ಸ್ವರ್ಗವನ್ನೇ ತಿರಸ್ಕರಿಸಿದ ಮುದ್ಗಲ
ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಆಸೆ ಇದ್ದೇ ಇರುತ್ತದೆ. ಸತ್ತ ಮೇಲೆ ಸ್ವರ್ಗ ಸೇರಬೇಕೆಂದು ಹೆಚ್ಚು ಕಡಿಮೆ ನಾವೆಲ್ಲರೂ ಬಯಸುತ್ತೇವೆ.
ಈ ಬಗ್ಗೆ ಒಂದು ಹಾಸ್ಯವಿದೆ.
"ಜನರು ಸ್ವರ್ಗ ಬೇಕೆಂದು ಬಯಸುತ್ತಾರೆ, ಆದರೆ ಸಾಯಲು ನಿರಾಕರಿಸುತ್ತಾರೆ" ಅಂತ. ಹೀಗಿರುವಾಗ ನಮಗೇನಾದರೂ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ? ಸಾಯುವ ಪ್ರಮೇಯವೇ ಇಲ್ಲದೇ ಸೀದಾ ಪುಷ್ಪಕ ವಿಮಾನ ಹತ್ತಿ ಸ್ವರ್ಗದಲ್ಲಿ ಲ್ಯಾಂಡ್ ಆಗಬಹುದು.
ಆದರೆ 'ಮುದ್ಗಲ' ಎಂಬ ಮುನಿಯು ತನಗೆ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕಾಗಲೂ ಸಹ ನಿರಾಕರಿಸಿ ಎಲ್ಲರನ್ನೂ ದಂಗುಬಡಿಸುತ್ತಾನೆ. ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ ಯಾರು ತಾನೇ ಬಿಡುತ್ತಾರೆ?
ಸ್ವರ್ಗಕ್ಕೆ ಹೋಗಲು ಜನರು ಎಷ್ಟೆಷ್ಟೋ ತಪಸ್ಸು ಮಾಡುತ್ತಾರೆ. ದಾನ, ಧರ್ಮ, ಪುಣ್ಯಕಾರ್ಯಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಹೇಳಿರುವುದನ್ನು, ಪಂಡಿತರು ಹೇಳಿದ್ದನ್ನು ಒಂದೂ ಬಿಡದೇ ಅನುಷ್ಠಾನಗೊಳಿಸುತ್ತಾರೆ.
ಇಷ್ಟಾಗಿಯೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಆದರೆ ಅದ್ಯಾವುದೂ ಮಾಡದ ಮುದ್ಗಲನಿಗೆ ತಾನಾಗಿಯೇ ಈ ಅವಕಾಶ ಸಿಕ್ಕರೂ ಸಹ ಆತ ನಿರಾಕರಿಸುತ್ತಾನೆ. ನಾವಾಗಿದ್ದರೆ ಖಂಡಿತಾ ಈ ಅವಕಾಶವನ್ನು ಬಿಡುತ್ತಿರಲಿಲ್ಲ. ಅಲ್ಲವೇ?
ಮುದ್ಗಲ ಒಬ್ಬ ಬ್ರಹ್ಮರ್ಷಿಯಾಗಿದ್ದ.
ಆದರೂ ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಹೊಲಗದ್ದೆಗಳಲ್ಲಿ ರೈತರು ಕಾಳುಗಳನ್ನು ಕುಯ್ದು ತೆಗೆದುಕೊಂಡು ಹೋದ ನಂತರ ನೆಲದಲ್ಲಿ ಉಳಿಯುವ ಕಾಳುಗಳನ್ನು ಹೆಕ್ಕಿ ತಂದು ಅದರಿಂದಲೇ ಜೀವಿಸುತ್ತಿದ್ದ.
ವ್ರತನಿಷ್ಠನಾಗಿ, ಧರ್ಮನಿಷ್ಠನಾಗಿ, ಅತಿಥಿ ಸತ್ಕಾರ ಮಾಡುತ್ತಾ ತನ್ನ ಪಾಡಿಗೆ ತಾನಿದ್ದ. ಆದರೆ ಯಾವುದೇ ಯುಗವಾಗಲೀ ಅದು ತೇತ್ರಾಯುಗವೋ, ಕಲಿಯುಗವೋ, ಮತ್ತೊಂದೋ.. ಪ್ರಾಮಾಣಿಕರು ಮಾತ್ರವೇ ಪರೀಕ್ಷೆಗೆ ಒಳಪಡುವುದು ಲೋಕದ ನಿಯಮವೇನೋ? ಮುದ್ಗಲನೂ ಅದರಿಂದ ಹೊರತಾಗಲಿಲ್ಲ.
ಮುದ್ಗಲನ ಜೀವನದಲ್ಲಿ ಒಂದು ನಿಯಮವಿತ್ತು. ಅದನ್ನು ಆತ ಯಾವುದೇ ಚ್ಯುತಿ ಬಾರದಂತೆ ಪಾಲಿಸಿಕೊಂಡು ಬರುತ್ತಿದ್ದ. ಏನೆಂದರೆ ಆತ ಪ್ರತಿನಿತ್ಯ ಆಹಾರ ಸೇವಿಸುತ್ತಿರಲಿಲ್ಲ. ಬದಲಾಗಿ ಪ್ರತೀ ಹದಿನೈದು ದಿನಕ್ಕೊಮ್ಮೆ ಆಹಾರ ಸೇವನೆ ಮಾಡುತ್ತಿದ್ದ.
ಹೀಗಿರುವಾಗ ಒಮ್ಮೆ ಮುದ್ಗಲನ ಆಹಾರ ಸೇವಿಸುವ ದಿನ ಬರುತ್ತದೆ. ಮುದ್ಗಲ ವ್ರತ ಮುಗಿಸಿ ಇನ್ನೇನು ಆಹಾರ ಸೇವನೆ ಮಾಡಬೇಕು.... ಅಷ್ಟರಲ್ಲಿ ಮಹರ್ಷಿ ದೂರ್ವಾಸರ ಆಗಮನವಾಗುತ್ತದೆ. ಅತಿಥಿ ಸತ್ಕಾರವೆಂದು ಮುದ್ಗಲ ತನಗಾಗಿ ಇಟ್ಟುಕೊಂಡಿದ್ದ ಆಹಾರವನ್ನು ದೂರ್ವಾಸರಿಗೆ ನೀಡುತ್ತಾನೆ.
ದೂರ್ವಾಸರು ಒಂದೂ ಮಾತು ವಿಚಾರಿಸದೇ ಅವನು ನೀಡಿದ ಆಹಾರ ಸೇವಿಸಿ ಹೊರಡುತ್ತಾರೆ. ಮುದ್ಗಲ ಉಪವಾಸ ಉಳಿಯುತ್ತಾನೆ. ಮತ್ತೊಮ್ಮೆ ಸೇವಿಸಲು ಅವನ ಬಳಿ ಆಹಾರ ಇರಬೇಕಲ್ಲ. ಮುಂದಿನ ಅವಧಿಯಲ್ಲಿ ತಿಂದರಾಯ್ತೆಂದು ಸುಮ್ಮನಾಗುತ್ತಾನೆ.
ಹದಿನೈದು ದಿನ ಕಳೆದು ಮತ್ತೆ ಅವನು ಆಹಾರ ಸೇವಿಸುವ ದಿನ ಬರುತ್ತದೆ. ಆದರೆ ಕರಾರುವಕ್ಕಾಗಿ ಅವನು ಆಹಾರ ಸೇವಿಸುವ ಕ್ಷಣದಲ್ಲಿಯೇ ದೂರ್ವಾಸರ ಆಗಮನವಾಗುತ್ತದೆ. ಆಗ ಸ್ವಲ್ಪವೂ ಬೇಸರಿಸದೇ ತನ್ನ ಆಹಾರವನ್ನೇ ಅವರಿಗೆ ನೀಡಿ ತಾನು ಉಪವಾಸ ಉಳಿಯುತ್ತಾನೆ ಮುದ್ಗಲ.
ಇವನ ಸಹನೆ ಹೆಚ್ಚಿದಷ್ಟೂ ದೂರ್ವಾಸರ ಹಠವೂ ಹೆಚ್ಚುತ್ತಾ ಹೋಗುತ್ತದೆ. ಹೇಗಾದರೂ ಇವನಿಗೆ ತೊಂದರೆ ಕೊಡಲೇ ಬೇಕೆಂದು ನಿರ್ಧರಿಸಿದವರಂತೆ, ಪ್ರತೀ ಹದಿನೈದು ದಿನಕ್ಕೊಮ್ಮೆ ಅವನು ಆಹಾರ ಸೇವಿಸುವ ವೇಳೆಯಲ್ಲಿಯೇ ಬರಲು ತೊಡಗುತ್ತಾರೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಬಾರಿ ನಿರಂತರವಾಗಿ ಬಂದು ಅವನ ಆಹಾರವನ್ನು ಕಿತ್ತುಕೊಳ್ಳುತ್ತಾರೆ. ಆದರೂ ಮುದ್ಗಲನ ಅತಿಥಿ ಸತ್ಕಾರದಲ್ಲಿ ಕೊಂಚವೂ ಏರುಪೇರಾಗೋಲ್ಲ. ಬೇಸರವೇ ಇಲ್ಲದೇ ತನಗಾಗಿ ಇಟ್ಟುಕೊಂಡಿದ್ದ ಆಹಾರವನ್ನು ಆರನೇ ಬಾರಿಯೂ ದೂರ್ವಾಸರಿಗೆ ನೀಡಿ ತಾನು ಉಪವಾಸ ಉಳಿಯುತ್ತಾನೆ.
ತಕ್ಷಣವೇ ಅವನ ಪಕ್ಕ ಪುಷ್ಪಕ ವಿಮಾನ ಬಂದು ನಿಲ್ಲುತ್ತದೆ. ಅದರಲ್ಲಿನ ದೇವತೆಗಳು ಮುದ್ಗಲನನ್ನು ಸಶರೀರವಾಗಿಯೇ ಸ್ವರ್ಗಕ್ಕೆ ಆಹ್ವಾನಿಸುತ್ತಾರೆ. ಮೂರು ತಿಂಗಳಿನಿಂದ ಒಂದಗುಳು ಅನ್ನ ತಿನ್ನದವನು ಮುದ್ಗಲ. ಬೇರೆಯವರಾಗಿದ್ದರೆ ಈ ಪರಿಸ್ಥಿತಿಯಲ್ಲಿ ಶರೀರ ಕೃಶವಾಗಿ ಬುದ್ದಿ ಮಂಕಾಗಿ ಕರೆದ ಕೂಡಲೇ ವಿಮಾನ ಏರುತ್ತಿದ್ದರು.
ಆದರೆ ಮಹಾಜ್ಞಾನಿಯಾದ ಮುದ್ಗಲ ಈ ಸಂದರ್ಭದಲ್ಲಿಯೂ ಚಿತ್ತಸಂಯಮ ಕಾಯ್ದುಕೊಳ್ಳುತ್ತಾನೆ. ಸ್ವರ್ಗಕ್ಕೆ ಬರಲು ಅರ್ಹತೆ ಏನು, ಎಷ್ಟು ವರ್ಷ ಸ್ವರ್ಗದಲ್ಲಿರಬಹುದು ಎಂದೆಲ್ಲಾ ವಿಚಾರಿಸಿಕೊಳ್ಳುತ್ತಾನೆ.
ಅದಕ್ಕೆ ಈ ಭೂಮಿಯ ಮೇಲೆ ಮಾಡಿರುವ ಪುಣ್ಯ ಕ್ಷಯವಾಗುವವರೆಗೆ ಸ್ವರ್ಗವಾಸ ನಿಶ್ಚಿತ ಎಂದವರು ಹೇಳುತ್ತಾರೆ. ಆಗ ಮುದ್ಗಲ ಅವರೆಡೆ ಮರುಕದಿಂದ ನೋಡುತ್ತಾ "ಅಂದರೆ ನಾವು ಎಷ್ಟು ಪುಣ್ಯ ಮಾಡಿ ಸ್ವರ್ಗ ಸೇರಿದರೂ, ಒಂದಲ್ಲಾ ಒಂದು ದಿನ ನಾವು ಮಾಡಿರುವ ಪುಣ್ಯ ಕಳೆದು ಭೂಮಿಗೆ ಹಿಂತಿರುಗಲೇ ಬೇಕು, ಆದ್ದರಿಂದ ನನಗೆ ಈ ತಾತ್ಕಾಲಿಕ ಸುಖ ನೀಡುವ ಸ್ವರ್ಗ ಬೇಕಿಲ್ಲ" ಎಂದು ತಿರಸ್ಕರಿಸುತ್ತಾನೆ.
ಅವನಿಗೆ ಭೂಮಿಯ ಮೇಲಿನ ಸರಳ ಜೀವನವಿದ್ದರೂ ಪರವಾಗಿಲ್ಲ, ಆದರೆ ಕ್ಷಣ ಕಾಲ ಸುಖ ತೋರಿಸಿ ನಂತರ ಮರೆಯಾಗುವ ತಾತ್ಕಾಲಿಕ ಸುಖದಲ್ಲಿ ನಂಬಿಕೆ ಇರಲಿಲ್ಲ.
ನಾವು ಭೂಮಿಯ ಮೇಲಿನ ಈ ಜೀವನವನ್ನೇ ಶಾಶ್ವತ ಎಂದು ತಿಳಿಯುತ್ತೇವೆ. ನಮಗಾಗಿ ಎಷ್ಟೆಲ್ಲಾ ಆಸ್ತಿ ಪಾಸ್ತಿ ಮಾಡಿಕೊಳ್ಳುತ್ತೇವೆ. ಇಲ್ಲಿ ಸುಖವಾಗಿದ್ದರೆ ಇದನ್ನೇ ಸ್ವರ್ಗ ಎಂದುಕೊಳ್ಳುತ್ತೇವೆ. ಇನ್ನು ಸ್ವರ್ಗವೇ ಸಿಗುತ್ತದೆ ಎಂದರೆ ಬಿಡುತ್ತೇವೆಯೇ? ಇಂತಹಾ ಸಂದರ್ಭದಲ್ಲಿ ಮುದ್ಗಲನ ಈ ನಿರ್ಧಾರ ಮಹತ್ವ ಪಡೆಯುತ್ತದೆ.
(ಓ ಮನಸೇ: ಫೆಬ್ರವರಿ 2019)
*******
ಕೆ.ಎ.ಸೌಮ್ಯ
ಮೈಸೂರು