ಊರ್ವಶಿಯ ಶಾಪ
ಅವನ ಮುಂದೆ ಸಾಕ್ಷಾತ್ ಅಪ್ಸರೆಯೇ ನಿಂತಿದ್ದಳು...
ಅವನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. ಆಕೆಯ ದೇಹದ ಹರೆಯ ಚೂರೂ ಮಾಸಿರಲಿಲ್ಲ. ಕಣ್ಣುಗಳು ಬರೇ ಮಿನುಗುತ್ತಿರಲಿಲ್ಲ.. ಬದಲಿಗೆ ಹೊಳೆಯುತ್ತಿದ್ದವು. ಆ ಹೊಳಪು ತನಗಾಗಿ ಅಂತ ಗೊತ್ತು ಅವನಿಗೆ.
ಸ್ವರ್ಗಕ್ಕೆ ಬಂದಾಗಿನಿಂದಲೂ ಆಕೆಯ ಕಣ್ಣುಗಳು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಅವನು ಕಂಡುಕೊಂಡಿದ್ದ. ಮೊದಲಾಗಿದ್ದರೆ ಅದರ ಸುಳಿವು ಸಿಗುತ್ತಿದ್ದಂತೆಯೇ ಆಕೆಯ ತೋಳ್ತೆಕ್ಕೆ ಸೇರಲು ನೆಪ ಹುಡುಕುತ್ತಿದ್ದ.
ಆದರೆ ಈಗ ಅವನು ಮೊದಲಿನ ಅರ್ಜುನನಲ್ಲ.
ವಯಸ್ಸಾದಂತೆ ಮನಸ್ಸೂ ಸಹ ಮಾಗಿತ್ತು. ಕೇವಲ ಕಣ್ಣೋಟ ಅಥವಾ ಚಿಕ್ಕ ಸ್ಪರ್ಷಕ್ಕೆ ದೇಹವನ್ನೇ ಬಯಸುವಷ್ಟು ಹುಡುಗತನ ಈಗ ಅವನಲ್ಲಿ ಇರಲಿಲ್ಲ. ಹಾಗಾಗಿ ಊರ್ವಶಿ ತನ್ನನ್ನು ಬಯಸಿ ತನ್ನೆದುರು ನಿಂತಾಗ ಆಕೆಯ ದೇಹವನ್ನು ಗಮನಿಸದೇ ಆಕೆಯ ಕಣ್ಣೊಳಗೆ ಇಣುಕಿದ.
ಅಪ್ಸರೆಯರಿಗೆ ವಯಸ್ಸಾಗುವುದಿಲ್ಲ. ಸಾವಿರಾರು ವರ್ಷ ಕಳೆದರೂ ಅವರ ದೇಹ ಯೌವ್ವನಭರಿತವಾಗಿಯೇ ಇರುತ್ತದೆ. ಯಾವಾಗಲೂ ಚಿಕ್ಕ ತರುಣಿಯಂತೆ ಕಂಗೊಳಿಸುತ್ತಿರುತ್ತಾರೆ.
ಆದರೆ ಮನಸ್ಸಿಗೆ ವಯಸ್ಸಾಗುತ್ತದೆಯಲ್ಲವೇ?
ಅರ್ಜುನ ಕಂಡದ್ದೂ ಅದನ್ನೇ... ಊರ್ವಶಿಯ ದೇಹ ಹರೆಯದಾಗಿದ್ದರೂ ಆಕೆಯ ಕಣ್ಣುಗಳಲ್ಲಿ ತಮ್ಮ ವಂಶವೇ ಪ್ರತಿಬಿಂಬಿಸಿತು. ಕೌರವರ ಮೂಲಪುರುಷನಾದ ಪುರೂರವನ ಪ್ರೇಯಸಿ ಆಕೆ. ಪುರೂರವನ ನಂತರ ಕುರುವಂಶದಲ್ಲಿ ಎಷ್ಟು ರಾಜರು ಹುಟ್ಟಿದ್ದಾರೆ, ಸತ್ತಿದ್ದಾರೆ.
ಅಂದರೆ ಆಕೆ ಅಷ್ಟು ಹಳಬಳು...
ದೇಹ ಹೊಸದರಂತೆ ಇದ್ದರೂ ಅಷ್ಟೂ ವರ್ಷಗಳ ಅನುಭವ ಕಂಡೂ ಕಾಣದಂತೆ ಆಕೆಯ ವ್ಯಕ್ತಿತ್ವದಲ್ಲಿ ಅಡಗಿತ್ತು. ನೋಟದಲ್ಲಿ ಹುಟ್ಟುವ ಪ್ರೀತಿಗೆ ಇದನ್ನೆಲ್ಲಾ ಕಂಡುಕೊಳ್ಳುವಷ್ಟು ಪುರಸೊತ್ತು ಇರುವುದಿಲ್ಲ. ಆದರೆ ಅರ್ಜುನ ಇದೆಲ್ಲವನ್ನೂ ಗಮನಿಸಿದ. ಅದಕ್ಕೊಂದು ಕಾರಣವಿದೆ.
ಅರ್ಜುನನೇನು ಏಕಪತ್ನೀ ವ್ರತಸ್ಥನಲ್ಲ.
ಹೋದ ಕಡೆಯಲ್ಲೆಲ್ಲ ಒಂದೊಂದು ಮದುವೆಯಾಗುವುದು ಅವನ ಹವ್ಯಾಸ. ದ್ರೌಪದೀ ಅಲ್ಲದೇ ಸುಭದ್ರೆ, ಉಲೂಪಿ, ಚಿತ್ರಾಂಗದೆಯರನ್ನೂ ಕಟ್ಟಿಕೊಂಡು ಮಹಾ ರಸಿಕನೆಂದು ಹೆಸರುವಾಸಿಯಾಗಿರುವವನು. ಅಂಥವನು ದೇವಲೋಕದ ಅಪ್ಸರೆಯೇ ಆಹ್ವಾನ ಕೊಟ್ಟಾಗ, ಸ್ವೀಕರಿಸುವುದು ಬಿಟ್ಟು ಯೋಚಿಸುತ್ತಾ ನಿಂತ ಎಂದರೆ ನಮಗೆ ಅನುಮಾನ ಮೂಡುತ್ತದೆ. ಕಾರಣವಿಷ್ಟೇ.
ದೇವಲೋಕದ್ದು ಮುಕ್ತ ಕಾಮ.
ಇಲ್ಲಿ ಯಾರೂ ಯಾರನ್ನೂ ಮದುವೆಯಾಗಬೇಕಿಲ್ಲ. ನಾಳೆಯ ದಿನ ಇದು ನಿನ್ನ ಮಗು ಅಂತ ಯಾರೂ ತಂದುಕೊಡುವುದಿಲ್ಲ. ಯಾರ ಜೊತೆ ಸೇರಿದರೂ ಇದು ತಪ್ಪು ಅನಿಸುವುದಿಲ್ಲ. ಆದರೂ ಅರ್ಜುನ ಊರ್ವಶಿಯನ್ನು ನಿರಾಕರಿಸುತ್ತಾನೆ.
ಏಕೆಂದರೆ ಅವನು ಸ್ವರ್ಗಕ್ಕೆ ಹೊರಟಾಗ ಮೊದಲು ಚಡಪಡಿಸಿದವಳು ದ್ರೌಪದಿ. ತನಗಾಗಿ ಹುಟ್ಟಿ, ತನ್ನ ಪ್ರೀತಿಯಲ್ಲಿಯೇ ಅಸ್ತಿತ್ವ ಕಂಡುಕೊಂಡವಳು ಅವಳು. ತಾನೋ ಹೋದ ಕಡೆಯಲ್ಲೆಲ್ಲಾ ವಿವಾಹದ ಖಾತೆ ತೆರೆಯುತ್ತಾ ಬರುವವನು. ಹಾಗಾಗಿ ಸ್ವರ್ಗದ ಅಪ್ಸರೆಗೆ ತಾನು ಮನಸೋತರೆ ಎಂಬುದು ದ್ರೌಪದಿಯ ಆತಂಕ.
ಅದನ್ನ ಹೇಳಲಾಗದೇ ಬಿಡಲಾಗದೇ ಆಕೆ ತೊಳಲಾಡುತ್ತಿದ್ದ ಪರಿ ಅವನ ಕಣ್ಣಿಗೆ ಕಟ್ಟಿದಂತಿತ್ತು. ರಾಜಕುಮಾರಿಯಾಗಿ ಮೆರೆಯಬೇಕಿದ್ದ ಆಕೆ ತಮ್ಮೈವರನ್ನು ಕಟ್ಟಿಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಹಾಗಾಗಿ ಆಕೆಗೆ ಮತ್ತಷ್ಟು ನೋವು ಕೊಡುವ ಉದ್ದೇಶ ಅರ್ಜುನನಿಗೆ ಇರಲಿಲ್ಲ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಅಂತ ಯೋಚಿಸುತ್ತಾ ನಿಂತವನಿಗೆ ಹೊಳೆದದ್ದು ಆ ಅಪ್ಸರೆ ತಮ್ಮ ವಂಶದ ಹಿರಿಯಳು ಅಂತ. ಕೂಡಲೇ ಊರ್ವಶಿಗೆ ನೀವು ನನಗೆ ಮಾತೆಯ ಸಮಾನ ಎಂದು ಹೇಳಿ ನಮಸ್ಕರಿಸಿ ಹೊರಟುಬಿಡುತ್ತಾನೆ.
ಆದರೆ ಊರ್ವಶಿ ಅವನ ಮಾತಿನಿಂದ ಉರಿದು ಬೀಳುತ್ತಾಳೆ.
ಅವಳಿಂದ ಈ ಅಪಮಾನ ಸಹಿಸಲಾಗುವುದಿಲ್ಲ. ಇದು ಕಲಿಗಾಲದಲ್ಲಿ ಹೆಣ್ಣುಮಕ್ಕಳನ್ನು "ಆಂಟಿ" ಎಂದು ಕರೆದಷ್ಟೇ ಘೋರವಾದದ್ದು. ಹಾಗಾಗಿ ಕೋಪ ತನ್ನ ಮಟ್ಟವನ್ನು ಮೀರಿಬಿಡುತ್ತದೆ. ಆದರೆ ಹಗಲೂ-ರಾತ್ರಿ ಏನೇನೋ ಅಸಂಬದ್ಧವಾಗಿ ಮಾತನಾಡುತ್ತಾ ತನ್ನ ಕೋಪ ತಣಿಸಿಕೊಳ್ಳಲು ಊರ್ವಶಿ ಭೂಮಿಯ ಹೆಣ್ಣಲ್ಲವಲ್ಲ.
ಅವಳ ಯೋಚನೆಯೆಲ್ಲಾ ಉಚ್ಛ ಮಟ್ಟದ್ದು. ಭೂಮಿಯಾಗಲೀ ಅಥವಾ ದೇವಲೋಕವಾಗಲೀ ಅತಿ ಘೋರ ಶಿಕ್ಷೆ ಎಂದರೆ ಮರಣದಂಡನೆ. ಆದರೆ ಅವನು ಸುಮ್ಮನೆ ಸತ್ತರೆ ತನಗೇನು ಸಿಗುತ್ತದೆ?
ಮರಣಕ್ಕಿಂತಲೂ ಭಯಂಕರವಾದ ಶಿಕ್ಷೆ ಯಾವುದಿದೆ ಅಂತ ಆಲೋಚಿಸಿ 'ಒಂದು ವರ್ಷ ನಪುಂಸಕನಾಗು' ಅಂತ ಶಪಿಸಿಬಿಡುತ್ತಾಳೆ.
ಬಹುಶಃ ಹೆಣ್ಣು ತಾನೇ ತಾನಾಗಿ ಬಯಸಿ ಮೈ ಮೇಲೆ ಬಿದ್ದರೂ ಅವಳ ಕಾಮನೆಗೆ ಸ್ಪಂದಿಸದಿದ್ದ ಕಾರಣಕ್ಕೆ ಇರಬೇಕು, ಅವನ ಪುರುಷತ್ವವೇ ಇಲ್ಲವಾಗುವ ಹಾಗೆ ಶಾಪ ಕೊಡುತ್ತಾಳೆ. ಆದರೆ ಒಳ್ಳೆಯ ದಾರಿಯಲ್ಲಿ ಇರುವವನಿಗೆ ಶಾಪವೂ ವರವಾಗುತ್ತದೆ. ಇಲ್ಲಿಯೂ ಸಹ ಪಾಂಡವರು ಅಜ್ಞಾತವಾಸದ ಸಮಯದಲ್ಲಿದ್ದಾಗ ಅರ್ಜುನ ಬೃಹನ್ನಳೆಯ ರೂಪ ಧರಿಸಲು ಊರ್ವಶಿಯ ಶಾಪ ಸಹಾಯಕವಾಗುತ್ತದೆ.
ಒಂದಂತೂ ನಿಜ.
ಕಂಡ ಹೆಣ್ಣುಗಳಿಗೆಲ್ಲಾ ಮನ ಸೋಲುತ್ತಿದ್ದ ಅರ್ಜುನ ಒಂದು ಕಡೆಯಾದರೆ, ಸಾಕ್ಷಾತ್ ಅಪ್ಸರೆಗೆ ಮಾತೃ ಸಮಾನ ಅಂತ ವಂದಿಸಿದ ಅರ್ಜುನನದೇ ಮತ್ತೊಂದು ವ್ಯಕ್ತಿತ್ವ. ಜೀವನದಲ್ಲಿ ಅನುಭವಿಸುವ ಕಷ್ಟಗಳು ವ್ಯಕ್ತಿಯನ್ನು ಪ್ರಬುದ್ಧರನ್ನಾಗಿಸುತ್ತವೆ.
(ಓ ಮನಸೇ 16-31 Jan 2020)
**************
ಕೆ ಎ ಸೌಮ್ಯ
ಮೈಸೂರು
