ಸರಸ್ವತಿ ನದಿ
ಸರಸ್ವತಿ ಋಗ್ವೇದದ ಕಾಲದ ನದಿಯಾಗಿದೆ. ವೇದಕಾಲದ ನದಿಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠ ನದಿ ಎಂದರೆ ಸರಸ್ವತಿ ನದಿ.
ವೇದಕಾಲದಲ್ಲಿ ಸರಸ್ವತಿ ನದಿಯು ಯಮುನಾ ಮತ್ತು ಸಟ್ಲೆಜ್ ನದಿಗಳ ನಡುವೆ ಹರಿಯುತ್ತಿತ್ತು ಎಂಬ ಚಿತ್ರಣ ಸಿಕ್ಕರೆ, ವೇದಕಾಲದ ನಂತರದ ಕಾಲದಲ್ಲಿ ಅಂದರೆ ಜೈಮಿನಿಯ ಭಾರತ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಸರಸ್ವತಿ ನದಿಯು ಮರುಭೂಮಿಯಲ್ಲಿ ಒಣಗಿತು ಎಂಬ ವಿವರವಿದೆ.
ಅಂದರೆ ಸರಸ್ವತಿ ನದಿಯನ್ನು ಇಂದಿನ ಚೋಲಿಸ್ತಾನ್ ಮರುಭೂಮಿಯ ಮಧ್ಯೆ ಹರಿಯುತ್ತಿದ್ದ ಹಕ್ರಾ-ಘಗ್ಗರ್ ನದಿಯ ಬತ್ತಿದ ಪಾತ್ರದೊಂದಿಗೆ ಸಮೀಕರಿಸಲಾಗಿದೆ.
ಮೊದಲು ದೇವತೆಯಾದ ಮಾತೆ ಸರಸ್ವತಿಯೇ ನದೀರೂಪ ತಾಳಿ ಇಲ್ಲಿ ಆವೀರ್ಭವಿಸಿದ್ದಾಳೆ ಎಂದು ತಿಳಿಯಲಾಗಿತ್ತು. ನಂತರ ನದಿಯು ಮಾತೆ ಸರಸ್ವತಿಯ ಜೊತೆಗಿನ ಸಂಬಂಧ ಕಡಿದುಕೊಂಡು ಬೇರೆಯದೇ ರೀತಿಯಲ್ಲಿ ಪ್ರಸಿದ್ಧವಾದುದೂ ಅಲ್ಲದೇ ಬೇರೆ ಅರ್ಥವನ್ನೂ ಸಹ ಪಡೆದುಕೊಂಡಿತು.
** ಸಂಸ್ಕೃತದಲ್ಲಿ 'ಸರಸ್ಸು' ಎಂದರೆ ನೀರಿನ ಹೊಂಡ ಅಂತರ್ಥ.
** ಸರಸ್ಸಿನ ಸ್ತ್ರೀ ರೂಪದ ಅರ್ಥವೆಂದರೆ 'ಹರಿಯದೇ ನಿಂತ ನೀರು' ಅಥವಾ 'ಕೆಸರಿನ ನೆಲ' ಎಂದಾಗುತ್ತದೆ.
** ಋಗ್ವೇದದ ಸರಸ್ವತಿ ಪದ ಬಹುಶಃ 'ಹರಿಯದೇ ನಿಂತ ನೀರು' ಎಂಬರ್ಥ ಕೊಡುತ್ತದೆ ಅಂತ ವಿದ್ವಾಂಸರು ಊಹಿಸಿಕೊಂಡಿದ್ದಾರೆ.
ಸರಸ್ವತಿ ಸಪ್ತ ಮಹಾನದಿಗಳಲ್ಲಿ ಒಂದು.
ಇದು ಗುಪ್ತಗಾಮಿನಿ. ಸರಸ್ವತಿ ನದಿಯ ಬತ್ತಿದ ಪಾತ್ರದ ಛಾಯಾಚಿತ್ರವನ್ನು ಅಮೆರಿಕಾದ ಲ್ಯಾಂಡ್ ಸ್ಯಾಟ್ ಉಪಗ್ರಹ ಚಿತ್ರೀಕರಿಸಿದೆ. ಅದರ ಪ್ರಕಾರ ಸರಸ್ವತಿ ಮತ್ತು ಘಗ್ಗರ್ ನದೀಪಾತ್ರ ಸುಮಾರು ಆರೆಂಟು ಕಿಲೋಮೀಟರ್ ಹರಿದು ನಂತರ ಅರಬ್ಬೀ ಸಮುದ್ರ ಸೇರುತ್ತಿತ್ತು.
ಭೂಮಿಯ ಮೇಲಿನ ಪದರದ ಏರುಪೇರಿನಿಂದಾಗಿ ಸರಸ್ವತಿ ಮತ್ತು ಸಟ್ಲೆಜ್ (ಶತದೃ) ನದಿಗಳು ತಮ್ಮ ಪಾತ್ರ ಬದಲಿಸಿ ಬೇರೆ ದಿಕ್ಕಿನತ್ತ ಹರಿದಿದ್ದುದರಿಂದ, ಹಿಮಾಲಯದಿಂದ ನಿರಂತರವಾಗಿ ಬರುತ್ತಿದ್ದ ನೀರು ನಿಂತು ನದೀಪಾತ್ರ ಒಣಗಿತು.
ಶತದೃ ನದಿಯು ರೋಪಾರ್ ಬಳಿ ತನ್ನ ದಿಕ್ಕು ಬದಲಿಸಿ ಸಿಂಧೂ ನದಿಗೆ ಸೇರಿತು. ಸರಸ್ವತಿ ತನ್ನ ಮೂಲ ಪಾತ್ರ ಬದಲಿಸಿ ಯಮುನಾ ನದಿ ಸೇರಿದ ಘಟನೆಯೇ ಹಿಂದೂ ಸಂಪ್ರದಾಯದಲ್ಲಿ ಅಲಹಾಬಾದಿನ ತ್ರಿವೇಣಿ ಸಂಗಮದ ನಂಬಿಕೆಗೆ ಆಧಾರವಾಗಿದೆ.
ವೈದಿಕ ನಾಗರೀಕತೆಯ ಕಾಲ, ಸರಸ್ವತಿ ನದಿಯ ಕೊನೆಯ ಕಾಲಕ್ಕೆ ತಾಳೆಯಾಗುತ್ತದೆ. ಅಲ್ಲದೇ ಸರಸ್ವತಿ ನದಿಯ ಉಲ್ಲೇಖ ವೇದ ಮತ್ತು ವೈದಿಕ ಸಾಹಿತ್ಯದಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ.
*************
ಕೆ.ಎ.ಸೌಮ್ಯ, ಮೈಸೂರು
(ಪ್ರೇರಣಾ- ಜನವರಿ 2015)