ಶಿಶುಪಾಲನ ನೂರು ತಪ್ಪುಗಳು
ಒಬ್ಬರು ಒಂದು ಬಾರಿ ಮಾಡಿದ ತಪ್ಪನ್ನು ಮತ್ತೊಂದು ಬಾರಿ ಮಾಡಿದರೆ ನಮಗೆ ಸಹಿಸಲಾಗೋಲ್ಲ. ಆದರೆ ಶ್ರೀಕೃಷ್ಣ ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುತ್ತಾನೆ. ಏಕೆಂದರೆ ಅವನು ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ಅವನ ತಾಯಿಗೆ ಮಾತು ಕೊಟ್ಟಿರುತ್ತಾನೆ.
ಶಿಶುಪಾಲ ಅದನ್ನು ಕೃಷ್ಣನ ಬಲಹೀನತೆ ಎಂದು ತಿಳಿದು ತಪ್ಪಿನ ಮೇಲೆ ತಪ್ಪು ಮಾಡುತ್ತಲೇ ಹೋಗುತ್ತಾನೆ. ಕೃಷ್ಣ ಅವುಡುಗಚ್ಚಿ ಆ ತಪ್ಪುಗಳನ್ನು ಕ್ಷಮಿಸುತ್ತಲೇ ಹೋಗುತ್ತಾನೆ. ಕಡೆಗೆ ಅವನು ನೂರಾ ಒಂದನೇ ತಪ್ಪು ಮಾಡಿದಾಗ ಕೃಷ್ಣನ ಕೋಪ ಭುಗಿಲೆದ್ದು ಇನ್ನು ತಡೆಯಲಾಗದೇ ಶಿಶುಪಾಲನನ್ನು ವಧಿಸುತ್ತಾನೆ.
ಇದೊಂದು ರೀತಿ ಲಾಜಿಕ್ ಥರ ಕಾಣುತ್ತದೆ ನನಗೆ.
ನಮಗೆಲ್ಲರಿಗೂ ಸಾಯಿಸುವಂತಹಾ ಕೋಪ ಯಾವಾಗ ಬರುತ್ತದೆ? ಅವರೂ ನಮಗೆ ಅಷ್ಟೇ ಪ್ರಮಾಣದ ನೋವು ಕೊಟ್ಟಾಗ ತಾನೇ? ಕಳ್ಳತನ ಮಾಡುವ ಕಳ್ಳನಿಗೆ ಮರಣದಂಡನೆ ವಿಧಿಸಲಾಗುತ್ತದೆಯೇ? ಅವನಿಗೆ ಚಿಕ್ಕಪುಟ್ಟ ಶಿಕ್ಷೆ ನೀಡಿ ಮತ್ತೊಮ್ಮೆ ಕಳ್ಳತನ ಮಾಡದಂತೆ ಎಚ್ಚರಿಕೆ ಕೊಟ್ಟು ಬಿಟ್ಟುಬಿಡುತ್ತಾರೆ. ಕೊಲೆ ಮಾಡಿದವನಿಗೆ ಮಾತ್ರವೇ ಗಲ್ಲುಶಿಕ್ಷೆ ಕೊಡುವುದು.
ಅದೇ ರೀತಿ ಶಿಶುಪಾಲ ಮಾಡುತ್ತಿದ್ದ ಚಿಕ್ಕಪುಟ್ಟ ತಪ್ಪುಗಳು ಅವನನ್ನು ಕೊಲೆ ಮಾಡುವಂತಹಾ ಅಪರಾಧಗಳಾಗಿರಲೇ ಇಲ್ಲ. ಅದು ಕೇವಲ ಕೃಷ್ಣನನ್ನು ಕೆರಳಿಸಲು ಆತ ಮಾಡುತ್ತಿದ್ದ ತಪ್ಪುಗಳು. ಶಿಶುಪಾಲ ಮಾಡಿದ್ದಕ್ಕಿಂತಲೂ ಘೋರ ಅಪರಾಧ ಮಾಡುತ್ತಿದ್ದವರು ಇದ್ದರೂ ಕೃಷ್ಣ ಅವರಿಗೇನೂ ಮಾಡದೇ ಬಿಟ್ಟಿದ್ದ. ಆದರೆ ಶಿಶುಪಾಲನ ವಿಚಾರದಲ್ಲಿ ಹಾಗಾಗಲಿಲ್ಲ. ಯಾಕೆ ಗೊತ್ತಾ?
ಮನೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ತಕ್ಷಣವೇ ರಪ್ ಎಂದು ಹೊಡೆದುಬಿಡುತ್ತೇವೆ ಅಥವಾ ಮತ್ತೊಮ್ಮೆ ಈ ತಪ್ಪು ಮಾಡಬೇಡ ಅಂತ ಗದರಿಸುತ್ತೇವೆ. ಅಷ್ಟಕ್ಕೆ ನಮ್ಮ ಕೋಪ ಆರುತ್ತದೆ. ಆದರೆ ವೃತ್ತಿರಂಗದಲ್ಲಿ ಅಥವಾ ಸಮಾಜದಲ್ಲಿ ಯಾರಾದರೂ ನಮಗೆ ಅವಮಾನ ಮಾಡಿದರೆ ಕೋಪದಲ್ಲಿ ನಾವು ಅವರಿಗೆ ತಕ್ಷಣ ಏನೂ ಮಾಡಲಾಗೋಲ್ಲವಲ್ಲ. ಆಗ ಅವರ ಮೇಲಿನ ಕೋಪ ದ್ವೇಷವಾಗಿ ಬದಲಾವಣೆಯಾಗುತ್ತದೆ.
ದಿನಕಳೆದಂತೆ ಆ ದ್ವೇಷ ಹೆಚ್ಚಾಗುತ್ತದೆಯೇ ಹೊರತೂ ಕಡಿಮೆಯಾಗುವುದಿಲ್ಲ. ಸಮಯ ಸಿಕ್ಕಾಗ ಆ ದ್ವೇಷ ತೀರಿಸಬೇಕೆಂದು ಕಾಯುತ್ತಿರುತ್ತೇವೆ.
ಶಿಶುಪಾಲನ ವಿಷಯದಲ್ಲಿಯೂ ಹಾಗೆಯೇ ಆಗಿದೆ.
ಅವನು ಹುಟ್ಟಿದಾಗ ಆತನಿಗೆ ಚತುರ್ಭುಜ ಮತ್ತು ಮೂರು ಕಣ್ಣುಗಳಿರುತ್ತವೆ. ಈ ಮಗುವನ್ನು ಯಾರು ಎತ್ತಿಕೊಂಡಾಗ ಈ ಹೆಚ್ಚುವರಿ ಅಂಗಗಳು ಉದುರಿ ಹೋಗುತ್ತವೆಯೋ ಅವರಿಂದಲೇ ಮಗುವಿನ ಸಾವು ಎಂಬುದು ವಿಧಿಲಿಖಿತವಾಗಿರುತ್ತದೆ.
ಕೃಷ್ಣ ಮಗುವನ್ನು ಎತ್ತಿಕೊಂಡಾಗ ಮಗುವಿನ ಹೆಚ್ಚುವರಿ ಕೈ ಮತ್ತು ಕಣ್ಣು ಉದುರುತ್ತದೆ. ಅದನ್ನು ಗಮನಿಸಿದ ಶಿಶುಪಾಲನ ತಾಯಿ ಕೃಷ್ಣನ ಬಳಿ ತನ್ನ ಮಗನ ನೂರು ತಪ್ಪನ್ನು ಕ್ಷಮಿಸಲು ಬೇಡುತ್ತಾಳೆ. ಕೃಷ್ಣನೂ ಒಪ್ಪುತ್ತಾನೆ. ಪಾಪ ಆ ತಾಯಿ ತನ್ನ ಮಗ ಹತ್ತಕ್ಕಿಂತ ಹೆಚ್ಚು ತಪ್ಪು ಮಾಡುವುದಿಲ್ಲ, ಹಾಗಾಗಿ ಆತನ ಪ್ರಾಣಕ್ಕೇನೂ ಸಂಚಕಾರ ಬರುವುದಿಲ್ಲ ಅಂತ ತಿಳಿದಿದ್ದಳೇನೋ.
ಆದರೆ ಅಸಲಿಗೆ ಆಕೆಯೇ ಮಗನ ಮೃತ್ಯುವಿಗೆ ಕಾರಣಾಗುತ್ತಾಳೆ. ಹೇಗೆ ಗೊತ್ತೇ?
ಆಕೆ ಸುಮ್ಮನಿದ್ದರೆ ಮಗುವಾದ ಶಿಶುಪಾಲ ಮಾಡುವ ತಪ್ಪುಗಳಿಗೆ ಕೃಷ್ಣ ಒಂದೆರೆಡು ಏಟು ಕೊಟ್ಟೋ ಅಥವಾ ಗದರಿಸಿಯೋ ಅಥವಾ ಬುದ್ಧಿ ಮಾತು ಹೇಳಿಯೋ ಸರಿದಾರಿಗೆ ತರಬಹುದಿತ್ತು. ಆದರೆ ಆತನ ನೂರು ತಪ್ಪುಗಳನ್ನು ಕ್ಷಮಿಸಿ ನೂರೊಂದನೇ ತಪ್ಪಿಗಾಗಿ ಕಾಯುವಾಗ ಸಹಜವಾಗಿಯೇ ಕೃಷ್ಣ ಒತ್ತಡಕ್ಕೊಳಗಾಗುತ್ತಾನೆ.
ಶಿಶುಪಾಲ ಒಂದೊಂದೇ ತಪ್ಪು ಮಾಡುತ್ತಾ ಹೋದಂತೆ ಕೃಷ್ಣನ ಕೋಪ ದ್ವೇಷವಾಗಿ ಬದಲಾವಣೆಯಾಗುತ್ತಾ ಬರುತ್ತದೆ. ಒಂದು ಬಾರಿಯೂ ಒಂದು ಪುಟ್ಟ ಹೊಡೆತ ಕೊಡಲೂ ಆಗದ ಅಸಹಾಯಕತೆ ಶಿಶುಪಾಲನ ನೂರಾ ಒಂದನೇ ತಪ್ಪಿಗೆ ಸ್ಫೋಟಗೊಳ್ಳುತ್ತದೆ. ಎಷ್ಟೆಂದರೆ ಆತನ ಪ್ರಾಣ ತೆಗೆಯುವಷ್ಟು....
ಸಿಟ್ಟು, ಕೋಪ, ದ್ವೇಷ, ಏನೂ ಮಾಡಲಾಗದ ಅಸಹಾಯಕತೆ ಇದೆಲ್ಲದರ ಫಲವಾಗಿ ಕೃಷ್ಣ ಶಿಶುಪಾಲನನ್ನು ವಧಿಸುತ್ತಾನೆ. ತಾಳ್ಮೆಗಿರುವ ಶಕ್ತಿಯೇ ಅಂತಹದ್ದು. ಅದು ಒಮ್ಮೆಗೇ ಸಿಡಿಯದೇ ಇಡೀ ಶಕ್ತಿಯನ್ನು ತನ್ನೊಳಗೆ ಶೇಖರಿಸಿಕೊಳ್ಳುತ್ತಾ ಹೋಗುತ್ತದೆ.
ಒಮ್ಮೆ ತಾಳ್ಮೆಯ ಕಟ್ಟೆ ಒಡೆದಾಗ ಅದರ ಫಲಿತಾಂಶ ಬಹಳ ಭೀಕರವಾಗಿರುತ್ತದೆ. ಇದರ ಅರ್ಥ ಅಸಹಾಯಕರ ಮೇಲೆ ನಾವು ದರ್ಬಾರು ತೋರಿಸಬಾರದು. ತಿರುಗಿಸಿ ಹೊಡೆಲಾಗದವರ ಮನಸ್ಸು ನೋಯಿಸಬಾರದು. ಏಕೆಂದರೆ ಅವರು ಎಂದಾದರೂ ಅದಕ್ಕೆ ಪ್ರತ್ಯುತ್ತರ ಕೊಟ್ಟರೆ ಅದು ಮಾರಣಾಂತಿಕವಾಗಿಯೇ ಇರುತ್ತದೆ.
**********
-ಕೆ.ಎ.ಸೌಮ್ಯ
ಮೈಸೂರು
(Published in O Manase 1-15 Nov 2019)
