ಅಗ್ರಜನೆದುರು ಸಿಡಿದೆದ್ದ ಅರ್ಜುನ

 


ನಮ್ಮ ಸುಪ್ತ ಮನಸ್ಸಿನೊಳಗೆ ಏನಿರುತ್ತದೆ ಅಂತ ನಮಗೇ ಗೊತ್ತಿರುವುದಿಲ್ಲ. ಸುಪ್ತ ಮನಸ್ಸು ಸಿಡಿವ ಜ್ವಾಲಾಮುಖಿಯಂತೆ. ಸಿಡಿಯುವ ಮುನ್ನ ಲಾವಾರಸ ಭೂಮಿಯೊಳಗೆ ಶಾಂತವಾಗಿಯೇ ಹರಿಯುತ್ತಿರುತ್ತದೆ. ಆದರೆ ಒಳಗಿನ ಒತ್ತಡ ತಡೆಯದೇ ಯಾವಾಗ ಸ್ಫೋಟಗೊಳ್ಳುತ್ತದೆ ಎಂದು ಹೇಳಲು ಬರುವುದಿಲ್ಲ. 


ಸಾಮಾನ್ಯವಾದ ಸ್ಥಿತಿಯಲ್ಲಿ ಎಲ್ಲರೂ ಸಭ್ಯಸ್ಥರೇ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ನಮ್ಮೊಳಗೆ ಬಚ್ಚಿಕೊಂಡಿರುವ ರಾಗರಸಗಳೆಲ್ಲ ಸಿಡಿದು ಅನಾವರಣಗೊಳ್ಳುತ್ತವೆ.


ಅರ್ಜುನ ಪಂಚ ಪಾಂಡವರಲ್ಲಿ ಮಧ್ಯದವನು. 


ಅಪ್ರತಿಮ ಶೂರ, ಧೀರ, ಅಷ್ಟೇ ಸಂಯಮಿ. ಅಣ್ಣನ ವಾಕ್ಯಗಳನ್ನು ಅಕ್ಷರಶಃ ಪಾಲಿಸುವ ಪ್ರಾಮಾಣಿಕ ಸಹೋದರ. ತಾನು ಗೆದ್ದು ತಂದ ಹೆಣ್ಣನ್ನು ತಾಯಿಯ ಮಾತಿನಂತೆ ತನ್ನ ನಾಲ್ವರು ಸಹೋದರರೊಡನೆ ಹಂಚಿಕೊಂಡ ತ್ಯಾಗಿ. ಭೂಮಂಡಲವೆಲ್ಲವನ್ನೂ ಏಕಾಂಗಿಯಾಗಿಯೇ ಗೆಲ್ಲುವ ಶಕ್ತಿಯಿದ್ದರೂ ಅಜ್ಞಾತವಾಸದ ಸಮಯದಲ್ಲಿ ಬೃಹನ್ನಳೆಯ ವೇಷ ಹಾಕಿದವನು. ಇದೆಲ್ಲವನ್ನೂ ಅವನು‌ ಮಾಡಿದ್ದು ಯುದಿಷ್ಠಿರನಿಗಾಗಿ. 


ಅವನ ಭಾತೃಪ್ರೇಮ ಅತ್ಯಂತ ಉನ್ನತವಾದದ್ದು.


ಆದರೂ ಅರ್ಜುನ ಒಮ್ಮೆ ರಾಗದ್ವೇಷಗಳ ಬಲೆಗೆ ಸಿಕ್ಕು ತನ್ನ ಅಗ್ರಜನನ್ನೇ ಕೊಲ್ಲಲು ಮುಂದಾಗುತ್ತಾನೆ. 


ಆ ಪ್ರಸಂಗ ಹೀಗಿದೆ....


ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನಿಂದ ಹೊಡೆತ ತಿಂದ ಧರ್ಮರಾಯ ಮೂರ್ಚಿತನಾದ ಎಂಬ ಸುದ್ದಿ ಕೇಳಿ ಗಾಯಗೊಂಡಿರುವ ಅಗ್ರಜನನ್ನು ನೋಡಲು ಕೃಷ್ಣಾರ್ಜುನರಿಬ್ಬರೂ ಬರುತ್ತಾರೆ. ಅವರನ್ನು ಕಂಡ ಧರ್ಮರಾಯ ಅರ್ಜುನನು ಕರ್ಣನನ್ನು ಗೆದ್ದೇ ಬಂದಿರಬೇಕೆಂದು ಭಾವಿಸುತ್ತಾನೆ. ರಣರಂಗದಲ್ಲಿ ತನ್ನನ್ನು ಗಾಯಗೊಳಿಸಿರುವ ಕರ್ಣನನ್ನು ಅರ್ಜುನ ಸುಮ್ಮನೆ ಬಿಟ್ಟು ಬಂದಿರಲಾರ ಎಂಬ ಧರ್ಮರಾಯನ ಊಹೆ ಸಹಜವಾಗಿದೆ. 


ಆದರೆ ಅರ್ಜುನ ಅಸ್ವಸ್ಥವಾಗಿರುವ ಧರ್ಮರಾಯನನ್ನು ನೋಡಲು ಕರ್ಣನನ್ನು ಕೊಲ್ಲದೇ ಬಿಟ್ಟು ಬಂದಿರುವುದಾಗಿ ತಿಳಿಸಿದಾಗ ಧರ್ಮರಾಯ ಕ್ರೋಧಗೊಳ್ಳುತ್ತಾನೆ.


ತಕ್ಷಣ ಅರ್ಜುನನಿಗೆ ಸಹೋದರ ಎನ್ನುವುದನ್ನು ಮರೆತು ಆತನನ್ನು, ಆತನ ಶಕ್ತಿಯನ್ನು, ಗಾಂಡೀವವನ್ನೂ ಕುರಿತು ವ್ಯಂಗ್ಯವಾಡುತ್ತಾನೆ. ಆಗದನ್ನು ಸಹಿಸದ ಅರ್ಜುನ ಅಣ್ಣನನ್ನೇ ಕೊಲ್ಲಲು ಕತ್ತಿ ಹಿರಿಯುತ್ತಾನೆ. 


ಧರ್ಮರಾಯನ ಕೊಂಕು ಮಾತುಗಳನ್ನು ಸಹಿಸದೇ ಅರ್ಜುನ ಅಣ್ಣನ ಮೇಲೆಯೇ ಕತ್ತಿ ಎತ್ತುವ ರೀತಿಯು ಇಡೀ ಮಹಾಭಾರತ ಕಥೆಯಲ್ಲಿ ಎಲ್ಲಿಯೂ ಕಂಡು ಬಂದಿಲ್ಲ. ಅಲ್ಲದೇ ಹಿಂದೆಂದೂ ಯಾವ ವೀರನೂ ಈ ರೀತಿ ನಡೆದುಕೊಂಡಿಲ್ಲ. 


ಹಾಗೆಂದು ಈ ನಡವಳಿಕೆ ಅಸಹಜವೇನಲ್ಲ.


ಇಬ್ಬರ ನಡವಳಿಕೆಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಏನೆಂದರೆ ಧರ್ಮರಾಯ ಅತ್ಯಂತ ಸಭ್ಯಸ್ಥ. ಆದರೆ ರಣರಂಗದಲ್ಲಿ ಕರ್ಣನಿಂದಾದ ಶಾರೀರಿಕ ವೇದನೆ ಮತ್ತು ಮಾನಸಿಕ ಆಘಾತದಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ. ಹೇಗಾದರೂ ಸರಿ ಅರ್ಜುನನಿಂದ ಕರ್ಣನನ್ನು ಸಂಹರಿಸಲೇಬೇಕು ಎಂಬ ಹಠದಿಂದ ಅರ್ಜುನನಿಗೆ ಚುಚ್ಚಿ ಕೆರಳಿಸುತ್ತಾನೆ.


ಇತ್ತ ಅರ್ಜುನನೂ ಅಗ್ರಜನಿಗೆ ನಿಷ್ಠನಾಗಿದ್ದವನು. ತನ್ನ ವೀರತನವನ್ನು ಅಣ್ಣನಿಗೆ ರಾಜ್ಯವನ್ನು ಮರಳಿ ಕೊಡಿಸುವುದಕ್ಕಾಗಿ ಮುಡಿಪಾಗಿ ಇಟ್ಟವನು. ಧರ್ಮರಾಯ ದ್ಯೂತದಲ್ಲಿ ಸೋತಾಗ ಅದಕ್ಕೆ ಪ್ರತಿಯಾಡದೇ ಆತನನ್ನು ಅನುಸರಿಸಿ ಕಾಡಿಗೆ ಹೋದವನು. ಈಗ ಯುದ್ಧ ಮಾಡಿ ರಾಜ್ಯ ಗೆದ್ದು ಅಣ್ಣನಿಗೆ ಪಟ್ಟ ಕಟ್ಟಬೇಕೆಂದಿರುವವನು.


ಅಂತಹ ಮಹಾನ್ ಸಂಯಮಿಯ ಮನಸ್ಸೂ ಧರ್ಮರಾಯನ ತೀಕ್ಷ್ಣ ನುಡಿಗಳನ್ನು ಸಹಿಸದಾಗುತ್ತದೆ. ಭ್ರಾತೃಪ್ರೇಮವನ್ನೂ ಮರೆಸುವಷ್ಟು ಕೆರಳುತ್ತದೆ. ಶತೃಗಳು ಕಟಕಿಯಾಡಿದರೆ ಯುದ್ಧದಲ್ಲಿ ಅವರಿಗೆ ತಕ್ಕ ಶಾಸ್ತಿ ಮಾಡಬಹುದು. ಆದರೆ ತಮ್ಮವರೇ ಹಳಿದರೆ ಅರ್ಜುನನ ಸ್ಥಿತಿ ಏನಾಗಬೇಕು?


ಈ ಮೊದಲೇ ರಣರಂಗದಲ್ಲಿ ಕೃಷ್ಣನಿಂದ ಅರ್ಜುನ ಭಗವದ್ಗೀತೆಯ ಸಾರವನ್ನೆಲ್ಲ ಹೀರಿ ಅರಗಿಸಿಕೊಂಡಿದ್ದರೂ, ಎಲ್ಲವೂ ನಶ್ವರ ಎಂದು ತಿಳಿದಿದ್ದರೂ, ತನ್ನಣ್ಣನ ಚುಚ್ಚು ಮಾತುಗಳನ್ನು ಕೇಳಿ ಮನಸ್ಸು ಕೆರಳುತ್ತದೆ. ನಂತರ ಕೃಷ್ಣನ ಮಧ್ಯಸ್ತಯಿಕೆಯಿಂದ ಇಬ್ಬರ ತಪ್ಪು ತಿಳುವಳಿಕೆಗಳೂ ದೂರಾಗುತ್ತವೆ.


ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ಧರ್ಮರಾಯ ಮತ್ತು ಅರ್ಜುನರು ಪರಸ್ಪರ ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿಸಿ ಗೌರವಾದರ ಇಟ್ಟುಕೊಂಡಿದ್ದರೂ ಪರಿಸ್ಥಿತಿಯ ಇಕ್ಕಟ್ಟಿಗೆ ಸಿಲುಕಿದಾಗ ಅವರ ಹೊಸ ಸ್ವಭಾವ ಪ್ರಕಟಗೊಳ್ಳುತ್ತದೆ‌. ಅಂದಿನವರೆಗೂ ಅವರಿಬ್ಬರ ಸುಪ್ತಮನಸ್ಸಿನಲ್ಲಿ ಗುಪ್ತವಾಗಿ ಹರಿಯುತ್ತಿದ್ದ ಜ್ವಾಲಾಮುಖಿ ಆ ಸನ್ನಿವೇಶದಲ್ಲಿ ಸ್ಫೋಟಗೊಳ್ಳುತ್ತದೆ.

(ಪ್ರೇರಣಾ ಪತ್ರಿಕೆ- ಫೆಬ್ರವರಿ 2014)

***********
ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ