ಶರ್ಮಿಷ್ಠೆ ದೇವಯಾನಿಯರಲ್ಲಿ ಗೆದ್ದವರು ಯಾರು?

 


ಪ್ರತಿಯೊಬ್ಬ ಹೆಣ್ಣಿಗೂ ಒಂದು ಆಸೆ ಇರುತ್ತದೆ. ಏನೆಂದರೆ ತಾನು ತನ್ನ ಗಂಡ ಮಕ್ಕಳೊಡನೆ ಸುಖವಾಗಿ ಬಾಳಬೇಕು, ತನ್ನದೇ ಆದ ಮನೆ ಅಂತಿರಬೇಕು, ಅಲ್ಲಿ ತಾನು ರಾಣಿಯಂತೆ ಇರಬೇಕು ಅಂತೆಲ್ಲಾ ಕನಸುಗಳಿರುತ್ತವೆ. ಒಂದು ವೇಳೆ ಸಾಮಾನ್ಯ ಜನರಿಗೆ ಈ ಕನಸುಗಳು ನನಸಾಗಬಹುದೇನೋ? ಆದರೆ ಕೆಲವೊಮ್ಮೆ ರಾಜಕುಮಾರಿಯರಿಗೇ ಈ ಕನಸು ನಿಜವಾಗುವುದು ಕಷ್ಟ. 


ಹೌದು.... 


ಸಾಮಾನ್ಯ ಜನರು ರಾಜಕುಮಾರಿಯರ ರೀತಿ ಬದುಕಲು ಆಸೆ ಪಡುತ್ತಾರೆ. ಆದರೆ ನಿಜವಾದ ರಾಜಕುಮಾರಿಯರು ತಮ್ಮ ವಂಶದ ಹಿರಿಯರ ಮರ್ಯಾದೆಗಾಗಿಯೋ, ಯುದ್ಧ ಅಥವಾ ರಾಜಕೀಯದ ಕಾರಣಕ್ಕಾಗಿಯೋ ತಮಗಿಷ್ಟ ಇಲ್ಲದಿರುವವರನ್ನು ಮದುವೆಯಾಗಿ ನೀರಸ ಜೀವನ ನಡೆಸುತ್ತಿರುತ್ತಾರೆ.


ಅಂಥವರಲ್ಲಿ ಶರ್ಮಿಷ್ಠೆಯೂ ಒಬ್ಬಳು.


ಶರ್ಮಿಷ್ಠೆ ದೇವಯಾನಿಯ ದಾಸಿ. ಸಾಮಾನ್ಯವಾಗಿ ರಾಜಕುಮಾರಿಯರು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಅವರೊಂದಿಗೆ ಕೆಲವು ದಾಸಿಯರನ್ನು ಜೊತೆಗೆ ಕಳಿಸಲಾಗುತ್ತಿತ್ತು. 


ಆ ದಾಸಿಯರು ಸ್ವಂತ ಬದುಕನ್ನು ಮರೆತು ರಾಜಕುಮಾರಿಯ ಜೊತೆ ಇರಬೇಕಾಗುತ್ತಿತ್ತು. ಅವರು ಬೇರೆ ಮದುವೆಯಾಗುವಂತಿರಲಿಲ್ಲ. ಮಕ್ಕಳು-ಮರಿಗಳನ್ನು ಹೊಂದುವಂತಿರಲಿಲ್ಲ. ಅವರ ಪೂರ್ತಿ ಜೀವನ ರಾಜಕುಮಾರಿಯ ಸೇವೆಗೆ ಮೀಸಲಾಗಿರಬೇಕಾಗುತ್ತಿತ್ತು. 


ದಾಸಿಯರಿಗೆ ಸ್ವಂತ ಬದುಕು ಇರುತ್ತಿರಲಿಲ್ಲ. ಆದರೆ ರಾಜನ ಪುತ್ರಿಯಾಗಿದ್ದ ಶರ್ಮಿಷ್ಠೆ ರಾಜಕುಮಾರಿಯಾಗಿ ಗೌರವದಿಂದ ಈ ಅರಮನೆಗೆ ಬರಬೇಕಾಗಿದ್ದವಳು ಅವಳ ದುರಾದೃಷ್ಟದಿಂದ ದಾಸಿಯಾಗಿ ಬಂದಿದ್ದಾಳೆ. 


ಅದೃಷ್ಟ ಅವಳ ಕಡೆಗೆ ಇರುತ್ತಿದ್ದರೆ ಇಂದು ದೇವಯಾನಿ ಇರುವ ಜಾಗದಲ್ಲಿ ಶರ್ಮಿಷ್ಠೆ ಇರುತ್ತಿದ್ದಳು. ಆದರೆ ಇದನ್ನೇ ವಿಧಿಯಾಟ ಎನ್ನುವುದು.


ಒಂದು ಕಾಲದಲ್ಲಿ ರಾಜಕುಮಾರಿಯಾಗಿ ಮೆರೆದಿದ್ದವಳು ಶರ್ಮಿಷ್ಠೆ. ಈಗ ಅರಮನೆಯಲ್ಲಿ ದೇವಯಾನಿಯ ದಾಸಿಯಾಗಿ ಸ್ವಂತ ಜೀವನ ಇಲ್ಲದೇ ನಿಕೃಷ್ಠ ಬಾಳು ಬದುಕುತ್ತಿದ್ದಾಳೆ. ಉಳಿದೆಲ್ಲಾ ದಾಸಿಯರಂತೆ ಆಕೆಯೂ ಗಂಡನೊಡನೆ ಬಾಳುವಂತಿಲ್ಲ, ಜೀವನ ಹಂಚಿಕೊಳ್ಳುವಂತಿಲ್ಲ, ಮಕ್ಕಳನ್ನು ಹೊಂದುವಂತಿಲ್ಲ.... 


ಹಿಂದೊಮ್ಮೆ ತಾನು ಮೇಲ್ಜಾತಿಯವಳೆಂದು ದೇವಯಾನಿಯ ಮೇಲೆ ತೋರಿದ ದರ್ಪಕ್ಕೆ ಪ್ರತಿಯಾಗಿ ದೇವಯಾನಿ ಸಮಯ ಕಾದು ತನ್ನನ್ನು ದಾಸಿಯಾಗಿಸಿಕೊಂಡಿದ್ದಾಳೆ. ತನ್ನ ತಂದೆಯ ಮರ್ಯಾದೆ ಉಳಿಸಲು ಶರ್ಮಿಷ್ಠೆ ದೇವಯಾನಿಯ ದಾಸಿಯಾಗಿ ಅರಮನೆಗೆ ಬಂದಿದ್ದಾಳೆ. 


ತಾವಿಬ್ಬರೂ ಒಬ್ಬರನ್ನೇ ಮದುವೆಯಾಗಿದ್ದರೂ ತಾನು ಮಾತ್ರ ಗಂಡನ ಜೊತೆ ಕೂಡಿ ಬಾಳುವಂತಿರಲಿಲ್ಲ. ಅದು ದೇವಯಾನಿಯ ನಿಬಂಧನೆಯಾಗಿತ್ತು. ತನ್ನ ಕಣ್ಣ ಮುಂದೆಯೇ ದೇವಯಾನಿ ತನ್ನ ಗಂಡನೊಡನೆ ಖುಷಿ ಖುಷಿಯಾಗಿ ಇರುವುದನ್ನು ಕಂಡು ಶರ್ಮಿಷ್ಠೆ ಯಾರಿಗೂ ಕಾಣದಂತೆ ಕಣ್ಣೀರು ಒರೆಸಿಕೊಂಡು ಸುಮ್ಮನಾಗುತ್ತಿದ್ದಾಳೆ.


ಇತ್ತ ದೇವಯಾನಿಯು ಆಕೆಗೆ ನಿಬಂಧನೆ ಹಾಕಿದೆ ಎಂಬ ಖುಷಿಯಲ್ಲಿರಬಹುದು. ಆದರೆ ಶರ್ಮಿಷ್ಠೆಗೂ ಗಂಡನೊಡನೆ ಕೂಡಿ ಬಾಳುವ ಕನಸಿದೆ, ಆತನ ಪ್ರಣಯದಲ್ಲಿ ವಿಹರಿಸುವ ಇಚ್ಛೆಯಿದೆ, ಆತನಿಂದ ಮಕ್ಕಳನ್ನು ಹೊಂದುವ ಅಪೇಕ್ಷೆಯಿದೆ. ಹೆಣ್ಣಿನ ಬಾಳಿನ ಸಾರ್ಥಕತೆ ಇರುವುದೇ ಆಕೆ ತಾಯಿಯಾದಾಗ. 


ಪ್ರಾಣಿ-ಪಕ್ಷಿ-ಕೀಟಗಳಿಗೇ ಮಕ್ಕಳನ್ನು ಹೊಂದುವ ಅವಕಾಶ ಇರುವಾಗ ತಾನ್ಯಾಕೆ ಇದರಿಂದ ವಂಚಿತಳಾಗಬೇಕು ಅಂತ ಶರ್ಮಿಷ್ಠೆಗೆ ಅನ್ನಿಸಲು ಶುರುವಾಗುತ್ತದೆ. ಯಾವಾಗ ತನಗೆ ಒಂದು ವಸ್ತು ಸಿಗುವುದೇ ಇಲ್ಲ ಅಂತಾಗುತ್ತದೆಯೋ ಆಗ ಆ ವ್ಯಕ್ತಿಗೆ ಅದನ್ನು ಪಡೆಯಲೇಬೇಕೆಂಬ ಉತ್ಕಟ ಆಕಾಂಕ್ಷೆ ಜಾಗೃತವಾಗುತ್ತದೆ. 


ಶರ್ಮಿಷ್ಠೆಗೆ ಆಗಿದ್ದೂ ಅದೇ.....


ದೇವಯಾನಿಯನ್ನು ಈ ವಿಷಯದಲ್ಲಿ ಮೂರ್ಖಳು ಎಂದೇ ಹೇಳಬೇಕು. ಒಂದು ಹೆಣ್ಣನ್ನು ಶಿಕ್ಷಿಸಲು ಆಕೆಗೆ ಸಾಂಸಾರಿಕ ಸುಖ ಸಿಗದ ಹಾಗೆ ಮಾಡಬೇಕೆಂದುಕೊಂಡದ್ದೇ ದೇವಯಾನಿಯ ಅತಿ ದೊಡ್ಡ ಮೂರ್ಖತನ. ಏಕೆಂದರೆ ಈ ಪ್ರಪಂಚದಲ್ಲಿ ಏನು ನಡೆಯಬಾರದು ಎಂದುಕೊಂಡಿರುತ್ತೇವೆಯೋ ಅದೇ ನಡೆಯುವುದು. 


ಅಲ್ಲದೇ ಮುಚ್ಚಿಟ್ಟ ವಿಷಯಗಳಿಗೇ ಕುತೂಹಲ ಜಾಸ್ತಿ. ತಾಯ್ತನದಿಂದ ವಂಚಿತಳಾಗಿ ನತದೃಷ್ಟ ಬದುಕು ಬಾಳುವುದು ಯಾವ ಹೆಣ್ಣಿಂದ ತಾನೇ ಸಾಧ್ಯ? ಅದಕ್ಕಾಗಿಯೇ ಗಂಡನಾದ ಯಯಾತಿ ಒಬ್ಬಂಟಿಯಾಗಿ ಸಿಕ್ಕಾಗ ಶರ್ಮಿಷ್ಠೆ ಅವನಿಂದ ಪ್ರೇಮ ಭಿಕ್ಷೆ ಬೇಡುತ್ತಾಳೆ. 


ಒಲಿದ ಹೆಣ್ಣನ್ನು ನಿರಾಕರಿಸಲಾಗದೇ ಯಯಾತಿಯೂ ಆಕೆಗೆ ಸಂತಾನವನ್ನು ಕರುಣಿಸುತ್ತಾನೆ. ಶರ್ಮಿಷ್ಠೆ ಸಂಸಾರ ಸುಖವನ್ನು ಅನುಭವಿಸುತ್ತಾ ಮಕ್ಕಳೊಡನೆ ಆನಂದವಾಗಿ ಕಾಲಕಳೆಯತೊಡಗುತ್ತಾಳೆ. ಪ್ರೀತಿಸುವ ಪತಿ, ಮುದ್ದಿನ ಸಂತಾನ ಬಿಟ್ಟರೆ ಒಬ್ಬ ಹೆಣ್ಣಿಗೆ ಮತ್ತೇನು ಬೇಕು? 


ದೇವಯಾನಿಯ ನಿರ್ಭಂಧದ ನಡುವೆಯೂ ಶರ್ಮಿಷ್ಠೆಯ ಜೀವನ ಚೆನ್ನಾಗಿಯೇ ಸಾಗುತ್ತದೆ. ಮೋಸವಾಗುವುದು ದೇವಯಾನಿಗೇ....


ಯಾರಿಗೇ ಆಗಲಿ ಪಾಲಿಸಲಾಗದಷ್ಟು ನಿರ್ಬಂಧ ಹಾಕಿದರೆ ಹೀಗೆಯೇ ಆಗುವುದು.


ಅವರು ಅದನ್ನು ತೋರಿಕೆಗಷ್ಟೇ ಪಾಲಿಸುತ್ತಾರೆ. ಒಳಗೊಳಗೆ ತಮಗಿಷ್ಟ ಬಂದ ಹಾಗೆ ಇರುತ್ತಾರೆ. ಇಲ್ಲಿ ಶರ್ಮಿಷ್ಠೆಯೂ ದೇವಯಾನಿ ಹೇಳಿದಂತೆಯೇ ಕೇಳಿದಳು. ಜೊತೆಗೆ ದೇವಯಾನಿಗೆ ಗೊತ್ತಾಗದಂತೆ ಯಯಾತಿಯಿಂದ ಮಕ್ಕಳನ್ನೂ ಪಡೆದಳು. ವಿಷಯ ಅವಳಿಗೆ ತಿಳಿಸಲಿಲ್ಲ ಅಷ್ಟೇ ಹೊರತೂ, ದೇವಯಾನಿಯ ನಿರ್ಬಂಧ ತನ್ನಷ್ಟಕ್ಕೆ ತಾನೇ ನಾಶ ಹೊಂದಿತು. 


ನಿಬಂಧನೆ ಹಾಕಿದ ದೇವಯಾನಿ ತಾನೇ ಗೆದ್ದೆ ಎಂಬ ಅಹಂಕಾರದಲ್ಲಿ ಮೆರೆಯುತ್ತಿದ್ದರೆ, ಶರ್ಮಿಷ್ಠೆ ತಾನೇ ಗೆದ್ದೆ ಎಂದು ಒಳಗೊಳಗೇ ಮುಸಿಮುಸಿ ನಗುತ್ತಿದ್ದಳು. ಇಷ್ಟೇ ವ್ಯತ್ಯಾಸ!!


(ಓ ಮನಸೇ- 1-15 March 2020)

*************
ಕೆ.ಎ.ಸೌಮ್ಯ
ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ