ತ್ರಿಶಂಕು ಸ್ವರ್ಗ

 


ಸ್ವರ್ಗ-ನರಕ ಎಂದರೆ ಎಲ್ಲರಿಗೂ ಗೊತ್ತು. ನಾವು ಸತ್ತ ಮೇಲೆ ಸೇರುವ ಜಾಗ ಅದು. ಹಾಗಂತ ಪರ್ಮನೆಂಟಾಗಿ ಅಲ್ಲೇ ಉಳಿಯಲೂ ಸಹ ಆಗುವುದಿಲ್ಲ. ನಾವು ಮಾಡಿದ್ದ ಪಾಪವೋಪುಣ್ಯವೋ ಕರಗಿದ ಮೇಲೆ ಮತ್ತೆ ಭೂಮಿ ಮೇಲೆ ಅವತರಿಸಬೇಕು.


ಆದರೆ ಸ್ವರ್ಗ ಅಥವಾ ನರಕ ಸೇರಲು ಇರುವ ದಾರಿಯೆಂದರೆ ಮೃತ್ಯು ಒಂದೇ. ಆದರಿಲ್ಲಿ ತ್ರಿಶಂಕು ಎಂಬ ಮಹಾರಾಜನಿಗೆ ಶರೀರ ಸಮೇತವಾಗಿಯೇ ಸ್ವರ್ಗ ಸೇರಬೇಕು ಅಂತಾಸೆಯಾಗುತ್ತದೆ. ಅವನಿಗೆ ತನ್ನ ದೇಹದ ಮೇಲಿದ್ದ ಮೋಹ ಅಂಥಾದ್ದು.


ತನ್ನ ದೇಹವನ್ನು ತಾನೇ ಮೋಹಿಸುತ್ತಿದ್ದತನ್ನ ಸೌಂದರ್ಯವನ್ನು ನೋಡಿ ತಾನೇ ಹೆಮ್ಮೆ ಪಡುತ್ತಿದ್ದ ತ್ರಿಶಂಕುವಿಗೆ ಒಮ್ಮೆ ತನ್ನ ಈ ಸುಂದರ ಶರೀರದೊಡನೆಯೇ ಸ್ವರ್ಗಕ್ಕೆ ಹೋಗಬೇಕು ಅಂತಾಸೆಯಾಗುತ್ತದೆ. 


ಅದೆಂಥಾ ಆಸೆಯೋ ಗೊತ್ತಿಲ್ಲ...


ಆದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗಲೇ ನೂರಾರು ಕಟ್ಟಳೆ-ಕಾನೂನು ಇರುವ ನಮಗೆ ಬೇರೊಂದು ಲೋಕ ಪ್ರವೇಶಿಸುವಾಗ ಎದುರಾಗುವುದಿಲ್ಲವೇ


ಹಾಗಾಗಿಯೇ ತ್ರಿಶಂಕುವಿನ ಆಸೆಯನ್ನು ಅವನ ಕುಲಗುರುವಾದ ವಸಿಷ್ಠರು ಒಂದೇ ಬಾರಿಗೆ ನಿರಾಕರಿಸಿಬಿಡುತ್ತಾರೆ. ಗುರುಗಳು ಹೇಳಿದ್ದು ತನ್ನ ಒಳ್ಳೆಯದಕ್ಕೆ ಅಂತವನಿಗೆ ಅರ್ಥವಾಗುವುದಿಲ್ಲ.


ಏಕೆಂದರೆ ಹಸಿವು-ನೀರಡಿಕೆ-ನಿದ್ರೆಯ ಬಾಧೆ ಇರುವ ಈ ದೇಹವನ್ನು ಪರಮ ಪವಿತ್ರ ಸ್ವರ್ಗಕ್ಕೆ ಒಯ್ಯಬಾರದಲ್ಲವೇ


ಸ್ವರ್ಗವೆಂದರೆ ಮನಸ್ಸಿನ ಕಾಮನೆಗಳ ಪೂರ್ತಿಗಾಗಿ ಹೊರತೂ ದೇಹಕಾಮನೆಗಳಿಗಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ತ್ರಿಶಂಕು ಮಹಾರಾಜ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡವನಂತೆ ವಸಿಷ್ಠರ ಮಕ್ಕಳ ಬಳಿ ಹೋಗಿ ಇದೇ ವಿಷಯ ಕೇಳುತ್ತಾನೆ.


ವಸಿಷ್ಠರ ಮಕ್ಕಳಿಗೆ ತಮ್ಮ ತಂದೆ ಈಗಾಗಲೇ ಇವನ ಆಸೆಯನ್ನು ತಿರಸ್ಕರಿಸಿದ್ದಾರೆ ಅಂತ ಗೊತ್ತಿರುತ್ತದೆ. ಹಾಗಾಗಿ ಈತ ತಮ್ಮ ತಂದೆಗೆ ಅವಮಾನ ಮಾಡಿದ ಎಂದು ಕೋಪದಿಂದ ಅವನಿಗೆ ಶಾಪ ಕೊಟ್ಟುಬಿಡುತ್ತಾರೆ. 


ಅದೂ ಎಂತಹಾ ಶಾಪ?  


ನೋಡನೋಡುತ್ತಿದ್ದಂತೆಯೇ ಸುಂದರ ರೂಪ ಹೋಗಿ ಕುರೂಪಿಯಾಗಿ ಬಿಡುತ್ತಾನೆ ತ್ರಿಶಂಕು ಮಹಾರಾಜ. ಅವನ ರೂಪ ನೋಡಿ ಬೆದರಿದ ಆತನ ಹೆಂಡತಿಮಕ್ಕಳುಪರಿವಾರದವರೆಲ್ಲಾ ಓಡಿಹೋಗಿಬಿಡುತ್ತಾರೆ. ಅಷ್ಟಾದರೂ ಅವನಿಗೆ ಸಶರೀರವಾಗಿ ಸ್ವರ್ಗ ಸೇರುವ ಆಸೆ ಮಾತ್ರ ಅಳಿಯುವುದಿಲ್ಲ.


ಅದೇನಿದೆಯೋ ಈ ದೇಹದಲ್ಲಿ?  


ಅದ್ಯಾವ ಮಾಯೆಯೋಕೇವಲ ಇಂದ್ರಿಯ ಸುಖ ಬಯಸುವ ಈ 'ದೇಹಪಾರಮಾರ್ಥ ಸಾಧನೆಗೆ ಮೂಲ ತೊಡಕಾಗಿ ಕಾಡುತ್ತದೆ. ಹಾಗಾಗಿಯೇ ಯಾವುದೇ ಸಾಧನೆಗೆ ತೊಡಗಿದ ಸಾಧಕರು ಮೊದಲು ದೇಹದ ಮೇಲಿನ ಮೋಹ ಬಿಡಬೇಕಾಗುತ್ತದೆ. ಆದರೆ ತ್ರಿಶಂಕುವಿಗೆ ಮೋಹಕ ರೂಪ ಹೋಗಿ ಕುರೂಪ ಬಂದರೂ ದೇಹದ ಮೇಲಿನ ವ್ಯಾಮೋಹ ಹೋಗುವುದಿಲ್ಲ.



ಅವನಿಗೆ ಹೇಗಾದರೂ ಸರಿ ಸ್ವರ್ಗ ಸೇರಬೇಕಿರುತ್ತದೆ.


ಹಾಗಾಗಿ ಆತ ಕೌಶಿಕ ಮಹರ್ಷಿಯನ್ನು ಹುಡುಕಿ ಹೊರಡುತ್ತಾನೆ. ಏಕೆಂದರೆ ತ್ರಿಶಂಕು ಮೂಲತಃ ಒಬ್ಬ ರಾಜ. ರಾಜಕೀಯದ ಬುದ್ಧಿ ಆತನಲ್ಲಿ ಸದಾ ಜಾಗೃತವಾಗಿರುತ್ತದೆ. ತನ್ನಾಸೆಯನ್ನು ಅಲ್ಲಗೆಳೆದ ವಸಿಷ್ಠರ ಪರಮಶತೃ ಎಂದರೆ ಕೌಶಿಕ ಮಹರ್ಷಿ. ವಸಿಷ್ಠರ ಮೇಲಿನ ಹಗೆಯಿಂದಲಾದರೂ ಕೌಶಿಕರು ತನ್ನಾಸೆಯನ್ನು ನೆರವೇರಿಸುತ್ತಾರೆ ಎಂಬ ಲೆಕ್ಕಾಚಾರ ಅವನದ್ದು.


ಅವನು ಊಹಿಸಿದಂತೆಯೇ ಆಗುತ್ತದೆ.


ಕೌಶಿಕರು ತ್ರಿಶಂಕುವಿನ ಮಾತು ಕೇಳಿದವರೇ 'ಮಾನವ ಶರೀರ ಸಹಿತ ಸ್ವರ್ಗ ಹೋಗಬಹುದೇಸಾಧಕ-ಬಾಧಕಗಳೇನುಎಂಬ ವಿಚಾರವನ್ನೇನೂ ಮಾಡದೇ ಒಪ್ಪಿಕೊಂಡುಬಿಡುತ್ತಾರೆ. ಅವರ ಆಲೋಚನೆ ಎಂದರೆ ವಸಿಷ್ಠರ ಕೈಲಿ ಸಾಧ್ಯವಾಗದೇ ಇರುವುದನ್ನು ತಾನು ಮಾಡಬೇಕು ಅಂತಷ್ಟೇ.


ಅವರ ಹಠ ಎಷ್ಟಿತ್ತು ಎಂದರೆ ಅವನ್ಯಾರೋ ತ್ರಿಶಂಕು ಅವರಿಗೆ ಗೊತ್ತಿರಲಿಲ್ಲ. ಅವನಿಂದ ಅವರಿಗೇನೂ ಲಾಭವಿಲ್ಲನಷ್ಟವಿಲ್ಲ. ಆದರೂ ಅದೊಂದು ಹಠ.... ವಸಿಷ್ಠರ ಮೇಲೆ. ಹಾಗಾಗಿ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಲು ತಮ್ಮ ತಪಃಶ್ಯಕ್ತಿಯನ್ನು ಬಳಸಲು ನಿರ್ಧರಿಸುತ್ತಾರೆ.



ಈ ಪ್ರಪಂಚದಲ್ಲಿ ಈಗ ಆಗುತ್ತಿರುವುದೂ ಹೀಗೆಯೇ.


ಉಳ್ಳವರ ಶಕ್ತಿ ವ್ಯರ್ಥಕಾರ್ಯಗಳಿಗೆ ಬಳಸಲ್ಪಡುತ್ತಿದೆ. ಇದರ ಬದಲು ಕೌಶಿಕರು ತಮ್ಮ ಶಕ್ತಿಯನ್ನು ಲೋಕಕಲ್ಯಾಣಕ್ಕೆ ಬಳಸಬಹುದಿತ್ತು. ಉಹುಂ‌.... ಮನದಲ್ಲಿ ದ್ವೇಷ ಇರುವಾಗ ಚಿಂತನೆಗೆ ಅವಕಾಶವಿಲ್ಲ. ತ್ರಿಶಂಕು ಸಶರೀರವಾಗಿಯೇ ಸ್ವರ್ಗದ ಕಡೆ ಹೊರಡುತ್ತಾನೆ.


ಸ್ವರ್ಗದ ಕಾವಲುಭಟರು ತಮಾಷೆ ನೋಡುವಂತೆ ನೋಡುತ್ತಿರುತ್ತಾರೆ. ಅವನು ಬರುವ ತನಕವೂ ಸುಮ್ಮನಿದ್ದು, ಅವನು ಸ್ವರ್ಗದ ಬಾಗಿಲ ಬಳಿ ತಲುಪಿದ ಕ್ಷಣವೇ ಅವನನ್ನು "ಶರೀರ ಸಮೇತ ಬರುವಂತಿಲ್ಲ" ಎಂದು ದೂಕಿಬಿಡುತ್ತಾರೆ.


ತ್ರಿಶಂಕು ತಲೆಕೆಳಕಾಗಿ ಭೂಮಿಗೆ ಬೀಳತೊಡಗುತ್ತಾನೆ. ಅವನಿಗೆ ಯುದ್ಧ ಮಾಡುವುದು ಗೊತ್ತೇ ಹೊರತೂ ತಲೆಕೆಳಕಾಗಿ ಬೀಳುವಾಗ ಹೇಗೆ ಬಚಾವಾಗುವುದೆಂದು ಕಲಿತಿರಲಿಲ್ಲ‌. ಬಿದ್ದರೆ ಸಾಯುತ್ತಿದ್ದನಷ್ಟೇ. ಸತ್ತರೆ ಸ್ವರ್ಗ ಸಿಗುತ್ತಿತ್ತೋ ಏನೋ?



ಆದರೂ ಅವನಿಗೆ ಸಾಯಲು ಇಷ್ಟವಿರಲಿಲ್ಲವಲ್ಲ.


ಅವನು ಬೀಳುತ್ತಿರುವುದನ್ನು ನೋಡಿದ ಕೌಶಿಕರು ತಮ್ಮ ಶಕ್ತಿಯಿಂದ ಅವನನ್ನು ಆಕಾಶದಲ್ಲಿಯೇ ಹಿಡಿದು ನಿಲ್ಲಿಸುತ್ತಾರೆ. ಈಗವನು ಸ್ವರ್ಗಕ್ಕೂ ಸಲ್ಲಲಿಲ್ಲ.... ಭೂಮಿಗೂ ಸಲ್ಲಲಿಲ್ಲ..... ಎರಡರ ಮಧ್ಯ ಉಳಿದು ತೂಗಾಡತೊಡಗಿದ.


ಕೌಶಿಕರು ತಮ್ಮ ಶಕ್ತಿಯಿಂದ ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ತ್ರಿಶಂಕುವಿಗಾಗಿ ಒಂದು ಸ್ವರ್ಗ ನಿರ್ಮಿಸಿಯೇ ಬಿಡುತ್ತಾರೆ. ಈ ತ್ರಿಶಂಕು ಸ್ವರ್ಗದಿಂದ ಯಾರಿಗೆ ಅನುಕೂಲ? ಅದು ಕೌಶಿಕರಿಗೆ ಬೇಕಿಲ್ಲ. ವಸಿಷ್ಠರಿಗೆ ಸೆಡ್ಡು ಹೊಡೆಯಬೇಕಿತ್ತು. ಹೊಡೆದರು.  ಸ್ವರ್ಗಕ್ಕೆ ಸೇರಿಸಲಾಗಲಿಲ್ಲ. ಹಾಗಾಗಿ ಸ್ವರ್ಗವನ್ನೇ ನಿರ್ಮಿಸಿದರು.


ತ್ರಿಶಂಕು ಸ್ವರ್ಗವೂ ಸಹ ಮೂಲ ಸ್ವರ್ಗದಂತೆಯೇ ಮತ್ತೊಂದು ಸ್ವರ್ಗ ಅಂತ ಹೆಸರಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಜನರ ಅಪಹಾಸ್ಯದ ವಸ್ತುವಾಯಿತು. 


ಹೇಗೆಂದರೆ ಎರಡು ವಿಷಯಗಳ ನಡುವೆ ಸಿಲುಕಿ ಪರದಾಡುವ ಮನುಷ್ಯರ ಸ್ಥಿತಿಯನ್ನು ಇಂದಿಗೂ ತ್ರಿಶಂಕು ಸ್ವರ್ಗಕ್ಕೆ ಹೋಲಿಸಿ ಹಾಸ್ಯ ಮಾಡಲಾಗುತ್ತದೆ. ಅಂದರೆ ಒಳ್ಳೆಯ ಉದ್ದೇಶವಿಲ್ಲದ ಒಂದು ಸಾಧನೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

(ಓ ಮನಸೇ- ಸೆಪ್ಟೆಂಬರ್ 01, 2019)

*******

ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ