ಮಹಾ ಪತಿವ್ರತೆ ಸತಿ


 

ಅವಳು ಕಾಯುತ್ತಲೇ ಇದ್ದಳು. ಆಹ್ವಾನ ಆಗ ಬರಬಹುದು, ಈಗ ಬರಬಹುದು ಅಂತ.‌ ಕೈಲಾಸಕ್ಕೇನು ಬಾಗಿಲೇ, ಕಿಟಕಿಯೇ, ಮತ್ತೊಂದೇ? ಎಲ್ಲಿಂದ ಕುಳಿತು ನೋಡಿದರೂ ಬರುವವರು ನೇರವಾಗಿ ಕುಳಿತಲ್ಲಿಗೇ ಕಾಣುತ್ತಿದ್ದರು. ಆದರೂ ಯಾರೂ ಬರದೇ ಇರುವುದು ಅವಳ ಆತಂಕ ಹೆಚ್ಚಿಸಿತ್ತು. 


ಕುಳಿತಿರಲಾರದೇ ಎದ್ದು ಓಡಾಡತೊಡಗಿದಳು. ಯಾರಲ್ಲಿ ಹೇಳಿಕೊಳ್ಳುವುದು ಈ ಆತಂಕವನ್ನು? ಗಂಡನ ಮನೆ ಎಂದಿಗೂ ಗಂಡನ ಮನೆಯೇ... ಅಲ್ಲಿ ಅವಳ ಒಳಮನಸ್ಸಿನ ಮರ್ಮವನ್ನು ತಾವಾಗಿಯೇ ಅರಿತು ಅದಕ್ಕೆ ತಕ್ಕುದಾದ ಮಾತನ್ನಾಡುವವರು ಬಹಳ ವಿರಳ. 


ಅವಳ ಗಂಡನಿಗೆ ಇದರ ಅರಿವಾಗುತ್ತಿದ್ದರೂ ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದ.


ಅವಳು ದಕ್ಷನ ಮಗಳು ದಾಕ್ಷಾಯಿಣಿ. ತನ್ನ ತಂದೆ ಮಾಡಲಿರುವ ಮಹಾನ್ ಯಜ್ಞದ ಆಹ್ವಾನಕ್ಕಾಗಿ ಕಾದು ಕುಳಿತು ಸೋತು ಬೆಂಡಾಗಿದ್ದಳು. ಅವಳಿಗೆ ತನ್ನ ತಂದೆ ಉದ್ದೇಶಪೂರ್ವಕವಾಗಿ ತನ್ನನ್ನು ಕರೆದಿಲ್ಲ ಎಂಬ ಸತ್ಯ ತಿಳಿದಿರಲಿಲ್ಲ. ಕರೆಯಲು ಮರೆತಿರಬಹುದು ಎಂದೊಮ್ಮೆ ಯೋಚಿಸಿದರೆ, ಮಗದೊಮ್ಮೆ ತಂದೆ ಬಾಯಿಬಿಟ್ಟು ಕರೆಯಲು ತಾನೇನು ಹೊರಗಿನವಳೇ, ಮನೆಯವರನ್ನು ಯಾರಾದರೂ ಕರೆಯುತ್ತಾರೆಯೇ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು. 


ಆದರೂ ಅವರು ಕರೆಯದೇ ತಾನು ಹೋಗಲು ಏನೋ ಒಂದು ಅಳುಕು ಕಾಡುತ್ತಿತ್ತು ಅವಳಿಗೆ. ತಂದೆಯ ಇಚ್ಛೆಗೆ ವಿರುದ್ಧವಾಗಿ ಪರಶಿವನನ್ನು ಮದುವೆಯಾದುದರಿಂದಲೋ ಏನೋ... ತಂದೆಯೊಮ್ಮೆ ಬಾಯ್ತುಂಬಾ "ಬಾ ಮಗಳೇ.." ಅಂತ ಒಮ್ಮೆ ಕರೆದುಬಿಟ್ಟರೆ ಸಾಕು ಅಂತ ಆ ಮುಗ್ಧ ಮಗಳ ಮನಸ್ಸು ಬಯಸುತ್ತಿತ್ತು.


ಉಳಿದ ದೇವ ಗಣಗಳು, ಅಪ್ಸರೆಯರು, ಯಕ್ಷ-ಗಂಧರ್ವರು ಈ ಸಮಾರಂಭಕ್ಕೆ ಹೋಗುತ್ತಿರುವುದು ಕಾಣಿಸಿ ಅವಳ ತಳಮಳ ಮತ್ತಷ್ಟು ಹೆಚ್ಚಾಯ್ತು. ಯಾರು ಯಾರನ್ನೋ ಕರೆದ ತಂದೆಯವರು ಮಗಳನ್ನು ಬಿಡುತ್ತಾರೆಯೇ? ಬಹುಶಃ ಕರೆಯುವುದು ಮರೆತಿರಬೇಕು ಅಂತಲೇ ಯೋಚಿಸಿದಳು. ಅಷ್ಟೇ ಅಲ್ಲ ಅವರು ಕರೆಯದಿದ್ದರೂ ಸಹ ತಾನು ಈ ಸಮಾರಂಭಕ್ಕೆ ಹೋಗಬೇಕೆಂದು ನಿರ್ಧರಿಸಿದಳು.


ಆಗ ಕಣ್ತೆರೆದ ಶಿವ.


ಶಿವನೆಂದರೆ ಮನಸ್ಸಿನ ನಿಯಂತ್ರಕ. ಆದರೆ ಅವನಿಂದಲೂ ಅವಳನ್ನು ಸುಮ್ಮನಾಗಿಸಲು ಆಗಲಿಲ್ಲ. ಏಕೆಂದರೆ ಹೆಣ್ಣುಮಕ್ಕಳ ತವರಿನ ಬಗೆಗಿನ ವ್ಯಾಮೋಹ ಅಷ್ಟು ಗಟ್ಟಿಯಾಗಿರುತ್ತದೆ. ಕೊನೆಗೆ ಬೇರೆ ವಿಧಿ ಇಲ್ಲದೇ ಅವಳಿಗೆ ತಂದೆ ಮನೆಗೆ ಹೋಗಲು ಅನುಮತಿಸಿದ. ಜೊತೆಗೊಂದು ಕಿವಿಮಾತು ಹೇಳಿದ. ಅವಳ ತಂದೆಗೆ ಅಳಿಯ ಎಂದರೆ ಇಷ್ಟವಿಲ್ಲವಾದ್ದರಿಂದ ತನ್ನ ಬಗ್ಗೆ ಕೆಟ್ಟ ಮಾತನಾಡಬಹುದು, ಅದನ್ನು ತಲೆಗೆ ಹಚ್ಚಿಕೊಳ್ಳಬೇಡ ಎಂದ. ಹೊರಡುವ ಸಂಭ್ರಮದಲ್ಲಿದ್ದ ದಾಕ್ಷಾಯಿಣಿಯ ಕಿವಿಯೊಳಗೆ ಈ ಮಾತುಗಳು ಹೋಗಲೇ ಇಲ್ಲ. ಅವಳಿಗೆ ಅಲ್ಲಿಂದ ಹೊರಟರೆ ಸಾಕಿತ್ತು.


ಹೇಗೋ ಯಜ್ಞ ಮಾಡುತ್ತಿದ್ದ ಸ್ಥಳಕ್ಕೆ ತಲುಪಿದಳು ದಾಕ್ಷಾಯಿಣಿ. 


ತಂದೆ ತನ್ನನ್ನು ನೋಡಿ ಖುಷಿ ಪಡಬಹುದು ಎಂದವಳ ಯೋಚನೆ. ಆದರೆ ದಕ್ಷ ಅವಳನ್ನು ನೋಡಿಯೂ ನೋಡದಂತೆ ಸುಮ್ಮನಿದ್ದ. ತನ್ನ ಬಗ್ಗೆ, ಗಂಡನ ಬಗ್ಗೆ, ಗಂಡನ ಮನೆಯ ತನ್ನ ಜೀವನದ ಬಗ್ಗೆ ತಂದೆ ಕೇಳಬಹುದು ಅಂತ ಎದುರು ನೋಡುತ್ತಿದ್ದಳು ದಾಕ್ಷಾಯಿಣಿ. 


ಆದರೆ ತಂದೆ ಮಾತನಾಡಿದ್ದೇ ಬೇರೆ. "ನಿನ್ನನ್ನು ಕರೆದೇ ಇರಲಿಲ್ವಲ್ಲ... ಯಾಕೆ ಬಂದೆ?" ಎಂದ ದಕ್ಷ. 


ಕೋಪ ಎನ್ನುವುದು ನುಗ್ಗಿ ಬಂತು ಆಕೆಗೆ. ಆದರೆ ಹೊರಡುವ ಮುನ್ನ ಪರಶಿವ ಹೇಳಿದ್ದ ಮಾತುಗಳು ನೆನಪಾದವು. ಯಾವುದೇ ಕಾರಣಕ್ಕೂ ತಾನು ತಾಳ್ಮೆ ಕಳೆದುಕೊಳ್ಳಬಾರದು ಅಂತ ಯೋಚಿಸುತ್ತಾ "ಮಗಳಿಗೆ ಆಹ್ವಾನ ಕೊಟ್ಟು ಕರೆಯಬೇಕಾ? ನಾನು ಈ ಮನೆಗೆ ಸೇರಿದವಳೇ... ಯಾಕೆ ಬರಬಾರದಾ?" ಅಂತ ಆ ಮಾತನ್ನು ನಗುವಿನಲ್ಲಿಯೇ ತೇಲಿಸಿಬಿಟ್ಟಳು. ಅವಳೇನೋ ಆ ಮಾತನಾಡಿ ನಿರಾಳಳಾದಳು. ಆದರೆ ದಕ್ಷನಿಗೆ ಅವಳ ಮಾತಿನಿಂದ ಸಿಟ್ಟು ತಡೆಯಲಾಗಲಿಲ್ಲ. ಮೊದಲೇ ಅವನಿಗೆ ಶಿವನನ್ನು ಕಂಡರೆ ಅಷ್ಟಕ್ಕಷ್ಟೇ..


ತಾನು ಶಿವನ ವಿರುದ್ದ ಮಾತನಾಡಿದರೆ ಮೊದಲು ನೊಂದುಕೊಳ್ಳುವವಳು ತನ್ನ ಮಗಳೇ ಎನ್ನುವ ವಿವೇಚನೆ ಅವನಿಗೆ ಹೊರಟು ಹೋಗಿತ್ತು. ಆಕೆ ತನ್ನ ಮಗಳಷ್ಟೇ ಅಲ್ಲ ಶಿವನ ಹೆಂಡತಿ ಸಹ ಎನ್ನುವುದನ್ನು ಮರೆತು ತನ್ನ ಕೋಪದ ಕೈಗೆ ಬುದ್ಧಿ ಕೊಟ್ಟು ಅಳಿಯನನ್ನು ನಾನಾ ವಿಧದಲ್ಲಿ ನಿಂದಿಸಿದ ದಕ್ಷ. ದಾಕ್ಷಾಯಿಣಿಯಾದರೂ ತಂದೆ ತನ್ನನ್ನು ನಿಂದಿಸಿದ್ದರೆ ತಡೆಯುತ್ತಿದ್ದಳೇನೋ? ಆದರೆ ಗಂಡನ ನಿಂದನೆ ಅವಳಿಂದ ಕೇಳಲಾಗಲಿಲ್ಲ. 


ಗಂಡನೊಡನೆಯೇ ಇಪ್ಪತ್ತನಾಲ್ಕು ಗಂಟೆ ಇರುವವಳು ಅವಳು. ಅವನ ಗುಣ ಸ್ವಭಾವ ಏನೆಂದು ಬಲ್ಲವಳು ಆಕೆ. ತಂದೆ ಮಾಡುತ್ತಿರುವುದು ವೃಥಾ ಆರೋಪ ಎಂದಾಕೆಗೆ ಗೊತ್ತು. ಆದರೆ ತಾನು ಹೇಳಿದರೆ ನಂಬುವವರು ಯಾರು?


ತನ್ನ ತಂದೆ ಬಲಾಢ್ಯನಾಗಿರುವುದರಿಂದ ಎಲ್ಲರೂ ಅವರ ಮಾತನ್ನೇ ಅನುಮೋದಿಸುತ್ತಾರೆ. ಬಲಹೀನೆಯಾದ ತನ್ನನ್ನು ಯಾರು ಅಭಿಪ್ರಾಯ ಕೇಳುತ್ತಾರೆ. ತಾನು ಮಾಡಿದ್ದು ತಪ್ಪು. ಆಹ್ವಾನ ಇಲ್ಲದ ಕಡೆ ಬರಬಾರದಿತ್ತು. ಈಗ ತನ್ನಿಂದಾಗಿ ಯಾವ ತಪ್ಪೂ ಮಾಡದ ಶಿವನೂ ಅಪವಾದ ಎದುರಿಸಬೇಕಾಯಿತು. ತಾನು ಇಲ್ಲಿಗೆ ಹಠ ಹಿಡಿದು ಬರದೇ ಇದ್ದಿದ್ದರೆ ಪರಶಿವನ ನಿಂದೆಯೂ ತಪ್ಪುತ್ತಿತ್ತು. ತನ್ನಿಂದ ತಪ್ಪಾಗಿದೆ. ಈಗ ಅದಕ್ಕೆ ಶಿಕ್ಷೆಯನ್ನೂ ತಾನೇ ಕೊಟ್ಟುಕೊಳ್ಳಬೇಕಾಗಿದೆ. ಆದರೆ ಹೇಗೆ? ಎಂದು ಸುತ್ತ ಮುತ್ತ ನೋಡಿದಳು.


ತಂದೆ ಮಾಡುತ್ತಿದ್ದ ದೊಡ್ಡ ಯಜ್ಞ ಕುಂಡ ಕಾಣಿಸಿತು. 


ಹಿಂದೆ ಮುಂದೆ ಯೋಚಿಸದೇ ಅದರಲ್ಲಿ ಜಿಗಿದು ಬಿಟ್ಟಳು. ಕ್ಷಣದಲ್ಲಿ ಬೂದಿಯಾದಳು. ತನ್ನ ಮೇಲಿನ ಯಾವುದೇ ಮಾತು, ಅಪಮಾನವನ್ನೂ ಸಹಿಸಿದ ದಾಕ್ಷಾಯಿಣಿ ತನ್ನ ಗಂಡನ ಮೇಲಿನ ಆರೋಪವನ್ನು ಸಹಿಸದೇ ತನ್ನನ್ನು ತಾನು ಬಲಿ ಕೊಟ್ಟುಕೊಂಡು ಸತಿಯಾದಳು. ಯಜ್ಞಕುಂಡಕ್ಕೆ ಹಾರಿ ತನ್ನ ಜೀವನವನ್ನೇ ಅಂತ್ಯಗೊಳಿಸಿದ ಸತಿ ಮಹಾನ್ ಪತಿವ್ರತೆಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದಾಳೆ. ಒಬ್ಬ ಹೆಣ್ಣಿಗೆ ತನ್ನ ಗಂಡನೇ ಸರ್ವಸ್ವ. ಅವನ ಮೇಲಿನ ಅಪಮಾನವನ್ನು ತನ್ನ ತಂದೆಯೇ ಮಾಡಿದರೂ ಸಹಿಸಲಾರಳು ಆಕೆ ಎಂದ ಜಗತ್ತಿಗೆ ತೋರಿಸಿಕೊಟ್ಟವಳು ದಾಕ್ಷಾಯಿಣಿ.


**************
ಕೆ.ಎ.ಸೌಮ್ಯ
ಮೈಸೂರು

Published in oh Manase on April 2019 (1-15)

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ