ಅಷ್ಟ ವಸುಗಳು

 



ಪ್ರತಿಯೊಬ್ಬರ ಹುಟ್ಟಿಗೂ ಒಂದೊಂದು ಕಾರಣ ಇರುತ್ತದೆ. 


ಮಹಾಭಾರತದಂತಹ ಒಂದೇ ಒಂದು ಗ್ರಂಥ ಓದಿದರೆ ಸಾಕು ಈ ವಿಷಯ ಸ್ಪಷ್ಟವಾಗುತ್ತದೆ. ಮಹಾಭಾರತದ ಮೂಲ ಪುರುಷರಲ್ಲಿ ಒಬ್ಬನಾದ ಭೀಷ್ಮನ ಹುಟ್ಟಿಗೂ ಒಂದು ಮಹತ್ತರವಾದ ಕಾರಣವಿದೆ. ಏಕೆಂದರೆ ಶಂತನುವಿಗೆ ಹುಟ್ಟಿದ ಮಕ್ಕಳಲ್ಲಿ ಜೀವಂತ ಉಳಿದವನು ಭೀಷ್ಮ ಒಬ್ಬನೇ. ಉಳಿದವರು ಹುಟ್ಟಿದ ದಿನವೇ ಹೆತ್ತ ತಾಯಿಯಿಂದ ನೀರು ಪಾಲಾದವರು. ಹಾಗಾಗಿ ಉಳಿದವರು ಮರಣ ಹೊಂದಿ, ಭೀಷ್ಮನೊಬ್ಬನೇ ಬದುಕುಳಿಯಲು ಏನಾದರೂ ಒಂದು ಕಾರಣ ಇರಲೇ ಬೇಕಲ್ಲವೆ?


ವಸು ಎಂಬುವವಳಿಗೆ ಎಂಟು ಜನ ಪುತ್ರರು. ಅವರೇ ಅಷ್ಟ ವಸುಗಳು. ದೇವರಿಗಿರುವ ಎಲ್ಲಾ ಶಕ್ತಿಗಳೂ ಇವರಿಗಿದ್ದವು. ನೀರಿ‌ನ ಮೇಲೆ ನಡೆಯುವ ಶಕ್ತಿ, ಆಕಾಶದಲ್ಲಿ ಸಂಚರಿಸುವ ಶಕ್ತಿ, ಸದಾ ಯೌವ್ವನಿಗರಾಗಿರುವ ಶಕ್ತಿ ಎಲ್ಲವೂ ಇದ್ದವು. 


ಹೀಗಿರುವಾಗ ಒಮ್ಮೆ ಈ ಎಂಟು ವಸುಗಳು ತಮ್ಮ ತಮ್ಮ ಪತ್ನಿಯರೊಂದಿಗೆ ಭೂಲೋಕದಲ್ಲಿ ಸಂಚಾರ ಮಾಡುತ್ತಿರುವಾಗ ವಸಿಷ್ಠರ ಆಶ್ರಮದಲ್ಲಿನ ನಂದಿನಿ ಅವರ ಗಮನ ಸೆಳೆಯುತ್ತಾಳೆ. 


ಆ ಕಾಮಧೇನುವನ್ನು ಕಂಡು ವಸುಗಳ ಮನಸ್ಸು ಚಂಚಲವಾಗುತ್ತದೆ. ಕೇಳಿದ್ದನ್ನು ದಯಪಾಲಿಸುವ ಇಂತಹಾ ಒಂದು ಹಸು ತಮ್ಮಲ್ಲಿಯೂ ಇರಬೇಕೆಂಬ ಆಸೆಯಾಗುತ್ತದೆ. ಆಗ ಯಾವ ಶ್ರಮವಿಲ್ಲದೇ ಇಷ್ಟಪಟ್ಟಿದ್ದನ್ನು ಪಡೆಯುತ್ತಾ ಸುಖವಾಗಿರಬಹುದು ಅಂತ ಲಾಲಸೆ ಪಡುತ್ತಾರೆ. ಆದರೆ ಅದನ್ನು ಪಡೆಯಲು ಮಾತ್ರ ತಾವು ದೇವತೆಗಳು ಎಂಬುದನ್ನು ಮರೆತು ಮನುಷ್ಯರಂತೆ ವಾಮಮಾರ್ಗವನ್ನು ಹಿಡಿಯುತ್ತಾರೆ.


ಮನುಷ್ಯರಿಗೆ ಇಂತಹಾ ಆಸೆಗಳು ಸಹಜ. ಆದರೆ ದೇವರಿಗೂ ಇಂತಹಾ ಬಯಕೆಗಳಿರುತ್ತವೆಯೇ ಅಂತ ನಮಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ವಿಪರ್ಯಾಸವೆಂದರೆ ಭೋಗ, ಲಾಲಸೆಗಳು ಯಾರನ್ನೂ ಬಿಟ್ಟಿಲ್ಲ. ನಂದಿನಿಯನ್ನು ಪಡೆಯುವ ಯತ್ನದಲ್ಲಿದ್ದ ವಸುಗಳು ಅವಳನ್ನು ನೇರವಾಗಿ ಪಡೆಯಲಾಗದೇ ಅಪಹರಿಸುವ ಯತ್ನಕ್ಕೆ ತೊಡಗುತ್ತಾರೆ. 


ಆದರೆ ಸಾಕುಪ್ರಾಣಿಗಳಿಗೂ ಮತ್ತು ಮಾಲೀಕರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇರುತ್ತದೆ. ಹಾಗೆಯೇ ನಂದಿನಿಯನ್ನು ಹೊತ್ತೊಯ್ಯಲು ವಸುಗಳು ಬಂದಾಗ ನಂದಿನಿಯ ಮನಸ್ಸಿನೊಳಗೆ ಉಂಟಾದ ಭಾವನೆಗಳು ಆಕೆಯ ಮಾಲೀಕರಾದ ವಸಿಷ್ಠರೊಳಗೂ ಉಂಟಾಗುತ್ತದೆ. 


ತಕ್ಷಣವೇ ವಸಿಷ್ಠರು ಎಚ್ಚೆತ್ತು ಹೊರ ಬರುತ್ತಾರೆ. ಅಲ್ಲಿ ಅವರಂದುಕೊಂಡಂತೆಯೇ ನಂದಿನಿಯ ಅಪಹರಣ ನಡೆಯುತ್ತಿದ್ದು, ಅಷ್ಟ ವಸುಗಳು ಸಾಕ್ಷಿ ಸಹಿತ ವಸಿಷ್ಠರ ಕೈಗೆ ಸಿಕ್ಕು ಬೀಳುತ್ತಾರೆ.


ಕಾಮಧೇನುವಾದ ನಂದಿನಿಯನ್ನು ಮಗಳಂತೆ ಅತಿಶಯವಾಗಿ ಪ್ರೀತಿಸುತ್ತಿದ್ದ ವಸಿಷ್ಠರಿಗೆ ವಸುಗಳ ವರ್ತನೆ ಸಹಿಸಲಾಗುವುದಿಲ್ಲ. ಮನುಷ್ಯರಂತೆ ವರ್ತಿಸಿದ ವಸುಗಳ ಮೇಲೆ ಅಸಾಧ್ಯ ಸಿಟ್ಟು ಸಹ ಬರುತ್ತದೆ. ಕೂಡಲೇ ಎಂಟು ವಸುಗಳೂ ಭೂಮಿಯಲ್ಲಿ ಮನುಷ್ಯರಾಗಿ ಜನಿಸಲಿ ಅಂತ ಶಾಪ ಕೊಟ್ಟುಬಿಡುತ್ತಾರೆ. ಆಗ ಅಷ್ಟ ವಸುಗಳಿಗೂ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. 


ಶಿಕ್ಷೆಗಳಲ್ಲಿಯೇ ಅತಿ ಘೋರ ಶಿಕ್ಷೆ ಎಂದರೆ ದೇವಲೋಕದವರು ಭೂಮಿಯ ಮೇಲೆ ಹುಟ್ಟುವುದು. ಏಕೆಂದರೆ ಇಲ್ಲಿ ಹುಟ್ಟಿದ ಕೂಡಲೇ ಅವರ ದೈವೀಶಕ್ತಿ ಅವರಿಂದ ದೂರವಾಗುತ್ತದೆ. ಮನುಷ್ಯರಿಗಿರುವ ಜರಾ-ಮೃತ್ಯುವಿನ ಬಾಧೆಗಳು ಅವರನ್ನು ಕಾಡತೊಡಗುತ್ತವೆ. ಅಲ್ಲದೇ ದೇವಲೋಕದಂತೆ ಬಿಟ್ಟಿ ಬದುಕು ನಡೆಸಲಾಗೋಲ್ಲ ಇಲ್ಲಿ. ಜೀವನ ನಡೆಸಲು ಯಾವುದಾದರೂ ಕಾಯಕದಲ್ಲಿ ತೊಡಗಲೇ ಬೇಕಾದ ಅವಶ್ಯಕತೆ ಇರುತ್ತದೆ. 


ಅಂದರೆ ದೈಹಿಕ ಶ್ರಮ, ಆಯಾಸ ಎಲ್ಲವೂ ಇರುತ್ತದೆ. ಆದ್ದರಿಂದ ಭೂಮಿಯ ಮೇಲಿನ ಜನ್ಮ ಎಂದಾಗ ದೇವಲೋಕದವರು ಹೆದರಿ ನಡುಗುತ್ತಾರೆ‌. ಆಗ ವಸುಗಳು ತಮ್ಮ ತಪ್ಪನ್ನು ಮನ್ನಿಸುವಂತೆ ವಸಿಷ್ಠರ ಕಾಲಿಗೆ ಬೀಳುತ್ತಾರೆ.


ವಸಿಷ್ಠರು ಯೋಚಿಸಿ, ಕೊನೆಗೆ ಕೊಟ್ಟ ಶಾಪವನ್ನು ಹಿಂಪಡೆಯಲಾರದ ಕಾರಣ ಏಳು ವಸುಗಳಿಗೆ ಹುಟ್ಟಿದ ಕೂಡಲೇ ಸಾಯುವ ಹಾಗೆ ಮತ್ತು ಈ ಅಪಹರಣವನ್ನು ಯೋಜಿಸಿದ ಹಿರಿಯ ವಸು ಮಾತ್ರ ದೀರ್ಘ ಕಾಲ ಭೂಮಿಯ ಮೇಲೆ ವಾಸಿಸುವ ಹಾಗೆ ಶಾಪವನ್ನು ಬದಲಿಸುತ್ತಾರೆ. ಈ ಕಾರಣದಿಂದಲೇ ಶಂತನು ಮತ್ತು ಗಂಗೆಯಲ್ಲಿ ಹುಟ್ಟುವ ಏಳು ಮಕ್ಕಳು ಹುಟ್ಟಿದ ಕೂಡಲೇ ಸತ್ತು ದೇವಲೋಕ ಸೇರಿದರೆ, ಕೊನೆಯ ಮಗುವಾಗಿ ಹುಟ್ಟಿದವನು ಬಹುಕಾಲ ಬಾಳಿ-ಬದುಕಿ ಮಹಾಭಾರತಕ್ಕೆ ಸಾಕ್ಷಿಯಾಗುತ್ತಾನೆ. ಅವನೇ ಭೀಷ್ಮ.‌

ಹೀಗೆ ಒಂದಕ್ಕೊಂದು ಕೊಂಡಿ ಕೂಡಿಸುತ್ತಾ ಹೋದರೆ, ಅಕಸ್ಮಾತ್ ಮಧ್ಯದಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದ್ದರೂ‌ ಮಹಾಭಾರತ ನಡೆಯುತ್ತಿರಲಿಲ್ಲವೇನೋ ಅಂತನಿಸುವಂತೆ ಮಾಡುತ್ತದೆ. ಜೊತೆಗೆ ಇವುಗಳನ್ನು‌ ಓದುವಾಗ ಎಲ್ಲರ ಹುಟ್ಟಿಗೆ ಕಾರಣ ಇರುವಂತೆ ನನ್ನ ಹುಟ್ಟಿಗೆ ಕಾರಣವೇನು ಅಂತ ಪ್ರತಿಯೊಬ್ಬರೂ ಯೋಚಿಸುವಂತಾಗುತ್ತದೆ.


(ಓ ಮನಸೇ- 15-30 March 2020)
**************

 ಕೆ.ಎ.ಸೌಮ್ಯ
ಮೈಸೂರು


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ