ಧರ್ಮ ವ್ಯಾಧ

 


ಧರ್ಮವನ್ನು ಕುರಿತು ನೂರಾರು ವ್ಯಾಖ್ಯಾನಗಳಿವೆ. ಧರ್ಮವನ್ನು ಆಚರಿಸುವ ಬಗ್ಗೆ ಹಲವಾರು ಪದ್ಧತಿ, ಪುರಾಣಗಳಿವೆ. ಧರ್ಮಕ್ಕೊಂದು ಚೌಕಟ್ಟು ಹಾಕಿ, ಅದನ್ನು ಮೀರಿ ನಡೆದರೆ ಆಗಬಹುದಾದ ಶಿಕ್ಷೆಯ ಬಗ್ಗೆ ವಿವರವಿದೆ ಹೊರತೂ, ಧರ್ಮ ಎಂದರೇನು ಎಂದು ಸ್ಪಷ್ಟವಾಗಿ ಯಾವ ಧರ್ಮವೂ ಇದುವರೆಗೂ ಹೇಳಿಲ್ಲ. ಹುಡುಕಿದರೆ ಸಿಗುವುದೂ ಇಲ್ಲ. 


ಆದರೆ ಒಬ್ಬ ಮಾಂಸ ಮಾರುವ ಕಟುಕನೊಬ್ಬ ಇದಕ್ಕೆ ಉತ್ತರಿಸಿದ್ದಾನೆ ಎಂದರೆ ಆಶ್ಚರ್ಯವಾಗುತ್ತದೆಯೇ? ಹೌದು.‌ ಮಾಂಸ ಮಾರುವ ಕಟುಕನಿಗೂ, ಧರ್ಮಕ್ಕೂ ಏನು ಸಂಬಂಧ ಅಂತ ನಮಗೆ ಆಶ್ಚರ್ಯವಾಗುತ್ತದೆ. ಆದರೆ ಇವನು ಸಾಮಾನ್ಯ ವ್ಯಾಧನಲ್ಲ, ಧರ್ಮವ್ಯಾಧ. ಧರ್ಮದ ಹುಡುಕಾಟದಲ್ಲಿದ್ದ ಕೌಶಿಕ ಮುನಿ ಸಹ ಈತನಿಂದ ಧರ್ಮೋಪದೇಶ ಪಡೆಯುವಂತಹ ಜ್ಞಾನಿ ಈತ. 


ಒಮ್ಮೆ ಹೀಗಾಯಿತು.


ಒಂದಾನೊಂದು ಕಾಲದಲ್ಲಿ ಕೌಶಿಕನೆಂಬ ಮುನಿಯಿದ್ದ. ಪಂಡಿತನಾಗಿದ್ದ ಆತ ವೇದಗಳನ್ನೆಲ್ಲಾ ಅರೆದು ಕುಡಿದಿದ್ದ. ತನ್ನ ಊರಿನಲ್ಲಿಯೇ ಯಾರೂ ಪಡೆಯಲಾಗದಷ್ಟು ವಿದ್ಯಾಭ್ಯಾಸವನ್ನು ತಾನು ಪಡೆದಿದ್ದೇನೆ ಎಂಬ ಹೆಮ್ಮೆ ಆತನದ್ದಾಗಿತ್ತು. ವಿದ್ಯಾಭ್ಯಾಸದ ನಂತರ ಲೌಕಿಕ ಜೀವನಕ್ಕೆ ಮರಳಲು ಅವನಿಗೆ ಇಷ್ಟವಾಗಲಿಲ್ಲ. ಅದರ ಬದಲು ಮೋಕ್ಷದ ಹಾದಿಯಲ್ಲಿ ಸಾಗಬೇಕು ಎಂಬ ಬಯಕೆಯಿಂದ ಸಂಸಾರವನ್ನು ತ್ಯಜಿಸಿ ತಪಸ್ಸು ಮಾಡಲೆಂದು ಅರಣ್ಯಕ್ಕೆ ಬಂದ.‌ 


ಒಮ್ಮೆ ಹೀಗೆಯೇ ಒಂದು ಮರದ ಕೆಳಗೆ ಕುಳಿತು ಭಗವಂತನ ಧ್ಯಾನದಲ್ಲಿ ಮಗ್ನನಾಗಿದ್ದಾಗ ಮರದ ಮೇಲಿನಿಂದ ಒಂದು ಕೊಕ್ಕರೆ ಜೋರಾಗಿ ಅರಚುತ್ತಾ ಇವನ ತಪಸ್ಸಿಗೆ ಭಂಗ ಉಂಟು ಮಾಡುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನಿದ್ದ ಕೌಶಿಕ ಮುನಿ ನಂತರ ಕೋಪದಿಂದ ಅದರತ್ತ ದಿಟ್ಟಿಸಿದ. ತಕ್ಷಣವೇ ಆ ಕೊಕ್ಕರೆ ಇವನ ಕಣ್ಣೋಟ ತಡೆಯಲಾರದೇ ಸುಟ್ಟು ಭಸ್ಮವಾಗಿ ಕೆಳಗೆ ಉದುರಿತು. ಅದನ್ನು ಕಂಡು ಮುನಿಗೆ ತನ್ನ ತಪಃಶಕ್ತಿಯನ್ನು ಕಂಡು ಹೆಮ್ಮೆ ಎನಿಸಿತು.


ತಪಸ್ಸಿನ ನಡುವೆ ತನ್ನ ಆಹಾರದ ಅವಶ್ಯಕತೆಗಾಗಿ ಆತ ಸಮೀಪದ ಹಳ್ಳಿಗೆ ಭಿಕ್ಷಾಟನೆಗಾಗಿ ಹೋಗುತ್ತಿದ್ದ. ಒಮ್ಮೆ ಒಂದು ಮನೆಯೊಂದರ ಮುಂದೆ ನಿಂತು ಕೂಗಿದಾಗ ಮನೆಯೊಡತಿ ಹೊರಬರಲು ಬಹಳ ತಡ ಮಾಡಿದಳು. ತನ್ನ ಗಂಡ-ಅತ್ತೆ-ಮಾವ ಎಲ್ಲರ ಸೇವೆ ಮುಗಿಸಿದ ಮೇಲೆ ಆಕೆ ಭಿಕ್ಷೆ ಹಿಡಿದು ಹೊರಬಂದಳು. 


ಕಾಯುತ್ತಿದ್ದ ಕೌಶಿಕನಿಗೆ ಕೋಪ ತಡೆಯಲಾಗಿಲಿಲ್ಲ. ಜೊತೆಗೆ ತನ್ನ ತಪಸ್ಸಿನ ಶಕ್ತಿಯಿಂದ ಯಾರನ್ನು ಬೇಕಾದರೂ ಸುಟ್ಟು ಭಸ್ಮ ಮಾಡಬಲ್ಲೆ ಎಂಬ ಅಹಂಕಾರವೂ ಇತ್ತಲ್ಲ. ಹಾಗಾಗಿ ಕೋಪದಿಂದ ಆಕೆಯತ್ತ ದಿಟ್ಟಿಸಿದ. ಆಗ ಮನೆಯಾಕೆ "ನಿನ್ನ ಕಣ್ಣೋಟಕ್ಕೆ ಸುಟ್ಟು ಭಸ್ಮವಾಗಲು ನಾನು ಕೊಕ್ಕರೆಯಲ್ಲ" ಎಂದಳು. 


ಕೌಶಿಕನಿಗೆ ದಿಗ್ಭ್ರಮೆಯಾಯ್ತು. ಅಡವಿಯಲ್ಲಿ ನಡೆದಿರುವ ವಿಷಯ ಇವಳಿಗೆ ಹೇಗೆ ತಿಳಿದಿರಬಹುದು ಅಂತ ಅವನಿಗೆ ಅರ್ಥವಾಗದೇ ಗಲಿಬಿಲಿಯಿಂದ ಅವಳ ಮುಖ ನೋಡಿದ. 


ಅವಳು ನಕ್ಕು "ನಿನಗೆ ವೇದಗಳನ್ನೆಲ್ಲಾ ತಿಳಿದಿದ್ದೇನೆ ಎಂಬ ಹೆಮ್ಮೆ ಇರಬಹುದು. ಆದರೆ ಧರ್ಮವನ್ನು ನೀನು ಪೂರ್ತಿಯಾಗಿ ತಿಳಿದಿಲ್ಲ. ಪಟ್ಟಣದಲ್ಲಿ ಒಬ್ಬ ವ್ಯಾಧನಿದ್ದಾನೆ. ಧರ್ಮದ ಬಗ್ಗೆ ಅವನಿಗಿಂತಲೂ ತಿಳಿದವರು ಬೇರಾರೂ ಇಲ್ಲ. ಅವನ ಬಳಿ ಹೋದರೆ ನಿನ್ನೆಲ್ಲಾ ಸಂದೇಹಗಳಿಗೂ ಉತ್ತರ ಸಿಗುತ್ತದೆ" ಎಂದಳು.


ಕೌಶಿಕ ಮುನಿ ಪಟ್ಟಣದಲ್ಲಿ ವ್ಯಾಧನ ಸ್ಥಳವನ್ನು ಹುಡುಕುತ್ತಾ ಹೊರಟ. 


ಅದೊಂದು ಮಾಂಸದಂಗಡಿಯಾಗಿತ್ತು. ಅಂಗಡಿಯ ಯಜಮಾನ ಧರ್ಮವ್ಯಾಧ ಕೌಶಿಕನನ್ನು ಬರಮಾಡಿಕೊಳ್ಳುತ್ತಾ "ನಿಮ್ಮನ್ನು ಆ ಹಳ್ಳಿಯ ಹೆಂಗಸು ಇಲ್ಲಿಗೆ ಕಳಿಸಿರಬೇಕಲ್ವಾ?" ಎಂದ. ಕೌಶಿಕನಿಗೆ ಆಶ್ಚರ್ಯದ ಮೇಲೆ ಆಶ್ಚರ್ಯವಾಗುತ್ತಿತ್ತು. 


ಇಲ್ಲಿಯವರೆಗೂ ತಾನು ತಿಳಿದಿರುವುದೇ ಪ್ರಪಂಚ ಎಂದುಕೊಂಡಿದ್ದ. ತಾನು ಓದಿರುವುದೇ ವಿದ್ಯೆ, ತಾನು ಕಲಿತಿರುವುದೇ ಧರ್ಮ ಎಂಬ ಭಾವನೆ ಆತನಿಗಿತ್ತು. ಈಗ ಈ ಭಾವನೆ ನಿಧಾನವಾಗಿ ಕರಗಿ ಹರಿಯತೊಡಗಿತು. ತನಗಿಂತಲೂ ತಿಳಿದವರಿದ್ದಾರೆ ಎಂಬ ಅರಿವು ಆತನ ಅಹಂಕಾರವವನ್ನು ನಿಧಾನವಾಗಿ ಕರಗಿಸುತ್ತಾ ಬರುತ್ತಿತ್ತು.


ಆತ ಧರ್ಮವ್ಯಾಧನ ಬಳಿ ಕೈ ಜೋಡಿಸಿ ನಿಂತು "ದಯಮಾಡಿ ಧರ್ಮ ಎಂದರೇನು ಎಂಬ ವ್ಯಾಖ್ಯಾನವನ್ನು ನನಗೆ ಅರ್ಥ ಮಾಡಿಸಬೇಕು" ಎಂದು ಕೇಳಿದ. ಹಾಗೆ ಕೇಳುವಾಗ ಆತನಲ್ಲಿ ತಾನೊಬ್ಬ ತಿಳಿದವನು ಎಂಬ ಅಹಂಕಾರವಾಗಲೀ, ಆತ ಕೇವಲ ಮಾಂಸ ಮಾರುವವನು ಎಂದಾಗಲೀ ಯಾವ ಭಾವವೂ ಇಲ್ಲದೇ ಶೂನ್ಯನಾಗಿದ್ದ. 


ಆದರೆ ವ್ಯಾಧ ಅವನ ಮಾತಿಗೆ ವಿನಯದಿಂದ ನಕ್ಕು "ಸಕಲ ವೇದ ಪಾರಂಗತರಾದ ತಮ್ಮಂಥಾ ಪಂಡಿತರಿಗೆ ನಾನು ಧರ್ಮವೇನು ಅಂತ ಹೇಳಿಕೊಡಬೇಕೇ? ನನಗೆ ಧರ್ಮ ಎಂದರೇನು ಅಂತಲೇ ಅರಿವಿಲ್ಲ. ಆದರೆ ಜನರು ನಾನು ಮಾಡುತ್ತಿರುವುದೇ ಧರ್ಮ ಎನ್ನುತ್ತಾರೆ. ನನಗೆ ನನ್ನ ವೃತ್ತಿಯೇ ದೇವರು. ನಾನು ಮಾಂಸ ಮಾರುವ ಕೆಲಸ ಮಾಡುತ್ತಿದ್ದರೂ ಸಹ ಅತ್ಯಂತ ನಿಷ್ಠೆಯಿಂದ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರಿಂದ ಏನು ಸಿಗುತ್ತದೋ ಅದರಿಂದ ಸಂತೃಪ್ತನಾಗಿದ್ದೇನೆ. ನನ್ನನ್ನು ನಂಬಿರುವ ತಂದೆ, ತಾಯಿ, ಹೆಂಡತಿ , ಮಕ್ಕಳಿಗೆ ಯಾವುದೇ ಕೊರತೆ ಬರದ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಇದಲ್ಲದೇ ನಾನು ಯಾವುದೇ ಧರ್ಮಗ್ರಂಥ ಓದಿಲ್ಲ. ದೊಡ್ಡ ದೇವಸ್ಥಾನಗಳಿಗೆ ಭೇಟಿ ನೀಡಿಲ್ಲ. ತಪಸ್ಸಿಗಾಗಿ ಎಂದೂ ಸಮಯವೇ ಸಿಕ್ಕಿಲ್ಲ. ಲೌಕಿಕ ಮನುಷ್ಯನಾದ ನಾನು ನಿಮಗೆ ಧರ್ಮದ ಅರಿವು ಹೇಗೆ ಮೂಡಿಸಬಲ್ಲೆ?" ಎಂದ.


ಅವನ ಒಂದೊಂದು ಮಾತೂ ಕೌಶಿಕನಿಗೆ ಚಾಟಿ ಏಟಿನಂತಿತ್ತು. ವೇದಗಳನ್ನು ಓದಿದ ಮಾತ್ರಕ್ಕೆ, ವಿದ್ಯಾಭ್ಯಾಸ ಕಲಿತ ಮಾತ್ರಕ್ಕೆ ಧರ್ಮ ಪರಿಪಾಲನೆ ಆಗುವುದಿಲ್ಲ. ಧರ್ಮವನ್ನು ತಿಳಿದರೆ ಸಾಲದು. ಆಚರಣೆಗೆ ತರಬೇಕು, ಅದೇ ನಿಜವಾದ ಧರ್ಮ ಎಂಬ ಅರಿವು ಮೂಡಿತು. ಕೂಡಲೇ ತನ್ನ ತಪಸ್ಸನ್ನು ಕೈಬಿಟ್ಟು ವಯಸ್ಸಾದ ತನ್ನ ತಂದೆ-ತಾಯಿಯರ ಬಳಿ ನಡೆದ. ಅವರನ್ನು ನೋಡಿಕೊಳ್ಳುವುದಕ್ಕಿಂತಲೂ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಧರ್ಮವ್ಯಾಧನಿಂದಾಗಿ ಕೌಶಿಕ ಅರಿತ.

**********
-ಕೆ.ಎ.ಸೌಮ್ಯ
ಮೈಸೂರು

 Published in oh Manase 15-30 Aug 2019

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ