ದ್ರೌಪದಿ ಏಕೆ ಶಸ್ತ್ರಾಭ್ಯಾಸ ಕಲಿಯಲಿಲ್ಲ?



ಹನ್ನೆರೆಡು ವರ್ಷ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಕಳೆಯುವುದಕ್ಕಾಗಿ ಪಂಚ ಪಾಂಡವರು ದ್ರೌಪದಿಯೊಡನೆ ಕಾಡಿಗೆ ಬಂದಿರುತ್ತಾರೆ. ಆಗ ಪಾಂಡವರು ಮುಂದಿನ ದಿನಗಳಲ್ಲಿ ನಡೆಯಬಹುದಾದ ಯುದ್ಧದ ಸಿದ್ಧತೆ ಮಾಡಿಕೊಳ್ಳತೊಡಗಿದರೆ, ದ್ರೌಪದಿ ಎಂದಿನಂತೆ ಸೌಟು ಹಿಡಿಯುತ್ತಾಳೆ. 


ಕಾಲ ಯಾವುದೇ ಆಗಿರಲಿ.. 


ಕಲಿಗಾಲವೋ ದ್ವಾಪರವೋ ಅಥವಾ ಮಳೆಗಾಲವೋ.. ಹೆಣ್ಣಿಗೆ ಮಾತ್ರ ಅಡುಗೆ ಮನೆ ಖಾಯಂ. ಅವಳು ಅಡುಗೆ ಮಾಡಿ ಹಾಕಿದ್ದನ್ನು ಬಿಟ್ಟರೆ ಆ ಹನ್ನೆರೆಡು ವರ್ಷಗಳಲ್ಲಿ ಒಂದು ಸಣ್ಣ ಆತ್ಮರಕ್ಷಣಾ ತಂತ್ರವನ್ನೂ ಸಹ ಕಲಿಯುವುದಿಲ್ಲ‌. ಅಥವಾ ಕಲಿಯಬೇಕು ಅಂತ ಅನ್ನಿಸಲಿಲ್ಲವೋ ಏನೋ? ತನ್ನನ್ನು ಹಗಲಿರುಳೂ ಕಾಪಾಡುವ ವೀರಾಧಿವೀರರು ಜೊತೆಗಿರುವಾಗ ಅವಳಿಗೆ ಯಾವ ಭಯವೂ ಕಾಡಲಿಲ್ಲವೆನಿಸುತ್ತದೆ. ಅಸಲಿಗೆ ಅವಳಿಗೆ ಅಂತಹ ಯೋಚನೆ ಸಹ ಬಂದಿರಲಿಕ್ಕಿಲ್ಲ.



ಅವಳ ಮುಂದೆ ಹನ್ನೆರೆಡು ವರ್ಷಗಳೆಂಬ ಅಗಾಧವಾದ ಕಾಲವಿತ್ತು.... 


ವರ್ಷಕ್ಕೊಂದು ಪಟ್ಟು ಕಲಿತಿದ್ದರೂ ಸಹ ಹನ್ನೆರೆಡು ಪಟ್ಟುಗಳನ್ನು ಕಲಿಯಬಹುದಿತ್ತು. ಆದರೆ ತನ್ನೊಂದಿಗೆ ಮಹಾನ್ ಶಕ್ತಿವಂತರಾದ ಗಂಡಂದಿರು ಇದ್ದಾರೆ, ಅವರು ತನ್ನನ್ನು ಕಾಪಾಡುತ್ತಾರೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ದ್ರೌಪದಿ ಶಸ್ತ್ರಾಭ್ಯಾಸ ಕಲಿಯದೇ ಉಳಿಯುತ್ತಾಳೆ. 


ಕಲಿಯಬಹುದಿತ್ತು ಆಕೆ‌. 


ಏಕೆಂದರೆ ವನವಾಸದ ನಂತರ ಅಜ್ಞಾತವಾಸ ಬರುವುದರಲ್ಲಿತ್ತು. ಪತಿಯರು ವೇಷ ಮರೆಸಿಕೊಂಡಿರುವಾಗ ತನ್ನ ರಕ್ಷಣೆ ಸ್ವತಃ ಮಾಡಿಕೊಳ್ಳಲಾದರೂ ಆಕೆ ಕಲಿಯಬಹುದಿತ್ತು. ಆದರೆ ಆಕೆ ಏಕೋ ನಿರಾಸಕ್ತಿ ವಹಿಸುತ್ತಾಳೆ. ಇನ್ನೇನು ವನವಾಸ ಮುಗಿಯುತ್ತದೆ ಎನ್ನುವಾಗ ಇದು ತನ್ನ ವರಸೆ ತೋರಿಸುತ್ತದೆ.


ಒಮ್ಮೆ ಪಾಂಡವರೆಲ್ಲರೂ ಬೇಟೆಯೋ ಮತ್ತೊಂದೋ‌ ಕಾರಣಕ್ಕಾಗಿ ಹೊರ ಹೋಗಿದ್ದಾಗ ಸಿಂಧೂ ರಾಜನಾದ ಜಯದ್ರಥನ ಕಣ್ಣಿಗೆ ಬೀಳುತ್ತಾಳೆ ದ್ರೌಪದಿ. ಆ ದುರುಳನೋ ಕಣ್ಣಿಗೆ ಕಂಡ ಹೆಣ್ಣುಗಳೆಲ್ಲ ತನ್ನದೇ ಎಂದು ಭ್ರಮಿಸುವವನು. ಇಂತಹಾ ಸುಂದರಿಯನ್ನು ಬಿಡುತ್ತಾನೆಯೇ? 


ಸೀದಾ ಬಂದು ಆಕೆಯನ್ನು ಎತ್ತಾಕಿಕೊಂಡು ಹೊರಡುತ್ತಾನೆ. ಈ ಸಮಯದಲ್ಲಿ ನನಗೊಂದು ಅಚ್ಚರಿ ಎನಿಸುತ್ತದೆ. ಶಸ್ತ್ರವಿದ್ಯಾ ಪಾರಂಗತರಾದ ಪತಿಯರ ನಡುವೆ ಇದ್ದೂ ಆಕೆ ಏಕೆ ಶಸ್ತ್ರವಿದ್ಯೆ ಕಲಿಯಲಿಲ್ಲ ಎಂಬುದು ಒಂದು ಅಚ್ಚರಿಯಾದರೆ, ಸ್ವತಃ ರಾಜಕುಮಾರಿಯಾದ ಆಕೆ ಆತನಿಗೆ ಒಂದು ಚಿಕ್ಕ ಪ್ರತಿರೋಧವನ್ನೂ ತೋರದೇ ದೈನ್ಯಳಾಗಿ ತನ್ನನ್ನು ಬಿಟ್ಟುಬಿಡು ಎಂದು ಗೋಗರೆಯುತ್ತಾಳೆ. 


ಸ್ವಭಾವತಃ ಧೈರ್ಯಶಾಲಿಯಾದ ಆಕೆ ಜಯದ್ರಥನೊಡನೆ ಮಾತನಾಡುತ್ತಲೇ ತನ್ನ ಪತಿಯರು ಈಗ ಬಂದಾರು, ತನ್ನನ್ನು ರಕ್ಷಿಸಿಯಾರು ಎಂಬ ನಿರೀಕ್ಷೆಯಲ್ಲಿರುತ್ತಾಳೆ. ಅಂದರೆ ವಿವಾಹ ಎಂಬ ಮೂರಕ್ಷರವು ಹೆಣ್ಣಿನಲ್ಲಿ ಅಸಹಾಯಕತೆ ತುಂಬಿ, ತನ್ನನ್ನು ತನ್ನ ಪುರುಷನೇ ರಕ್ಷಿಸಬೇಕು, ತನ್ನನ್ನು ತಾನು ರಕ್ಷಿಸಿಕೊಳ್ಳಲಾರೆ ಎಂಬ ಆಳವಾದ ಭಾವನೆಯನ್ನು ಬೇರೂರಿಸುವುದೇ? 


ಪತಿ ರಕ್ಷಿಸಬೇಕು ಎನ್ನುವುದಕ್ಕಿಂತಲೂ ತನ್ನನ್ನು ತಾನೇ ರಕ್ಷಿಸಿಕೊಳ್ಳದ ಬಲಹೀನೆ‌ ಎಂಬ ಭಾವವೇ ಅಧಿಕವಾಗಿದ್ದಿರಬಹುದು. ಅಂತೂ ಅವಳಾಸೆಯಂತೆಯೇ ಪತಿಯರ ಆಗಮನವಾಗಿ ಜಯದ್ರಥನನ್ನು ಎಲ್ಲರೂ ಸೇರಿ‌ ಹಣ್ಣುಗಾಯಿ-ನೀರುಗಾಯಿ‌ ಮಾಡುತ್ತಾರೆ.


ಅಷ್ಟೇ....


ಈ ವಿಷಯ ಅವರೂ ಮರೆಯುತ್ತಾರೆ. ಆಕೆಯೂ ಮರೆಯುತ್ತಾಳೆ.‌ ಆಗಲಾದರೂ ಅವರು ಎಚ್ಚೆತ್ತು ಒಂದೆರೆಡು ಆತ್ಮರಕ್ಷಣಾ ವಿದ್ಯೆ ಕಲಿಸಬಹುದಿತ್ತು. ಏಕೆಂದರೆ ವನವಾಸದಲ್ಲಿ ಅವರು ಆಕೆಯ ಜೊತೆಗೇ ನೆರಳಿನಂತಿದ್ದರು. 


ಆದರೆ ಅಜ್ಞಾತವಾಸದಲ್ಲಿ ಆಕೆಯ ಜೊತೆ ಯಾರೂ ಇರುವ ಹಾಗಿರಲಿಲ್ಲ. ಆಗವಳ ರಕ್ಷಣೆ ಅವಳದ್ದೇ ಸ್ವಂತ ಹೊಣೆಯಾಗಿತ್ತು. ಆದರೂ ಗೊತ್ತು ಗುರಿಯಿಲ್ಲದೇ ಎಲ್ಲರೂ ಹೋಗಿ ವಿರಾಟನ ಆಸ್ಥಾನ ಸೇರುತ್ತಾರೆ. 


ದ್ರೌಪದಿ ರಾಣಿಯ ಅಂತಃಪುರ ಸೇರುತ್ತಾಳಾದರೂ ರಾಣಿಯ ತಮ್ಮ ಕೀಚಕನಿಗೆ ಅಂತಃಪುರಕ್ಕೆ ಮುಕ್ತ ಪ್ರವೇಶವಿರುತ್ತದೆ. ಅವನ ಕಣ್ಣಿಗೆ ಬೀಳುತ್ತಾಳೆ ದ್ರೌಪದಿ. ಆತನಿಂದಲೂ ಕಿರುಕುಳ ಪ್ರಾರಂಭವಾಗುತ್ತದೆ. ಸ್ವತಃ ಧರ್ಮರಾಯನೇ ಏನೂ ಸಹಾಯ ಮಾಡದೇ ಕೈ ಚೆಲ್ಲುತ್ತಾನೆ. 


ಆ ಕ್ಷಣದಲ್ಲಿ ಯಾರಿಗಾದರು ಅನ್ನಿಸುತ್ತದೆ...


'ಯಾರಿಗೆ ಬೇಕು ರಾಜ್ಯ, ಅಧಿಕಾರ, ಮತ್ತೊಂದು, ಮಗದೊಂದು... ಸ್ವಂತ ಹೆಂಡತಿಯ ರಕ್ಷಣೆ ಮಾಡಲಾಗದ ಮೇಲೆ' ಅಂತ. ಕೊನೆಗೆ ಭೀಮನಿಂದ ಕೀಚಕನ‌ ವಧೆಯಾಗುತ್ತದೆ.


ತಾಳಿಗೆ ಕತ್ತು ಒಡ್ಡುವುದರ ಪರಿಣಾಮವಾಗಿ ಹೆಂಗಸರು ತಮ್ಮ ಸ್ವಂತ ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆಯೇ? ತಮ್ಮ ಕುರಿತಾದ ನಿರ್ಧಾರಗಳನ್ನೂ ತಮ್ಮ ಪುರುಷನೇ ತೆಗೆದುಕೊಳ್ಳಲಿ ಎಂದೇಕೆ ಬಯಸುತ್ತಾರೆ? 


ಅನ್ಯ ಪುರುಷ ತನಗೆ ಕಿರುಕುಳ ಕೊಡುತ್ತಿದ್ದರೂ ಪ್ರತಿಭಟಿಸಲಾರದ ಬಲಹೀನರು ಏಕಾಗುತ್ತಾರೆ? 


ಕಣ್ಮುಂದೆಯೇ ಪತಿಯರು ಶಸ್ತ್ರಾಭ್ಯಾಸ ನಡೆಸುತ್ತಿದ್ದರೂ ನೋಡಿಯೂ ಮೆದುಳಿನಲ್ಲಿ‌ ದಾಖಲಾಗದಷ್ಟು ನಿರಾಸಕ್ತಿಯನ್ನೇಕೆ ಮೈಗೂಡಿಸಿಕೊಂಡಿರುತ್ತಾರೆ? 


ಅದನ್ನು ನೋಡಿ ಕಲಿತಿದ್ದರೂ ಸಹ ಜಯದ್ರಥನನ್ನು ಆಕೆಯೊಬ್ಬಳೇ ಮಣಿಸಬಹುದಿತ್ತು. ಮಹಾಭಾರತದಲ್ಲಿ ಜಯದ್ರಥ ಆಕೆಯನ್ನು ಎಳೆದುಕೊಂಡು ಹೋಗುವ ಭಾಗವನ್ನು ಓದಿದಾಗಲೆಲ್ಲಾ ನನಗೆ ಪ್ರತೀ ಬಾರಿಯೂ ಈ ಅನುಮಾನ ಕಾಡುತ್ತದೆ.


ಪಾಂಡವರೂ ಸಹ ಹೆಣ್ಣನ್ನು ಅಡುಮನೆಗಷ್ಟೇ ಸೀಮಿತ ಮಾಡಿಬಿಟ್ಟರೇ?

(ಓ ಮನಸೇ 15-30 Dec 2019)

***********************


ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ