ಯವನಾಶ್ವ

 

"ಗರ್ಭ ಧರಿಸಿದ ಪುರುಷ"


ಮಕ್ಕಳನ್ನು ಹೆರುವುದರಿಂದಲೇ ಹೆಣ್ಣಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದೆ. ಆಕೆಯ ದೇಹವೂ ಸಂತಾನಾಭಿವೃದ್ಧಿಗೆ ಪೂರಕವಾಗಿದೆ. ಆದರೆ ಒಬ್ಬ ಪುರುಷ ಮಗುವನ್ನು ಹೆತ್ತರೆ ಹೇಗಿರುತ್ತದೆ?


ಮೊದಲಿಗೆ ಆತ ಮಗುವನ್ನು ಪ್ರಸವಿಸುವುದು ಹೇಗೆ? ಮಗು ಹುಟ್ಟಿದ ನಂತರ ಹಾಲೂಡಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಆದರೆ ಯವನಾಶ್ವ ಎಂಬ ರಾಜ ತಾನೇ ಮಗುವನ್ನು ತನ್ನ ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು ಆ ಮಗುವಿನ ತಂದೆ ಮತ್ತು ತಾಯಿ ಎನಿಸಿಕೊಂಡಿದ್ದಾನೆ.


ಬಹಳ ಕಾಲದ ಹಿಂದೆ ಯವನಾಶ್ವ ಎಂಬ ರಾಜನಿಗೆ ಸಂತಾನ ಇರಲಿಲ್ಲ. ಅದಕ್ಕಾಗಿ ಆತ ಮಾಡದ ಪ್ರಯತ್ನಗಳೇ ಇರಲಿಲ್ಲ. ಆತನೂ, ಆತನ ಪತ್ನಿಯೂ ಸೇರಿ ಅನೇಕ ಯಜ್ಞ-ಯಾಗಾದಿಗಳನ್ನು, ಪೂಜೆ-ಪುನಸ್ಕಾರಗಳನ್ನು ಮಾಡಿದ್ದರು. ಆದರೂ ಅವರಿಗೆ ಸಂತಾನ ಲಭಿಸಿರಲಿಲ್ಲ. 


ಈ ವಿಷಯವಾಗಿ ಮಹಾರಾಜನು ಬಹಳ ಚಿಂತಿತನಾಗಿದ್ದನು. ಈ ವಿಷಯ ರಾಜನ ನಿತ್ಯ ಜೀವನದಲ್ಲಿಯೂ ಬಾಧಿಸತೊಡಗಿತು. ಇದರಿಂದ ರಾಜನು ರಾಜ್ಯದ ಆಡಳಿತದಲ್ಲಿಯೂ ಮನಸ್ಸಿಲ್ಲದವನಾಗಿ ಹೆಚ್ಚಿನ ಸಮಯ ಕಾಡಿನಲ್ಲಿಯೇ ಕಳೆಯುತ್ತಿದ್ದನು. 


ಒಮ್ಮೆ ಹೀಗೆಯೇ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಾಡಿನ ಒಳ ಭಾಗಕ್ಕೆ ಹೋಗಿ ಬಿಡುತ್ತಾನೆ. ಹಸಿವು-ಬಾಯಾರಿಕೆಗಳು ಅವನನ್ನು ಕಾಡಲು ಶುರು ಮಾಡುತ್ತವೆ. ಆದರೆ ಹತ್ತಿರದಲ್ಲಿ ಎಲ್ಲಿಯೂ ಆತನ ದಾಹ ತಣಿಸುವ ನೀರಿನ ಆಕರಗಳು ಕಾಣಸಿಗುವುದಿಲ್ಲ. 


ಹಾಗಾಗಿ ನೀರನ್ನು ಅರಸುತ್ತಾ ಆತ ಮತ್ತಷ್ಟು ಮುಂದಕ್ಕೆ ಬರುತ್ತಾನೆ. ಅಲ್ಲೊಂದು ಋಷಿಗಳ ಆಶ್ರಮ ಕಾಣುತ್ತದೆ ಅವನಿಗೆ. ಒಳಗೆ ಹೋಗುತ್ತಾನೆ.


ಅಲ್ಲಿ ನೋಡಿದರೆ ಯಾವುದೋ ಯಾಗ ಮಾಡಿ ಸುಸ್ತಾದ ಋಷಿಗಳು ಇದ್ದಲ್ಲೇ ಉರುಳಿಕೊಂಡು ನಿದ್ದೆಗೆ ಶರಣಾಗಿರುತ್ತಾರೆ. ಸುಖವಾಗಿ ನಿದ್ರಿಸುತ್ತಿರುವವರನ್ನು ಎಬ್ಬಿಸಿದರೆ ಬ್ರಹ್ಮಹತ್ಯಾ ದೋಷ ಬರುವುದೆಂದು ಹೆದರಿ ಮಹಾರಾಜ ಯಾರನ್ನೂ ಎಬ್ಬಿಸದೇ ಯಜ್ಞಕುಂಡದ ಬಳಿ ಬರುತ್ತಾನೆ. ಅಲ್ಲೊಂದು ತಂಬಿಗೆಯಲ್ಲಿ ಜಲವಿರುತ್ತದೆ. 


ಅವನ ಬಾಯಾರಿಕೆ ಎಷ್ಟಿರುತ್ತದೆ ಎಂದರೆ ಆ ತಂಬಿಗೆಯಲ್ಲಿರುವುದು ನೀರೋ ಅಥವಾ ಗಂಜಲವೋ ಅಂತಲೂ ಆತ ಯೋಚಿಸುವುದಿಲ್ಲ. ಗಟಗಟನೇ ಕುಡಿದುಬಿಡುತ್ತಾನೆ. 


ಆತ ಆ ನೀರು ಕುಡಿದ ತಂಬಿಗೆ ಕೆಳಗೆ ಇಡುವುದಕ್ಕೂ ಆಶ್ರಮದ ಮಹರ್ಷಿಗಳಾದ ಭೃಗು ಮಹರ್ಷಿಯ ಮಗನಾದ ಚ್ಯವನ ಮಹರ್ಷಿಗೆ ಎಚ್ಚರವಾಗುವುದಕ್ಕೂ ಸರಿಯಾಗುತ್ತದೆ. ಇದನ್ನು ಕಂಡು ಮಹರ್ಷಿಯ ನಿದ್ದೆ ಹಾರಿ ಹೋಗುತ್ತದೆ. ಆದರೆ ಯವನಾಶ್ವ ಮಾತ್ರ ಏನೂ ಗೊತ್ತಿಲ್ಲದವನಂತೆ ಕುಳಿತಿರುತ್ತಾನೆ.


ವಾಸ್ತವವಾಗಿ ಮಹಾರಾಜ ಕುಡಿದದ್ದು ಮಂತ್ರಿಸಿದ ಜಲವಾಗಿದ್ದು, ಅದನ್ನು ಚ್ಯವನ ಮಹರ್ಷಿ ಮತ್ತು ಅವರ ಶಿಷ್ಯಂದಿರು ಸಂತಾನವಿಲ್ಲದ ಯವನಾಶ್ವನ ಪತ್ನಿಗಾಗಿ ಯಾಗ ಮಾಡಿ ಸಿದ್ಧಪಡಿಸಿರುತ್ತಾರೆ. ಅದು ಎಷ್ಟು ಪರಿಣಾಮಕಾರಿ ಎಂದರೆ ಅದನ್ನು ಕುಡಿದವರು ಗರ್ಭ ಧರಿಸಲೇ ಬೇಕಾಗಿರುತ್ತದೆ. 


ಆದರೆ ಈಗ ಅದನ್ನು ಯವನಾಶ್ವ ಕುಡಿದಿರುವುದರಿಂದ ಅವನೇ ಗರ್ಭ ಧರಿಸುವಂತಾಗುತ್ತದೆ. ಯಜ್ಞದ ಫಲ ಎಂದಿಗೂ ನಿಷ್ಫಲವಲ್ಲ, ಅದು ಫಲ ಕೊಟ್ಟೇ ಕೊಡುತ್ತದೆ ಎನ್ನುವುದು ನಿಯಮ. 


ಮಹಿಳೆಗಾದರೆ ಸಹಜವಾಗಿ ಮಗುವನ್ನು ಹೆರುವ ಅವಕಾಶವಿದೆ. ಆದರೆ ಒಂಭತ್ತು ತಿಂಗಳು ತುಂಬಿದ ನಂತರ ಪುರುಷ ಹೆರುವ ಬಗೆ ಹೇಗೆ ಎಂದು ಎಲ್ಲರೂ ಚಿಂತಿತರಾಗುತ್ತಾರೆ.  


ನವಮಾಸಗಳು ತುಂಬಿ ದಿನ ಹತ್ತಿರ ಬಂದಾಗ ಚ್ಯವನ ಮಹರ್ಷಿಗಳು ಯವನಾಶ್ವನ ಹೊಟ್ಟೆಯ ಎಡಭಾಗವನ್ನು ಸ್ವಲ್ಪ ಕತ್ತರಿಸಿ ಅದರಿಂದ ಮಗು ಹೊರಬರುವಂತೆ ಮಾಡುತ್ತಾರೆ. ಇದರಿಂದ ಯವನಾಶ್ವನ ಪ್ರಾಣಕ್ಕೇನೂ ತೊಂದರೆಯಾಗುವುದಿಲ್ಲ. 


ಇವರು ಹಾಗೆ ಮಾಡದಿದ್ದರೆ ಮಗು ಇಡೀ ಹೊಟ್ಟೆಯನ್ನೇ ಸೀಳಿಕೊಂಡು ಬಂದು ಮಹಾರಾಜನ ಪ್ರಾಣಕ್ಕೆ ಎರವಾಗುವ ಅಪಾಯವಿತ್ತು. ಪ್ರಸವವೇನೋ ಆಯ್ತು. ಆದರೆ ಈಗ ಎದುರಾಗಿರುವುದು ಮಗುವಿನ ಹಸಿವಿನ ಸಮಸ್ಯೆ. ಅದನ್ನು ಯವನಾಶ್ವನೂ ತೀರಿಸಲಾರ, ಆತನ ಪತ್ನಿಯೂ ತೀರಿಸಲಾರಳು. ಏನು ಮಾಡುವುದೆಂದು ಚಿಂತಿಸುತ್ತಿದ್ದಾಗ ದೇವೇಂದ್ರನ ಆಗಮನವಾಗುತ್ತದೆ. 


ಪುರುಷ ಹೆತ್ತ ಮಗುವನ್ನು ನೋಡಲು ಸ್ವತಃ ಇಂದ್ರನೇ ಸ್ವರ್ಗದಿಂದ ಇಳಿದು ಬಂದಿರುತ್ತಾನೆ. ಆತ ಬಂದವನೇ ಮಗುವಿನ ಬಾಯಿಗೆ ತನ್ನ ತೋರು ಬೆರಳನ್ನು ಇಡುತ್ತಾನೆ. ಮಗು ಆ ಬೆರಳನ್ನು ಚೀಪುತ್ತಾ ತನ್ನ ಹಸಿವನ್ನು ತಣಿಸಿಕೊಳ್ಳುತ್ತದೆ. ಏಕೆಂದರೆ ಆ ಬೆರಳಿನಿಂದ ಅಮೃತವೇ ಹರಿದು ಬಂದಿರುತ್ತದೆ. 


ಹೀಗೆ ತಂದೆಯಿಂದ ಹುಟ್ಟಿದ ಮಗುವನ್ನು ದೇವತೆಗಳು "ಮಾಧಾಂತ" ಎಂದು ನಾಮಕರಣ ಮಾಡುತ್ತಾರೆ. ಇದರ ಅರ್ಥ ದೇವೇಂದ್ರನನ್ನೇ ಕುಡಿದವನು ಅಂತ.


ಇಂದಿನ ಕಾಲದಲ್ಲಿ ನಾವು ಸಿಸೇರಿಯನ್ ಅಂತ ಏನು ಹೇಳುತ್ತೇವೆಯೋ ಅದು ಬಹಳ ಹಿಂದಯೇ ಯವನಾಶ್ವನ ಜೊತೆಯಲ್ಲಿ ನಡೆದಿತ್ತು. ಸಹಜ ಪ್ರಸವ ಸಾಧ್ಯವಾಗದಿದ್ದಾಗ ಹೊಟ್ಟೆಯ ಸ್ವಲ್ಪ ಭಾಗವನ್ನು ಕುಯ್ದು ಮಗುವನ್ನು ಹೊರತೆಗೆಯುವುದು. 


ಇದರಿಂದ ತಾಯಿ ಮತ್ತು ಮಗು ಇಬ್ಬರ ಪ್ರಾಣವೂ ಉಳಿಯುತ್ತದೆ. ಪುರಾಣದಲ್ಲಿ ಇರುವುದೆಲ್ಲವೂ ಮೂಢತೆಯಿಂದ ಕೂಡಿರುವುದಿಲ್ಲ. ಅದನ್ನು ಅರಿಯಲು ವೈಜ್ಞಾನಿಕ ದೃಷ್ಟಿಕೋನವೂ ಅಗತ್ಯ.


ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೂರು ಪ್ರತಿಶತಃವಾಗಿ, ಮಹಿಳೆಯರೆಲ್ಲಾ ಕೆಲಸಕ್ಕೆ ಹೋಗಲು ಶುರು ಮಾಡಿದರೆ ಅನಿವಾರ್ಯವಾಗಿ ಪುರುಷನೇ ಮಕ್ಕಳನ್ನು ಹೆರಬೇಕಾಗುತ್ತದೆ. ಅಂತಹಾ ಕಾಲವೂ ಬರಬಹುದು. ಕಣ್ಣಿಗೆ ಕಂಡದ್ದು ಮಾತ್ರವಲ್ಲ, ಕಣ್ಣಿಗೆ ಕಾಣದ್ದೂ ಸಹ ಸತ್ಯವೇ.

 

(ಓ ಮನಸೇ : ಸೆಪ್ಟೆಂಬರ್ 16, 2019)

***************

ಕೆ.ಎ.ಸೌಮ್ಯ

ಮೈಸೂರು


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ