ನಹುಷ
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅದರ ಮಿತಿಯರಿತು ಜವಾಬ್ದಾರಿ ವಹಿಸಿದರೆ ಕ್ಷೇಮ. ಇಲ್ಲದಿದ್ದರೆ ಅದೇ ಅಧಿಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಪಾತಾಳ ತಲಪುತ್ತದೆ. ಆದರೆ ನಮ್ಮ ಸುತ್ತಮುತ್ತ ನಿಜವಾಗಿ ನಡೆಯುತ್ತಿರುವುದೇನೆಂದರೆ ಅಧಿಕಾರ ಸಿಕ್ಕ ತಕ್ಷಣ ಜನರು ಎಲ್ಲವನ್ನೂ ಮರೆತು ತಮ್ಮ ಶತೃಗಳ ದಮನಕ್ಕೆ ನಿಂತುಬಿಡುತ್ತಾರೆ. ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ. ಇಂದ್ರನಾದರೂ ಚಂದ್ರನಾದರೂ ಒಂದಲ್ಲ ಒಂದು ದಿನ ಅಧಿಕಾರದಿಂದ ಕೆಳಗೆ ಇಳಿಯಲೇಬೇಕು.
ಅದಕ್ಕಾಗಿ ಅಧಿಕಾರ ಸಿಕ್ಕಾಗ ಆದಷ್ಟೂ ಜನಪರ ಕೆಲಸ ಮಾಡಿದರೆ ಅಧಿಕಾರದಿಂದ ಇಳಿದ ಮೇಲೆಯೂ ಅದೇ ಗೌರವ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನಹುಷನಂತೆ ಶಾಪಗ್ರಸ್ಥರಾಗಿ ಶಾಪವಿಮೋಚನೆಗಾಗಿ ಕಾಯಬೇಕಾಗುತ್ತದೆ. ತಾನು ಕುಳಿತ ಸ್ಥಾನ ತನ್ನದಲ್ಲದಿದ್ದರೂ ಸಹ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ಪೇಚಿಗೆ ಸಿಲುಕಿಕೊಂಡ ನಹುಷನ ಕಥೆ ಹೀಗಿದೆ.
ಒಮ್ಮೆ ದೇವೇಂದ್ರನಿಗೆ ಬ್ರಹ್ಮಹದೋಷ ಉಂಟಾಯಿತು. ಅದರ ನಿವಾರಣೆಗಾಗಿ ದೇವೇಂದ್ರ ಪಾಪ ಪರಿಹಾರಕ್ಕಾಗಿ ಸಂಕಲ್ಪದಲ್ಲಿದ್ದಾಗ, ಸ್ವರ್ಗವನ್ನು ಖಾಲಿ ಬಿಡಲಾಗದೇ ನಹುಷನನ್ನು ಕರೆತಂದು ದೇವೇಂದ್ರನ ಸ್ಥಾನದಲ್ಲಿ ಕುಳ್ಳಿರಿಸಲಾಗುತ್ತದೆ.
ಅಧಿಕಾರ ಎನ್ನುವುದು ಇಂದ್ರನಿಗೇ ಶಾಶ್ವತವಲ್ಲ.
ಇನ್ನು ಇಂದ್ರನ ಬದಲು ಕುಳಿತವರಿಗೆ ಶಾಶ್ವತವೇ? ಇಂದಲ್ಲ ನಾಳೆ ದೇವೇಂದ್ರ ವಾಪಸ್ ಬಂದಾಗ ಆ ಸ್ಥಾನವನ್ನು ನಹುಷ ಬಿಟ್ಟು ಕೊಡಲೇಬೇಕು. ಆದರೂ ಅಧಿಕಾರದ ಅಮಲು ಏರಿದ ನಹುಷ ತಾನೇ ಸ್ವರ್ಗಾಧಿಪತಿ ಎಂದುಕೊಂಡ.
ಸಕಲ ಭೋಗಭಾಗ್ಯಗಳೂ ತನ್ನದೇ ಎಂದು ತಿಳಿದ. ತತ್ಪರಿಣಾಮ ಸ್ವರ್ಗದ ಸುಖದಲ್ಲಿ ಮಿಂದು ಸುಖಿಸಿದ. ಸ್ವರ್ಗದ ಎಲ್ಲಾ ಅನುಭವ ಮುಗಿದ ಮೇಲೆ ಅವನ ಗಮನ ಸ್ವರ್ಗಾಧಿಪತಿಯ ಹೆಂಡತಿಯ ಕಡೆ ಹೊರಳಿತು.
ಭೂಮಿಯಿರಲಿ, ಸ್ವರ್ಗವಿರಲಿ ಹೆಣ್ಣಿಗೆ ಸಂಬಂಧಿಸಿದ ಕಾನೂನು ಎಂದಿಗೂ ಒಂದೇ. ಪರಸ್ತ್ರೀ ತಾಯಿಗೆ ಸಮಾನ ಎನ್ನುವುದು. ಹೆಣ್ಣಿನ ನಿಷ್ಠೆ, ಪ್ರೇಮಗಳು ಎಂದಿಗೂ ಒಬ್ಬ ವ್ಯಕ್ತಿಗೆ ಮಾತ್ರವೇ ಮೀಸಲು. ತನ್ನ ಪುರುಷನನ್ನು ಬಿಟ್ಟು ಎಂತಹಾ ಸುರ ಸುಂದರಾಂಗನನ್ನೂ ಅವಳು ಕಣ್ಣೆತ್ತಿ ಕೂಡ ನೋಡಲಾರಳು.
ದೇವೇಂದ್ರನ ಪತ್ನಿಯಾದ ಶಚಿದೇವಿಯೂ ಒಬ್ಬ ಹೆಣ್ಣು.
ತನ್ನ ಪತಿ ಇರದಿದ್ದಾಗ ಅವನ ಜಾಗದಲ್ಲಿ ಕುಳಿತವನನ್ನು ಪತಿ ಎಂದುಕೊಳ್ಳುವ ಮೂರ್ಖತನವಲ್ಲ ಆಕೆಯದ್ದು. ಆಕೆ ಮದುವೆಯಾದದ್ದು ಸ್ವಂತ ವ್ಯಕ್ತಿತ್ವ ಹೊಂದಿರುವ ದೇವೇಂದ್ರನನ್ನು ಹೊರತೂ ಅಧಿಕಾರದಿಂದ ಆ ಜಾಗದಲ್ಲಿ ಕುಳಿತವನನ್ನಲ್ಲ. ಹಾಗಾಗಿ ನಹುಷ ತನ್ನನ್ನು ಬಯಸಿರುವುದು ಗೊತ್ತಾದಾಗ ಕೆರಳಿ ಕೆಂಡವಾದಳು.
ನಹುಷನೋ... ಅವನೊಬ್ಬ ಪುರುಷ.
ಸ್ಥಾವರಗಳನ್ನು ಗೆದ್ದಂತೆಯೇ ಹೆಣ್ಣನ್ನೂ ಗೆಲ್ಲುವುದು ಅಂತ ತಿಳಿದಿದ್ದವನು. ತಾನು ದೇವೇಂದ್ರನಾದ ಮೇಲೆ ಶಚೀದೇವಿ ತನ್ನ ಹೆಂಡತಿ, ಇದು ನಿಯಮ ಎನ್ನುವ ಮೊಂಡುವಾದ ಅವನದ್ದು. ಹೆಣ್ಣನ್ನು ಗೆಲ್ಲುವುದು ಬೇರೆ, ಆಕೆಯ ಮನಸ್ಸನ್ನು ಗೆಲ್ಲುವುದು ಬೇರೆ ಅಂತ ಆತನಿಗೆ ಗೊತ್ತಿಲ್ಲ.
ಆಕೆಯ ಮನಸ್ಸಿನಲ್ಲಿ ತಾನಿರುವೆನೋ ಇಲ್ಲವೋ ತಿಳಿದುಕೊಳ್ಳದೇ ಆಕೆಯನ್ನು ಸೇರಲು ಚಡಪಡಿಸಿದ. ಆಗ ಶಚಿದೇವಿಯು ನಹುಷನಿಗೆ ಬಹಳ ಅಪರೂಪವಾದ ವಾಹನದಲ್ಲಿ ಕುಳಿತು ಬಂದರೆ ಮಾತ್ರವೇ ಆತನನ್ನು ಸ್ವೀಕರಿಸುವುದು ಅಂತ ಹೇಳಿ ಕಳಿಸಿದಳು.
ಸ್ವರ್ಗಾಧಿಪತಿಗೆ 'ಅಪರೂಪ' ಎಂಬ ಪದವೇ ಗೊತ್ತಿಲ್ಲ.
ತನಗೆ ಬೇಕು ಎನಿಸಿದ್ದನ್ನು ಕ್ಷಣಮಾತ್ರದಲ್ಲಿ ಹೊಂದಬಲ್ಲ ಶಕ್ತಿ ಇರುವ ಇಂದ್ರನು ಈವರೆಗೂ ಎಲ್ಲಾ ಬಗೆಯ ವಾಹನದಲ್ಲಿಯೂ ಪಯಣಿಸಿ ಆಗಿದೆ. ಬಾಕಿ ಯಾವುದೂ ಇಲ್ಲ. ಈಗ ಇದು ಯಾವುದೂ ಅಲ್ಲದ ಅಪರೂಪದ ವಾಹನ ತರುವುದಾದರೂ ಎಲ್ಲಿಂದ ಎಂದು ನಹುಷ ಯೋಚನೆಗೆ ಬಿದ್ದ.
ಆದರೆ ಯೋಚಿಸುವುದೇನಿದೆ?
ತಾನು ಈಗ ಸ್ವರ್ಗಾಧಿಪತಿ. ತಾನು ಹೇಳಿದಂತೆ ಎಲ್ಲರೂ ಕೇಳಲೇಬೇಕು. ಹಾಗಾಗಿ ತನ್ನ ಪಲ್ಲಕ್ಕಿಯನ್ನು ಸಪ್ತರ್ಷಿಗಳು ಹೊತ್ತು ಶಚಿದೇವಿಯ ಬಳಿ ಕೊಂಡೊಯ್ಯಬೇಕೆಂದು ಆಜ್ಞಾಪಿಸಿದ. ಈ ರೀತಿಯ ವಾಹನವನ್ನಂತೂ ಆಕೆ ನೋಡಿರಲಾರಳು ಎಂದು ಅವನ ಅಭಿಪ್ರಾಯ. ಆದರೆ ಮೊದಲೇ ಹೇಳಿದ ಹಾಗೆ ಅಧಿಕಾರ ಸಿಕ್ಕಾಗ ದುರುಪಯೋಗ ಪಡಿಸಿಕೊಳ್ಳಬಾರದು. ಇವನೋ ತಾತ್ಕಾಲಿಕ ಅಧಿಕಾರಕ್ಕೇ ತಲೆತಿರುಗಿ ಕಾಮಾಂಧನಾಗಿ ಸಪ್ತರ್ಷಿಗಳನ್ನೇ ಪಲ್ಲಕ್ಕಿ ಹೊರಲು ಬಳಸಿಕೊಂಡ.
ಸಪ್ತರ್ಷಿಗಳು ಸಾಮಾನ್ಯರೇ?
ಪಲ್ಲಕ್ಕಿ ಹೊರಲು ಒಪ್ಪಿದರೂ ಸಹ ಇವನನ್ನು ಮಣಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಈ ಮೊದಲು ನಹುಷ ಯಾವ ವಾಹನದಲ್ಲಿ ಪಯಣಿಸಿದ್ದನೋ ಗೊತ್ತಿಲ್ಲ. ಆದರೆ ಈಗ ಅವನಿಗೆ ಸಪ್ತರ್ಷಿಗಳ ಚಲನೆ ಬಹಳ ನಿಧಾನವೆನ್ನಿಸಿತು.
ಇವನಿಗೆ ಆತುರ ಎಂದರೆ ಎಲ್ಲರಿಗೂ ಆತುರವೇ? "ಸರ್ಪ ಸರ್ಪ.. ಬೇಗ ಬೇಗ" ಅಂತ ಅವಸರಪಡಿಸಿದ. ಒಮ್ಮೆ ತಡೆಯಲಾಗದೇ ಮಹರ್ಷಿ ಅಗಸ್ತ್ಯರ ತಲೆಗೆ ಒದ್ದೇ ಬಿಟ್ಟ. ಇಂದ್ರನಲ್ಲವೇ ತಾನು? ಏನು ಬೇಕಾದರೂ ಮಾಡಬಹುದು ಅಂತ. ಅಗಸ್ತ್ಯರು ಕೋಪದಿಂದ ಹಿಂದೆ ತಿರುಗಿದರು.
ಅವರು ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿತು.
"ಸರ್ಪ ಸರ್ಪ ಎನ್ನುತ್ತಿದ್ದೆಯಲ್ಲ... ಸರ್ಪವೇ ಆಗಿ ಹೋಗು" ಅಂತ ಶಪಿಸಿದರು. ಆಗವನಿಗೆ ಅಧಿಕಾರವೇ ಬೇರೆ- ವೈಯುಕ್ತ ಜೀವನವೇ ಬೇರೆ ಎಂದು ಅರಿವಾಯಿತು. ಮಹರ್ಷಿಗಳ ಶಾಪದಂತೆ ಕೂಡಲೇ ಹಾವಾಗಿ ರೂಪಾಂತರವಾಗಿ ಭೂಮಿಯ ಯಾವುದೋ ಕಾಡಿನಲ್ಲಿ ಬಿದ್ದ.
ಅಷ್ಟರಲ್ಲಿ ನಿಜವಾದ ದೇವೇಂದ್ರನೂ ಪಾಪ ಕಳೆದುಕೊಂಡು ಮತ್ತೆ ತನ್ನ ಸ್ಥಾನಕ್ಕೇರಿದ. ಶಚೀದೇವಿಯು ಪವಿತ್ರಳಾಗಿಯೇ ಉಳಿದಳು. ಯಾರೂ ಏನೂ ಕಳೆದುಕೊಳ್ಳಲಿಲ್ಲ. ಕಳೆದುಕೊಂಡವನು ನಹುಷ ಮಾತ್ರ.
ಮೊದಲಿಗೆ ಅನಾಯಾಸವಾಗಿ ಸಿಕ್ಕಿದ್ದ ಪದವಿ ಕಳೆದುಕೊಂಡ. ನಂತರ ತನ್ನ ವ್ಯಕ್ತಿತ್ವ ಕಳೆದುಕೊಂಡ. ಕಡೆಗೆ ತನ್ನ ರೂಪವನ್ನೇ ಕಳೆದುಕೊಂಡ. ಅಧಿಕಾರ ಎಂದರೆ ಕೇವಲ ಚಲಾಯಿಸುವುದು ಅಂತಷ್ಟೇ ಅರ್ಥ ಮಾಡಿಕೊಂಡವರಿಂದ ಆಗುವ ಅನಾಹುತ ಇದು. ಇದರಿಂದಾಗಿ ನಹುಷ ಸಾವಿರಾರು ವರುಷ ನಿಜರೂಪ ಕಳೆದುಕೊಂಡು ಕಾಡಿನಲ್ಲಿ ಏಕಾಂತವಾಗಿ ತನ್ನ ಶಾಪ ವಿಮೋಚನೆಗಾಗಿ ಕಾಯಬೇಕಾಯ್ತು.
**************
ಕೆ.ಎ.ಸೌಮ್ಯ
ಮೈಸೂರು
