ಹಿಡಿಂಬೆ

 


ಸಾಮಾನ್ಯವಾಗಿ ನಮಗೆ ಏನಾದರೂ ತೊಂದರೆಯಾದರೆ ಅದು ಹೊರಗಿನವರಿಂದ ಎಂದು ನಮ್ಮ ಭಾವನೆ. ಹೊರಗಿನವರ್ಯಾರೋ ನಮಗೆ ತೊಂದರೆ ಕೊಟ್ಟಾಗ ನಮ್ಮವರು ನಮ್ಮನ್ನು ರಕ್ಷಿಸುತ್ತಾರೆಂಬ ನಂಬಿಕೆ ನಮಗೆ ಯಾವಾಗಲೂ ಇರುತ್ತದೆ. 


ಆದರೆ ನಮ್ಮವರೇ ನಮಗೆ ತೊಂದರೆ ಕೊಟ್ಟಾಗ ನಾವು ಯಾರನ್ನು ನಂಬಬೇಕು. ಆಗ ಅನಿವಾರ್ಯವಾಗಿ ಹೊರಗಿನವರನ್ನೇ ನಮ್ಮ ರಕ್ಷಕರು ಎಂದು ತಿಳಿಯಬೇಕಾಗುತ್ತದೆ. 


ಹಿಡಿಂಬೆಗೂ ಈ ಅನುಭವವಾಯ್ತು. ತಾನು, ತನ್ನಣ್ಣ ಇಷ್ಟೇ ಪ್ರಪಂಚ ಅವಳದ್ದು. ಮಾನವರ ವಾಸನೆ ಬಂದಾಗ ಹೋಗಿ ಹಿಡಿದು ತರುವುದು, ತಿನ್ನುವುದು ಇಷ್ಟರಲ್ಲಿಯೇ ಬದುಕು ಸಾಗಿತ್ತು. ಆರಕ್ಕೆ ಏರಿರಲಿಲ್ಲ.. ಮೂರಕ್ಕೆ ಇಳಿದಿರಲಿಲ್ಲ.. ಹಿಡಿಂಬನೇನೋ ಗಂಡಸು ಹೇಗೋ ಬದುಕಿಕೊಂಡಿದ್ದ.. 


ಆದರೆ ಹಿಡಿಂಬೆ ಹೆಂಗಸು.. 


ಏಕತಾನತೆಯ ಈ ಬದುಕು ಅವಳಿಗೆ ಚಿಟ್ಟು ಹಿಡಿಸಿತ್ತು.. ಮದುವೆಯಿಲ್ಲ, ಸಂಗಾತಿಯಿಲ್ಲ, ಮಕ್ಕಳಿಲ್ಲ.. ಇದೂ ಒಂದು ಬದುಕಾ ಅಂತ ಅವಳಿಗೆ ಬಹಳ ಕಾಡುತ್ತಿತ್ತು.. 


ಅದರಲ್ಲೂ ಈ ಸಂಗಾತಿಯ ವ್ಯಾಮೋಹ ಬಹಳ ಅಪಾಯಕಾರಿಯಾದದ್ದು. ಅದನ್ನು ಅರ್ಥ ಮಾಡಿಕೊಳ್ಳುವವರಿಂದಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವ್ಯಾಮೋಹ ಮೂಡಿದವರು ಯಾರೆಂದರೆ ಯಾರನ್ನೂ ಸಹ ಲೆಕ್ಕಿಸೋಲ್ಲ.. ಹೆತ್ತ ತಂದೆ ತಾಯಿಯನ್ನೂ ಸಹ.. 


ಇಂತಹಾ ಸಂದರ್ಭದಲ್ಲಿ ಆಹಾರಕ್ಕಾಗಿ ಅಲೆಯುತ್ತಿರುವ ಹಿಡಿಂಬೆಗೆ ಭೀಮ ಕಾಣಿಸುತ್ತಾನೆ. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕ ಹಾಗೆ ಆಗುತ್ತದೆ ಅವಳಿಗೆ. ವಾರಾಣವತದ ಅರಗಿನ ಅರಮನೆಯ ಬೆಂಕಿಯಿಂದ ತನ್ನವರನ್ನು ರಕ್ಷಿಸಿಕೊಂಡದ್ದಲ್ಲದೇ, ಅವರೆಲ್ಲರನ್ನೂ ಒಮ್ಮೆಗೇ ಹೊತ್ತುಕೊಂಡು ಓಡಿ ಬಂದು ಸುಸ್ತಾಗಿದ್ದ ಭೀಮ ಕೆದರಿದ ಕೂದಲನ್ನೂ ಸರಿ ಪಡಿಸಿಕೊಳ್ಳದೇ ಒಂದು ಕಲ್ಲು ಬಂಡೆಯ ಹಾಗೆ ಕುಳಿತಿರುತ್ತಾನೆ. ರೂಪ, ಆಕಾರ, ಗಾತ್ರದಲ್ಲಿ ಯಾವ ರಾಕ್ಷಸನಿಗೂ ಕಡಿಮೆ ಇರಲಿಲ್ಲ ಅವನು. ನೋಡಿದ ತಕ್ಷಣವೇ ಹಿಡಿಂಬೆಗೆ ಲವ್ ಅಟ್ ಫರ್ಸ್ಟ್ ಸೈಟ್ ಆಗಿ ಹೋಯ್ತು.. 


ಮನುಷ್ಯರು ಸಿಕ್ಕರೆ ಹಿಡಿದುಕೊಂಡು ಹೋಗಿ ಅಣ್ಣನಿಗೆ ಕೊಡುತ್ತಿದ್ದವಳು ಇಂದು ಭೀಮನನ್ನು ನೋಡುತ್ತಾ ನಿಂತವಳು ಜಗತ್ತನ್ನೇ ಮರೆತಿದ್ದಳು. ರಕ್ಕಸಿಯ ರೂಪದಲ್ಲಿದ್ದರೆ ತನ್ನನ್ನು ಮೆಚ್ಚೋಲ್ಲ ಎಂದರಿತು ಮಾನವರೂಪ ಧಾರಣೆ ಮಾಡಿ ಭೀಮನ ಬಳಿ ಹೋಗಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ ಹಿಡಿಂಬೆ. 


ಜೊತೆಗೆ ಈ ಕಾಡು ತನ್ನಣ್ಣ ಹಿಡಿಂಬಾಸುರನಿಗೆ ಸೇರಿದ್ದೆಂದೂ, ಇಲ್ಲಿರುವುದು ಅಪಾಯ ಅಂತಲೂ ತಿಳಿಸುತ್ತಾಳೆ. ಅಷ್ಟರಲ್ಲಿ ಮನುಷ್ಯರ ವಾಸನೆ ಹಿಡಿದುಕೊಂಡು ಹಿಡಿಂಬಾಸುರ ಅಲ್ಲಿಗೇ ಬಂದು ಬಿಡುತ್ತಾನೆ. 


ಹಿಡಿಂಬೆಗೆ ತನ್ನವರು ಅಂತ ಇದ್ದಿದ್ದು ಅವಳಣ್ಣ ಹಿಡಿಂಬ ಒಬ್ಬನೇ. ಅವನ ಪಕ್ಷ ವಹಿಸಿದರೆ ಭೀಮನನ್ನು ಅವನಿಗೆ ಬಿಟ್ಟುಕೊಡಬೇಕಾಗುತ್ತದೆ. ಆದರೆ ಅವಳು ಈಗಾಗಲೇ ಭೀಮನಿಗೆ ಮನಸೋತಿದ್ದಾಳೆ. ಹಾಗಂತ ಹೇಳಿದರೆ ಹಿಡಿಂಬ ಭೀಮನೊಡನೆ ಅವಳ ಮದುವೆ ಮಾಡುತ್ತಾನೆಯೇ? ಖಂಡಿತಾ ಇಲ್ಲ. ಈಗ ಅವಳ ಮನಸ್ಸಿನಲ್ಲಿ ದ್ವಂದ್ವ.. ಅಣ್ಣನೋ ಅಥವಾ ಜೀವನ ಸಂಗಾತಿಯೋ? ಅವನೋ..ಇವನೋ.. 


ಸಾಮಾನ್ಯವಾಗಿ ಪ್ರೀತಿಸುವ ಎಲ್ಲಾ ಹೆಣ್ಣುಮಕ್ಕಳಿಗೆ ಕಾಡುವ ವಿಷಯ ಇದು.. ಮನೆಯವರು ಮುಖ್ಯವೋ ಅಥವಾ ಪ್ರೀತಿಯೋ ಎನ್ನುವುದು. ಎಷ್ಟೇ ಅಡೆತಡೆಗಳಾದರೂ ಕೊನೆಗೆ ಗೆಲ್ಲುವುದು ಪ್ರೀತಿಯೇ.. 


ಏಕೆಂದರೆ ಮನೆಯವರು ಜನ್ಮ ನೀಡಿರಬಹುದು, ಸಾಕಿರಬಹುದು.. ಆದರೆ ನಾವು ಜೀವನ‌ ಮಾಡಬೇಕಿರುವುದು ನಮ್ಮ ಜೀವನ ಸಂಗಾತಿಯೊಂದಿಗೆ. ಹಿಡಿಂಬ ಸಹ ತಂಗಿಯ ಮನದಲ್ಲಿನ ಭಾವನೆ ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾನೆ. ಕೊನೆಗೆ ಮೋಹವೇ ಗೆದ್ದು ಹಿಡಿಂಬೆ ಭೀಮನ ಪಕ್ಷ ವಹಿಸುತ್ತಾಳೆ. 


ಮುಂದೆ ನಡೆದದ್ದು ಭೀಮ ಮತ್ತು ಹಿಡಿಂಬಾಸುರರ ನಡುವಿನ ಘನಘೋರ ಯುದ್ಧ. ಈ ಯುದ್ಧದಲ್ಲಿ ಹಿಡಿಂಬನ ಅಂತ್ಯವಾಗುತ್ತದೆ. ಎಲ್ಲಿದ್ದರೋ.. ಹಿಡಿಂಬನ ಅನುಚರರು ಬಂದು ಭೀಮನನ್ನು ತಮ್ಮ ಮುಂದಿನ ನಾಯಕನೆಂದು ಘೋಷಿಸಿಬಿಡುತ್ತಾರೆ. ರಾಜನನ್ನು ಕೊಂದು ಭೀಮ ಆ ರಾಜ್ಯದ ರಾಜನಾಗುತ್ತಾನೆ. ರಾಜನ ತಂಗಿ ಅವನ ರಾಣಿಯಾಗುತ್ತಾಳೆ. 


ಅನಿವಾರ್ಯವಾಗಿ ಎದುರಾಗುವ ಈ ಸಂದರ್ಭವನ್ನು ಭೀಮ ಸಮರ್ಥವಾಗಿಯೇ ಎದುರಿಸುತ್ತಾನೆ. ಒಂದು ಮಗುವಾಗುವವರೆಗೆ ಅಲ್ಲಿ ಉಳಿದುಕೊಳ್ಳುವ ಭೀಮ, ಮಗುವಾಗುತ್ತಿದ್ದಂತೆಯೇ ಅದನ್ನು ಮುಂದಿನ ನಾಯಕ ಎಂದು ಘೋಷಿಸಿ ತನ್ನ ತಾಯಿ ಮತ್ತು ಸಹೋದರರೊಂದಿಗೆ ಅಲ್ಲಿಂದ ಹೊರಟು ಬಿಡುತ್ತಾನೆ. 


ಆ ರಾಜ್ಯದ ಜನ ಮುಕ್ತವಾಗಿ ಇದನ್ನು ಸ್ವಾಗತಿಸುತ್ತಾರೆ. ಹಿಡಿಂಬ ಇರುವ ತನಕ‌ ಅವನ‌ ಬಾಲವಾಗಿದ್ದವರು, ಭೀಮ ಗೆಲ್ಲುತ್ತಿದ್ದಂತಯೇ ಇವನ‌ ಪಕ್ಷ ಹಿಡಿದಿದ್ದರು. ಈಗ ಯಾವುದೇ ತಕರಾರು ಇಲ್ಲದೆಯೇ ಹಿಡಿಂಬೆಯ ಮಗನನ್ನು ರಾಜನೆಂದು ಸ್ವೀಕರಿಸಿದರು. ಹಿಂಬಾಲಕರೆಂದರೆ ಹೀಗೆಯೇ.. ಇವರಿಗೆ ಸ್ವಂತ ಯೋಚನೆ ಇರುವುದಿಲ್ಲ. ಯಾರು ಗೆಲ್ಲುತ್ತರೋ ಅವರೊಡನೆ ಇದ್ದುಬಿಡುವುದಷ್ಟೇ ಅವರ ಕೆಲಸ. 


ಮುಂದೆ ಕುರುಕ್ಷೇತ್ರ ಯುದ್ಧದವರೆಗೂ ಭೀಮನಿಗೆ ಹಿಡಿಂಬೆಯ ನೆನಪು ಸಹಾ ಬರುವುದಿಲ್ಲ. ಆದರೆ ರಾಕ್ಷಸಿಯಾಗಿದ್ದರೂ ಸಹ ಮಾನವೀಯ ಗುಣ-ನಡತೆಗಳುಳ್ಳ ಹಿಡಿಂಬೆ ಕೊನೆಯವರೆಗೂ ಭೀಮನ ನೆನಪಿನಲ್ಲಿಯೇ ಜೀವಿಸುತ್ತಾಳೆ. ಅವನೊಡನೆ ಕಳೆದ ಕ್ಷಣ ಬಹಳ ಚಿಕ್ಕದಾದರೂ ಕೊನೆಯವರೆಗೂ ಅವನಿಗಾಗಿಯೇ ಕಾಯುತ್ತಿರುತ್ತಾಳೆ. 


ಇಲ್ಲಿ ಹೇಳಿದಷ್ಟು ಸುಲಭವಲ್ಲ ಹೀಗೆಯೇ ನಡೆದುಕೊಳ್ಳುವುದು. ಅದರಲ್ಲಿಯೂ ಪ್ರತಿಕ್ರಿಯೆಯೇ ಇರದ ಪ್ರೀತಿಯನ್ನು ಬಹಳ‌ ಕಾಲ ಜತನ ಮಾಡುವುದು ಸಿಕ್ಕಾಪಟ್ಟೆ ಕಠಿಣವಾದ ಕೆಲಸ. ಆಕೆಗೆ ಮೊದಲೇ ಗೊತ್ತಿತ್ತು.. ತಾನು ಕೊನೆಯವರೆಗೂ ಭೀಮನ ಜೊತೆಯಲ್ಲಿ ಇರಲಾಗೋಲ್ಲ ಅಂತ. 


ಅದಕ್ಕಾಗಿ ಮಾನಸಿಕವಾಗಿ ಸಿದ್ಧಳಾಗಿಯೇ ಅವನನ್ನು ಮದುವೆಯಾದಳು. ಮಗುವಾದಾಗ, ತನ್ನನ್ನು ಬಿಟ್ಟು ಹೊರಡುವಾಗಲೂ ಸ್ಥಿತಪ್ರಜ್ಞಳಾಗಿಯೇ ಇದ್ದಳು. ಅಲ್ಲದೇ ಸಾಯುವವರೆಗೂ ಅವನಿಗೆ ನಿಷ್ಠಳಾಗಿಯೇ ಇದ್ದಳು. ಮನುಷ್ಯರಲ್ಲಿಯೇ ಕಾಣದ ಈ ಗುಣ ರಾಕ್ಷಸರಲ್ಲಿ ಕಂಡಿರುವುದು ಒಂದು ಸೋಜಿಗ. ಏಕೆಂದರೆ ಜಗತ್ತಿನ ಕಾನೂನುಗಳೆಲ್ಲವೂ ಮನುಷ್ಯರಿಗೆ ಮಾತ್ರ. ಆದರೂ ತಾನು ಮಾನವಳಲ್ಲದಿದ್ದರೂ ಮಾನವಧರ್ಮ ಪಾಲಿಸುತ್ತಾಳೆ ಹಿಡಿಂಬೆ. 


ಇವಳನ್ನು ಏನೆಂದು ಬಣ್ಣಿಸುವುದು? 


(ಪ್ರೇರಣಾ ಮಾಸಪತ್ರಿಕೆ: ಜನವರಿ 2014)


*******


ಕೆ.ಎ.ಸೌಮ್ಯ

ಮೈಸೂರು


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ