ದ್ರೌಪದಿ ಕೃಷ್ಣನಿಗೆ ಏನಾಗಬೇಕು?

 


ಅದು ಧರ್ಮರಾಯ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಸುತ್ತಿದ್ದಂತಹ ಸಮಯ. ಹಿರಿಯರು, ದೇವಾನುದೇವತೆಗಳು, ವಿಶ್ವವಂದ್ಯರೆಲ್ಲಾ ಆ ಸಭೆಯಲ್ಲಿದ್ದಾರೆ. ಅಂತಹಾ ತುಂಬಿದ ಸಭೆಯಲ್ಲಿ ಶಿಶುಪಾಲ ಶ್ರೀಕೃಷ್ಣನಿಗೆ ಕೇಳುತ್ತಾನೆ...


"ದ್ರೌಪದಿ ನಿನಗೆ ಏನಾಗಬೇಕು?"


ಇದು ನಮ್ಮ-ನಿಮ್ಮಂಥಾ ಸಾಮಾನ್ಯರು ಯೋಚಿಸುವಂಥದ್ದು. ಆದರೆ ನೀಚರ ಯೋಚನೆಯೇ ಬೇರೆ.  ಅವರ ಪ್ರಕಾರ ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಭಾತೃತ್ವ ಇಲ್ಲದಿದ್ದರೆ, ಅವರಿಬ್ಬರ ನಡುವೆ ಇರುವುದೊಂದೇ ಲೈಂಗಿಕ ಸಂಬಂಧ. ಅವರ ಯೋಚನೆಯ ಮಟ್ಟವೇ ಅಷ್ಟು.. ಅವರೆಂದೂ ಆ ಮಟ್ಟ ಮೀರಲಾರರು. 


ಈ ಕೀಳುಮಟ್ಟದ ಯೋಚನೆಗಾಗಿ ಶಿಶುಪಾಲ ಶ್ರೀಕೃಷ್ಣನಿಂದ ಹತನಾಗುತ್ತಾನೆ.  ಆದರೆ ಅವನು ಎತ್ತಿದ್ದ ಪ್ರಶ್ನೆಗೆ ಉತ್ತರವೇನು? 


ಈ ಪ್ರಶ್ನೆ ದ್ರೌಪದಿಗೂ ಸಹ ಸದಾ ಕಾಡುತ್ತಿತ್ತು. ಏಕೆಂದರೆ ಅವಳೂ ನಮ್ಮ ನಿಮ್ಮೆಲ್ಲರ ಹಾಗೆ ಈ ಭೂಮಿಯ‌ ಮೇಲೆ  ಹುಟ್ಟಿದವಳು. ಹುಟ್ಟುವ ಮುಂಚೆ  ಅವಳ್ಯಾವ  ದೇವತೆಯೋ, ಅಪ್ಸರೆಯೋ ನಮಗೆ ಗೊತ್ತಿಲ್ಲ. ಅಪ್ಸರೆ ಅಥವಾ ದೇವತೆಗಳಿಗೆ  ಈ ಕಾನೂನು ಅನ್ವಯಿಸುವುದೂ ಇಲ್ಲ.  


ಆದರೆ ಭೂಮಿಯ ಮೇಲೆ ಎಂತಹಾ ರಾಜ ಮನೆತನದಲ್ಲಿ ಹುಟ್ಟಿದರೂ ಸಹ ಸ್ತ್ರೀ ಆದವಳು ಹುಟ್ಟಿದ ಮೇಲೆ ಜೀವನದಲ್ಲಿ ಒಮ್ಮೆಯಾದರೂ ಎದುರಿಸಲೇಬೇಕಾದ ಪ್ರಶ್ನೆಗಳಿವು... 


ದ್ರೌಪದಿ ತನ್ನನ್ನು ತಾನೇ ಕೇಳಿ ಕೊಳ್ಳುತ್ತಾಳೆ. 


ದ್ರೌಪದಿಗೆ ಈಗಾಗಲೇ ಐವರು ಗಂಡಂದಿರಿದ್ದಾರೆ. ಇಷ್ಟವಿದ್ದೋ ಇಲ್ಲದೆಯೋ ಅವಳು ಅವರುಗಳ ಜೊತೆ ಸಂಸಾರ ಮಾಡುತ್ತಲೂ ಇದ್ದಾಳೆ.


ಧರ್ಮರಾಯನಂತಹ ಧರ್ಮಿಷ್ಠ, ಸಾಹಸಿ ಅರ್ಜುನ, ಬಲವಂತ ಭೀಮ, ಸುರಸುಂದರಾಂಗ ಸಹದೇವ, ಮುಗ್ಧನಾದ ನಕುಲ.. ಇವರೆಲ್ಲರ ಸಾಂಗತ್ಯವಿದ್ದು ಆಕೆ ಇವುಗಳೆಲ್ಲದರ ಆಚೆ ಮತ್ತೊಂದು ಸಹಜೀವವನ್ನು ಬಯಸುತ್ತಾಳೆಯೇ? ತನ್ನ‌ ಕಷ್ಟದ ಸಮಯದಲ್ಲಿ ಆಕೆಗೆ ತನ್ನ ಪತಿಯರಲ್ಲದೇ ತನಗೆ ಏನೇನೂ ಅಲ್ಲದ ಕೃಷ್ಣ ನೆನಪಿಗೆ ಬರುತ್ತಾನೆಂದರೆ..??


ಇದೊಂದು ರೀತಿ ಯಾವ ಬಂಧವನ್ನೂ ಬೇಡದ, ಯಾವ ಕಾನೂನು ಕಟ್ಟಲೆಗಳನ್ನೂ ಒಳಗೊಳ್ಳದ, ಯಾವ ಸಂಕೋಲೆಗಳಿಂದಲೂ ಬಂಧಿಸಲಾಗದ "ಬಂಧ" !!!


ಊಹೂಂ ಹೀಗೆ ಹೇಳಿದರೆ ಯಾರಿಗೂ ಅರ್ಥವಾಗೋಲ್ಲ.  ಏಕೆಂದರೆ ಒಂದು ಗಂಡು, ಒಂದು ಹೆಣ್ಣು ಇದ್ದರೆ ಅದಕ್ಕೊಂದು ಸಂಬಂಧ ನೀಡಲೇಬೇಕು ನಾವು. ಸಂಬಂಧಗಳ ಆಚೆಯೂ ಬಂಧಗಳು ಬೆಳೆಯುತ್ತವೆ ಎನ್ನುವುದನ್ನು ನಾವು ಒಪ್ಪಲು ತಯಾರಿಲ್ಲ. ಎರಡು ಆಯಾಮಗಳಲ್ಲಿ ಬದುಕುವವರು ಮೂರನೇ ಆಯಾಮದ ಬಗ್ಗೆ ಯೋಚಿಸದ ಹಾಗೆ, ನಮ್ಮ ಕಣ್ಣಿಗೆ ಕಾಣದ ಇನ್ನೊಂದು ಹೊಸ ಸಾಧ್ಯತೆ ಬಗ್ಗೆ ಯೋಚಿಸುವುದಿಲ್ಲ ನಾವು. 


ಹಾಗಾಗಿಯೇ ಪುರಾಣವನ್ನು ಓದುವಾಗ ದ್ರೌಪದಿಗೆ ಕೃಷ್ಣ ಸಹೋದರನ ಸಮಾನ ಎಂದು ನಮಗೆ ನಾವೇ ಮನನ ಮಾಡಿ ಕೊಳ್ಳುತ್ತೇವೆ. 


ಆದರೆ ಇದು ಅವಶ್ಯಕವೇ...?


ಯಾವ ಕಟ್ಟುಪಡಿಗೂ ಒಳಪಡದ ಒಂದು ಸಾಂಗತ್ಯಕ್ಕೆ ಸಂಬಂಧದ ಹೆಸರು  ನೀಡಲೇಬೇಕೆ? ಅಣ್ಣ, ತಮ್ಮ, ಗಂಡ, ಪ್ರಿಯಕರ ಅಥವಾ ಸ್ನೇಹಿತ... ಇವರಲ್ಲಿ ಅವನು ಯಾರಾದರೂ ಆಗಿರಲೇಬೇಕೆ? 


ದ್ರೌಪದಿ ಅವನಲ್ಲಿ ತನ್ನ ಮನದಾಳದ ಮಾತುಗಳನ್ನು ಯಾವುದೇ ಮುಜುಗರ ಇಲ್ಲದೇ ಹಂಚಿಕೊಳ್ಳಬಲ್ಲಳು. ತನ್ನ ಆಸೆ  ಕನಸುಗಳನ್ನು ಹೇಳಿಕೊಳ್ಳಬಲ್ಲಳು. 


ಏಕೆಂದರೆ ಎಲ್ಲರಂತೆ ಈತ ತನ್ನನ್ನು ಅಪಹಾಸ್ಯ ಮಾಡುವುದಿಲ್ಲ. ತನ್ನ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುವುದಿಲ್ಲ.  ತಾನು ಹೇಳದೆಯೂ ಆ  ಪುಣ್ಯಾತ್ಮ  ತನ್ನ ಮನಸಿನಲ್ಲಿ ಇರುವುದನ್ನು ಅರಿತುಕೊಳ್ಳುತ್ತಾನೆ. 


ಅರಿಯುವುದಷ್ಟೇ ಅಲ್ಲ ಅದರಂತೆನಡೆದುಕೊಳ್ಳುತ್ತಾನೆ. ಎಷ್ಟೊ ಬಾರಿ ತನ್ನ ಗಂಡಂದಿರೇ ತನ್ನ ಮನಸ್ಸಿನಲ್ಲಿ ಏನಿದೆ ಎಂದು ಅರಿಯುವುದರಲ್ಲಿ ವಿಫಲರಾಗುತ್ತಾರೆ
 

ಹಾಗಾದರೆ ಇವನು ಯಾರು....?


ಸಹೋದರನೇ? 


ಅಲ್ಲ... ಏಕೆಂದರೆ ಸಹೋದರನಾದರೆ ಕೇವಲ ತನ್ನ  ಹಿತಚಿಂತನೆಯೊಂದೇ  ಯೋಚನೆಯಾಗಿ ಬಿಡುತ್ತದೆ. 


ಹಾಗಾದರೆ ಪ್ರಿಯಕರನೇ? 


ಅಲ್ಲ.‌... ಏಕೆಂದರೆ ಪ್ರೀತಿಸಲು ತೊಡಗಿದರೆ ಜಗತ್ತೇ ಮರೆತು ಹೋಗುತ್ತದೆ. ಹಾಗಾಗಿ ಪ್ರೀತಿಯಲ್ಲ. 


ಹಾಗಾದರೆ ಗಂಡನೇ...? 


ಅದೂ ಅಲ್ಲ.. ಗಂಡನಾದರೆ ಮೋಹ ಹೆಚ್ಚಾಗಿ ನನ್ನ ಮನದಾಳದ ಮಾತು ಇವನಿಗೆ ತಲುಪದೇ ಹೋಗಬಹುದು. ಆಗ ನನ್ನ ಮನದಂತೆ ಗ್ರಹಿಸಿ ನಡೆದುಕೊಳ್ಳುವುದು ಕಷ್ಟ ಆಗಬಹುದು.


ಹಾಗಾದರೆ ಇದು ಗೆಳೆತನವೇ?


ಇರಬಹುದು......!!


ಏಕೆಂದರೆ ಗೆಳೆತನಕ್ಕೆ ಹೀಗೇ ಇರಬೇಕು ಎಂಬ ವ್ಯಾಖ್ಯಾನೆಯಿಲ್ಲ. ಗೆಳೆಯನಿಂದ ಆಗ್ಗಾಗ್ಗೆ ಕಾಲೆಳೆಸಿಕೊಳ್ಳುತ್ತಾ, ಸಹೋದರನಾಗಿ ಬುದ್ಧಿ ಹೇಳುತ್ತಾ, ಪ್ರಿಯಕರನಿಗಿಂತಲೂ ಹೆಚ್ಚು ಪ್ರೀತಿಸುತ್ತಾ, ಗಂಡನಿಗಿಂತಲೂ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾ, ಒಮ್ಮೆ ನಗಿಸುತ್ತಾ, ಒಮ್ಮೆ ಕಣ್ಣೀರು ಒರೆಸುತ್ತಾ ಇರುವ ಸಂಬಂಧಕ್ಕೆ ಏನೆಂದು ಹೆಸರಿಡುವುದು? 


ಬಹುಶಃ ಎಲ್ಲಾ ಮಹಿಳೆಯರಿಗೂ ಕೃಷ್ಣನಂತಹಾ ಆಪ್ತ ಸಖನ ಅವಶ್ಯಕತೆಯಿದೆ. ಒಂದು ರೀತಿ ಕೌನ್ಸಲರ್ ಅವನು. ನಮ್ಮ‌ ಕೀಳರಿಮೆ ಹೋಗಲಾಡಿಸಿ, ನಮ್ಮ ಸಾಧನೆಗೆ ಊರುಗೋಲಾಗುವವನು. ಮತ್ತು ಯಾವುದೇ ಬಂಧವಿಲ್ಲದೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿರುವವನು. ನಮ್ಮನ್ನು ನಮ್ಮ ಆಲೋಚನೆಗಳಲ್ಲಿ ಸ್ವತಂತ್ರವಾಗಿಸುವವನು.


ಅಂಥವನು ನಿಜಕ್ಕೂ ಸಿಗುತ್ತಾನೆಯೇ....?

Oh Manase on (16-30) november 2018

**********************

ಕೆ. ಎ. ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ