ತ್ರಿದೇವಿಯರನ್ನು ಸೋಲಿಸಿದ ಅನಸೂಯಾ

 


ಸಪ್ತ ಮರ್ಷಿಗಳಲ್ಲಿ ಒಬ್ಬರಾದ ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾರದ್ದು ಅನುರೂಪದ ದಾಂಪತ್ಯ. ಅನುಸೂಯಾಳ ಪತಿ ಭಕ್ತಿ ಲೋಕದಲ್ಲೆಡೆ ಪ್ರಸಿದ್ಧಿ ಹೊಂದಿತ್ತು. ಆದರೆ ಮಕ್ಕಳಿರದ ಕೊರಗು ಅವರನ್ನು ಸದಾ ಕಾಡುತ್ತಿತ್ತು.


ಸಂತಾನಕ್ಕಾಗಿ ದೇವರಲ್ಲಿ ಪ್ರತಿನಿತ್ಯ ಬೇಡುತ್ತಿದ್ದರು. ಮಾಡದ ಪೂಜೆಯಿಲ್ಲ, ಹೋಮ-ಹವನವಿರಲಿಲ್ಲ. ಆದರೂ ಅವರಿಗೆ ಇನ್ನೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಈ ವಿಷಯ ತಿಳಿದುಕೊಂಡ ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಆ ದಂಪತಿಗಳಿಗೆ ಸಂತಾನ ಕರುಣಿಸಬೇಕೆಂದು ತೀರ್ಮಾನಿಸಿದರು.


ಆದರೆ ಅದಕ್ಕೂ ಮೊದಲು ಅನಸೂಯಾಳ ಪತಿಭಕ್ತಿಯನ್ನೊಮ್ಮೆ ಪರೀಕ್ಷಿಸಲು ತೀರ್ಮಾನಿಸಿದರು.‌ ಅದಕ್ಕಾಗಿ ತಮ್ಮ ಪತಿಯರನ್ನು ಅನಸೂಯಾಳ ಬಳಿ ಮುನಿ ವೇಷಧಾರಿಗಳಾಗಿ ಕಳಿಸಿ ನಿರ್ವಸ್ತ್ರ ಭಿಕ್ಷೆ ಕೇಳಲು ಹೇಳಿದರು. ಅಂದರೆ ವಸ್ತ್ರ ಧರಿಸದೇ ಮಾಡುವ ದಾನ. ಅದರಂತೆ ತ್ರಿಮೂರ್ತಿಗಳು ಋಷಿಗಳ ವೇಷ ಧರಿಸಿ ಬಂದು ಅನಸೂಯಾಳ ಬಳಿ ನಿರ್ವಸ್ತ್ರ ಭಿಕ್ಷೆ ಕೇಳಿದರು.


ಅನಸೂಯಾಳಿಗೆ ಸಿಡಿಲೆರಗಿದಂತಾಯಿತು.


ಇತ್ತ ಮುನಿಗಳಿಗೆ ಭಿಕ್ಷೆ ಇಲ್ಲ ಎನ್ನುವಂತಿಲ್ಲ. ಹಾಗೆಂದು ನಿರ್ವಸ್ತ್ರವಾಗಿ ಇವರ ಮುಂದೆ ಬರುವ ಹಾಗೆಯೂ ಇಲ್ಲ. ವಸ್ತ್ರವಿಲ್ಲದೇ ಇವರ ಮುಂದೆ ಬಂದರೆ ಕೂಡಲೇ ತನ್ನ ಪತಿವ್ರತಾ ಧರ್ಮಕ್ಕೆ ಅಪಚಾರವಾಗುತ್ತದೆ. ಇಷ್ಟು ದಿನ ನಿಯಮ ಬಿಡದೇ ಪಾಲನೆ ಮಾಡಿಕೊಂಡು ಬಂದವಳು ತಾನು. ಈಗ ಏಕಾಏಕಿ ಬಿಡಲಾಗೋಲ್ಲ. ಹಾಗೂ ಮಾಡುವಂತಿಲ್ಲ, ಹೀಗೂ ಮಾಡುವಂತಿಲ್ಲ, ಮತ್ತೆ ಮಾಡುವುದೇನನ್ನು???


ಹಾಗೆಂದು ಬಹಳ ಹೊತ್ತು ಯೋಚಿಸುವಂತೆಯೂ ಇಲ್ಲ. ಮೊದಲೇ ಮುನಿಗಳು. ಮತ್ತೂ ಮುನಿದರೆ ತೋಚಿದ ಶಾಪ ಕೊಟ್ಟು ಹೋಗಿ ಬಿಡುತ್ತಾರೆ‌. ಮಕ್ಕಳಿಲ್ಲದ ಕೊರಗಿನ ಜೊತೆ ಮತ್ತೊಂದು ಕೊರಗು ಸೇರಿಕೊಳ್ಳುತ್ತದೆ ಅಂತ ಯೋಚಿಸಿದ ಅನಸೂಯಾದೇವಿ ಕೂಡಲೇ ಕಣ್ಮುಚ್ಚಿ ಮನದಲ್ಲಿ ಪತಿಯನ್ನು ನೆನೆಯುತ್ತಾ ಆ ಮೂವರು ಮುನಿಗಳೆಡೆ ಕಮಂಡಲದಲ್ಲಿದ್ದ ನೀರು ಚಿಮುಕಿಸಿದಳು.


ಏನಾಶ್ಚರ್ಯ!!


ಮೂವರು ಋಷಿಗಳೂ ಇದ್ದಲ್ಲೇ ಹಸು ಕಂದಮ್ಮಗಳಾಗಿ ಬದಲಾಗಿ ಹೋಗಿದ್ದರು. ಅನಸೂಯಾದೇವಿ ದೃಢವಿಶ್ವಾಸದಿಂದ ಮುನಿಗಳನ್ನು ಹಸುಳೆಗಳನ್ನಾಗಿಸಿದಳು. ಆಕೆಗೆ ತನ್ನ ಪತಿಭಕ್ತಿಯ ಮೇಲಿನ ನಂಬಿಕೆ ಎಷ್ಟಿತ್ತು ಎಂದರೆ, ತಾನಂದುಕೊಂಡದ್ದು ಆಗಿಯೇ ಆಗುತ್ತದೆ ಎಂಬ ದೃಢವಿಶ್ವಾಸವಿತ್ತು.


ಹಾಗೇ ಆಯಿತು.


ನಂತರ ವಸ್ತ್ರ ಕಳಚಿ ಬಂದು ನಾಚಿಕೆಯಾಗಲೀ ಸಂಕೋಚವಾಗಲೀ ಇಲ್ಲದೇ ಆ ಮೂರು ಕಂದಮ್ಮಗಳಿಗೆ ತನ್ನ ಎದೆ ಹಾಲು ಕುಡಿಸಿ ತೊಟ್ಟಿಲಿಗೆ ಹಾಕಿ ತೂಗಿದಳು. ಆ ಮಕ್ಕಳೋ ಹೊಟ್ಟೆ ತುಂಬಿದ ಕೂಡಲೇ ತಾವು ಯಾರು, ಯಾಕೆ ಬಂದಿದ್ದೇವೆ ಎನ್ನುವುದನ್ನೆಲ್ಲ ಮರೆತು ಸುಖವಾಗಿ ನಿದ್ದೆ ಹೋದವು.


ಇತ್ತ ತಮ್ಮ ಪತಿಯರು ಎಷ್ಟು ಹೊತ್ತು ಕಳೆದರೂ ಬಾರದೇ ಇರುವುದನ್ನು ಕಂಡು ತ್ರಿದೇವಿಯರಲ್ಲಿ ಆತಂಕ ಕವಿಯಿತು. ಕಣ್ಮುಚ್ಚಿ ನೆನೆದರೆ ಅವರು ಎಲ್ಲಿದ್ದಾರೆ ಎಂಬ ಸುಳಿವೂ ಸಿಗದೇ ಕಂಗಾಲಾದರು. ಫೋನ್ ಇರದ ಆ ಕಾಲದಲ್ಲಿ ಏಕೈಕ ಸಂಪರ್ಕ‌ ಸಾಧನವೆಂದರೆ ಟೆಲಿಪತಿ.


ಆದರೆ ಚಿಂತೆಯಿಲ್ಲದೇ ನಿದ್ರಿಸುತ್ತಿದ್ದ ಆ ತ್ರಿಮೂರ್ತಿ ಮುದ್ದುಮಕ್ಕಳು‌ ತಮ್ಮ ಪತ್ನಿಯರ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ತ್ರಿದೇವಿಯರು ಮತ್ತೂ ಗಾಬರಿಯಾದರು. ಬ್ರಹ್ಮ, ವಿಷ್ಣು, ಮಹೇಶ್ವರರಿಲ್ಲದೇ ಸೃಷ್ಟಿ ನಡೆಯಲು ಹೇಗೆ ಸಾಧ್ಯ? ಅವರಿಲ್ಲದೇ ಲೋಕ ಪ್ರಳಯವಾದರೂ ಆದೀತು. ತಡೆಯುವವರು ಯಾರು? ತಡೆಯಬೇಕಾದವರು ಎಲ್ಲಿದ್ದಾರೋ ಏನೋ? ಈ ವಿಷಯ ಗೊತ್ತಾದರೆ ಅಸುರರ ಕೈ ಮೇಲಾಗುತ್ತದೆ. ಆ ರಕ್ಕಸರೆಲ್ಲ ಕೂಡಲೇ ಇಲ್ಲಿಗೆ ಬಂದು ನಮ್ಮನ್ನೂ ಅಟ್ಟುತ್ತಾರೆ ಎಂದು ಕಳವಳ ಪಡುತ್ತಿದ್ದಾಗ ಆಪತ್ಭಾಂಧವನಂತೆ ನಾರದ ಬಂದ.


"ಯಾರಿಗಾಗಿ ಕಾಯುತ್ತಿರುವಿರಿ ನೀವು? ನಿಮ್ಮ ಪತಿಯರು ಅನಸೂಯಾ ದೇವಿಯ ಮಕ್ಕಳಾಗಿ ಎಲ್ಲಾ ಮರೆತು ನೆಮ್ಮದಿಯಾಗಿದ್ದಾರೆ. ಅವರು ಅಲ್ಲಿಯೇ ಇದ್ದರೆ ಸೃಷ್ಟಿ ಕ್ರಿಯೆ ನಿಂತು ಲೋಕ ಅಲ್ಲೋಲ ಕಲ್ಲೋಲವಾಗುತ್ತದೆ. ಈ ಕೂಡಲೇ ಹೋಗಿ ಆ ತಾಯಿಯಲ್ಲಿ ಪತಿ ಭಿಕ್ಷೆ ಬೇಡಿ. ಆ ತಾಯಿಯೊಬ್ಬಳೇ ಅವರನ್ನು ಮೊದಲ ರೂಪಕ್ಕೆ ತರಲು ಸಾಧ್ಯ" ಎಂದ ನಾರದ.


ತ್ರಿದೇವಿಯರು ಒಂದೇ ಓಟಕ್ಕೆ ಅನಸೂಯಾ ದೇವಿ ಬಳಿ ಓಡಿದರು.


ನೋಡಿದರೆ ಮೂವರು ಮಕ್ಕಳೂ ತೊಟ್ಟಿಲಿನಲ್ಲಿ ನಿದ್ರಿಸುತ್ತಿದ್ದಾರೆ. ಇಷ್ಟು ದಿನವೂ ಮಕ್ಕಳಿರದ ನೋವು ಅನುಭವಿಸಿದ್ದ ಅನಸೂಯಾ ಈಗ ಈ ಮಕ್ಕಳ ಬಳಿ ನಿಂತು ತೊಟ್ಟಿಲು ತೂಗುತ್ತಾ ದಿವ್ಯಸಾನಿಧ್ಯ ಅನುಭವಿಸುತ್ತಿದ್ದಾಳೆ. ಆ ತಾಯಿಯ ಮಮತೆಯನ್ನು ನೋಡಿ ಕೆಲವು ಕ್ಷಣಗಳ ಕಾಲ ತ್ರಿದೇವಿಯರೂ ಅವರಿಬ್ಬರ ನೆಮ್ಮದಿ ಕದಡಲು ಹಿಂಜರಿದರು.


ಸಂತಾನವಿಲ್ಲದ ಮಾತೆಯ ಬಳಿ ಅಪರೂಪಕ್ಕೆ ಸಿಕ್ಕಿರುವ ಮಕ್ಕಳನ್ನು ತಮಗೆ ನೀಡು ಎಂದು ಹೇಗೆ ಬೇಡುವುದು? ಇದೆಂಥಾ ಘೋರ ಪಾಪವಾಗಬಹುದು ಎಂದು ಯೋಚಿಸಿ ನಡುಗಿದರು. ಆದರೆ ಇದಕ್ಕೆಲ್ಲಾ ತಾವೇ ಕಾರಣ, ಈಗ ತಾವು ಸುಮ್ಮನಿದ್ದರೆ ಲೋಕಕ್ಕೆ ಆಪತ್ತು, ತಮ್ಮ ತಪ್ಪಿನಿಂದ ಲೋಕದ ಜನರಿಗೆ ಯಾಕೆ ಶಿಕ್ಷೆಯಾಗಬೇಕು ಎಂದು ಅಂಜುತ್ತಾ, ಅಳುಕುತ್ತಾ ಅನಸೂಯ ಬಳಿ ನಿಜ ವಿಷಯ ತಿಳಿಸಿದರು.


ಆ ತಾಯಿ ಬೆಚ್ಚಲಿಲ್ಲ, ಬೆದರಲಿಲ್ಲ.


ಹೆಮ್ಮೆಯಿಂದ ಮಕ್ಕಳೆಡೆಗೆ ನೋಡುತ್ತಾ "ಇಷ್ಟು ದಿನ ಮಕ್ಕಳಿಲ್ಲವೆಂಬ ನೋವಿತ್ತು. ಆದರೆ ಒಂದು ದಿನ ತ್ರಿಮೂರ್ತಿಗಳೇ ನನ್ನ ಮಕ್ಕಳಾಗಿ ಮಡಿಲು ತುಂಬುತ್ತಾರೆ ಅಂತ ಕನಸಿನಲ್ಲಿಯೂ ಎಣಿಸಿರಲಿಲ್ಲ.


ಇವರಿಗೆ ತಾಯಿಯಾಗಿ ಹಾಲುಣಿಸಿ, ಜೋಗುಳ ಹಾಡಿದ ಭಾಗ್ಯ ನನ್ನದು. ಯಾವುದೇ ತಾಯಿಗೆ ಇದಕ್ಕಿಂತಾ ಸಾರ್ಥಕತೆ ಬೇಕಿಲ್ಲ. ಕರೆದುಕೊಂಡು ಹೋಗಿ ನಿಮ್ಮ ಪತಿಯರನ್ನು" ಎಂದು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಮೂಲರೂಪಕ್ಕೆ ತಂದಳು.


ಲಕ್ಷ್ಮಿ, ಸರಸ್ವತಿ, ಪಾರ್ವತಿಯರು ತಮ್ಮ ತಮ್ಮ ಪತಿಯರೊಡನೆ ತಮ್ಮ ಲೋಕ ಸೇರಿದರು.


ಒಮ್ಮೆ ಯೋಚಿಸಿ...


ಅವಳೇನಾದರೂ ಮಕ್ಕಳನ್ನು ಕೊಡುವುದಿಲ್ಲ ಎಂದಿದ್ದರೆ ಯಾರೇನು ಮಾಡಲು ಸಾಧ್ಯವಿತ್ತು? ಆದರೂ ಅನಸೂಯಾದೇವಿ ತನ್ನ ಸ್ವಾರ್ಥ ಯೋಚಿಸದೇ ಲೋಕದ ಹಿತ ಬಯಸಿದಳು. ಅವಳ ವಿವೇಚನಾ ಶಕ್ತಿಗೆ ಸ್ವತಃ ಅತ್ರಿ ಮಹರ್ಷಿಯೇ ತಲೆಬಾಗಿದ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನಸೂಯ ಮಹಿಳೆಯರ ಆತ್ಮವಿಶ್ವಾಸದ ಪ್ರತೀಕವೆನಿಸಿದಳು.


(ಓ ಮನಸೇ: ಏಪ್ರಿಲ್ 2019)

********

ಕೆ.ಎ.ಸೌಮ್ಯ
ಮೈಸೂರು


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ