ನಚಿಕೇತ
ಭೂಮಿ ಇರುವುದೇ ಮನುಷ್ಯರು ತಾವು ಮಾಡಿದ ಪಾಪ- ಪುಣ್ಯ ಅನುಭವಿಸುವುದಕ್ಕಾಗಿ. ಹಾಗಾಗಿ ಇಲ್ಲಿ ಜನ್ಮ ಎತ್ತುವ ಮನುಷ್ಯರಿಗೆ ಕಾಮನೆಗಳು ಜಾಸ್ತಿ. ಅದರಲ್ಲಿಯೂ ಎಳ್ಳಷ್ಟೂ ಕಷ್ಟ ಪಡದೇ ಸ್ವರ್ಗ ಸುಖ ಸಿಗುತ್ತದೆ ಎಂದರೆ ಕಣ್ಣುಮುಚ್ಚಿ ಒಪ್ಪಿಬಿಡುತ್ತಾರೆ.
ಆದರೆ ನಚಿಕೇತನಿಗೆ ಮಾತ್ರ ತಾನಾಗಿಯೇ ಬೇಕಾದ ಸೌಕರ್ಯಗಳು ಒದಗಿ ಬಂದರೂ ಆತ ಅದನ್ನು ಬಯಸದೇ ತನ್ನ ಚಿತ್ತ ಸ್ವಾಸ್ಥ್ಯ ಕಾಪಾಡಿಕೊಳ್ಳುತ್ತಾನೆ.
ಆಗ ಆಗಿದ್ದ ವಯಸ್ಸಾದರೂ ಎಷ್ಟು ನಚಿಕೇತನಿಗೆ?
ಚಿಕ್ಕ ಮಗು ಅವನು. ಆದರೂ ತನ್ನ ಗುರಿಯ ಬಗ್ಗೆ ಅಚಲ ನಿರ್ಧಾರ ಆತನದ್ದು. ಎಂಥೆಂಥಹಾ ಪ್ರಲೋಭನೆಗಳು ಆತನ ಗುರಿಯನ್ನು ಬದಲಿಸಲು ಆಗಲಿಲ್ಲ. ಅವನ ಗುರಿ ಒಂದೇ ಬ್ರಹ್ಮಜ್ಞಾನ ಪಡೆಯುವುದು.
ಚಿಕ್ಕಂದಿನಿಂದಲೇ ಆತನ ಮನಸ್ಸು ಪಾಪ-ಪುಣ್ಯಗಳನ್ನು ವಿಶ್ಲೇಷಿಸುತ್ತಿತ್ತು. ಆದರೆ ಆತ ಬೆಳೆಯುತ್ತಿದ್ದ ಪರಿಸರದಲ್ಲಿ ಪಾಪ-ಪುಣ್ಯಗಳ ಬಗ್ಗೆ ಅಗಾಧವಾದ ಜ್ಞಾನ ಹೊಂದಿರಲು ಸಾಧ್ಯವಿರಲಿಲ್ಲ.
ಹಾಗಾಗಿ ಇದರ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಮನುಷ್ಯ ಮಾತ್ರದವರಿಂದ ಸಾಧ್ಯವಿಲ್ಲ, ಯಮಧರ್ಮರಾಯ ಒಬ್ಬನೇ ಇದಕ್ಕೆ ಸರಿಯಾದ ವ್ಯಕ್ತಿ ಎಂದು ನಚಿಕೇತನಿಗೆ ಗೊತ್ತಿತ್ತು.
ಅಷ್ಟೇ ಹೊರತೂ ಯಮಧರ್ಮನ ಬಳಿ ಕೇಳಬೇಕೆಂದರೆ ತಾನು ಸಾಯಬೇಕು ಎಂಬ ವಿಚಾರ ಆ ಮಗುವಿಗೆ ಅರಿವಿರಲಿಲ್ಲ. ಸಾವು ಎಂಬ ಪದವೇ ಗೊತ್ತಿಲ್ಲದ ಮುಗ್ಧ ಬಾಲಕ ಅವನು. ಎಂದಾದರೊಂದು ದಿನ ತಾನು ಯಮನನ್ನು ನೋಡಿಯೇ ನೋಡುತ್ತೇನೆ ಎಂಬ ದೃಢವಿಶ್ವಾಸದಿಂದ ಇದ್ದ.
ಒಮ್ಮೆ ಆತನ ತಂದೆಯಾದ ವಾಜಶ್ರವಸ್ 'ವಿಶ್ವಜಿತ್ ಯಾಗ'ವನ್ನು ಮಾಡುವ ಕೈಂಕರ್ಯ ಕೈಗೊಂಡರು. 'ವಿಶ್ವಜಿತ್' ಯಾಗವನ್ನು ಮಾಡಿದರೆ ಆ ಯಾಗ ಮಾಡಿದವರಿಗೆ ಅಪಾರ ಕೀರ್ತಿ ಹಾಗೂ ಸ್ವರ್ಗದಲ್ಲಿ ಸ್ಥಳ ದೊರೆಯುತ್ತದೆ ಎಂಬ ನಂಬಿಕೆಯಿತ್ತು.
ಆದರೆ ಆ ಸ್ವರ್ಗಸುಖಕ್ಕಾಗಿ ಭೂಮಿಯ ಮೇಲೆ ಅಗಾಧ ಪ್ರಮಾಣದ ದಾನ ಮಾಡಬೇಕಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಈ ಯಾಗ ಮಾಡುವವರು ತನ್ನಲ್ಲಿ ತನಗಾಗಿ ಏನೂ ಉಳಿಸಿಕೊಳ್ಳದೇ ಎಲ್ಲವನ್ನೂ ದಾನ ಮಾಡಬೇಕಿತ್ತು.
ಹಾಗಿದ್ದರೆ ತಂದೆಯು ತನ್ನನ್ನೂ ದಾನ ಕೊಡಬಹುದು ಎಂದು ನಚಿಕೇತ ಬಗೆದ. ಆದರೆ ಯಾರಿಗೆ ದಾನ ಕೊಡುವರು ಎಂಬ ಕುತೂಹಲ ಅವನನ್ನು ಕಾಡುತ್ತಿತ್ತು. ಹಾಗಾಗಿ ನಚಿಕೇತ ತಂದೆಯ ಬಳಿ ಹೋಗಿ ತನ್ನನ್ನು ಯಾರಿಗೆ ದಾನವಾಗಿ ಕೊಡುವಿರಿ ಎಂದು ಕೇಳಿದ.
ತಂದೆಯು ದಿಗ್ಭ್ರಮೆಯಿಂದ ಅವನತ್ತ ಒಮ್ಮೆ ನೋಡಿ ಮತ್ತೆ ತಮ್ಮ ಕೆಲಸ ಮುಂದುವರೆಸಿದರು. ನಚಿಕೇತ ಪದೇ ಪದೇ ತಂದೆಯನ್ನು ಕೇಳುತ್ತಲೇ ಇದ್ದ. ತಂದೆಗೆ ಸಿಟ್ಟು ಬಂದು ನಿನ್ನನ್ನು ಯಮನಿಗೆ ಕೊಡುತ್ತೇನೆ ಎಂದುಬಿಟ್ಟರು.
ಆ ಮಾತು ಆಡಿದ ನಂತರ ತಂದೆಯವರಿಗೆ ಪಶ್ಚಾತ್ತಾಪವಾಯ್ತು. ಆದರೆ ಯಾಗದ ನಿಯಮದಂತೆ ಆಡಿದ ಮಾತನ್ನು ಉಳಿಸಿಕೊಳ್ಳಲೇ ಬೇಕಿತ್ತು.
ನಚಿಕೇತ ನರಕದ ಕಡೆ ಹೊರಡುತ್ತಾನೆ.
ನಚಿಕೇತ ನರಕ ತಲುಪಿದಾಗ ಯಮ ಪಟ್ಟಣದಲ್ಲಿ ಇರುವುದಿಲ್ಲ. ಯಮನಿಗಾಗಿ ಮೂರು ದಿನ ಕಾಯುತ್ತಾ ಕೂರುತ್ತಾನೆ. ಮೂರು ದಿನಗಳ ತರುವಾಯ ಯಮ ಬಂದಾಗ ನಚಿಕೇತನನ್ನು ಕಂಡು ಚಕಿತನಾಗುತ್ತಾನೆ. ನಚಿಕೇತ ಸಶರೀರ ಸಹಿತ ನರಕಕ್ಕೆ ಬರಬೇಕಾದ ಕಾರಣವನ್ನು ತನ್ನ ದಿವ್ಯ ದೃಷ್ಟಿಯಿಂದ ಅರಿಯುತ್ತಾನೆ.
ಮನುಷ್ಯರು ಸತ್ತು ತಾವು ಮಾಡಿದ ಪಾಪಕರ್ಮವನ್ನು ಅನುಭೋಗಿಸಲು ನರಕಕ್ಕೆ ಬರುತ್ತಾರೆ. ಆದರೆ ಈ ಮಗು ಬ್ರಹ್ಮಜ್ಞಾನ ಪಡೆಯಲು ಕಾತುರನಾಗಿ ಇಲ್ಲಿ ಬಂದಿದ್ದಾನೆ ಅಂತ ಯಮನಿಗೆ ನಚಿಕೇತನ ಮೇಲೆ ಕರುಣೆ ಉಂಟಾಗುತ್ತದೆ.
ಅದಕ್ಕಾಗಿ ನಚಿಕೇತನಿಗೆ ಕೇಳಿದಷ್ಟು ಒಡವೆ, ವಸ್ತು, ಬಂಗಾರ, ಐಶ್ವರ್ಯಗಳನ್ನು ಕೊಡುತ್ತೇನೆಂದರೂ ನಚಿಕೇತ ಕೇಳುವುದಿಲ್ಲ. ಅವನ ಕೋರಿಕೆ ಒಂದೇ....
ಬ್ರಹ್ಮಜ್ಞಾನ!!!
ಕಡೆಗೆ ಯಮನೇ ಸೋತು ನಚಿಕೇತನಿಗೆ ಆ ವಿದ್ಯೆಯನ್ನು ಹೇಳಿಕೊಡುತ್ತಾನೆ.
.
.
"ಭೂಮಿ ಇರುವುದು ಮನುಷ್ಯ ಕೇವಲ ಪಾಪಪುಣ್ಯಗಳನ್ನು ಅನುಭವಿಸಲು ಮಾತ್ರವಲ್ಲ. ಬದಲಿಗೆ ಪುಣ್ಯಸಂಚಯ ಮಾಡಿಕೊಳ್ಳಲು. ಮನುಷ್ಯನಾಗಿ ಹುಟ್ಟಿದ ಮೇಲೆ ಸಹಮಾನವರಿಗೆ ಮಾತ್ರವಲ್ಲದೇ ಸಕಲ ಚರಾಚರ ಜೀವಿಗಳ ಮೇಲೆ ಅನುಕಂಪ ತೋರಿಸಬೇಕು. ಪಾಪ-ಪುಣ್ಯಗಳಿಂದ ಗೆದ್ದರೆ ಸಿಗುವುದೇ ಮುಕ್ತಿ. ಈ ಮುಕ್ತಿ ಹೊಂದಿದವರಿಗೆ ಮತ್ತೆ ಮಾನವ ಜನ್ಮ ಇರುವುದಿಲ್ಲ. ಹಾಗಾಗಿ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು, ಒಳ್ಳೆಯದನ್ನೇ ಮಾಡಬೇಕು" ಎಂಬ ಆತ್ಮವಿದ್ಯೆಯನ್ನು ಯಮ ನಚಿಕೇತನಿಗೆ ಬೋಧಿಸುತ್ತಾನೆ.
ನಚಿಕೇತ ಯಮನಿಂದ ಆತ್ಮವಿದ್ಯೆ ಬೋಧಿಸಿಕೊಂಡು ಸಶರೀರವಾಗಿ ಭೂಮಿಗಿಳಿದು ಬರುತ್ತಾನೆ. ಈ ಮೂಲಕ ತಾನೊಬ್ಬ ಬಾಲಕನಾಗಿದ್ದುಕೊಂಡು ಇದುವರೆಗೂ ಯಾರೂ ಸಾಧಿಸಲಾಗದ್ದನ್ನು ಸಾಧಿಸುತ್ತಾನೆ. ಸತ್ತರೆ ಮಾತ್ರ ಸಿಗುವ ನರಕಕ್ಕೆ ಜೀವಂತ ಹೋಗಿದ್ದೂ ಅಲ್ಲದೇ ಯಮನಿಂದ ಆತ್ಮವಿದ್ಯೆ ಕಲಿತು ಬರುತ್ತಾನೆ. ನಮ್ಮ ಪ್ರಯತ್ನ ಮತ್ತು ಶ್ರದ್ಧೆ ಪ್ರಾಮಾಣಿಕವಾಗಿದ್ದರೆ ನಮಗೆ ಬೇಕಾದ ಎಲ್ಲವೂ ಸಿಗುತ್ತದೆ ಎನ್ನುವುದಕ್ಕೆ ನಚಿಕೇತನೇ ನಿದರ್ಶನ.
(ಓ ಮನಸೇ 1-15 ಏಪ್ರಿಲ್ 2020)
**************
ಕೆ.ಎ.ಸೌಮ್ಯ
ಮೈಸೂರು
