚಲು ಕಾರಣವಾಗಿತ್ತು ಎನ್ನಬಹುದು. ಅನ್ಯಾಯಕ್ಕೆ ಬಗ್ಗದ, ಗಂಡಂದಿರ ಅಧರ್ಮವನ್ನು ಖಂಡಿಸುವ, ಅವರನ್ನು ಧರ್ಮಮಾರ್ಗದಲ್ಲಿ ನಡೆಯಲು ಪ್ರಚೋದಿಸುವ, ಹಾಗೆ ನಡೆದಾಗ ಮೆಚ್ಚುವ ದ್ರೌಪದಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು.
ದ್ರೌಪದಿ ವನವಾಸದ ಅವಧಿಯಲ್ಲಿ ಕಾಡು, ಮೇಡುಗಳಲ್ಲಿ ಅಲೆಯುವಾಗ ಸಿಕ್ಕ ನದಿ-ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರೆ, ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುವ ಆಕೆಯ ಅಂಗಾಂಗ ಸೌಂದರ್ಯಕ್ಕೆ ಮಾರು ಹೋದ ಇತರ ಸ್ತ್ರೀಯರು 'ತಾವೂ ಪುರುಷರಾಗಬಾರದಿತ್ತೇ' ಎಂದು ನಿಟ್ಟುಸಿರು ಬಿಡುತ್ತಿದ್ದರಂತೆ. ಅಂತಹ ಸೌಂದರ್ಯ ಅವಳದ್ದು. ಧೀರ ಮತ್ತು ಗಂಭೀರ. ಆದರೆ, ಅವಳು ಪಾಂಡವರ ಮೆಚ್ಚಿನ ಹೆಂಡತಿಯಾಗಲು ಅವಳ ಸೌಂದರ್ಯವೊಂದೇ ಕಾರಣವಲ್ಲ.
ದ್ರೌಪದಿಯ ಬಗೆಗೆ ನಮಗೆ ಹೆಚ್ಚಿಗೆ ಏನೂ ತಿಳಿದೇ ಇಲ್ಲ.
ಮಹಾಭಾರತದಲ್ಲಿ ಪಾಂಡವರ ಶೌರ್ಯದ ಗುಣಗಾನ ಮಾಡಲಾಗುತ್ತದೆಯೇ ಹೊರತೂ, ಪ್ರಾಪಂಚಿಕ ನೀತಿಗಳಿಂದ ಹೊರತಾದ ನಿಯಮವೊಂದನ್ನು ಅಪ್ಪಿಕೊಂಡು, ದ್ರೌಪದಿ ಅದನ್ನು ಹೇಗೆ ನಿಭಾಯಿಸಿದ್ದಿರಬಹುದು ಎಂದು ಯಾರಿಗೂ ಆಸಕ್ತಿ ಇಲ್ಲ.
ಅವಳು ತನ್ನ ಗಂಡಂದಿರಿಗೆ ಅತ್ಯುತ್ತಮ ಪತ್ನಿ ಆಗಿದ್ದಳು.
ಒಮ್ಮೆ ಸತ್ಯಭಾಮೆ ಅವಳ ಬಳಿ ಬಂದು "ನಿನ್ನ ಪತಿಯಂದಿರನ್ನು ಹೇಗೆ ಹಿಡಿದಿಟ್ಟುಕೊಂಡಿದ್ದೀಯ? ಮಾಟ ಏನಾದರೂ ಮಾಡಿಸಿದ್ದೀಯ?" ಎಂದು ಕೇಳಿದಾಗ, ದ್ರೌಪದಿ ಕೊಡುವ ಉತ್ತರ ಹೀಗಿದೆ.
"ಅಹಂಕಾರ ಬಿಟ್ಟು ಪತಿಯ ಸೇವೆ ಮಾಡುವುದು, ಅವರಿಗೆ ಕೆಟ್ಟ ಮಾತನ್ನು ಆಡದಿರುವುದು, ಸಂಶಯ ಪಡದಿರುವುದು, ಅವರು ಕೆಟ್ಟ ಸ್ಥಿತಿಯಲ್ಲಿದ್ದರೂ ಬೇಸರ ಪಡದಿರುವುದು, ಪತಿಯಲ್ಲಿ ತೃಪ್ತಳಾಗಿರುವುದು, ಅವರುಣ್ಣದೇ ತಾನುಣ್ಣದಿರುವುದು, ಮನೆಗೆ ಬಂದ ಗಂಡನನ್ನು ನಗುಮುಖದಿಂದ ಸ್ವಾಗತಿಸುವುದು, ಇದ್ದುದರಲ್ಲಿಯೇ ಅಡುಗೆ ಮಾಡಿ ಬಡಿಸುವುದು, ಇಲ್ಲ ಎಂದು ಹೇಳದಿರುವುದು, ಅವರು ಕರೆದಾಗ ಅದೇನೇ ಕೆಲಸ ಇದ್ದರೂ ಬಿಟ್ಟು ಅವರ ಬಳಿ ಓಡುವುದು, ನಾಳೆಗಾಗುವಷ್ಟನ್ನು ಗುಟ್ಟಾಗಿ ತೆಗೆದಿಡುವುದು, ಸೋಮಾರಿತನ ಇಲ್ಲದಿರುವುದು" ಇವೇ ಮೊದಲಾದ ಗುಣಗಳಿಂದ ಗಂಡನನ್ನು ತೃಪ್ತಿ ಪಡಿಸಬಹುದು ಎನ್ನುತ್ತಾಳೆ ದ್ರೌಪದಿ.
ದ್ರೌಪದಿ ಎಂದರೆ ಕೇವಲ ಕೋಪದ ಪ್ರತೀಕ ಎಂದು ಹೇಳುವವರಿಗೆ ಮತ್ತೊಂದು ವಿಷಯ ಗೊತ್ತಿರಲಿಕ್ಕಿಲ್ಲ. ದ್ರೌಪದಿಯು ಧರ್ಮದ ಜೊತೆ ರಾಜಕಾರ್ಯವನ್ನೂ ಬಲ್ಲವಳಾಗಿದ್ದಳು. ಗಂಡನ ರಾಜ್ಯದ ಸಕಲ ಆದಾಯ ಮತ್ತು ವ್ಯಯಗಳು ಇವಳೊಬ್ಬಳಿಗೆ ಮಾತ್ರವೇ ತಿಳಿದಿದ್ದುವಂತೆ. ಪಾಂಡವರೂ ಸಹ ಎಲ್ಲಾ ಹೊಣೆಯನ್ನು ಇವಳಿಗೆ ಒಪ್ಪಿಸಿ ನೆಮ್ಮದಿಯಿಂದ ಇದ್ದರೆಂದು ಈ ಶ್ಲೋಕ ವಿವರಿಸುತ್ತದೆ.
ಏಕಾಹಂ ಮೋದ್ಮಿ ಕಲ್ಯಾಣಿ
ಪಾಂಡವಾನಾಂ ಯಶಸ್ವಿನಿ|
ಸರ್ವಂ ರಾಜ್ಞಃ ಸಮುದಯಂ
ಆಯಂ ಚ ವ್ಯಯಮೇವ ಚ||
ಇಂತಹಾ ಸಾಧ್ವಿ ದ್ರೌಪದಿಯು ಸ್ವರ್ಗಾವರೋಹಣದ ಸಮಯದಲ್ಲಿ ಮೊದಲು ಕುಸಿದು ಬೀಳುತ್ತಾಳೆ. ಯುಧಿಷ್ಠಿರ ಅದಕ್ಕೆ ಕಾರಣ ಹೇಳುತ್ತಾನೆ. "ಅವಳಿಗೆ ಅರ್ಜುನನ ಬಗೆಗೆ ವಿಶೇಷ ಒಲವು ಇದ್ದಿದ್ದೇ ಇದಕ್ಕೆ ಕಾರಣ, ಅವಳು ಐವರು ಪತಿಯರನ್ನೂ ಒಂದೇ ರೀತಿ ಕಾಣದೇ ಪಕ್ಷಪಾತ ಮಾಡಿದ್ದಳು" ಎನ್ನುತ್ತಾನೆ. ನಿಜ ಹೇಳಬೇಕೆಂದರೆ ದ್ರೌಪದಿ ಮದುವೆ ಆದದ್ದೇ ಅರ್ಜುನನನ್ನು ಅಲ್ಲವೇ? ಅವನಿಗಾಗಿಯೇ ಉಳಿದ ನಾಲ್ವರನ್ನು ವರಿಸಿದವಳು ಆಕೆ. ಅದಕ್ಕಾಗಿಯೇ ಅರ್ಜುನನ ಮೇಲೆ ವಿಶೇಷವಾದ ಪ್ರೀತಿ- ಭಕ್ತಿ ಇದ್ದರೆ ತಪ್ಪೇನು?
ಒಟ್ಟಿನಲ್ಲಿ ಹೆಂಗಸರು ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಂದಿನ ಸಮಾಜಕ್ಕೆ, ಸಾಹಿತ್ಯಕ್ಕೆ ಬೇಕಾಗಿರಲಿಲ್ಲ. ಅದಕ್ಕಾಗಿ ಏನೋ ಒಂದು ಸಬೂಬು ಕೊಟ್ಟು ಅವಳ ಪಾತ್ರವನ್ನು ಮುಗಿಸಿದರು. ಆದರೆ ಮಹಾಭಾರತ ಮುಗಿದರೂ, ದ್ರೌಪದಿ ಓದುಗರ ಮನದಲ್ಲಿ ಕಾಡುತ್ತಲೇ ಇರುತ್ತಾಳೆ. ಯಾವ ತಪ್ಪಿಗಾಗಿ ದ್ರೌಪದಿ ಇಷ್ಟೆಲ್ಲಾ ಬೆಲೆ ತೆರಬೇಕಾಯ್ತು? ಬಹುಶಃ ಉತ್ತರ ಯಾರಿಗೂ ಗೊತ್ತಿಲ್ಲ....
(ಓ ಮನಸೇ- ಅಕ್ಟೋಬರ್ 2014)
*******
ಕೆ.ಎ.ಸೌಮ್ಯ
ಮೈಸೂರು
