ಮೇನಕೆ

"ಮೇನಕೆಯೂ ಒಬ್ಬ ಹೆಣ್ಣು"



ಭೂಲೋಕದ ಹೆಣ್ಣುಮಕ್ಕಳಿಗೆ ಅಪ್ಸರೆಯರು ಎಂದರೆ ಏನೋ ಒಂದು ರೀತಿಯ ಕುತೂಹಲ. ತಾವೂ ಅವರಂತೆ ಆಗಬೇಕು ಎಂಬ ಹಂಬಲ. ಕಾರಣವೇನೆಂದರೆ ನಮ್ಮ ಪುರಾಣಗಳಲ್ಲಿ‌ ಅಪ್ಸರೆಯರನ್ನು ವಿಶೇಷವಾಗಿ ವರ್ಣಿಸಿರುವುದು ಮತ್ತು ಅವರು ಚಿರಯೌವ್ವನಿಗರಾಗಿರುವುದು. ಅಪ್ಸರೆಯರು ಎಂದರೆ ಅತಿಲೋಕ ಸುಂದರಿಯರು ಎಂಬಂತೆ ಕಥೆ-ಕಾವ್ಯಗಳಲ್ಲಿ ಚಿತ್ರಿತವಾಗಿದೆ. 


ಭೂಲೋಕದ ಯಾವುದೇ ವಸ್ತುವಿನ ಮೇಲೆ ವ್ಯಾಮೋಹವಿಲ್ಲದೆ ಪಾರಮಾರ್ಥ ಸಾಧನೆಗಾಗಿ ತಪಸ್ಸು ಮಾಡುವ ಋಷಿ-ಮುನಿಗಳ ಚಿತ್ತವನ್ನೇ ಅಪಹರಿಸುವ ಶಕ್ತಿ ಅವರಿಗಿದೆ ಅಂದ ಮೇಲೆ ಸಾಮಾನ್ಯ ಮನುಷ್ಯರು ಅವರ ಮೇಲೆ ಮೋಹಗೊಳ್ಳುವುದು ಹೆಚ್ಚಲ್ಲ‌. ಯಾರನ್ನೇ ಆದರೂ ಕ್ಷಣಮಾತ್ರದಲ್ಲಿ ಪರವಶರನ್ನಾಗಿಸುವ ಮತ್ತು ತಮಗೆ ಬೇಕಾದಂತೆ ರೂಪ ಹೊಂದಬಲ್ಲವರಾಗಿದ್ದ ಅಪ್ಸರೆಯರು ನಿಜಕ್ಕೂ ಬಹಳ ಸ್ವೇಚ್ಛಾಚಾರಿಗಳೇ ಎಂಬ ಪ್ರಶ್ನೆಗೆ 'ಇಲ್ಲ...' ಎಂದು ಉತ್ತರಿಸಬೇಕಾಗುತ್ತದೆ.


ಏಕೆಂದರೆ ಇವರು ಸ್ವರ್ಗದಲ್ಲಿ ದೇವೇಂದ್ರನ ಅಡಿಯಾಳಾಗಿದ್ದವರು. ಇಂದ್ರನ ಆಸ್ಥಾನದಲ್ಲಿ ಗಾಯನ, ನರ್ತನಗಳನ್ನು ಮಾಡುತ್ತಾ ಸಭಾಸದರ ಮನರಂಜನೆಗೆಗಾಗಿಯೇ ಮೀಸಲಾಗಿದ್ದವರು. ಆಗಾಗ ಭೂಮಿಯಲ್ಲಿ ತಪಸ್ಸು ಮಾಡುವ ಮುನಿಗಳ ತಪಸ್ಸು ಕೆಡಿಸುವ ಕೆಲಸಕ್ಕಾಗಿಯೂ ಬಳಸಲ್ಪಡುತ್ತಿದ್ದರು. ಮುಪ್ಪಿಲ್ಲದ-ಸಾವಿಲ್ಲದ ಅವರ ದೇಹ ಕೇವಲ ಬೇರೆಯವರ ಕಾಮನೆ ತಣಿಸುವುದಕ್ಕೆ ಮಾತ್ರವೇ ಬಳಕೆಯಾಗುತ್ತಿತ್ತು. ವಿಪರ್ಯಾಸವಲ್ಲವೇ?


ಅವರಲ್ಲೊಬ್ಬಳು ಮೇನಕೆ:


ಹೆಣ್ಣುಮಕ್ಕಳಿಗೆ ಮೇನಕೆ ಅಂತ ಹೊಗಳಿದರೆ ಅದೆಷ್ಟು ಖುಷಿಯಾಗುವುದೋ? ಆದರೆ ಸ್ವತಃ ಮೇನಕೆಯೇ ಆ ಖುಷಿ ಸವಿಯಲಿಲ್ಲ. ಇಂದ್ರನ ಆಜ್ಞೆಯಂತೆ ವಿಶ್ವಾಮಿತ್ರರ ತಪಸ್ಸು ಕೆಡಿಸಲು ಬಂದಾಗ ಒಡೆಯನ ಆಜ್ಞೆ ಪಾಲಿಸುವ ನೌಕರಳಂತೆಯೇ ಇದ್ದಳು. ಆದರೆ ಹೆಣ್ಣು ಎಂದಿಗೂ ಹೆಣ್ಣೇ.... ಮನಸ್ಸು ಒಪ್ಪದೇ ಯಾರನ್ನೂ ಆಕೆ ತನ್ನೊಳಗೆ ಬಿಟ್ಟುಕೊಳ್ಳಲಾರಳು. 

ದೇಹ ಸೇರುವ ಮೊದಲು ಆಕೆಗೆ ಇಬ್ಬರ ಮನಸ್ಸೂ ಸಹ ಸೇರಬೇಕು. ಅದಕ್ಕಾಗಿಯೇ ಭೂಮಿಗೆ ಇಳಿದ ಕೂಡಲೇ ಇಳೆಯ ಹೆಣ್ಣಾದಳು. ವಿಶ್ವಾಮಿತ್ರನನ್ನು ಪ್ರೇಮಿಸಲು ತೊಡಗಿದಳು. ಯಾವ ದುರ್ಬಲ ಘಳಿಗೆಯೋ? ವಿಶ್ವಾಮಿತ್ರರೂ ಆಕೆಯ ಮೋಹಕ್ಕೆ ವಶವಾದರು. ತಮ್ಮ ತಪಸ್ಸನ್ನೇ ಮರೆತರು. ತಪಸ್ಸು ಮಾಡುತ್ತಿದ್ದ ಉದ್ದೇಶವನ್ನೂ ಮರೆತರು. ಅಷ್ಟೇ ಅಲ್ಲ ಮೂರು ಲೋಕವನ್ನೂ ಮರೆತರು.


ಅವರೇನೋ ಮನುಷ್ಯರು ಮರೆತರು ಸರಿ. ಮೇನಕೆಯೂ ಮರೆತಳು. ತಾನ್ಯಾರು, ಏಕೆ ಬಂದಿದ್ದೇನೆ ಎಲ್ಲವನ್ನೂ ಮರೆತಳು. ಅವಳ ಕೆಲಸ ಅವರ ತಪಸ್ಸು ಕೆಡಿಸುವುದೊಂದೇ. ಆದರೆ ಆಕೆ ಅವರೊಂದಿಗೇ ಇದ್ದು ಬಿಟ್ಟಳು. ಇವರೇ ತನ್ನ ಪತಿಯಾದರೆ ಎಷ್ಟು ಚಂದ ಎಂದೆನಿಸಲು ಶುರುವಾಯ್ತು ಅವಳಿಗೆ. 


ಬಹುಶಃ ಇದು ಭೂಮಿಯ ಮ್ಯಾಜಿಕ್ ಇರಬಹುದು.‌ 


ಮಣ್ಣಿನ ಗುಣ ಹೆಣ್ಣಿಗೆ ಮಾತೃತ್ವ ಮತ್ತು ಜವಾಬ್ದಾರಿ ಕಲಿಸುತ್ತದೆಯೇನೋ? ಒಬ್ಬನಿಗೇ ನಿಷ್ಠಳಾಗಿರುವ ಬುದ್ಧಿ ಕಲಿಸುತ್ತದೆಯೇನೋ? ದೇವಲೋಕದಲ್ಲಿಯೂ ಸಿಕ್ಕದ ಪ್ರೀತಿ-ವಿಶ್ವಾಸವನ್ನು ವಿಶ್ವಾಮಿತ್ರರಲ್ಲಿ‌ ಕಂಡು ಆಕೆಯ ಮನಸ್ಸೂ ಬದಲಾಗಿ ಇಲ್ಲಿಯೇ ಉಳಿದುಬಿಟ್ಟಳು.


ಇತ್ತ ದೇವೇಂದ್ರ ಮೇನಕೆಗಾಗಿ ಕಾದು ಕುಳಿತಿದ್ದ. ಅವನಿಗೆ ಮೇನಕೆಯೇ ಆಗಬೇಕಿರಲಿಲ್ಲ. ಬೇಕಾದಷ್ಟು ಬೇರೆ ಅಪ್ಸರೆಯರ ಸಾಂಗತ್ಯವಿತ್ತು. ಆದರೂ ಆತ ಮೇನಕೆಯ ಬರವನ್ನು ಕಾದು ಸುಸ್ತಾದ. ಯಾವಾಗಲೂ ಇಲ್ಲದ ವಸ್ತುವಿನ ಮೇಲೆಯೇ ಮೋಹವಂತೆ. ಈ ಮೋಹ ಸ್ವರ್ಗಾಧಿಪತಿಯನ್ನೂ ಬಿಡಲಿಲ್ಲ. ಆಕೆ ಇಲ್ಲಿಲ್ಲ ಅನ್ನುವುದಕ್ಕಿಂತ ಆಕೆ ವಿಶ್ವಾಮಿತ್ರನ ಬಳಿಯಿದ್ದಾಳೆ ಎಂಬುದನ್ನು ಸಹಿಸಲಾಗಲಿಲ್ಲವೇನೋ? ಮೇನಕೆ ಭೂಮಿಗಿಳಿದು ಮಣ್ಣಿನ ಹೆಣ್ಣಾಗಿ ಬದಲಾಗಿದ್ದರೆ, ದೇವೇಂದ್ರ ಸ್ವರ್ಗದಲ್ಲಿದ್ದೂ ಸಹ ಭೂಮಿಯ ಪುರುಷರಂತೆ ಆಡತೊಡಗಿದ.


ಮೇನಕೆ ಎಷ್ಟು ದಿನವಾದರೂ ಬರದಿದ್ದಾಗ ಆಕೆಗಾಗಿ ಕರೆ ಕಳುಹಿಸಿದ. ಆಗ ಮೇನಕೆ ವಿಶ್ವಾಮಿತ್ರರ ಕರುಳ ಕುಡಿಯನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು. ಅಪ್ಸರೆ ಗರ್ಭಿಣಿಯಾಗುವುದೇ? ಬಲು ವಿಚಿತ್ರ ವಿದ್ಯಮಾನ ಇದು. ಆದರೂ ಮೇನಕೆಯೂ ಒಬ್ಬ ಹೆಣ್ಣು. ತನ್ನ ಪುರುಷ ಸಿಕ್ಕ ಕೂಡಲೇ ಆತನಿಂದ ಒಂದು ಸಂತಾನಕ್ಕಾಗಿ ಆಸೆ ಪಡುವುದು ಹೆಣ್ಣಿನ ಗುಣ. 


ಬಹುಶಃ ಮಕ್ಕಳಾದರೆ ತಮ್ಮ ಬಾಂಧವ್ಯ ಮತ್ತಷ್ಟು ಹೆಚ್ಚುವುದು ಅಂತ ಅನಿಸಿಕೆ ಇರಬಹುದು. ವಿಶ್ವಾಮಿತ್ರರಿಗೆ ತನ್ನಿಂದ ಮಗುವಾದರೆ ಅವರು ತನ್ನನ್ನು ಬಿಟ್ಟುಕೊಡಲಾರರು ಎಂಬ ದೂರದಾಸೆಯೂ ಇರಬಹುದು. ಅಥವಾ ಮಗುವಾದ ನಂತರ ತನ್ನ ಪುರುಷ ಮತ್ತೊಬ್ಬ ಮಹಿಳೆಯ ಕಡೆ ಆಕರ್ಷಿತನಾಗಲಾರ ಎಂಬಾಸೆಯೂ ಇರಬಹುದು.


ಒಟ್ಟಿನಲ್ಲಿ ವಿಧಿಲಿಖಿತದಂತೆ ಆಕೆ ಮಗು ಹೆತ್ತಳು. 


ಅಪ್ಸರೆಯೇ ಸುಂದರಿಯಾದ ಮೇಲೆ ಅವಳ ಸಂತಾನವನ್ನು ಕೇಳಬೇಕೇ? ಬಲು ಮುದ್ದಾದ ಹೆಣ್ಣು ಶಿಶು ಅದು. ಆದರೆ ತನ್ನದೇ ಮಗುವನ್ನು ನೋಡಿ ನಲಿಯುವ ಭಾಗ್ಯ ಅವಳಿಗೆ ಇರಲಿಲ್ಲ. ಮಗು ಹೆತ್ತ ಕೂಡಲೇ ಹಾಲುಣಿಸಲೂ ಬಿಡದೇ ಇಂದ್ರ ಅವಳನ್ನು ಹೊತ್ತೊಯ್ದ. ಭೂಮಿಯಿಂದ ಕಾಲ್ತೆಗೆಯುತ್ತಿದ್ದಂತೆಯೇ ಆಕೆಯಲ್ಲಿದ್ದ ಭೂಮಿಯ ಗುಣಗಳು ಮಾಯವಾದವು. ಆಕೆಯ ವಿಶೇಷ ಶಕ್ತಿಗಳು ಮರಳಿ ಬಂದವು. ಹಾಲು ಎದೆಯಲ್ಲಿಯೇ ಇಂಗಿತು. ಕಳೆದುಕೊಂಡಿದ್ದ ಕೌಮಾರ್ಯ ಪುನಃ ದೊರಕಿತು. 


ಆದರೆ ಮನಸ್ಸು‌....??


ಅದು ವಿಶ್ವಾಮಿತ್ರರನ್ನೂ ಮರೆಯಲಾಗದೇ, ತನ್ನ ಮಗುವನ್ನೂ ಮರೆಯಲಾಗದೇ ಚಡಪಡಿಸತೊಡಗಿತು. ಒಬ್ಬರ ಹೆಂಡತಿಯಾಗಿ, ಒಬ್ಬ ಮಗುವಿನ ತಾಯಿಯಾಗಿ ಬಾಳಬೇಕೆನ್ನುವ ಆಕೆಯ ಕನಸು ಒಡೆದು ಹೋಗಿತ್ತು. ಭೂಮಿಯ ಹೆಣ್ಣಾಗಿದ್ದರೆ ಆ ಆಘಾತ ತಾಳಲಾಗದೇ ಹೃದಯ ಒಡೆದು ಸಾಯುತ್ತಿದ್ದಳೇನೋ? ಅಪ್ಸರೆಗೆ ಆ ಅವಕಾಶವೂ ಇರಲಿಲ್ಲ. ಜರಾಮೃತ್ಯುಗಳಿಲ್ಲದ ಅಮೃತತ್ವ ವರ ಎಂದುಕೊಳ್ಳುತ್ತೇವೆ ನಾವು. ಆದರೆ ಮೇನಕೆಗೆ ಅದೇ ಶಾಪವಾಗಿತ್ತು.


***********************
(Published in O Manase 16-30 Nov 2019)

ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ