ವಾತಾಪಿ ಜೀರ್ಣೋಭವ

 



ಸಾಮಾನ್ಯವಾಗಿ ನಮ್ಮ ಸಾಹಿತಿಗಳು ತಮ್ಮ ಕಥೆ-ಕಾದಂಬರಿಗಳಲ್ಲಿ ಹೆಂಡತಿಯನ್ನು ಹಣಕ್ಕಾಗಿ, ಮತ್ತೊಂದಕ್ಕಾಗಿ ಅಥವಾ ಅನುಮಾನಪಟ್ಟು ಪೀಡಿಸುವ ಗಂಡಂದಿರ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದರೆ ಗಂಡನನ್ನು ಸಹ ಪೀಡಿಸುವ ಹೆಂಡತಿಯರು ಇರುತ್ತಾರೆ ಎನ್ನುವುದು ಗೊತ್ತೇ? ಹೌದು. 


ಪ್ರಾಪಂಚಿಕ ಸುಖ-ಸಂಪತ್ತಿಗಾಗಿ, ಐಷಾರಾಮದ ವಸ್ತುಗಳಿಗಾಗಿ ಪೀಡಿಸುವ ಪತ್ನಿಯರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದ ಋಷಿಮುನಿಗಳಿಗೂ ಈ ಕಾಟ ತಪ್ಪಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಮುನಿಜನರೇ ಇದಕ್ಕೆ ಬಲಿಯಾದರೆ ಸಾಮಾನ್ಯ ಜನರ ಪಾಡೇನು ಎನಿಸುತ್ತದೆ. ಒಮ್ಮೆ ಸರ್ವಸಂಗ ಪರಿತ್ಯಾಗಿಗಳಾದ ಅಗಸ್ತ್ಯ ಮಹರ್ಷಿಗಳಿಗೂ ಸಹ ತಮ್ಮ ಹೆಂಡತಿಗಾಗಿ ಈ ಕಾರ್ಯ ಮಾಡಬೇಕಾಗಿ ಬಂದಿತ್ತು.


ಘಟನೆ ಹೀಗಿದೆ:


ಅಗಸ್ತ್ಯ ಮುನಿಗಳು ತಮ್ಮ ತಪಸ್ಸಿಗಾಗಿ ಕಾಡಿನ ದಾರಿಯಲ್ಲಿ ನಡೆಯುತ್ತಿದ್ದಾಗ ಒಂದು ಮರದಲ್ಲಿ ತಲೆಕೆಳಕಾಗಿ ನೇತಾಡುತ್ತಿದ್ದ ಕೆಲವು ಆತ್ಮಗಳು ಕಾಣ ಸಿಗುತ್ತವೆ. ಅವರೆಲ್ಲಾ ಯಾರೆಂದು ವಿಚಾರಿಸಿದಾಗ ಆ ಆತ್ಮಗಳು ತಮ್ಮ ಪೂರ್ವಜರೇ ಎಂದು ಗೊತ್ತಾಗಿ ಆಘಾತವಾಗುತ್ತದೆ ಮುನಿಗಳಿಗೆ. ಆದರೆ ಅವರುಗಳು ಹೀಗೆ ಯಾಕೆ ನೇತಾಡುತ್ತಿದ್ದಾರೆ ಎಂದು ಅರ್ಥವಾಗದೇ ಅವರನ್ನು ವಿಚಾರಿಸಿದಾಗ ಅದಕ್ಕೆ ಕಾರಣ ತಾನೇ ಎಂದು ತಿಳಿಯುತ್ತದೆ. 


ತಾನು ಮದುವೆಯಾಗದೇ, ತನಗೆ ಮಕ್ಕಳಾಗದೇ ಇರುವುದರಿಂದ ಈ ಆತ್ಮಗಳಿಗೆ ಆತ್ಮ ಸಾಕ್ಷಾತ್ಕಾರವಾಗಿಲ್ಲ ಎಂದು ಅರಿವಾಗುತ್ತದೆ. ಆದರೆ ತಾವೋ ಮುನಿಗಳು, ಸರ್ವಸಂಗ ಪರಿತ್ಯಾಗಿಗಳು, ಒಂದೇ ಕಡೆ ನೆಲೆ ನಿಲ್ಲುವವರಲ್ಲ, ತ್ರಿಲೋಕ ಸಂಚಾರಿಗಳು, ಮದುವೆಯಾದರೆ ಸಾಧಕಕ್ಕಿಂತ ಬಾಧಕಗಳೇ ಹೆಚ್ಚು, ಆದರೂ ಪೂರ್ವಿಕರ ಆತ್ಮಸಾಕ್ಷಾತ್ಕಾರಕ್ಕಾಗಿ ಮದುವೆಯಾಗಬೇಕೆಂದು ತೀರ್ಮಾನಿಸುತ್ತಾರೆ. ಅದರಂತೆ ಒಬ್ಬ ರಾಜನ ಮಗಳನ್ನು ನೋಡಿ ಮದುವೆಯೂ ಆಗುತ್ತಾರೆ. ಅವರ ಮದುವೆಯ ಉದ್ದೇಶ ಒಂದೇ‌... ಆದಷ್ಟು ಬೇಗ ಒಬ್ಬ ಪುತ್ರನನ್ನು ಪಡೆದು ಪೂರ್ವಿಕರ ಆತ್ಮಗಳಿಗೆ ವಿಮೋಚನೆ ದೊರಕಿಸುವುದು.


ಆದರೆ ವಿಚಾರ ಬೇರೆಯದೇ ದಿಕ್ಕಿಗೆ ಹೊರಳುತ್ತದೆ. 


ಮಗು ಬೇಕೆಂದರೆ ತನಗೆ ಈ ಆಶ್ರಮದಲ್ಲಿಯೂ ರಾಜವೈಭೋಗವೇ ಬೇಕೆಂದು ಬೇಡಿಕೆ ಇಡುತ್ತಾಳೆ ರಾಜಕುಮಾರಿ. ಬೇಡಿಕೆಯೇನೋ ಸರಿಯಾದದ್ದು. ಹುಟ್ಟಿದಾಗಿನಿಂದ ಐಷಾರಾಮಿ ಜೀವನ ನಡೆಸಿದ ರಾಜಕುಮಾರಿ ಈಗಲೂ ಹಾಗೆಯೇ ಇರಬೇಕೆಂದುಕೊಂಡಿದ್ದರಲ್ಲಿ ತಪ್ಪಿಲ್ಲ. ಅವಳಿಂದ ಗುಡಿಸಿಲಿನಲ್ಲಿ ಜೀವನ ನಡೆಸಲು ಸಾಧ್ಯವೇ? ಆದರೆ ಅವಳ ಬೇಡಿಕೆಯನ್ನು ಪೂರೈಸುವುದು ಹೇಗೆ?


ಮಹರ್ಷಿಗಳಾದ ತಾವು ಲೋಕಕಲ್ಯಾಣವಲ್ಲದೇ ಮತ್ಯಾವುದೇ ಕೈಂಕರ್ಯ ಮಾಡುವಂತಿಲ್ಲ. ಕೆಲಸ ಮಾಡಿ ಸಂಪಾದಿಸುವಂತಿಲ್ಲ. ಯಾರಾದರೂ ದಾನ ಕೊಟ್ಟರೆ ಮಾತ್ರವೇ ತೆಗೆದುಕೊಳ್ಳಬಹುದಷ್ಟೇ. ಆದರೆ ಅಗಸ್ತ್ಯರು ಸಹಾಯಕ್ಕಾಗಿ ಬೇಡಿದ ರಾಜರ ಬಳಿಯೂ ಇವರು ಬೇಡಿದಷ್ಟು ಹಣ ಇರುವುದಿಲ್ಲ. ಮತ್ತೇನು ದಾರಿ ಎಂದು ಯೋಚಿಸುತ್ತಿದ್ದಾಗ ವಾತಾಪಿ-ಇಲ್ವಲ ಎಂಬ ಇಬ್ಬರು ರಾಕ್ಷಸರ ಹೆಸರು ಇವರ ಕಿವಿಗೆ ಬೀಳುತ್ತದೆ.


ಇವರಿಬ್ಬರೂ ರಾಕ್ಷಸರು ಕಾಡಿನ ದಾರಿಯಲ್ಲಿ ಸಂಚರಿಸುವ ಋಷಿಮುನಿಗಳು, ರಾಜರುಗಳನ್ನು ಕೊಂದು ಅವರ ಬಳಿ ಇರುವ ಅಪಾರ ಸಂಪತ್ತನ್ನು ಲೂಟಿ ಮಾಡಿ ಶೇಖರಿಸಿಕೊಂಡಿಟ್ಟುಕೊಂಡಿದ್ದಾರೆ ಎಂದು ತಿಳಿಯುತ್ತದೆ. ಆ ಸಂಪತ್ತಿನಿಂದ ರಾಕ್ಷಸರಿಗೆ ಆಗಬೇಕಾದ್ದೇನೂ ಇಲ್ಲ. ಅವರಿಗೆ ಬೇಕಾದದ್ದು ಮನುಷ್ಯರ ಜೀವ ಮಾತ್ರ. ಹಾಗಾಗಿ ಅವರ ಬದಲು ತನಗಾದರೂ ಆ ಸಂಪತ್ತು ಸಿಕ್ಕರೆ ರಾಜಕುಮಾರಿಯ ಕನಸೂ ನನಸಾಗುತ್ತದೆ, ತನ್ನ ಪೂರ್ವಜರಿಗೂ ಮೋಕ್ಷ ಸಿಗುತ್ತದೆ ಎಂದು ಯೋಚಿಸಿ ಅತ್ತ ಹೊರಡುತ್ತಾರೆ ಮುನಿಗಳು.


ವಾತಾಪಿ ಮತ್ತು ಇಲ್ವಲರು ಜನರನ್ನು ಲೂಟಿ ಮಾಡಲು ಒಂದು ಬೇರೆಯದೇ ವಿಧಾನ ಇಟ್ಟುಕೊಂಡಿರುತ್ತಾರೆ. ಇಲ್ವಲನು ಮನುಷ್ಯರ ವೇಷ ಧರಿಸಿ ಕಾಡಿನಲ್ಲಿ ಸಂಚರಿಸುವವರನ್ನು ಊಟಕ್ಕೆ ಆಹ್ವಾನಿಸುತ್ತಾನೆ ಮತ್ತು ವಾತಾಪಿಯನ್ನು ಆಡಾಗಿ ಬದಲಾಯಿಸಿ ಕಡಿದು ಆಹ್ವಾನಿತರಿಗೆ ಊಟವಾಗಿ ಬಡಿಸುತ್ತಾನೆ. ಅತಿಥಿಗಳು ಊಟ ಮಾಡಿದ ನಂತರ ಇಲ್ವಲನು ವಾತಾಪಿಯನ್ನು ಕರೆದಾಗ, ವಾತಾಪಿಯು ಅತಿಥಿಗಳ ಹೊಟ್ಟೆ ಸೀಳಿ ಹೊರಬರುತ್ತಿರುತ್ತಾನೆ.‌ 


ಇದೇ ರೀತಿ ಬಹಳಷ್ಟು ಜನರನ್ನು ಇವರಿಬ್ಬರೂ‌ ಕೊಂದಿರುತ್ತಾರೆ. 


ಅಗಸ್ತ್ಯರು ಕಂಡಾಗ ಇಲ್ವಲ ಅವರನ್ನೂ ಊಟಕ್ಕೆ ಆಹ್ವಾನಿಸುತ್ತಾನೆ. ಆಹ್ವಾನ ಮನ್ನಿಸಿ ಬಂದ ಅಗಸ್ತ್ಯರಿಗೆ ವಾತಾಪಿಯನ್ನು ಕಡಿದು ಬಡಿಸುತ್ತಾನೆ. ಮಹರ್ಷಿಗಳು ತೃಪ್ತಿಯಾಗಿ ಊಟ ಮಾಡಿ ತೇಗುತ್ತಾ 'ವಾತಾಪಿ ಜೀರ್ಣೋಭವ' ಎನ್ನುತ್ತಾರೆ. ನಂತರ ಇಲ್ವಲನು‌ ಎಷ್ಟು ಕರೆದರೂ ವಾತಾಪಿ ಬರುವುದಿಲ್ಲ. ಹೇಗೆ ಬರುತ್ತಾನೆ? ಮಹರ್ಷಿಗಳು ಅವನನ್ನು ಜೀರ್ಣಿಸಿಕೊಂಡಿರುತ್ತಾರಲ್ಲ?


ವಿಷಯದ ಅರಿವಾದಾಗ ಇಲ್ವಲನು ಮಹರ್ಷಿಗಳ ಕಾಲಿಗೆ ಬಿದ್ದು ತನ್ನ ಸಹೋದರನಿಗೆ ಜೀವ ನೀಡುವಂತೆ ಬೇಡುತ್ತಾನೆ. ಆದರೆ ಮಹರ್ಷಿಗಳು ಇದುವರೆಗೂ ರಾಕ್ಷಸರಿಬ್ಬರೂ ಅಕ್ರಮವಾಗಿ ಸಂಪಾದಿಸಿರುವ ಸಂಪತ್ತನ್ನು ತನಗೆ ನೀಡದಿದ್ದರೆ ನಿನ್ನನ್ನೂ ನಾಶ ಮಾಡುತ್ತೇನೆ ಎನ್ನುತ್ತಾರೆ‌‌. ಇಲ್ವಲ ಹೆದರಿ ಸಂಪತ್ತನ್ನೆಲ್ಲಾ ಮಹರ್ಷಿಗಳಿಗೆ ನೀಡುತ್ತಾನೆ. ಮುನಿಗಳು ಆ ಸಂಪತ್ತನ್ನು ತಮ್ಮ ಪತ್ನಿಗೆ ನೀಡಿ ಅವಳಿಂದ ಒಬ್ಬ ಪುತ್ರನನ್ನು ಪಡೆದು ತನ್ನ ಪೂರ್ವಿಕರಿಗೆ ಮೋಕ್ಷ ದೊರಕಿಸಿಕೊಡುತ್ತಾರೆ. ಒಟ್ಟಿನಲ್ಲಿ ತಾವಾಯ್ತು, ತಮ್ಮ ಪಾಡಾಯ್ತು ಎಂದು ಹಾಯಾಗಿದ್ದ ಮಹರ್ಷಿಗಳೂ ಹೆಂಡತಿಯ ಸಲುವಾಗಿ ದ್ರವ್ಯ ಸಂಪಾದನೆ ಕುರಿತು ಚಿಂತೆ ಮಾಡುವ ಹಾಗಾಯ್ತು.

**************

ಕೆ.ಎ.ಸೌಮ್ಯ
ಮೈಸೂರು

Published in oh Manase (June 16-30) 2019

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ