ಧರ್ಮಯುದ್ಧವೂ ಧರ್ಮರಾಯನೂ

 

ಪರಿಸ್ಥಿತಿ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ. ನಾವು ಹೇಳಿರುವ ಮಾತನ್ನು ನಾವೇ ಮರೆಯುವ ಹಾಗೆ ಮಾಡುತ್ತದೆ. ಇನ್ನೊಬ್ಬರನ್ನು ಸಮಾಧಾನಿಸಲು ನಾವು ಹೇಳಿದ ಮಾತನ್ನು ನಮಗೆ ಅವರೇ ತಿರುಗಿಸಿ ಹೇಳುವ ಹಾಗೆ ಮಾಡುತ್ತದೆ. ಧರ್ಮರಾಯನಂಥಾ ಧರ್ಮರಾಯನಿಗೇ ಧರ್ಮ ಸಂಕಟ ಒದಗುವ ಹಾಗೆ ಮಾಡುತ್ತದೆ. ಪ್ರಸಂಗ ಹೀಗಿದೆ:


ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ.


ಭೀಮಸೇನ ಒಂದೊಂದು ದಿನ ಯುದ್ಧ ಮುಗಿದಾಗಲೂ ತಾನು ಇಂದು ಇಷ್ಟು ಕೌರವರನ್ನು ಕೊಂದೆ, ಇಷ್ಟು ಜನರನ್ನು ಮುಗಿಸಿದೆ, ಇಷ್ಟು ಕೌರವ ಕುಮಾರರು ಮಾತ್ರ ಬದುಕಿದ್ದಾರೆ ಎಂದು ಎದೆಯುಬ್ಬಿಸಿ ಹೇಳುತ್ತಿರುತ್ತಾನೆ


ಇದನ್ನು ಕಂಡ ಧರ್ಮರಾಯ ಹಾಗೆಲ್ಲಾ ಯುದ್ಧವನ್ನು ವೈಯುಕ್ತಿಕವಾಗಿ ನೋಡಬಾರದು, ಏಕೆಂದರೆ ಯುದ್ಧ ನಡೆಯುತ್ತಿರುವುದು ನ್ಯಾಯ, ಧರ್ಮ, ಸತ್ಯದ ಪುನರ್ ಪ್ರತಿಷ್ಠಾಪನೆಗಾಗಿ ಮಾತ್ರ, ದೃಷ್ಟಿಯಿಂದ ಯುದ್ಧ ಮಾಡು ಎಂದು ತಿಳಿ ಹೇಳುತ್ತಾನೆ. ಭೀಮ ಒಲ್ಲದ ಮನಸ್ಸಿನಿಂದಲೇ ಅಣ್ಣನಿಗೆ ಪ್ರತಿಮಾತನಾಡದೇ ಸುಮ್ಮನಾಗುತ್ತಾನೆ.


ಮುಂದೆ ಕುರುಕ್ಷೇತ್ರ ಯುದ್ಧ ಮುಗಿದು ಕುರುವಂಶದವರೆಲ್ಲಾ ನಾಶವಾದ ಮೇಲೆ ಸತ್ತವರಿಗೆಲ್ಲಾ ತರ್ಪಣ ಕೊಡುವಾಗ ತಾಯಿ ಕುಂತಿಯಿಂದ ಕರ್ಣನೇ ಪಾಂಡವರಲ್ಲಿ ಮೊದಲನೆಯವನು ಎಂದು ತಿಳಿದು ಬರುತ್ತದೆ.


ಆಗ ಧರ್ಮಜನಲ್ಲಿ ಕಳವಳ ಶುರುವಾಗುತ್ತದೆ. ಅಸಹನೀಯ ನೋವು ಅನುಭವಿಸುತ್ತಾನೆ. ಯಾವ ನೆಲಕ್ಕಾಗಿ, ಯಾವ ಸಿಂಹಾಸನಕ್ಕಾಗಿ, ಯಾವ ಕಿರೀಟಕ್ಕಾಗಿ, ಯಾವ ಅಧಿಕಾರಕ್ಕಾಗಿ ನಾವೆಲ್ಲಾ ಯುದ್ಧ ಮಾಡಿದೆವೋ ನೆಲ, ಸಿಂಹಾಸನ, ಕಿರೀಟ, ಅಧಿಕಾರ ನಿಜವಾಗಿ ಸೇರಬೇಕಾದ್ದು ಕರ್ಣನಿಗೆ. ಅವನೆ ಎಲ್ಲರ ಅಗ್ರಜ. ಅಂಥವನನ್ನು ಕೈಯ್ಯಾರೆ ಕೊಂದೆವಲ್ಲ ಎಂದು ಕಣ್ಣೀರು ಹಾಕುತ್ತಾನೆ. ಅಣ್ಣನನ್ನು ಕೊಂದು ಅಧಿಕಾರ ಪಡೆಯುವುದಕ್ಕಿಂತ ಕಾಡಿಗೆ ಹೋಗಿ ತಪಸ್ಸು ಮಾಡುವುದೇ ಮೇಲು ಎಂದು ಹಲುಬುತ್ತಾನೆ.


ಆಗ ಮಧ್ಯ ಪ್ರವೇಶಿಸುವ ಭೀಮ ಕೋಪದಿಂದಹಾಗಿದ್ದರೆ ಈಗ ಯುದ್ಧ ಮಾಡುವ ಅಗತ್ಯವೇನಿತ್ತು? ನಾವು ವನವಾಸ ಅನುಭವಿಸುತ್ತಾ ಕಾಡಿನಲ್ಲೇ ಇರಬಹುದಿತ್ತಲ್ಲ?’ ಎಂದು ಗರ್ಜಿಸುತ್ತಾನೆ.


ಧರ್ಮರಾಯ ನೊಂದುಹಾಗಲ್ಲ ಭೀಮ.. ಯಾರು ಏನು ಹೇಳಿದರೂ ನನ್ನ ಮನಸ್ಸು ಯಾಕೋ ಕರ್ಣನ ಸಾವನ್ನು ಒಪ್ಪುತ್ತಿಲ್ಲ. ನಮ್ಮೆಲ್ಲರ ಅಗ್ರಜನಾಗಿ ರಾಜನಾಗಿ ಮೆರೆಯಬೇಕಾಗಿದ್ದವನು ಅವನು. ನಾವೆಲ್ಲರೂ ಅವನ ಸೇವೆ ಮಾಡಬೇಕಾಗಿತ್ತು. ಅಂತಹವನನ್ನು ಕೊಂದ ತಪ್ಪಿಗೆ ಮನಸ್ಸು ದುಃಖ ಅನುಭವಿಸುತ್ತಿದೆ. ಪ್ರತೀಬಾರಿಯೂ ನೀನು ಮಾಡಿದ್ದು ತಪ್ಪು ಎಂದು ಕೇಳುವ ನನ್ನ ಮನಸ್ಸಾಕ್ಷಿಗೆ ಏನೆಂದು ಉತ್ತರಿಸಲಿ?’ ಎನ್ನುತ್ತಾನೆ.


ಅದರಿಂದ ಮತ್ತೂ ಕೆರಳಿದ ಭೀಮಮನಸ್ಸಾಕ್ಷಿ? ಯಾವ ಮನಸ್ಸಾಕ್ಷಿ? ಅಂದು ದುರ್ಯೋಧನನೊಂದಿಗೆ ಪಗಡೆಯಾಟದಲ್ಲಿ ನಿನ್ನ ಸಮಸ್ತ ಸಾಮ್ರಾಜ್ಯವನ್ನೂ ಪಣಕ್ಕಿಟ್ಟಾಗ ಎಲ್ಲಿತ್ತು ನಿನ್ನ ಮನಸ್ಸಾಕ್ಷಿ? ಅನುಮತಿಯಿಲ್ಲದೇ ನಮ್ಮೆಲ್ಲರನ್ನೂ ಜೂಜಿನ ಕಾಯಿಗಳಂತೆ ಪಣಕ್ಕಿಟ್ಟಾಗ ಎಲ್ಲಿ ಹೋಗಿತ್ತು ನಿನ್ನ ಮನಸ್ಸಾಕ್ಷಿ? ದ್ರೌಪದಿಯನ್ನು ಪಣಕ್ಕಿಡುವಾಗ ನಿನ್ನ ಮನಸ್ಸಾಕ್ಷಿ ನಿದ್ರಿಸುತ್ತಿತ್ತೇನು?’ ಎಂದು ಕಠಿಣ ಮಾತುಗಳಿಂದ ನೋಯಿಸುತ್ತಾನೆ.


ನಂತರ ತಾನೇ ಸಮಾಧಾನ ತಂದುಕೊಂಡುಅಣ್ಣ ನಿನ್ನ ತಳಮಳ ನನಗರ್ಥವಾಗುತ್ತದೆ. ಆದರೆ ನೀನೇ ನನಗೆ ಹೇಳಿದ ಹಾಗೆ ಇದು ಕೇವಲ ಧರ್ಮ ಯುದ್ಧ. ಇದು ನಡೆದದ್ದು ಧರ್ಮ, ನ್ಯಾಯ, ಸತ್ಯಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಿಕ್ಕಾಗಿ ಮಾತ್ರ. ದಯವಿಟ್ಟು ದೃಷ್ಠಿಕೋನದಿಂದ ಮಾತ್ರ ನೋಡು. ಆಗ ನಿನಗೇ ಗೊತ್ತಾಗುತ್ತದೆ. ಏನೆಂದರೆ ನಾವೆಲ್ಲರೂ ಯುದ್ಧದಲ್ಲಿ ಕೇವಲ ಧರ್ಮವನ್ನಷ್ಟೇ ಪಾಲಿಸಿದ್ದೇವೆ. ಅಧರ್ಮಿಗಳ ವಿನಾಶ ಮಾಡಿದ್ದೇವೆ. ಅಷ್ಟೇ..’ ಎಂದು ಸಮಾಧಾನ ಮಾಡುತ್ತಾನೆ.


ಯುದ್ಧದಲ್ಲಿ ಗೆದ್ದು ಇನ್ನೇನು ಸಿಂಹಾಸನವೇರಿ ಅಧಿಕಾರ ಹಿಡಿಯಬೇಕೆನ್ನುವಾಗ ಯುಧಿಷ್ಠಿರನಲ್ಲಿ ಮೂಡುವ ವೈರಾಗ್ಯವನ್ನು ಭೀಮ ಅಣ್ಣನದೇ ಹಿಂದಿನ ಮಾತುಗಳಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತಾನೆ. ಅಲ್ಲದೇ ವೈರಾಗ್ಯವನ್ನು ಯಶಸ್ವಿಯಾಗಿ ಹೊಡೆದೋಡಿಸುತ್ತಾನೆ..

**************

K A Sowmya

Mysore

(ಸೆಪ್ಟೆಂಬರ್ 2018 - ಮನಸೇ)


Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ