ಭಸ್ಮಾಸುರ
"ಅಧಿಕಾರ ಸಿಕ್ಕರೆ ಸಾಲದು : ನಿಭಾಯಿಸಲೂ ಬರಬೇಕು"
ಭಸ್ಮಾಸುರ ಮಹಾನ್ ಶಿವಭಕ್ತ.
ತನ್ನ ದೇಹದ ಅಂಗಗಳನ್ನೇ ಆಹುತಿಯಾಗಿ ನೀಡುತ್ತಾ ಶಿವನಿಗಾಗಿ ತಪಸ್ಸು ಮಾಡಿದವನು. ಆದರೆ ಸಾಮಾನ್ಯವಾಗಿ ಉಗ್ರವಾಗಿ ತಪಸ್ಸು ಮಾಡುವವರ ಕೋರಿಕೆ ಅದೊಂದೇ ಆಗಿರುತ್ತದೆ.
ಏನೆಂದರೆ ಅವರಿಗೆ "ತಮಗೆ ಸಾವೇ ಬರಬಾರದು" ಎಂಬ ವರ ಬೇಕಿರುತ್ತದೆ.
ಆ ವರಕ್ಕಾಗಿ ಇವರುಗಳು ಏನು ಮಾಡಲೂ ತಯಾರು ಇರುತ್ತಾರೆ. ಆದರೆ ಇವರು ತಮ್ಮ ಸ್ವಾರ್ಥಕ್ಕಾಗಿ ಉಗ್ರ ತಪಸ್ಸು ಮಾಡುತ್ತಾರೆಯೇ ಹೊರತೂ ಲೋಕ ಕಲ್ಯಾಣಕ್ಕಾಗಿ ಹಾಗೆ ಉಗ್ರ ತಪಸ್ಸು ಮಾಡಿದವರನ್ನು ನಾವು ಇದುವರೆಗೂ ಕಂಡಿಲ್ಲ ಎನ್ನುವುದು ಸತ್ಯ.
ಇರಲಿ. ಭಸ್ಮಾಸುರನ ಪ್ರಚಂಡ ಭಕ್ತಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಆದರೆ ಭಸ್ಮಾಸುರ ಕೋರಿದಂತೆ ಸಾವೇ ಬಾರದಂತಹ ವರ ಕೊಡಲು ಸಾಧ್ಯವಿಲ್ಲ ಅಂತ ಸ್ಪಷ್ಟವಾಗಿ ನಿರಾಕರಿಸಿಬಿಡುತ್ತಾನೆ.
ಆಗ ಭಸ್ಮಾಸುರ ಬೇರೆ ವರ ಕೋರಿಕೊಳ್ಳುವ ಒತ್ತಡಕ್ಕೆ ಸಿಲುಕುತ್ತಾನೆ. ಅಸುರರಿಗೆ ವಿವೇಚನೆ ಕಡಿಮೆ. ಅದರಲ್ಲಿಯೂ ತನ್ನ ಅತ್ಯುಗ್ರ ತಪಸ್ಸು ದಂಡವಾದರೆ ಅನ್ನುವ ಆತಂಕದಲ್ಲಿ ಬೇರೇನೂ ಯೋಚಿಸಲು ಹೋಗದೇ "ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಉರಿದು ಬೂದಿಯಾಗಬೇಕು" ಎಂಬ ವಿಚಿತ್ರವಾದ ವರ ಕೋರುತ್ತಾನೆ.
ಭಕ್ತವತ್ಸಲನಾದ ಈಶ್ವರನೂ ಯೋಚಿಸದೇ "ತಥಾಸ್ತು" ಎಂದೇ ಬಿಡುತ್ತಾನೆ. ಇಂತಹಾ ವರ ಪಡೆದೆ ಎಂದು ಭಸ್ಮಾಸುರನಿಗೆ ತಕ್ಷಣಕ್ಕೆ ಬಹಳ ಖುಷಿಯಾಗುತ್ತದೆ. ಆದರೆ ಆ ವರ ತನಗೆ ನಿಜಕ್ಕೂ ಸಿಕ್ಕಿದೆ ಎಂದು ತಿಳಿಯುವುದಾದರೂ ಹೇಗೆ? ಯಾರ ಮೇಲಾದರೂ ಪ್ರಯೋಗಿಸಿದರೆ ತಾನೇ ಗೊತ್ತಾಗುವುದು? ಎಂದು ಈಶ್ವರನ ಕಡೆ ನೋಡುತ್ತಾನೆ.
ಈಶ್ವರನಿಗೆ ಭಸ್ಮಾಸುರನ ಮನದಿಂಗಿತ ಅರ್ಥವಾಗುತ್ತದೆ.
ಸುಮ್ಮನಿದ್ದರೆ ತನ್ನ ತಲೆಯ ಮೇಲೇ ಕೈ ಇಟ್ಟು ತನ್ನನ್ನೇ ಭಸ್ಮ ಮಾಡಿಬಿಡುತ್ತಾನೆ ಅಂತನಿಸಿ ಆತಂಕದಿಂದ ಈಶ್ವರ ಅಲ್ಲಿಂದ ಓಡುತ್ತಾನೆ. ಎಲ್ಲಿಗೆ ಹೋದರೂ ಭಸ್ಮಾಸುರ ಅವನ ಬೆನ್ನು ಬಿಡುವುದಿಲ್ಲ. ಈಶ್ವರನಿಗೆ ಬೇರೆ ದಾರಿ ತೋಚದೇ ಮಹಾವಿಷ್ಣುವಿನ ಬಳಿ ಹೋಗಿ ತನ್ನನ್ನು ಕಾಪಾಡಲು ಬೇಡಿಕೊಳ್ಳುತ್ತಾನೆ.
ಸೃಷ್ಟಿಯಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರ ಮೂವರೂ ಸಮಾನ ಶಕ್ತಿವಂತರು. ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆ ಇಲ್ಲ. ಅಂದ ಮೇಲೆ ಒಬ್ಬರನ್ನೊಬ್ಬರು ಬೇಡುವ ಪ್ರಸಕ್ತಿಯೇ ಇಲ್ಲ ಅಲ್ಲವೇ?
ಆದರೂ ಈಶ್ವರ ತನಗೆ ಎದುರಾದ ದಿಢೀರ್ ತೊಂದರೆಯಿಂದ ಯೊಚಿಸುವ ಶಕ್ತಿ ಕಳೆದುಕೊಂಡಿರುತ್ತಾನೆ. ಆದ್ದರಿಂದ ಏನೂ ತೋಚದೇ ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣುವಿಗೆ ಅದು ತನಗೆ ಎದುರಾದ ತೊಂದರೆ ಅಲ್ಲವಾದ್ದರಿಂದ ಅವನಿಗೆ ಈ ಕಷ್ಟದಿಂದ ಹೇಗೆ ಬಚಾವಾಗುವುದು ಅಂತ ತಕ್ಷಣಕ್ಕೆ ಹೊಳೆಯುತ್ತದೆ.
ಕೂಡಲೇ ವಿಷ್ಣು ಒಂದು ಮೋಹಕ ಹೆಣ್ಣಿನ ರೂಪ ಧರಿಸಿ ಭಸ್ಮಾಸುರನ ಮುಂದೆ ಬರುತ್ತಾನೆ. ಭಸ್ಮಾಸುರ ಇದುವರೆಗೂ ಈಶ್ವರನ ಹಿಂದೆ ಓಡುತ್ತಿದ್ದವನು ಈ ಮೋಹಿನಿಯನ್ನು ನೋಡಿ ಅವಳ ಹಿಂದೆ ಹೋಗುತ್ತಾನೆ.
ಅಷ್ಟೇ ಅಲ್ಲ...
ತಾನ್ಯಾಕೆ ಈಶ್ವರನ ಹಿಂದೆ ಓಡುತ್ತಿದ್ದೆ ಅನ್ನುವುದನ್ನೂ, ಜೊತೆಗೆ ತನಗೆ ವರ ಸಿಕ್ಕಿರುವ ವಿಷಯವನ್ನೂ ಮರೆಯುತ್ತಾನೆ. ಅವನ ಗುರಿ ಬದಲಾಗುತ್ತದೆ. ಹಿಂದಿನ ಗುರಿ ಮರೆಯಾಗುತ್ತದೆ. ಈಗ ಆ ಮೋಹಕ ಹೆಣ್ಣನ್ನು ಮೋಹಿಸುವುದು ಅವನ ಗುರಿಯಾಗುತ್ತದೆ. ಅದಕ್ಕಾಗಿ ಆ ಹೆಣ್ಣನ್ನು ಒಲಿಸಿಕೊಳ್ಳಲು ಮುಂದಾಗುತ್ತಾನೆ. ಮೋಹಿನಿಯು ಭಸ್ಮಾಸುರನನ್ನು ಮದುವೆಯಾಗಲು ಒಪ್ಪುತ್ತಾಳೆ. ಆದರೆ ಒಂದು ಷರತ್ತನ್ನು ಎದುರಿಗೆ ಇಡುತ್ತಾಳೆ.
ಮೋಹಿನಿಯು ತಾನೋರ್ವ ನಾಟ್ಯ ಪ್ರಿಯಳೆಂದೂ ತನ್ನನ್ನು ನಾಟ್ಯದಲ್ಲಿ ಸೋಲಿಸುವವನನ್ನೇ ವರಿಸುವುದೆಂದೂ ಹೇಳಿ ಬಿಡುತ್ತಾಳೆ.
ಭಸ್ಮಾಸುರನಿಗೆ ಪೇಚಿಗಿಟ್ಟುಕೊಳ್ಳುತ್ತದೆ.
ಏಕೆಂದರೆ ರಾಕ್ಷಸನಾದ ಅವನಿಗೆ ಹೊಡಿ-ಬಡಿ-ಕಡಿ ಮಾತ್ರವೇ ಗೊತ್ತಿರುತ್ತದೆ ಹೊರತೂ ನಾಟ್ಯದಂತಹ ಕಲೆ ಗೊತ್ತಿರುವುದಿಲ್ಲ. ಹಾಗಂತ ಮೋಹಿನಿಯನ್ನು ಬಿಟ್ಟು ಬಿಡಲೂ ಅವನಿಂದಾಗೋಲ್ಲ. ಅವನ ಕಷ್ಟ ಅರ್ಥ ಮಾಡಿಕೊಂಡ ಮೋಹಿನಿ ನೃತ್ಯ ಬಹಳ ಸುಲಭವೆಂದೂ, ತಾನು ಮಾಡಿದ ರೀತಿಯಲ್ಲಿ ಮಾಡಿದರೆ ಸಾಕೆಂದು ಹೇಳುತ್ತಾಳೆ.
ಭಸ್ಮಾಸುರ ಸಂತೋಷದಿಂದ ಒಪ್ಪುತ್ತಾನೆ.
ಮೋಹಿನಿಯು ಮೊದಲಿಗೆ ಬಹಳ ಸರಳವಾದ ನೃತ್ಯದ ಪಟ್ಟುಗಳನ್ನು ಹಾಕುತ್ತಾ ಹೋಗುತ್ತಾಳೆ. ಅದನ್ನು ಅನುಸರಿಸುವ ಭಸ್ಮಾಸುರನಿಗೆ ನೃತ್ಯವೆಂದರೆ ಇಷ್ಟೇನಾ ಅಂತನಿಸಿ ಉಬ್ಬಿ ಹೋಗುತ್ತಾನೆ. ಇಷ್ಟು ಮಾಡಿದರೆ ಮೋಹಿನಿ ತನ್ನವಳಾಗುತ್ತಾಳೆ ಅಂತ ಖುಷಿಯಿಂದಲೇ ಅವಳು ಮಾಡಿದಂತೆಯೇ ಮಾಡುತ್ತಾ ಹೋಗುತ್ತಾನೆ.
ಕಡೆಗೊಮ್ಮೆ ಮೋಹಿನಿ ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಳ್ಳುತ್ತಾಳೆ. ಹಿಂದೆ ಮುಂದೆ ಯೋಚಿಸದೇ ಅದನ್ನು ಅನುಸರಿಸುವ ಭಸ್ಮಾಸುರ ತನ್ನ ವರದ ಕಾರಣ ತಾನೇ ಸುಟ್ಟು ಬೂದಿಯಾಗುತ್ತಾನೆ.
ಸಂದೇಶ ಸ್ಪಷ್ಟವಾಗಿದೆ.
ಭಸ್ಮಾಸುರನಿಗೆ ಸಿಕ್ಕ ವರ ಒಂದು ಹುದ್ದೆಯ ರೀತಿ. ಅದನ್ನು ಪಡೆದರಷ್ಟೇ ಸಾಲದು. ನಿಭಾಯಿಸಿರುವ ಅನುಭವವೂ ಬೇಕು. ಇಲ್ಲದಿದ್ದರೆ ತಾನು ಆ ಹುದ್ದೆಯಲ್ಲಿದ್ದೇನೆ ಅಂತಲೇ ಮರೆತು ಹೋಗಿಬಿಡುತ್ತದೆ.
ಭಸ್ಮಾಸುರನಿಗೆ ಆಗಿದ್ದೂ ಅದೇ.
ತನಗೆ ಸಿಕ್ಕ ವರವನ್ನು ಮರೆತು ಅನಾಹುತ ಮಾಡಿಕೊಂಡ. ಏಕೆಂದರೆ ಅದು ಅಚಾನಕ್ಕಾಗಿ ಸಿಕ್ಕ ವರ. ಸಿಗುವ ಮೊದಲೇ ಬೇಕಾಗಿದ್ದ ಮಾನಸಿಕ ಸಿದ್ಧತೆ ಇಲ್ಲದ ಕಾರಣ ತಾನು ಪಡೆದ ವರದಿಂದ ತಾನೇ ಸತ್ತು ಹೋದ.
*****
