ಗಾಂಧಾರಿ

 


ಪ್ರೀತಿ ಕುರುಡು ಅಂತಾರೆ. ತಾಯಿ ಪ್ರೀತಿಯಂತೂ ಮತ್ತಷ್ಟು ಕುರುಡು. ಆಕೆ ತನ್ನ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಮಕ್ಕಳಿಗಿಂತಲೂ ಮೊದಲು ಆಕೆಯ ಜೀವನದಲ್ಲಿ ಪ್ರವೇಶಿಸುವುದು ಅವಳ ಪತಿ. 


ಅದಕ್ಕಾಗಿಯೇ ಹೆಣ್ಣು ತನ್ನ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಅವಳ ಹೃದಯದಲ್ಲಿ ಮೊದಲ ಜಾಗ ಇರುವುದು ಅವಳ ಪತಿಗೆ ಮಾತ್ರ. ಈ ವಿಷಯದಲ್ಲಿ ಗಾಂಧಾರಿ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾಳೆ. ದ್ವಾಪರಯುಗ ಕಳೆದು ಕಲಿಯುಗ ಬಂದರೂ ಆಕೆಯಂಥ ಮತ್ತೊಬ್ಬರು ಇದುವರೆಗೂ ಕಾಣಲು ಸಿಕ್ಕಿಲ್ಲ ಎಂದರೆ ಊಹಿಸಿ...


ಅದೆಂಥಹಾ ಪತಿ ಭಕ್ತಿ ಆಕೆಯದ್ದು ಅಂತ. ತನ್ನ ಕುರುಡು ಗಂಡ ನೋಡದ ದೃಶ್ಯಗಳು ತನಗೂ ಬೇಡ ಎಂದು ಜೀವನಪೂರ್ತಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡವಳು ಅವಳು. ತನಗೆ ಮಕ್ಕಳು ಹುಟ್ಟಿದಾಗಲೂ ಸಹ ಪಟ್ಟಿ ತೆರೆದು ನೋಡಿದವಳಲ್ಲ.


ಚಿಕ್ಕಂದಿನಿಂದಲೂ ಗಾಂಧಾರಿಗೂ ಸಹ ಎಲ್ಲರಂತೆ ಕತ್ತಲೆ ಎಂದರೆ ಭಯವಿತ್ತು. ಆದರೆ ರಾಜಕುಮಾರಿಯಾಗಿ ಅರಮನೆಯಲ್ಲಿ ಬೆಳೆದ ಅವಳಿಗೆ ಹಗಲು ರಾತ್ರಿ ಎನ್ನದೇ ಸದಾ ಬೆಳಕಿನ ಒಡನಾಟವಿತ್ತು. ಕತ್ತಲಾಗುತ್ತಿದ್ದಂತೆಯೇ ಆಕೆಯ ಸಖಿಯರು ನೂರಾರು ದೀಪ ಹಚ್ಚಿ ಅವಳ ಕೋಣೆಯನ್ನು ಬೆಳಗಿಸುತ್ತಿದ್ದರು. 


ಮಹಾನ್ ಸೌಂದರ್ಯವತಿಯಾದ ಗಾಂಧಾರಿ ಹಗಲಿನಲ್ಲಿ ಮತ್ತು ರಾತ್ರಿಯ ಬೆಳಕಿನಲ್ಲಿ ಹೊಳೆಯುವ ತನ್ನ ಸೌಂದರ್ಯ ನೋಡುತ್ತಾ ಮೈ ಮರೆಯುತ್ತಿದ್ದಳು. ತಾನೊಬ್ಬ ಸುಂದರ ರಾಜಕುಮಾರನನ್ನು ಮದುವೆಯಾಗಿ, ಅವನ ಮನದರಸಿಯಾಗುವ ಕನಸು ಕಾಣುತ್ತಿದ್ದಳು. ಅವನು ಸದಾ ತನ್ನ ಸೌಂದರ್ಯ ಸವಿಯುತ್ತಾ ತನ್ನ ಹಿಂದೆ ಮುಂದೆ ಸುತ್ತುತ್ತಿರಲಿ ಎನ್ನುವುದೇ ಅವಳ ಮಹದಾಸೆಯಾಗಿತ್ತು.


ಇಷ್ಟಲ್ಲದೇ ಮತ್ತೇನು ಆಸೆ ಇರಲು ಸಾಧ್ಯ ಒಬ್ಬ ಹೆಣ್ಣಿಗೆ? 


ತನ್ನ ಸೌಂದರ್ಯವನ್ನು ಹೊಗಳುವ ಮತ್ತು ತನ್ನನ್ನು ಅತಿಯಾಗಿ ಪ್ರೀತಿಸುವ ಒಬ್ಬ ಗಂಡಸಿನ ಹಂಬಲ ಬಿಟ್ಟರೆ ಮತ್ತೇನು ಆಸೆ ಪಡಲು ಸಾಧ್ಯ. ಅವಳೆಷ್ಟೇ ಸುಶಿಕ್ಷಿತೆಯಾಗಿರಲಿ, ಪ್ರೌಢಳಾಗಿರಲಿ.... ತನ್ನನ್ನು ನೋಡಿ ಮೆಚ್ಚುವ ಗಂಡು ಬೇಕು ಎಂದೇ ಎಲ್ಲರೂ ಬಯಸುವುದು. ಅಂಥ ಕನಸುಗಳು ಗಾಂಧಾರಿಗೂ ಇದ್ದವು. ಆದರೆ ಪಿತಾಮಹ ಭೀಷ್ಮನಿಂದ ಆಕೆಯ ಕನಸುಗಳೆಲ್ಲ ನುಚ್ಚು ನೂರಾಗಿ ಹೋಗುತ್ತವೆ. 


ಭೀಷ್ಮನೊಂದಿಗೆ ಯುದ್ಧ ಮಾಡಿ ಸೆಣಸಲಾಗದ ಆಕೆಯ ತಂದೆ, ತಾಯಿ ತಮ್ಮ ಮಗಳು ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಧಾರೆ ಎರೆದು ಕೊಡುತ್ತಾರೆ. ಮದುವೆಯಾದ ನಂತರವೇ ತನ್ನ ಗಂಡ ಒಬ್ಬ ದೃಷ್ಟಿಹೀನ ಎಂಬ ವಿಷಯ ಅವಳಿಗೆ ಗೊತ್ತಾಗುತ್ತದೆ.


ಅಂದರೆ.........


ಆತ ಜೀವಮಾನಪೂರ್ತಿ ತನ್ನನ್ನು ನೋಡಲಾರ, ತನ್ನ ಸೌಂದರ್ಯವನ್ನೂ ನೋಡಲಾರ. ಯಾರಿಗಾಗಿ ತಾನು ಸಿಂಗರಿಸಿಕೊಳ್ಳುತ್ತಿದ್ದೇನೆಯೋ ಆತನಿಗೆ ಆ ಸಿಂಗಾರ ಕಾಣುವುದೇ ಇಲ್ಲ. ಆಗ ಎಂತಹಾ ಹತಾಶೆ ಕಾಡಿದ್ದಿರಬಹುದು ಆಕೆಗೆ. ಆ ಸಮಯದಲ್ಲಿ ಏನೇನು ಮಾತುಗಳು ಆಕೆಯ ಬಾಯ್ತುದಿಗೆ ಬಂದಿರಬಹುದು. 


ಭೀಷ್ಮ ಪಿತಾಮಹನೇ ಇರಲಿ, ಅಥವಾ ಬೇರೆಯವರೇ ಇರಲಿ... 


'ನನ್ನ ಬಾಳು ಹಾಳು ಮಾಡಿದಿರಲ್ರೋ' ಅಂತ ಅವರಿಗೆಲ್ಲ ಅದೆಷ್ಟು ಶಾಪ ಹಾಕಬಹುದಿತ್ತು ಆಕೆ. ಮನಸಾರೆ ಎಲ್ಲರನ್ನೂ ನಿಂದಿಸಿ ಕಡೆಗೆ ಹತಾಶೆ ತಡೆಯಲಾಗದೇ ಮೂಲೆ ಸೇರಿ ಅಳಬಹುದಿತ್ತು. ಯಾವ ವಿಷಯದ ಬಗ್ಗೆಯೂ ಆಸಕ್ತಿ ತೋರಿಸದೇ ಸದಾ ಮಂಕಾಗಿ ಒಂದು ಮೂಲೆಯಲ್ಲಿ ಕುಳಿತು ಜೀವನ‌ ಸವೆಸಬಹುದಿತ್ತು. ಆದರೆ ಗಾಂಧಾರಿ ಅಂತಹಾ ಜೀವನವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.


ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಳು. ಬಂದದ್ದನ್ನು ಬಂದಂತೆಯೇ ಸ್ವೀಕರಿಸಿದಳು. ಅವಳ ತಂದೆ-ತಾಯಿಗಾಗಲೀ ಅಥವಾ ಇಡೀ ರಾಜಮನೆತನದವರಿಗಾಗಲೀ ಯಾರಿಗೂ ಇಲ್ಲದ ಒಂದು ಪ್ರಬುದ್ಧತೆ ಪ್ರದರ್ಶಿಸಿದಳು. ತನ್ನ ಪತಿ ನೋಡಲಾಗದ ಜಗತ್ತು ತನಗೂ ಬೇಡ ಎಂದು ನಿರ್ಧರಿಸಿ ಥೇಟ್ ಸೀತಾ ಮಾತೆಯಂತೆಯೇ ಪತಿಯ ದಾರಿಯನ್ನು ತನ್ನದಾಗಿಸಿಕೊಂಡಳು. 


ಎಲ್ಲರೂ ಇದು ಹತಾಶೆಯ ಸ್ಥಾಯೀಭಾವ, ಸ್ವಲ್ಪ ದಿನ ಕಳೆದ ನಂತರ ಮೊದಲಿನಂತಾಗುತ್ತಾಳೆ ಎಂದುಕೊಂಡರು. ಆದರೆ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುವ ಅವಳ ನಿರ್ಧಾರವನ್ನು ವಿರೋಧಿಸಿ ಮಾತನಾಡುವ ಧೈರ್ಯ ಯಾರಲ್ಲಿಯೂ ಉಳಿದಿರಲಿಲ್ಲ. ಎಲ್ಲರೂ ಸೇರಿಯೇ ಅವಳನ್ನು ಬಲಿಪಶು ಮಾಡಿದ್ದರು. 


ಅದಕ್ಕೆ ಕಾರಣ ಪರಿಸ್ಥಿತಿಯೇ ಇರಬಹುದು. ಆದರೆ ಅದಕ್ಕಾಗಿ ಗಾಂಧಾರಿಯ ಜೀವನ ಬಲಿಯಾಗಿ ಹೋಗಿತ್ತು. ಒಂದು ರೀತಿ ಆಕೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದು ಒಳ್ಳೆಯದೇ ಆಯ್ತು. ತನ್ನ ಕಣ್ಣು ಮುಚ್ಚಿಕೊಂಡು ಆ ತಪ್ಪಿತಸ್ಥ ಮುಖಗಳನ್ನು ನೋಡುವುದರಿಂದ ತಪ್ಪಿಸಿಕೊಂಡಳು.


ಗಂಡ ಕುರುಡನಾಗಿದ್ದಾಗ ತಾನೇ ರಾಜ್ಯದ ನಿಯಂತ್ರಣ ತೆಗೆದುಕೊಳ್ಳಬಹುದಿತ್ತು ಅಥವಾ ತನ್ನ ಮಕ್ಕಳನ್ನಾದರೂ ಆಕೆ ಸರಿಯಾಗಿ ತಿದ್ದಿ ಬೆಳೆಸಬಹುದಿತ್ತು ಅಂತ ನಾವು ಯೋಚಿಸುತ್ತೇವೆ. ನಿಜ. ಎಲ್ಲಾ ಸರಿಯಿದ್ದಾಗ ಬೇರೆಯವರ ಬಗ್ಗೆ ಯೋಚಿಸುವುದು ಸುಲಭ. ಆದರೆ ಆ ಪರಿಸ್ಥಿತಿಯಲ್ಲಿ ನಿಂತು ನೋಡಿದಾಗ ಗಾಂಧಾರಿ ತನಗೆ ತೋಚಿದ ರೀತಿಯಲ್ಲಿ ನಡೆದುಕೊಂಡಳು ಎನ್ನುವುದು ಗೊತ್ತಾಗುತ್ತದೆ. 


ಗಾಂಧಾರಿ ತನಗನ್ನಿಸಿದ್ದನ್ನು ಧೈರ್ಯವಾಗಿ ಮಾಡಿ ತೋರಿಸಿದಳು. ಒಬ್ಬ ಆದರ್ಶ ನಾರಿ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾಳೆ. ಅವಳು ಶಾಸ್ತ್ರವನ್ನು ಮೀರಿಲ್ಲವಾದ್ದರಿಂದ ಆಕೆ ಮಾಡಿದ್ದು ತಪ್ಪು ಎನ್ನುವ ನೈತಿಕತೆ ಯಾರಿಗೂ ಇರಲಿಲ್ಲ.


ಇನ್ನು ಮಕ್ಕಳನ್ನು ತಿದ್ದುವ ವಿಷಯ ತೆಗೆದುಕೊಂಡರೆ ಪ್ರತಿಯೊಬ್ಬ ಮನುಷ್ಯನೂ ತನ್ನ ಕರ್ಮಗಳಿಗೆ ಅನುಸಾರವಾಗಿ ಪ್ರತಿಫಲ ಪಡೆಯುತ್ತಾನೆ. ಮಕ್ಕಳೂ ಅಷ್ಟೇ... ತಾವು ಮಾಡಿದ್ದನ್ನು ತಾವು ಅನುಭವಿಸುತ್ತಾರೆ. ಅವರ ಪಾಪ ಕೃತ್ಯಗಳಿಗೆ ಗಾಂಧಾರಿಯ ಪತಿ ಭಕ್ತಿಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ. 


ಯಾವ ಸ್ತ್ರೀ ತಾನೇ ಜೀವಮಾನಪರ್ಯಂತ ತನ್ನನ್ನು ತಾನೇ ನೋಡಿಕೊಳ್ಳದಿರುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ? ನಿಜಕ್ಕೂ ಅವಳ ಆ ನಿರ್ಧಾರ ಬಹಳ ಉನ್ನತ ಮಟ್ಟದ್ದು. ತಾನು ತೆಗೆದುಕೊಂಡ ನಿರ್ಧಾರವನ್ನು ತಾನೇ ಮೀರದೇ ಪ್ರಬುದ್ಧತೆ ತೋರಿದ ಅವಳ ಸಹನೆಗೆ, ತನ್ನ ಮಾತಿನ ಕುರಿತಾದ ಅವಳ ಬದ್ಧತೆಗೆ ನಾವು ಶರಣಾಗಲೇಬೇಕು.

Published in oh Manase on 16-30 July 2019

**************
 ಕೆ.ಎ.ಸೌಮ್ಯ
 ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ