ದೇವಭೂಮಿ ಉತ್ತರ ಕುರು
"ಕುರು" ಎಂಬುದು ವೇದಗಳ ಕಾಲದಲ್ಲಿ ಹಿಮಾಲಯದ ಉತ್ತರ ಭಾಗದಲ್ಲಿದ್ದ
ಒಂದು ಜನಾಂಗವಾಗಿತ್ತು ಅಂತ ಹೇಳಿದರೆ ಸಾಕು, ಈ ಲೇಖನ ಒಂದೇ ವಾಕ್ಯಕ್ಕೆ ಮುಕ್ತಾಯವಾಗುತ್ತದೆ. ಆದರೆ
ಅದಷ್ಟೇ ಅಲ್ಲ... ಉತ್ತರ ಕುರು ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ.
ಉತ್ತರಕುರು ಎಂದರೆ ದೇವಭೂಮಿ ಎಂದೇ ಕರೆಯಲಾಗುತ್ತದೆ.
ಅಲ್ಲಿ ಯಕ್ಷಯಕ್ಷಿಯರೇ
ವಾಸ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ಪುರಾಣಗಳು ಒಮ್ಮೊಮ್ಮೆ ಅಲ್ಲಿ ಮಹಿಮೆಯುಳ್ಳ ಜನರು ವಾಸಿಸುತ್ತಿದ್ದರು
ಅಂತಲೂ ಹೇಳಿದರೆ, ಮತ್ತೊಮ್ಮೆ ನಮ್ಮಂಥಾ ಮನುಷ್ಯರೇ ವಾಸಿಸುತ್ತಿದ್ದರು ಅಂತ ಹೇಳಿದೆ. ಏನೇ ಆದರೂ ಉತ್ತರಕುರು
ಒಂದು ದೈವೀ ಕ್ಷೇತ್ರ ಎಂದು ನಂಬುವವರೇ ಹೆಚ್ಚು.
ಮಹಾಭಾರತ ಉತ್ತರಕುರುವನ್ನು 'ಗಂಧರ್ವ ಭೂಮಿ' ಎಂದೇ ಬಣ್ಣಿಸಿದೆ.
ಬ್ರಹ್ಮಾಂಡ ಪುರಾಣದ ಪ್ರಕಾರ ಉತ್ತರಕುರುವಿನಲ್ಲಿ ಕುರುವಂಶದ ಮೂಲ ಪುರುಷನಾದ
ಪುರೂರವ ಊರ್ವಶಿಯಿಂದಿಗೆ ವಾಸವಿದ್ದ. ಊರ್ವಶಿ ಮಾನವಳಲ್ಲ ಕಾರಣಕ್ಕೆ ಮತ್ತು ಅವಳೊಡನೆ ಪುರೂರವ ಉತ್ತರಕುರುವಿನಲ್ಲಿ
ಇದ್ದ ಕಾರಣದಿಂದ, ಅಪ್ಸರೆ ಇದ್ದ ನಾಡನ್ನು 'ಯಕ್ಷಿಯರ ನಾಡು' ಎಂದು ಕರೆದಿರಬಹುದು ಅಂತ ಊಹಿಸಬಹುದು.
ಯುದ್ಧದಲ್ಲಿ ಸತ್ತ ಮೇಲೆ ಯೋಧರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಮಾತಿದೆ. ಇಲ್ಲಿ ಸ್ವರ್ಗ ಎಂದರೆ ಉತ್ತರಕುರುವಿಗೇ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಹಾಗನ್ನಿಸಲು ಕಾರಣವೇನೆಂದರೆ, ಸ್ವರ್ಗವು ಹಿಮಾಲಯದಿಂದ ಮೇಲೆ ಹತ್ತಿ ಹೋದರೆ ಸಿಗುತ್ತದೆ ಅಂತ ಕೆಲವರು ನಂಬುತ್ತಾರೆ.
ಅದರಂತೆ ಹಿಮಾಲಯದಿಂದ
ಮೇಲೆ ಹೊರಟರೆ ಸಿಗುವುದೇ ಉತ್ತರಕುರುವಿನ ಭೂಮಿ. ಈ ನಾಡನ್ನು 'ಭೂಮಿಯ ಮೇಲಿನ ಸ್ವರ್ಗ' ಅಂತ ಬಣ್ಣಿಸುತ್ತಿದ್ದಿರಬಹುದು.
ಕಾಲಕ್ರಮೇಣ ಈ ಪದದಲ್ಲಿರುವ 'ಭೂಮಿ ಮೇಲಿನ' ಎಂಬ ಪದ ಬಿಟ್ಟು ಹೋಗಿ, 'ಸ್ವರ್ಗ' ಎನ್ನುವ ಪದ ಮಾತ್ರ
ಉಳಿದುಕೊಂಡಿರಬಹುದು.
ಕೆಲವು ಇತಿಹಾಸಕಾರರ ಪ್ರಕಾರ ಉತ್ತರಕುರುವನ್ನು ಕಿರ್ಗಿಸ್ತಾನ್ ಅಂತಲೂ ಕರೆಯಲಾಗುತ್ತಿತ್ತಂತೆ.
ಇದಕ್ಕೆ ಅವರು ಕೊಡುವ ಉದಾಹರಣೆ ಎಂದರೆ ಮಹಾಭಾರತ. ಮಹಾಭಾರತದಲ್ಲಿ ಭೀಷ್ಮ
ತನ್ನ ತಮ್ಮನಾದ ವಿಚಿತ್ರ ವೀರ್ಯನಿಗೆ ಮದುವೆ ಮಾಡಿಸಲೆಂದು ಕಾಶಿ ರಾಜ್ಯದಿಂದ ಮೂವರು ಕನ್ಯೆಯರನ್ನು
ಹೊತ್ತು ತರುತ್ತಾನೆ. ಈ ರೀತಿಯಲ್ಲಿ ಮದುವೆಗಾಗಿ ಹೆಣ್ಣುಗಳನ್ನು ಅಪಹರಿಸಿ ತರುವ ಪದ್ಧತಿ ಇದ್ದಿದ್ದು
ಕಿರ್ಗಿಸ್ತಾನದವರಲ್ಲಿ ಮಾತ್ರ.
** ಉತ್ತರಕುರು
ಮೇರು ಪರ್ವತದ ಉತ್ತರ ಭಾಗದಲ್ಲಿದೆ.
** ಭಗವತ್ ಪುರಾಣದ ಪ್ರಕಾರ ಉತ್ತರ ಕುರುವಿನ ಜನರು ದಕ್ಷಿಣ ಕುರುವಿನ ಜನರಿಗಿಂತಾ ತುಂಬಾ ವಿಭಿನ್ನವಾಗಿದ್ದರು.
** ಅವರು ಮಾಡುತ್ತಿದ್ದ ಆಚರಣೆ, ನಡೆಸುತ್ತಿದ್ದ ಆಡಳಿತದಿಂದ ಹಿಡಿದು ರೀತಿ, ನೀತಿ ಎಲ್ಲದರಲ್ಲಿಯೂ ದಕ್ಷಿಣದವರಿಗಿಂತಾ ಭಿನ್ನರಾಗಿದ್ದರು.
** ಅವರು ಯುದ್ಧ ಮತ್ತು ಹಿಂಸೆಗಳಿಂದ ಬಹುದೂರ. ಅವರು ಕೇವಲ ಶಾಂತಿಯನ್ನು ಮಾತ್ರ ಇಷ್ಟಪಡುವಂಥವರಾಗಿದ್ದರು.
** ಅವರು ತಮ್ಮ
ನೆಲದಲ್ಲಿ ತಮ್ಮ ಪಾಡಿಗೆ ತಾವು ಇರುವಂಥವರಾಗಿದ್ದರು.
** ಅವರು ರಾಜಪ್ರಭುತ್ವವಿಲ್ಲದೇ
ಆಡಳಿತ ನಡೆಸುವವರಾಗಿದ್ದರು.
ಈ ಮೇಲಿನ ಕಾರಣಗಳು ನಮಗೆ ಉತ್ತರ ಕುರುವಿನ ಬಗ್ಗೆ ನಮ್ಮಲ್ಲಿ ಕುತೂಹಲ ಮೂಡಿಸುತ್ತದೆಯಾದರೂ, ನಿಜವಾದ ಕುತೂಹಲ ಇರುವುದು ಇದರ ಬಗ್ಗೆ ಅಲ್ಲ. ಅದಕ್ಕೆ ಬೇರೆಯದೇ ಕಾರಣವಿದೆ. ನಮಗೆ ನಿಜವಾಗಿಯೂ ಉತ್ತರ ಕುರುವಿನ ಬಗ್ಗೆ ತಿಳಿಯಬೇಕಿರುವುದು ಎಂದರೆ ಅಲ್ಲಿನ ಜನರ ಜೀವನದ ಬಗ್ಗೆ...!
ಮುಕ್ತಕಾಮ:
ಮಹಾಭಾರತದ ಆದಿಪರ್ವದಲ್ಲಿ
ಉತ್ತರಕುರುವಿನ ಅಂದಿನ ಜನರ ಮುಕ್ತ ಪ್ರೀತಿ ಅಥವಾ ಮುಕ್ತಕಾಮದ ಬಗ್ಗೆ ವಿವರಿಸಲಾಗಿದೆ. ನಮ್ಮನ್ನು
ಅದರತ್ತ ಸೆಳೆಯುವಂತೆ ಮಾಡುವ ಅಂಶವೂ ಅದೇ. ಹಾಗಂತ ಮುಕ್ತಕಾಮವೆಂದರೆ ಪ್ರಾಣಿ-ಪಕ್ಷಿಗಳು ಅನುಸರಿಸುವಂತಹಾ
ಸ್ವಚ್ಛಂದ ಬಗೆಯದ್ದು ಅಂತ ಅಂದುಕೊಂಡರೆ ಅದು ನಿಮ್ಮ ತಪ್ಪು ಊಹೆಯಾಗುತ್ತದೆ.
ಮುಕ್ತಕಾಮ ಎಂದರೆ ಕೇವಲ ಕಾಮದ ಸ್ವಚ್ಛಂದ ವಿಹಾರವಷ್ಟೇ ಅಲ್ಲ... ಅದಕ್ಕಿಂತಲೂ
ಮಿಗಿಲಾಗಿ ಅದರಲ್ಲಿ ನಾನು, ನನ್ನದು ಎಂಬ ಭಾವ ಇರುವುದಿಲ್ಲ. ಇದು ನನ್ನದು, ಇದು ಅವನದ್ದು ಎಂಬ ಭಾವವಿರದೇ
ಎಲ್ಲವೂ ಎಲ್ಲರದ್ದು ಎಂಬ ಭಾವವಿರುತ್ತದೆ. ಹಾಗಾಗಿ ಅಂತವರದ್ದು ತುಂಬಾ ಉನ್ನತ ಮಟ್ಟದ ಜೀವನವಾಗಿರುತ್ತದೆ.
ಅಲ್ಲಿನ ಹೆಣ್ಣು ಮಕ್ಕಳಿಗಂತೂ ತುಂಬಾ ಶ್ರೇಷ್ಠವಾದ ಸ್ಥಾನವಿತ್ತು.
** ಅಂದಿನ ಹೆಣ್ಣುಮಕ್ಕಳು
ಯಾರ ಅಧೀನಕ್ಕೂ ಒಳಪಡುತ್ತಿರಲಿಲ್ಲ.
** ಅವರು ಮನೆಯೊಳಗೆ
ಬಂಧಿಯಾಗುತ್ತಿರಲಿಲ್ಲ.
** ಅವರು ತಮ್ಮ
ಅವಶ್ಯಕತೆಗಳ ಪೂರೈಕೆಗಾಗಿ ಪುರುಷರನ್ನು ಅವಲಂಬಿಸುತ್ತಿರಲಿಲ್ಲ.
** ಅವರು ಯಾವಾಗಲೂ ಸ್ವತಂತ್ರರಾಗಿ ಸುತ್ತಾಡುತ್ತಾ ಜೀವನದ ಆನಂದವನ್ನು ಸವಿಯುತ್ತಿದ್ದರು.
** ಅವರು ತಮ್ಮ ಪತಿಯೊಂದಿಗಲ್ಲದೇ ಬೇರೆ ಪುರುಷರ ಜೊತೆಯೂ ಸಂಬಂಧ ಬೆಳೆಸುತ್ತಿದ್ದರು. ಆದರೆ ಇದು ಪಾಪ ಅಂತ ಅನ್ನಿಸಿಕೊಳ್ಳುತ್ತಿರಲಿಲ್ಲ. ಇದರ ಕುರಿತು ಯಾರೂ ತಪ್ಪು ತಿಳಿಯುತ್ತಿರಲಿಲ್ಲ.
ಏಕೆಂದರೆ ಆಗಿನ ಉತ್ತರ ಕುರುವಿನ ಜೀವನ ಪದ್ಧತಿಯೇ ಹಾಗಿತ್ತು. ಉತ್ತರ ಕುರುವಿನ ಯಾವುದೇ ಹೆಣ್ಣು ಯಾರೊಂದಿಗಾದರೂ ಸಂಬಂಧ ಬೆಳೆಸಬಹುದಿತ್ತು. ಅವರಿಗೆ ಹುಟ್ಟಿದ ಮಕ್ಕಳು ಎಲ್ಲರದ್ದೂ ಆಗಿರುತ್ತಿತ್ತು. ಎಲ್ಲರೂ ಆ ಮಗುವನ್ನು ತಮ್ಮದೇ ಮಗು ಎನ್ನುವಂತೆ ನೋಡುತ್ತಿದ್ದರು.
ಹುಟ್ಟುವ ಮಕ್ಕಳನ್ನು
ಎಲ್ಲರೂ ಹೆಣ್ಣು, ಗಂಡೆನ್ನದೇ ಸಮಾನವಾಗಿ ಪ್ರೀತಿಸುತ್ತಿದ್ದರು. ಅಲ್ಲಿನ ಪುರುಷರು ಹೊರಗೆ ಹೋಗುವಾಗ,
ದಾರಿಯಲ್ಲಿ ಯಾವುದಾದರೂ ಮಗು ಕಂಡರೆ, ಅದನ್ನು ತಮ್ಮದೇ ಮಗು ಎನ್ನುವ ಹಾಗೆ ಒಮ್ಮೆ ಎತ್ತಿ ಮುದ್ದಾಡಿಯೇ
ಮುಂದೆ ಹೋಗುತ್ತಿದ್ದರು.
ಅವರ ಈ ರೀತಿ, ನೀತಿಗಳು ನಮ್ಮ ಜೀವನಕ್ಕೆ ವಿರುದ್ಧವಾಗಿದ್ದುದರಿಂದ ಮತ್ತು ಅವರು ನಮಗಿಂತಾ ವಿಭಿನ್ನವಾದ ಜೀವನದ ರೀತಿಯನ್ನು ಅಳವಡಿಸಿಕೊಂಡಿದ್ದುದರಿಂದ ಅವರನ್ನು ಗಂಧರ್ವರೆಂದೂ, ಅವರ ನಾಡುನ್ನು ದೇವಭೂಮೆ ಎಂದೂ ಕರೆಯಲಾಗಿದೆ ಅಂತ ತೋರುತ್ತದೆ.
ಅಲ್ಲದೇ ಆ ಜನ ಬೇರೆ ಯಾರೊಂದಿಗೂ ಬೆರೆಯಲು ಇಷ್ಟ ಪಡದೇ ತಮ್ಮ ಪಾಡಿಗೆ ತಾವಿದ್ದುದರಿಂದಲೂ, ಅವರಿದ್ದ ಸ್ಥಳ ಹಿಮಾಲಯದ ಮೇಲ್ಭಾಗದಲ್ಲಿ ಇದ್ದುದರಿಂದ ಅವರಿಗೆ 'ದೇವರ ಪಟ್ಟ' ದೊರೆತಿರಬಹುದು ಅಂತ ಅನ್ನಿಸುತ್ತದೆ.
******************
