ಋಷ್ಯಶೃಂಗನ ಬ್ರಹ್ಮಚರ್ಯ

 


ಅದು ಅಂಗರಾಜ್ಯ. ಸುಭಿಕ್ಷತೆಯಿಂದ ತುಂಬಿ ತುಳುಕುವ ದೇಶವದು. ರಾಜ ರೋಮಪಾದನ ಆಡಳಿತದಲ್ಲಿ ಪ್ರಜೆಗಳಿಗೆ ಕೊರತೆ ಎನ್ನುವುದೇ ಇರಲಿಲ್ಲ. ಇಡೀ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ ಬೀಳುತ್ತಾ, ಬಂಗಾರದಂತಹ ಬೆಳೆ ಬೆಳೆಯುತ್ತಾ ಪ್ರಜೆಗಳು ಸಂಪ್ರೀತರಾಗಿದ್ದರು. 


ಲೋಪವೇ ಇಲ್ಲದ ಈ ರಾಜ್ಯ ಸ್ವರ್ಗಕ್ಕೂ ಕಿಚ್ಚು ಹಚ್ಚುವಂತಿತ್ತು. ಅದೇ ತಪ್ಪಾಯಿತು. ದೇವೇಂದ್ರ ಇದರ ಸುಭಿಕ್ಷ ನೋಡಿ ಕಿಡಿಗಣ್ಣಾದ. ಹೀಗಾದರೆ ಜನರು ತನ್ನನ್ನು ಮರೆತೇ ಬಿಡುತ್ತಾರೆಂದು ಮೋಡಗಳ ಬಳಿ ಅಂಗರಾಜ್ಯದ ಸನಿಹವೂ ಸುಳಿಯಬಾರದೆಂದು ಆಜ್ಞಾಪಿಸಿದ. ಮೋಡಗಳು ಮಳೆ ಸುರಿಸದೇ ಹಿಂದುಳಿದವು. 


ಹಸಿರಿನಿಂದ ತುಂಬಿ ತುಳುಕುತ್ತಿದ್ದ ರಾಜ್ಯವೀಗ ಮಳೆಯಿಲ್ಲದೇ ಬರಡಾಯ್ತು. ಸುಭಿಕ್ಷವಿದ್ದಾಗ ಶೇಖರಿಸಿಟ್ಟಿದ್ದ ಧಾನ್ಯವೆಲ್ಲಾ ಖರ್ಚಾದರೂ ಸಹ ಮಳೆ ಬರುವ ಸೂಚನೆ ಕಾಣಲಿಲ್ಲ. ಕೆರೆ ಕಟ್ಟೆಗಳೆಲ್ಲಾ ಖಾಲಿಯಾದವು. ಕುಡಿಯಲೂ ಸಹ ನೀರು ಉಳಿದಿರಲಿಲ್ಲ. 


ಹೀಗೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲ ಅಂತ ಅರಿವಾಯ್ತು ರೋಮಪಾದನಿಗೆ. ಆದರೆ ಮುನಿಸಿಕೊಂಡಿರುವ ದೇವೇಂದ್ರನನ್ನು ಒಲಿಸುವುದು ಅವನಿಂದ ಸಾಧ್ಯವಿರಲಿಲ್ಲ. 


ಒಂದು ದಿನ ಅರಮನೆಯ ಮುಂದಿನಿಂದ ಸಾಗುತ್ತಿದ್ದ ಸಾಧು ಒಬ್ಬರನ್ನು ಸತ್ಕರಿಸಿ ಮಹಾರಾಜ ತನ್ನ ಸ್ಥಿತಿ ಅರುಹಿದ. ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ತನ್ನ ರಾಜ್ಯ ಮೊದಲಿನಂತೆ ಸುಭಿಕ್ಷವಾಗಲು ಏನು ಮಾಡಬೇಕು ಅಂತ ಕೇಳಿದ. 


ಆ ಸನ್ಯಾಸಿ ಕ್ಷಣ ಕಾಲ ಕಣ್ಮುಚ್ಚಿ ಯೋಚಿಸಿ ಇಂದ್ರನ ಅಹಂಕಾರ ಅಡಗಬೇಕೆಂದರೆ ಈ ರಾಜ್ಯಕ್ಕೆ ಶುದ್ಧ ಬ್ರಹ್ಮಚಾರಿಯ ಆಗಮನವಾಗಬೇಕು. ಅದರಲ್ಲಿಯೂ ಮಹರ್ಷಿ ವಿಭಾಂಡಕನ ಮಗ ಋಷ್ಯಶೃಂಗ ಬರಬೇಕು. ಆತ ಕಾಲಿಟ್ಟಲ್ಲಿ ಬರ ಎನ್ನುವುದು ಮಾಯವಾಗಿ, ದೇಶ ಸಮೃದ್ಧಿಯಾಗುತ್ತದೆ ಎಂದು ಹೇಳಿದ. 


ಸನ್ಯಾಸಿ ಹೇಳಿದ್ದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ. 


ಮಹರ್ಷಿ ಋಷ್ಯಶೃಂಗರಿಗಿಂತಲೂ ಮಿಗಿಲಾದ‌ ಬ್ರಹ್ಮಚಾರಿ ಇರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಅವನ ತಂದೆಯಾದ ವಿಭಾಂಡಕರು ಅವನನ್ನು ಹೆಣ್ಣಿನ ನೆರಳೂ ಸಹ ಸೋಕದಂತೆ ಸಾಕಿದ್ದರು. ಋಷ್ಯಶೃಂಗ ತನ್ನ ಪಾಡಿಗೆ ಅಧ್ಯಯನ ಮಾಡುತ್ತಾ ಹಾಯಾಗಿದ್ದ. ಆದರೆ ಋಷ್ಯಶೃಂಗನನ್ನು ಈ ರಾಜ್ಯಕ್ಕೆ ಕರೆಸುವುದೂ ಸಹ ಸುಲಭವಿರಲಿಲ್ಲ. 


ಏಕೆಂದರೆ ಅವನನ್ನು ಯಾರೂ ಭೇಟಿಯಾಗದಂತೆ ಮುನಿ ವಿಭಾಂಡಕರು ನಿಷೇಧ ಹೇರಿದ್ದರು. ಅವರಾಜ್ಞೆ ಮೀರಿ ಹೋದವರು ವಿಭಾಂಡಕರ ಕೈಗೆ ಸಿಕ್ಕರೆ ಸುಟ್ಟು ಭಸ್ಮವಾಗುತ್ತಿದ್ದರು. 


ವಿಭಾಂಡಕರು ಆಶ್ರಮದಲ್ಲಿ ಇಲ್ಲದ ಸಮಯದಲ್ಲಿಯೇ ಋಷ್ಯಶೃಂಗನನ್ನು ಅಪಹರಿಸಬೇಕಿತ್ತು. ಅದಕ್ಕಾಗಿ ವಿಭಾಂಡಕರು ಯಾವುದೋ ಕೆಲಸಕ್ಕೆಂದು ಹೊರಹೋಗಿದ್ದಾಗ ಸುಂದರವಾದ ಹೆಣ್ಣುಗಳನ್ನು ಅವನ ಬಳಿ ಕಳಿಸಲಾಯ್ತು. 


ಅವರುಗಳು ಆಶ್ರಮದ ಸುತ್ತಲೂ ನರ್ತಿಸತೊಡಗಿದರು. 


ಪಾಪ ಋಷ್ಯಶೃಂಗ ತನ್ನ ಜೀವಮಾನದಲ್ಲಿ ಯಾವ ಹೆಣ್ಣನ್ನೂ ಕಂಡವನಲ್ಲ. ತನ್ನ ತಾಯಿಯನ್ನೂ ಸಹ... ಇವರುಗಳು ಅದಾವ ಸೃಷ್ಟಿಯೋ ಎಂದು ಅಚ್ಚರಿಯಿಂದ ಹೊರ ಬಂದ. ವಿಭಾಂಡಕರು ಆತನನ್ನು ಎಷ್ಟೇ ಮುಚ್ಚಿಟ್ಟು ಜೋಪಾನ ಮಾಡಿದ್ದರೂ ಸಹ ಆತ ವಯೋಸಹಜ ಗುಣಗಳಿಂದ ಆ ಹೆಣ್ಣುಗಳತ್ತ ಆಕರ್ಷಿತನಾಗಿಬಿಟ್ಟ. 


ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ. 


ಲಜ್ಜೆ ಎನ್ನುವುದು ಎಲ್ಲಿಯೋ ಓಡಿ ಹೋಯಿತು. ನಾವು ಯಾವುದನ್ನು ಪ್ರಯತ್ನಪೂರ್ವಕವಾಗಿ ನಿಗ್ರಹಿಸುತ್ತೇವೆಯೋ ಅದು ಒಂದಲ್ಲ ಒಂದು ದಿನ ಸ್ಫೋಟಿಸುತ್ತದಂತೆ. ಅದೇ ರೀತಿ ತಂದೆಯವರ ಕಠಿಣ ನಿಯಮಗಳಿಂದಾಗಿ ತನ್ನೊಳಗಿನ ಕಾಮವನ್ನು ದಮನಿಸಿಕೊಂಡಿದ್ದ ಋಷ್ಯಶೃಂಗ ತನಗರಿವಿಲ್ಲದೇ ಆ ಹೆಣ್ಣುಗಳ ಕಡೆ ಹೆಜ್ಜೆ ಹಾಕತೊಡಗಿದ.


ಇವರು ಯಾರು, ಯಾಕೆ ಹೀಗಿದ್ದಾರೆ, ಇವರ ಸೌಂದರ್ಯಕ್ಕೆ ಕಾರಣವೇನು, ಇಷ್ಟು ಒಪ್ಪವಾಗಿ ಅಲಂಕಾರ ಮಾಡಿಕೊಂಡು ಕಣ್ಮನ ತಣಿಸುತ್ತಿರುವ ಇವರು ಯಾರಿರಬಹುದು ಎಂಬ ಕುತೂಹಲದಿಂದ ಅವರ ಬಳಿ ಹೋದ. 


ಏನಾಶ್ಚರ್ಯ....!! 


ಅವರು ದೂರ ಸರಿದು ನರ್ತಿಸತೊಡಗಿದರು. ಋಷ್ಯಶೃಂಗನಿಗೆ ಗಾಬರಿ, ನಿರಾಸೆ, ಕೋಪ ಎಲ್ಲವೂ ಒಟ್ಟಿಗೆ ಮೂಡಿತು. ಏನೇ ಆಗಲಿ ಅವರನ್ನು ಹಿಡಿಯಲೇ ಬೇಕೆಂಬ ಛಲ ಮೂಡಿತು. ಮತ್ತಷ್ಟು ಹತ್ತಿರ ಹೋದ. ಅವರು ಇನ್ನಷ್ಟು ದೂರ ಹೋದರು. ಇವನೂ ಹಿಂದೆ ಸರಿಯಲಿಲ್ಲ. 


ಅವರೂ ಇವನ ಕೈಗೆ ಸಿಗಲಿಲ್ಲ. 


ನರ್ತಿಸುತ್ತಾ, ದೂರವಾಗುತ್ತಾ ಆತನನ್ನು ಅಂಗರಾಜ್ಯದ ಗಡಿಯೊಳಗೆ ಕರೆತಂದೇ ಬಿಟ್ಟರು. ಆತ ಕಾಲಿಟ್ಟೊಡನೆಯೇ ರಾಜ್ಯದಲ್ಲಿ ಕುಂಭದ್ರೋಣ ಮಳೆ ಸುರಿಯಿತು. ರಾಜ್ಯವೊಂದು ಮರುಭೂಮಿಯಾಗುವುದು ತಪ್ಪಿತು. ಪ್ರಜೆಗಳೆಲ್ಲ ನಿಟ್ಟುಸಿರುಬಿಟ್ಟರು. 


ಆತನ ಮಹಿಮೆಯೇ ಹಾಗಿತ್ತು. 


ಆತನ ಬ್ರಹ್ಮಚರ್ಯದ ಶಕ್ತಿ ಅದು. ಆದರೆ ಆ ಶಕ್ತಿಗಾಗಿ ಆತ ಹುಟ್ಟಿದಾಗಿನಿಂದಲೂ ಹೆಣ್ಣನ್ನು ತನ್ನ ತಾಯಿಯಾಗಿ, ತಂಗಿಯಾಗಿ ಕಾಣದೇ, ಆಕೆಯ ಮಧುರ ಒಡನಾಟವಿರದೇ ಬದುಕಬೇಕಾದದ್ದು ಮಾತ್ರ ವಿಪರ್ಯಾಸವೇ.... ಇಲ್ಲಿ ಇವನ ದುರಾದೃಷ್ಟಕ್ಕೆ ಅಯ್ಯೋ ಎನ್ನಬೇಕೋ ಅಥವಾ ಇಂಥವನು ಒಬ್ಬನಿರದಿದ್ದರೆ ಒಂದು ರಾಜ್ಯವೇ ನಾಶವಾಗುತ್ತಿತ್ತಲ್ಲ ಎಂದುಕೊಳ್ಳಬೇಕೋ ಗೊತ್ತಾಗುತ್ತಿಲ್ಲ. 


ವಿಧಿಲಿಖಿತ ಏನೇ ಇರಲಿ. 


ಅದಕ್ಕಾಗಿ ಅವನು ಬಹಳ ದೊಡ್ಡ ಬೆಲೆ ತೆತ್ತ. ಸಾಮಾನ್ಯವಾಗಿ ಸಮಾಜೋದ್ಧಾರಕರು ತಮ್ಮ ವೈಯುಕ್ತಿಕ ಜೀವನದಲ್ಲಿ ಬಹಳ ನೋವು ಅನುಭವಿಸಿರುತ್ತಾರೆ. ಇಲ್ಲಿ ಅಂಗರಾಜ್ಯ ಸುಭಿಕ್ಷವಾಗಿ ಇಂದ್ರನ ಕಣ್ಣುಕುಕ್ಕಿ ಅವನ ಶಾಪಕ್ಕೆ ಒಳಗಾಗುವುದಕ್ಕೂ, ಇವನಿಗೂ ಸಂಬಂಧವೇ ಇರದಿದ್ದರೂ, ಈ ಶಾಪ ವಿಮೋಚನೆಗಾಗಿ ವಿಧಿ ಬಹಳ ಹಿಂದಿನಿಂದಲೇ ಈತನ ಜನ್ಮವನ್ನು‌ ಅದಕ್ಕಾಗಿ ಕಾಯ್ದಿರಿಸಿತ್ತು. ಒಂದೊಮ್ಮೆ ಇವನು ಕಡು ಬ್ರಹ್ಮಚಾರಿಯಾಗಿರದೇ ಇದ್ದಿದ್ದರೆ ಅಂಗರಾಜ್ಯ ಅಂದೇ ನಾಶವಾಗುತ್ತಿತ್ತು. 


(ಓ ಮನಸೇ - ಡಿಸೆಂಬರ್ 2019) 

************** 

ಕೆ.ಎ.ಸೌಮ್ಯ

ಮೈಸೂರು 

       







Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ