ಒಳಿತು ಮಾಡುವ ಶನಿ
ನಮಗೆ ಕೆಟ್ಟದು ಮಾಡುವವರಿಗೂ ನಾವು 'ಶನಿಯ ರೀತಿ ಕಾಡುತ್ತಾರೆ' ಎನ್ನುತ್ತೇವೆ. ಒಟ್ಟಿನಲ್ಲಿ ನಮಗೇನೇ ತೊಂದರೆಯಾದರೂ ದೂರಲು ಶನಿಯನ್ನು ಬಳಸಿಕೊಳ್ಳುತ್ತೇವೆ. ಅಷ್ಟಕ್ಕೂ ಶನಿ ಎಂದರೆ ಬರೇ ಕೆಟ್ಟದ್ದನ್ನೇ ಮಾಡುತ್ತಾನಾ? ಯಾಕೆ ಜನರು ತಮಗೆ ಕೆಟ್ಟದಾದಾಗ ಶನಿಯನ್ನು ದೂರುತ್ತಾರೆ? ತಿಳಿಯೋಣ ಬನ್ನಿ.
ಹೌದು. ಶನಿಯು ಬಹಳ ಕೆಟ್ಟದ್ದು ಮಾಡುತ್ತಾನೆ.
ಹೌದು. ಶನಿಯು ಬಹಳ ಕೆಟ್ಟದ್ದು ಮಾಡುತ್ತಾನೆ.
ಶನಿಯ ಸಂಕಷ್ಟಗಳನ್ನು ಅನುಭವಿಸದವರು ಯಾರಿದ್ದಾರೆ? ನಳ ಮಹಾರಾಜ, ರಾಜಾ ವಿಕ್ರಮಾದಿತ್ಯ, ಸತ್ಯ ಹರಿಶ್ಚಂದ್ರ ಸಹ ಶನಿಯ ಕಾಟದಿಂದ ಬಳಲಿದವರೇ ಆಗಿದ್ದಾರೆ. ಮನುಷ್ಯರು ಮಾತ್ರವಲ್ಲದೇ ದೇವತೆಗಳು, ಅಸರರು ಎನ್ನದೇ ಎಲ್ಲರನ್ನೂ ಕಾಡಿದ್ದಾನೆ. ಆದರೆ ಶನಿ ತಮ್ಮನ್ನು ಕಾಡುವ ಮೂಲಕ ಪರೀಕ್ಷಿಸುತ್ತಿದ್ದಾನೆ ಎಂದು ಯಾರೂ ತಿಳಿಯುವುದಿಲ್ಲ.
ಏಕೆಂದರೆ ಬಂಗಾರ ಪರಿಶುದ್ಧವಾಗಲು ಬೆಂಕಿಯಲ್ಲಿ ಬೇಯಲೇಬೇಕು. ವಿಪರೀತ ಸಂಕಷ್ಟಗಳನ್ನು ಅನುಭವಿಸಿದ ನಳ, ವಿಕ್ರಮಾದಿತ್ಯ, ಹರಿಶ್ಚಂದ್ರರು ಶನಿಯ ಪರೀಕ್ಷೆಯಲ್ಲಿ ಗೆದ್ದು ಬರಲಿಲ್ಲವೇ? ಶನಿಯು ಭಕ್ತರಿಗೆ ಕಾಟ ಕೊಟ್ಟರೂ ಕಡೆಯಲ್ಲಿ ಭರ್ಜರಿ ವರ ಕೊಟ್ಟು ಹೋಗುತ್ತಾನೆ. ಆದರೆ ಜನರು ಅವನು ಕೊಟ್ಟ ಕಾಟಗಳನ್ನಷ್ಟೇ ನೆನಪಿಟ್ಟುಕೊಳ್ಳುತ್ತಾರೆ.
ಶನಿಯು ನವಗ್ರಹಗಳಲ್ಲಿ ಒಬ್ಬ.
'ಶನಿ' ಎಂದರೆ ನಿಧಾನವಾಗಿ ಚಲಿಸುವವನು ಅಂತಲೂ ಅರ್ಥವಿದೆ. ಶನಿಯ ತಮ್ಮ ಯಮ ಧರ್ಮರಾಯ. ಇವರಿಬ್ಬರ ಕೆಲಸ ಒಂದೇ.... ನ್ಯಾಯ ತೀರ್ಮಾನ ಮಾಡುವುದು. ಇವರಿಬ್ಬರ ಕೆಲಸದ ನಡುವಿನ ವ್ಯತ್ಯಾಸವೆಂದರೆ ಶನಿಯು ಮನುಷ್ಯ ಬದುಕಿದ್ದಾಗ ಮಾಡುವ ಕೆಲಸಗಳ ಆಧಾರದ ಮೇಲೆ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶ ಕೊಟ್ಟರೆ, ಯಮನು ಮನುಷ್ಯ ಸತ್ತ ಮೇಲೆ ಇದೇ ಫಲಿತಾಂಶ ನೀಡುತ್ತಾನೆ. ಶನಿ ಈ ರೀತಿ ನ್ಯಾಯ ತೀರ್ಮಾನ ಮಾಡುತ್ತಾ, ಎಲ್ಲರನ್ನೂ ಕಾಡುತ್ತಾ, ಕಷ್ಟಗಳನ್ನು ನೀಡುವುದರ ಹಿಂದೆಯೂ ಒಂದು ಕಥೆಯಿದೆ.
ಹಿಂದೊಮ್ಮೆ ಶನಿಯೂ ಸಹ ತನ್ನ ಜೀವನದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದವನೇ ಆಗಿದ್ದಾನೆ. ಆದರೆ ತನ್ನ ಕಷ್ಟಕ್ಕಾಗಿ ಯಾರ ಮೇಲೆಯೂ ಪ್ರತೀಕಾರ ತೆಗೆದುಕೊಳ್ಳದೇ ಮಹಾನ್ ವ್ಯಕ್ತಿ ಎನಿಸಿದ್ದಾನೆ.
ಸೂರ್ಯದೇವ ಮತ್ತು ಛಾಯಾದೇವಿಯವರ ಸಂತಾನವಾದ ಶನಿಯು ಹುಟ್ಟಿದಾಗ ಕಪ್ಪಗೆ ಇದ್ದನೆಂದು, ಸೂರ್ಯದೇವ ಅವನನ್ನು ತನ್ನ ಮಗ ಎಂದು ಒಪ್ಪಿಕೊಳ್ಳದೇ ತಿರಸ್ಕರಿಸಿ ಹೆಂಡತಿ ಮತ್ತು ಮಗನನ್ನು ದೂರ ತಳ್ಳುತ್ತಾನೆ. ಇದರಿಂದಾಗಿ ಛಾಯಾದೇವಿ ಬಹಳ ನೋವು ಅನುಭವಿಸುತ್ತಾಳೆ. ತಾಯಿಯ ನೋವು ನೋಡಿದ ಶನಿಗೆ ಇದನ್ನು ಸಹಿಸಲಾಗುವುದಿಲ್ಲ. ಸೂರ್ಯನ ಎದುರು ಯಾರಿಗೂ ಮಾತನಾಡುವ ಶಕ್ತಿ ಇಲ್ಲ. ಏಕೆಂದರೆ ಎದುರು ನಿಂತವರು ಸುಟ್ಟು ಹೋಗುತ್ತಾರೆ. ಆದ ಕಾರಣ ಛಾಯಾದೇವಿಗೆ ಆದ ಅನ್ಯಾಯವನ್ನು ಕುರಿತು ಯಾರೂ ಮಾತನಾಡುವುದಿಲ್ಲ.
ಇದನ್ನು ನೋಡಿ ಶನಿಗೆ ರೋಷ ಉಕ್ಕುತ್ತದೆ.
ತಾನೂ ಸಹ ಯಾವುದಾದರೂ ಅದ್ಬುತ ಶಕ್ತಿ ಪಡೆಯಬೇಕೆಂದು ಶನಿ ತೀರ್ಮಾನಿಸುತ್ತಾನೆ. ತನ್ನನ್ನು ತಿರಸ್ಕರಿಸಿದ ತಂದೆಗೆ ಸಮಾನವಾದ ಶಕ್ತಿಯನ್ನು ಪಡೆದುಕೊಳ್ಳಲು ಈಶ್ವರನ ಕುರಿತಾಗಿ ಕಠಿಣವಾದ ತಪಸ್ಸು ಮಾಡಲು ತೊಡಗುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷವೂ ಆಗುತ್ತಾನೆ. ಆಗ ಶನಿ ಈಶ್ವರನಲ್ಲಿ ಏನು ಬೇಡುತ್ತಾನೆ ಗೊತ್ತೇ?
ಚಿಕ್ಕಂದಿನಿಂದ ತನಗೆ ಆದ ಅಪಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶನಿ ತನಗೆ ಬೇಕಾದ ವರ ಕೇಳಬಹುದಿತ್ತು. ಮೊದಲೇ ಈಶ್ವರನು ತನ್ನ ಭಕ್ತರು ಬೇಡಿದ ವರ ಕೊಟ್ಟು ಬೋಳೆ ಶಂಕರ ಎನಿಸಿಕೊಂಡಿದ್ದವನು. ಈಗ ಶನಿಯ ಯಾವ ಬೇಡಿಕೆಗೂ ಇಲ್ಲ ಎನ್ನುತ್ತಿರಲಿಲ್ಲ. ತನ್ನನ್ನು ಆಡಿಕೊಂಡ ಎಲ್ಲರೂ ಸರ್ವನಾಶವಾಗಲಿ ಅಂತಲೋ ಅದ್ಭುತವಾದ ಶಕ್ತಿ ಕರುಣಿಸು ಅಂತಲೋ ಬೇಡಿಕೊಳ್ಳಬಹುದಿತ್ತು. ಆದರೂ ಶನಿ ಈ ಅವಕಾಶವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಲಿಲ್ಲ. ಅದರ ಬದಲಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ವರವನ್ನು ತನಗೆ ನೀಡುವಂತೆ ಬೇಡುತ್ತಾನೆ.
ಬಹುಶಃ ತಪಸ್ಸಿನ ಮೂಲ ಉದ್ದೇಶವೇ ಇದು. ತಾನ್ಯಾರು, ಏನು ಬೇಡುತ್ತಿದ್ದೇನೆ ಎನ್ನುವುದನ್ನೇ ಮರೆತು ಲೋಕಕಲ್ಯಾಣಾರ್ಥವಾಗಿ ವರ ಬೇಡುವುದು. ಯಾವುದೇ ಸ್ವಾರ್ಥ ಸಾಧನೆಗಾಗಿ ತಪಸ್ಸಿಗೆ ಕುಳಿತರೂ ಧ್ಯಾನದಲ್ಲಿ ಲೀನವಾಗುತ್ತಿದ್ದಂತೆ ಮನಸ್ಸು ಕಾಮ, ಕ್ರೋಧಾದಿಗಳನ್ನು ದಾಟಿ ನಿಸ್ವಾರ್ಥವಾಗಿ ಯೋಚಿಸುವ ಹಂತಕ್ಕೆ ಬರುತ್ತದೆ.
ತಪಸ್ಸಿಗೆ ಕೂರುವ ಮೊದಲು ತನಗಾಗಿ ಏನನ್ನು ಬೇಡಬೇಕೆಂದು ಯೋಚಿಸಿದ್ದನೋ ಶನಿ?
ಈಗ ಈ ರೀತಿ ಬೇಡಿದ್ದರಿಂದ ಲೋಕದ ಜನರಿಗೆ ಒಳ್ಳೆಯದಾಯಿತು. ಏಕೆಂದರೆ ಶನಿಯು ಕೆಟ್ಟವರಿಗೆ ಕೆಟ್ಟದ್ದು ಮಾಡಿದ್ದಕ್ಕಿಂತಲೂ ಒಳ್ಳೆಯವರಿಗೆ ಒಳ್ಳೆಯದು ಮಾಡುವುದರಲ್ಲಿ ಪ್ರಸಿದ್ಧನಾದವನು. ಮನುಷ್ಯರು, ದೇವತೆಗಳು, ಅಸುರರು ಎಲ್ಲರ ಮೇಲೆಯೂ ಶನಿ ತನ್ನ ಪ್ರಭಾವ ಬೀರುತ್ತಾನೆ.
ಒಳ್ಳೆಯವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಮಾಡುವವರಿಗೆ ಶಿಕ್ಷೆಯನ್ನು ನೀಡುತ್ತಾನೆ. ಹಾಗಾಗಿ ಬರೇ ಪಾಪಗಳನ್ನು ಮಾಡುವವರು ಮಾತ್ರವೇ ಶನಿಗೆ ಹೆದರಬೇಕಾಗಿದೆ.
ಔಷಧಿ ಕಹಿ ಇರುತ್ತದೆ. ಆದರೆ ಅದನ್ನು ಸೇವಿಸಿದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ. ನಮಗೆ ಲಾಭವಾದರೂ ಸಹ ನಾವು ಕಹಿ ಔಷಧಿಯನ್ನೇ ದೂರುತ್ತೇವೆ. ಹಾಗೆಯೇ ನಮ್ಮೊಳಗಿನ ಅರಿಷಡ್ವರ್ಗಗಳನ್ನು ಬೇರು ಸಹಿತ ಕಿತ್ತು ಹಾಕಲು ಸಹಾಯ ಮಾಡುವ ಶನಿಯನ್ನು ಕೇವಲ ಕಷ್ಟ ಕೊಡುತ್ತಾನೆ ಎಂದು ದೂರುತ್ತೇವೆ. ಮನುಷ್ಯ ಸ್ವಭಾವವೇ ಹಾಗಲ್ಲವೇ?
(Published in Oh Manase on 1-15 June 2019)
**************
**************
ಕೆ.ಎ.ಸೌಮ್ಯ
ಮೈಸೂರು
