ಅಶೋಕ ಸುಂದರಿ
ನಾವೆಲ್ಲರೂ ತಿಳಿದಿರುವ ಹಾಗೆ ಈಶ್ವರ-ಪಾರ್ವತಿಯರಿಗೆ ಇಬ್ಬರು ಗಂಡು ಮಕ್ಕಳು. ಗಣೇಶ ಮತ್ತು ಸುಬ್ರಹ್ಮಣ್ಯ. ಆದರೆ ಮನುಷ್ಯರಿಗಾಗಲೀ ಅಥವಾ ದೇವತೆಯರಿಗಾಗಲೀ ಇಲ್ಲದ ವಸ್ತುವಿನ ಮೇಲೆಯೇ ವ್ಯಾಮೋಹ ಜಾಸ್ತಿ. ಅದರಂತೆ ಪಾರ್ವತಿಗೂ ಇಬ್ಬರು ಗಂಡುಮಕ್ಕಳಿದ್ದರೂ ಸಹ ತನಗೊಂದು ಹೆಣ್ಣು ಮಗು ಬೇಕು ಎಂಬ ಆಸೆ ಒಳಗಿಂದೊಳಗೇ ಇದ್ದಿತ್ತು. ಆದರೆ ಅಕೆ ಎಂದೂ ಬಾಯಿ ಬಿಟ್ಟು ಹೇಳಿರಲಿಲ್ಲ.
ಒಮ್ಮೆ ಪಾರ್ವತಿಗೆ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಉದ್ಯಾನವನಕ್ಕೆ ಹೋಗಬೇಕು ಅಂತನಿಸುತ್ತದೆ. ಆಗ ಶಿವ ತನ್ನ ಸತಿಯನ್ನು ದೇವಲೋಕದ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಾನೆ. ದಂಪತಿಗಳು ತಿರುಗಾಡುತ್ತಾ ಸುಸ್ತಾಗಿ ಹಾಗೆಯೇ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತುಕೊಳ್ಳುತ್ತಾರೆ.
ಅದು ಕಲ್ಪವೃಕ್ಷವಾಗಿರುತ್ತದೆ.
ಪಾರ್ವತಿ ದೇಹದ ಆಯಾಸ ಶಮನ ಮಾಡುತ್ತಾ ತನ್ನ ಯೋಚನೆಯಲ್ಲಿ ಮುಳುಗುತ್ತಾಳೆ. ಮನಸ್ಸು ಮರ್ಕಟ ನೋಡಿ. ಆಕೆಯ ಮನದೊಳಗೆ ಸುಪ್ತವಾಗಿದ್ದ ಹೆಣ್ಣು ಬೇಕು ಎಂಬ ಆಸೆ ಒಳಗಿಂದೊಳಗೇ ಯಾವಾಗಲೂ ಪುಟಿಯುತ್ತಿರುತ್ತದೆ. ಈಗಲೂ ಅದೇ ಯೋಚನೆ ಆಕೆಗೆ. ಗಂಡನಿಗಾದರೆ ಹೆಂಡತಿ ತನ್ನ ಆಸೆಯನ್ನು ಬಾಯಿ ಬಿಟ್ಟು ಹೇಳಬೇಕು. ಆದರೆ ಇದು ಕಲ್ಪವೃಕ್ಷ. ನಾವು ಮನಸ್ಸಿನಲ್ಲಿ ಬಯಸಿದ್ದು ಸಹ ವೃಕ್ಷ ಅರ್ಥ ಮಾಡಿಕೊಳ್ಳುತ್ತದೆ.
ಬಯಸಿದ್ದು ಕ್ಷಣ ಮಾತ್ರದಲ್ಲಿ ಕಣ್ಮುಂದೆ ಸಿಗುತ್ತದೆ.
ಹೆಣ್ಣುಮಗುವಿನ ಧ್ಯಾನದಲ್ಲಿಯೇ ಆಸಕ್ತಳಾದ ಅವಳ ಆಸೆಯನ್ನು ವೃಕ್ಷವು ಕ್ಷಣಮಾತ್ರದಲ್ಲಿ ಕಂಡುಕೊಳ್ಳುತ್ತದೆ. ಅಂತೆಯೇ ಪಾರ್ವತಿಯ ಮನದಾಳದ ಇಚ್ಚೆಯನ್ನು ಅರ್ಥ ಮಾಡಿಕೊಳ್ಳುವ ವೃಕ್ಷ ಆಕೆಗೆ ಹೆಣ್ಣ ಮಗುವೊಂದನ್ನು ದಯಪಾಲಿಸುತ್ತದೆ.
ಆಕೆಯೇ ಅಶೋಕ ಸುಂದರಿ.
ಅಶೋಕ ಎಂದರೆ ಶೋಕವಿಲ್ಲದವಳು. ಆಕೆ ಬಹಳ ಸುಂದರಿಯೂ ಆಗಿದ್ದರಿಂದ ಪಾರ್ವತಿಯ ಶೋಕ ನಿವಾರಣೆಗೆಂದು ಬಂದ ಆಕೆ ಅಶೋಕ ಸುಂದರಿಯಾಗುತ್ತಾಳೆ. ಆದರೆ ಪುರಾಣದಲ್ಲಿ ನಾವು ಕೇವಲ ಗಣೇಶ ಮತ್ತು ಸುಬ್ರಹ್ಮಣ್ಯರ ಬಗ್ಗೆ ಮಾತ್ರ ಕೇಳಿ ತಿಳಿದಿದ್ದೇವೆ. ಪಾರ್ವತಿಯ ಮಗಳ ಬಗ್ಗೆ ಉಲ್ಲೇಖ ಎಲ್ಲಿಯೂ ಸಿಗುವುದಿಲ್ಲ. ಆಕೆ ಹುಟ್ಟುವಾಗಲೇ ಮುಂದಾಗುವ ಭವಿಷ್ಯವನ್ನು ಮೊದಲೇ ಕಾಣುವ ಶಕ್ತಿ ಪಡೆದು ಹುಟ್ಟಿದ್ದಳಂತೆ.
ಎಷ್ಟೇ ಆಗಲಿ ಬೇಡಿದ್ದನ್ನು ಕೊಡುವ ಕಲ್ಷವೃಕ್ಷದ ವರವಲ್ಲವೇ ಆಕೆ?
ಹಾಗಾಗಿ ಆಕೆಗೆ ತಾನೇ ಭಾರತದ ಕುರುಕ್ಷೇತ್ರಕ್ಕೆ ನಾಂದಿ ಹಾಡುವ ಮೊದಲ ಮೆಟ್ಟಿಲು ಅಂತ ಮೊದಲೇ ತಿಳಿದಿತ್ತು. ಆಕೆ ಇಂದ್ರನ ಸಮಾನನಾದ ವೀರನನ್ನು ವರಿಸುತ್ತಾಳೆ ಎಂದು ಮಾತೆ ಪಾರ್ವತಿಯಿಂದಲೂ ವರ ಪಡೆದಿದ್ದಳು.
ಒಟ್ಟಿನಲ್ಲಿ ಅಶೋಕ ಸುಂದರಿಯು ಪಾರ್ವತಿಯ ಹೆಣ್ಣುಮಗುವಿನ ಕೊರತೆಯನ್ನು ನೀಗಿಸಿದಳು. ಮನುಜರಾಗಲೀ ಅಥವಾ ದೇವರಾಗಲೀ ಹೆಣ್ಣು ಹೆತ್ತರೇನೇ ಅವರ ಜೀವನ ಸಾರ್ಥಕ. ಏಕೆಂದರೆ ಮಮತೆಯಿಂದ ಸಾಕಿದ ಮಗಳನ್ನು ಯಾವುದೇ ಮೋಹವಿಲ್ಲದೇ ಮತ್ತೊಬ್ಬರ ವಶಕ್ಕೆ ಒಪ್ಪಿಸುವುದು ಎಂದರೆ ಸುಮ್ಮನೆ ಅಲ್ಲ. ಅವಳ ಮೇಲಿನ ಮಮಕಾರ, ಪ್ರೀತಿ, ಮಮತೆ ಎಲ್ಲವನ್ನೂ ತೊರೆದು ಆಕೆಯನ್ನು ತನ್ನದೇ ಸಂಸಾರ ನಡೆಸಲು ಕಳಿಸಬೇಕಾಗುತ್ತದೆ.
ಯುದ್ಧಕ್ಕೆ ಹೋದ ಮಗ ಮರಳಿ ಬರಬಹುದು. ಆದರೆ ಮದುವೆಯಾಗಿ ಹೋದ ಮಗಳು ಎಂದಿಗೂ ಬರಲಾರಳು. ಹಾಗಾಗಿ ಹೆಣ್ಣು ಹೆತ್ತವರು ಶಾಶ್ವತವಾಗಿ ಮಗಳನ್ನು ಕಳೆದುಕೊಳ್ಳಲು ತಯಾರು ಇರಬೇಕಾಗುತ್ತದೆ.
ಹಾಗಂತ ವಯಸ್ಸಿಗೆ ಬಂದ ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತೆಯೂ ಇಲ್ಲ. ಅವಳು ಪ್ರಾಪ್ತ ವಯಸ್ಕಳಾದ ಮೇಲೆ ಅವಳಿಗೆ ಮದುವೆ ಮಾಡಲೇ ಬೇಕಲ್ಲ. ಶೋಕ ನಿವಾರಣೆಗೆಂದು ಬಂದ ಮಗಳು ಎಂದು ಹಾಗೆಯೇ ತಮ್ಮಲ್ಲಿಯೇ ಉಳಿಸಿಕೊಳ್ಳುವಂತಿಲ್ಲ. ಶಾಸ್ತ್ರ, ಸಂಪ್ರದಾಯದ ಆಚರಣೆ ಮಾಡಲೇಬೇಕು.
ಹಾಗಾಗಿ ಅವಳನ್ನು ಮಹಾರಾಜ ನಹುಷನಿಗೆ ಕೊಟ್ಟು ಮದುವೆ ಮಾಡುತ್ತಾರೆ. ನಹುಷ ಒಂದು ಕಾಲದಲ್ಲಿ ಇಂದ್ರಾಧಿಪತಿಯಾಗಿ ಮೆರೆದಿದ್ದವನು. ಹಾಗಾಗಿ ಅಶೋಕ ಸುಂದರಿಯು ಇಂದ್ರನಂತೆಯೇ ಬಲಶಾಲಿಯಾದ ಪುರುಷನನ್ನು ಮದುವೆಯಾದಂತಾಯಿತು.
ಅವಳು ಕಂಡಿದ್ದ ಭವಿಷ್ಯ ನಿಜವಾಯಿತು.
ಮುಂದೆ ಅಶೋಕ ಸುಂದರಿ ಮತ್ತು ನಹುಷರಿಗೆ ಯಯಾತಿ ಎಂಬ ಒಬ್ಬ ಮಗ ಮತ್ತು ನೂರು ಜನ ಹೆಣ್ಣುಮಕ್ಕಳು ಹುಟ್ಟುತ್ತಾರೆ. ಯಯಾತಿಯಿಂದಲೇ ಕುರುವಂಶ ಆರಂಭವಾಗುತ್ತದೆ. ಮುಂದೆ ಇದು ದಾಯಾದಿಗಳ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.
.
ಹಾಗಾದರೆ ಪಾರ್ವತಿಗೆ ಉದ್ಯಾನವನ ನೋಡಬೇಕು ಅನ್ನಿಸಿದ್ದು, ಕಲ್ಪವೃಕ್ಷದ ಕೆಳಗೆ ಕೂತು ಹೆಣ್ಣುಮಗುವಿನ ಧ್ಯಾನ ಮಾಡಿದ್ದು ಎಲ್ಲವೂ ನಿಯತಿಗೆ ಅನುಗುಣವಾಗಿಯೇ ನಡೆದಿದೆ. ಮುಂದಾಗುವುದನ್ನು ಕಾಣಬಲ್ಲ ದೇವತೆಗಳೂ ಸಹ ನಿಯತಿಯಿಂದ ಹೊರತಲ್ಲ. ವಿಧಿ ಎಲ್ಲರಿಗೂ ಒಂದೇ.
(15-30 Dec 2019 ಓ ಮನಸೇಯಲ್ಲಿ ಪ್ರಕಟವಾಗಿದೆ)
(15-30 Dec 2019 ಓ ಮನಸೇಯಲ್ಲಿ ಪ್ರಕಟವಾಗಿದೆ)
***********************
ಕೆ.ಎ.ಸೌಮ್ಯ
ಮೈಸೂರು
ಕೆ.ಎ.ಸೌಮ್ಯ
ಮೈಸೂರು
