ಪುರೂರವನ‌ ವಿಫಲ ಪ್ರೇಮ

ಪ್ರೀತಿಯೇ ಬೇರೆ. ಪ್ರೇಮವೇ ಬೇರೆ. ಜನರು ಎರಡನ್ನೂ ಒಂದೇ ಎಂದು ತಿಳಿದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಹೃದಯದಿಂದ ಹುಟ್ಟುವ ಭಾವನೆಯಾದರೆ, ಪ್ರೇಮ ಕೇವಲ ಸ್ಪರ್ಷ ಮಾತ್ರದಿಂದ ಹುಟ್ಟುತ್ತದೆ. ಪರಸ್ಪರ ಪ್ರೇಮಿಸುವವರ ನಡುವೆ ಪ್ರೀತಿಯೂ ಇದ್ದರೆ ಆ ಸಂಬಂಧ ಕೊನೆವರೆಗೂ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಬ್ಬರ ವಾಂಛೆಯೂ ತೀರಿದ ಬಳಿಕ ಪ್ರೇಮ ಮಾಯವಾಗುತ್ತದೆ. 

ಇದು ತಿಳಿಯದ ಜನರು ಪ್ರೀತಿ ಮತ್ತು ಪ್ರೇಮದ ನಡುವಿನ ವ್ಯತ್ಯಾಸ ಗೊತ್ತಾಗದೇ ಪ್ರೇಮಿಸಿ ನಂತರ ಪರಸ್ಪರರನ್ನು ತೊರೆಯುತ್ತಲೇ ಇದ್ದಾರೆ.

ಹಾಗೆಯೇ ಅಪ್ಸರೆಯಾದ ಊರ್ವಶಿ ಮತ್ತು ಪೂರೂರವನ ನಡುವೆ ಇದ್ದದ್ದು ಪ್ರೇಮವೇ ಹೊರತು ಪ್ರೀತಿಯಲ್ಲ. 

ಹಾಗಾಗಿ ಬಹು ಬೇಗ ಈ ಸಂಬಂಧ ಅಂತ್ಯ ಕಾಣುತ್ತದೆ. ಊರ್ವಶಿ ಮೊದಲೇ ಅಪ್ಸರೆ. ಅಪ್ಸರೆಯರಿಗೆ ವೈವಾಹಿಕ ಬಂಧನವಾಗಲೀ ಅಥವಾ ಇಷ್ಟು ಜನರನ್ನೇ ಹೊಂದಬೇಕು ಎಂಬ ನಿರ್ಬಂಧವಾಗಲೀ ಇಲ್ಲ. ಆದರೆ ಪುರೂರವನಿಗೆ ಒಬ್ಬ ಸುಂದರ ಸ್ತ್ರೀ ಸಿಕ್ಕರೆ ಸಾಕಿತ್ತು. ಆಕೆ ತನ್ನ ಸಂಗಾತಿಯಾಗಲು ಒಪ್ಪಿದರೆ ಆಕೆಯನ್ನು ಜನ್ಮವಿಡೀ ರಾಣಿಯಂತೆ ಮೆರೆಸಲು ಆತ ಸಿದ್ಧನಿದ್ದ. 

ಅದರಂತೆ ಆಕೆ ತನ್ನನ್ನು ಒಪ್ಪಿದ್ದೇ ತನ್ನ ಪುಣ್ಯ ಎಂದು ಸಂತಸದಿಂದ ತೇಲಾಡಿದ. ದೇವಲೋಕದ ಹೆಣ್ಣು ಮನುಷ್ಯನಾದ ತನ್ನೊಡನೆ ಜೀವನಪೂರ್ತಿ ಇರಲು ಸಾಧ್ಯವೇ ಅಂತ ಆತ ಯೋಚಿಸಲಿಲ್ಲ ಅಥವಾ ಬೇಕೆಂದೇ ನಿರ್ಲಕ್ಷಿಸಿದ. ನಂತರ ಆ ನಿರ್ಲಕ್ಷ್ಯಕ್ಕೆ ಸರಿಯಾದ ಬೆಲೆಯನ್ನೂ ತೆತ್ತ.

ಸ್ವರ್ಗಲೋಕದ ತನ್ನ ಮುಕ್ತ ಜೀವನದಿಂದ ಬೇಸತ್ತ ಊರ್ವಶಿ ಹೊಸ ಅನುಭವ ಪಡೆಯಲು ಒಮ್ಮೆ ಭೂಮಿಗೆ ಬಂದಿದ್ದಾಗ ಅಸುರನೊಬ್ಬ ಅವಳನ್ನು ಅಪಹರಿಸುತ್ತಾನೆ. ಕಾಕತಾಳೀಯ ಎಂಬಂತೆ ಪುರೂರವ ಆಕೆಯನ್ನು ಅಸುರನಿಂದ ಕಾಪಾಡುತ್ತಾನೆ. ಆ ಗಲಾಟೆಯಲ್ಲಿ ಆಗೊಮ್ಮೆ ಈಗೊಮ್ಮೆ ಅವರಿಬ್ಬರ ಕೈಗಳು ತಾಗುತ್ತವೆ. ಪರಸ್ಪರರ ಸ್ಪರ್ಷದಿಂದ ಇಬ್ಬರಿಗೂ ರೋಮಾಂಚನವಾಗುತ್ತದೆ.

ಪುರೂರವ ಬಿಡಿ.... ಊರ್ವಶಿಯ ಸೌಂದರ್ಯ ನೋಡಿಯೇ ಕಳೆದುಹೋಗಿದ್ದ. 

ಆದರೆ ಊರ್ವಶಿಗೂ ಆತನ ಸ್ಪರ್ಷ ಹಿತವೆನಿಸಿದ್ದು ವಿಶೇಷ. ಇಷ್ಟ ಬಂದವರನ್ನು ಹೊಂದುವ ಅವಕಾಶ ಇರುವಾಗ ಯಾರದೋ ಸ್ಪರ್ಷ ಆಕೆಯ ನೆನಪಿನಲ್ಲುಳಿಯಲು ಸಾಧ್ಯವೇ? ಆದರೂ ಏಕೋ ಏನೋ ಆಕೆಯೂ ಭೂಲೋಕದ ಮಾನವನಾದ ಪುರೂರವನ ಜೊತೆ ಪ್ರೀತಿಗೆ ಬೀಳುತ್ತಾಳೆ. 

ಪ್ರೀತಿಯಲ್ಲಿ ಬಿದ್ದವರು ಇಹ-ಪರ ಮರೆಯುತ್ತಾರಂತೆ. ಆದರೆ ಊರ್ವಶಿ ಮರೆಯುವುದಿಲ್ಲ. ಅವಳು ಅಲ್ಲಿನ ಮುಕ್ತ ಕಾಮದಿಂದ ಬೇಸತ್ತು ಇಲ್ಲಿಗೆ ಬಂದಿದ್ದಾಳಷ್ಟೇ... ಕೆಲವು ಸಮಯ ಕಳೆದ ನಂತರ ಇಲ್ಲಿಯೂ ಬೇಸರ ತರಿಸಿದರೆ ಮತ್ತೆ ಸ್ವರ್ಗಕ್ಕೆ ವಾಪಸ್ ಹೋಗಬೇಕು ಅಂತ ಅವಳಿಗೆ ಗೊತ್ತಿರುತ್ತದೆ. ಅದಕ್ಕಾಗಿ ತನಗೆ ಹೊರಡಲು ಅನುಕೂಲವಾಗುವ ಹಾಗೆ ಕೆಲವು ಷರತ್ತುಗಳನ್ನು ವಿಧಿಸುತ್ತಾಳೆ.

ಆ ಷರತ್ತುಗಳೋ ಅವಳಷ್ಟೇ ವಿಚಿತ್ರವಾಗಿರುತ್ತವೆ

ಏಕೆಂದರೆ ಅದನ್ನು ಯಾವಾಗ ಬೇಕಿದ್ದರೂ ಮುರಿಯಬಹುದಾಗಿರುತ್ತದೆ.‌ ಅವಳಿಗೆ ಅವನ ಸಹವಾಸ ಸಾಕಾದಾಗ ಕ್ಷುಲ್ಲಕ ಕಾರಣ ಒಡ್ಡಿ ತನ್ನ ಷರತ್ತು ಮುರಿದನೆಂದು ಹೇಳಿ ಆಕೆ ಸ್ವರ್ಗಕ್ಕೆ ಮರಳಬಹುದಾಗಿರುತ್ತದೆ. ಅದು ಹಾಗೆಯೇ ನಡೆಯುತ್ತದೆ. ಪಾಪದ ಪುರೂರವನಿಗೆ ಜೀವನಪೂರ್ತಿ ಜೊತೆಗಿರುತ್ತೇನೆಂದು ಮಾತು ಕೊಟ್ಟ ಊರ್ವಶಿ ತನ್ನ ಮಾತು ಮುರಿದು ಅರ್ಧದಲ್ಲೇ ನಿರ್ಗಮಿಸುತ್ತಾಳೆ. 

ನಿಜವಾಗಿ ಅವಳ ಮನದಲ್ಲಿ ಆತನಿಗಾಗಿ ಪ್ರೀತಿ ಇರುತ್ತಿದ್ದರೆ ಅವಳು ಷರತ್ತು ವಿಧಿಸುತ್ತಲೂ ಇರಲಿಲ್ಲ, ನಂತರ ಅವುಗಳನ್ನು ಮುರಿದನೆಂದು ಅವನನ್ನು ತೊರೆಯುತ್ತಲೂ ಇರಲಿಲ್ಲ. ‌ಪ್ರೀತಿ ಎಂದರೆ ದಯೆ, ಕ್ಷಮೆ, ತಾಳ್ಮೆ ಮತ್ತು ಕಾಳಜಿಗಳನ್ನು ಒಳಗೊಂಡ ಒಂದು ವಿಶೇಷ ಶಕ್ತಿ. ಪ್ರೀತಿಸುವವರು ಎಂದಿಗೂ ತಮ್ಮ ಬಗ್ಗೆ ಯೋಚಿಸುವುದಿಲ್ಲ. ಬದಲಿಗೆ ಸದಾ ತಮ್ಮ ಸಂಗಾತಿಯ ಕುರಿತಾಗಿಯೇ ಯೋಚಿಸುತ್ತಿರುತ್ತಾರೆ. 

ಊರ್ವಶಿಗೆ ಪುರೂರವನ ಮೇಲೆ ನಿಜವಾದ ಪ್ರೀತಿ ಇದ್ದಿದ್ದರೆ ಆತ ತನ್ನನ್ನು ಗಾಢವಾಗಿ ಹಚ್ಚಿಕೊಂಡಿದ್ದಾನೆ, ತನ್ನನ್ನು ಬಿಟ್ಟು ಆತ ಇರಲಾರ ಅಂತ ಅವಳಿಗೆ ಗೊತ್ತಾಗುತ್ತಿತ್ತು. ಆಗ ಆಕೆಯೆಂದೂ ಅವನನ್ನು ತೊರೆಯುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಇದು ಸ್ಪರ್ಷಕ್ಕೆ ಒಲಿದ ಪ್ರೀತಿ. ದೈಹಿಕ ವಾಂಛೆ "ಪ್ರೀತಿ" ಎಂಬ ಮುಖವಾಡ ಹೊತ್ತು ನಿಂತಿದೆಯಷ್ಟೇ. 

ಇದರಲ್ಲಿ ಅವರಿಗೆ ಸಂಗಾತಿಯ ಕಾಳಜಿ ಮುಖ್ಯವಾಗುವುದಿಲ್ಲ. ಬದಲಿಗೆ ವಾಂಛೆ ತೀರಿದ ಬಳಿಕ ಅಲ್ಲಿಂದ ಕಾಲ್ತೆಗೆಯಲು ಕಾರಣ ಹುಡುಕುತ್ತಾ ಇರುತ್ತಾರೆ. ಸಿಕ್ಕ ಸಣ್ಣಪುಟ್ಟ ಕಾರಣಗಳನ್ನೇ ದೊಡ್ಡದು ಮಾಡಿ ಅಲ್ಲಿಂದ ಹೊರಟು ಬಿಡುತ್ತಾರೆ‌. ಮತ್ತೊಂದು ಹೃದಯದ ಬಗ್ಗೆ ಕಾಳಜಿಯೇ ಇರದಂತೆ....

**********

ಕೆ.ಎ.ಸೌಮ್ಯ, ಮೈಸೂರು

(ಓ ಮನಸೇ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ