ಅಣಿ ಮಾಂಡವ್ಯ

 



ಹೊಗಳಿಕೆಯನ್ನು ಹೊನ್ನಶೂಲ ಎನ್ನಲಾಗುತ್ತದೆ. ಮನುಷ್ಯರನ್ನು ಏನಾದರೂ ಶೂಲಕ್ಕೇರಿಸಿದರೆ ಪ್ರಾಣವೇ ಹೋಗಿ ಬಿಡುತ್ತದೆ. ಅಷ್ಟಾದರೂ ಜನರು ಹೊಗಳಿಕೆ ಎಂಬ ಹೊನ್ನಶೂಲದ ಮೋಹ ಬಿಡಲಾರರು. ಆದರೆ ಈ ಮೋಹ, ಮದ, ಮತ್ಸರಗಳನ್ನು ಬಿಟ್ಟ ಒಬ್ಬ ಋಷಿಯನ್ನು ಅವರು ಮಾಡದ ತಪ್ಪಿಗೆ ಒಮ್ಮೆ ಶೂಲಕ್ಕೇರಿಸಲಾಗಿತ್ತು. 


ಅವರು ಮೊದಲೇ ಋಷಿಗಳು. ತಮ್ಮ ಭೌತಿಕ ದೇಹವನ್ನು ದಂಡಿಸಿ ಶಿಸ್ತಾಗಿ ಇಟ್ಟುಕೊಂಡಿದ್ದರು. ಅವರನ್ನು ಆ ಶೂಲದಿಂದ ಏನೂ ಮಾಡಲಾಗಿಲ್ಲ. ಅದರಿಂದ ಅವರು ಸಾಯಲಿಲ್ಲ. ಬದಲಿಗೆ ಆ ಶೂಲವನ್ನೇ ತಮ್ಮೊಂದಿಗೆ ಹೊತ್ತು ತಿರುಗಿದರು. ಅವರೇ ಅಣಿ ಮಾಂಡವ್ಯ ಋಷಿಗಳು.


ಒಮ್ಮೆ ಅರಮನೆಯಲ್ಲಿ ಕಳ್ಳತನವಾಗುತ್ತದೆ‌. ಕಳ್ಳತನ ಮಾಡಿದ ಗುಂಪು ಅರಮನೆಯ ಕಾವಲಿನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾ ಬರುತ್ತಿರುವಾಗ ಎದುರಿನಲ್ಲಿ ಮಾಂಡವ್ಯ ಮಹರ್ಷಿಗಳ ಆಶ್ರಮ ಎದುರಾಗುತ್ತದೆ. ಆಶ್ರಮದಲ್ಲಿ ಅಡಗಿಕೊಂಡರೆ ಬಹುಶಃ ಯಾರಿಗೂ ಕಂಡುಹಿಡಿಯಲಾಗದು ಅಂತ ತಿಳಿದು ಕಳ್ಳರು ಆಶ್ರಮದ ಒಳ ಹೊಕ್ಕು ಅಡಗಿಕೊಳ್ಳುತ್ತಾರೆ‌. 


ಆಶ್ರಮದ ಒಳಗೆ ಧ್ಯಾನ ನಿರತರಾಗಿದ್ದ ಮಾಂಡವ್ಯ ಮಹರ್ಷಿಗಳಿಗೆ ಕಳ್ಳರು ಬಂದದ್ದು, ಅಡಗಿದ್ದು ಒಂದೂ ಗೊತ್ತಾಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಸೈನಿಕರು ಕಳ್ಳರನ್ನು ಹುಡುಕುತ್ತಾ ಆಶ್ರಮದ ಒಳಗೇ ಬಂದು ಬಿಡುತ್ತಾರೆ. ಧ್ಯಾನ ಮಾಡುತ್ತಿದ್ದ ಮಾಂಡವ್ಯ ಮಹರ್ಷಿಗಳ ಬಳಿ ಕಳ್ಳರ ಬಗ್ಗೆ ವಿಚಾರಿಸುತ್ತಾರೆ. 


ಮಹರ್ಷಿಗಳು ಈ ಲೋಕದಲ್ಲಿ ಇದ್ದರೆ ತಾನೇ ಸೈನಿಕರಿಗೆ ಉತ್ತರಿಸುವುದು? ಅವರು ಪರಮಾತ್ಮನಲ್ಲಿ ತಲ್ಲೀನರಾಗಿದ್ದಾರೆ. ಸೈನಿಕರು ಮಹರ್ಷಿಗಳನ್ನು ಬಹಳಷ್ಟು ಬಾರಿ ವಿಚಾರಿಸಿ, ಅವರಿಂದ ಸೂಕ್ತ ಸ್ಪಂದನೆ ಸಿಗದೇ, ನಿರಾಶರಾಗಿ ತಾವೇ ಆಶ್ರಮದೊಳಗೆ ಹುಡುಕಲು ಶುರು ಮಾಡುತ್ತಾರೆ.


ಆಗ ಆಶ್ರಮದ ಒಳಗೆ ಅಡಗಿದ್ದ ಕಳ್ಳರು ತಾವು ಕದ್ದ ಮಾಲಿನ ಸಹಿತ ಸಿಕ್ಕು ಬೀಳುತ್ತಾರೆ. ಆ ಆಶ್ರಮವೇ ಕಳ್ಳರ ತಾಣ ಎಂದು ತಪ್ಪು ತಿಳಿದ ಸೈನಿಕರು ಮಾಂಡವ್ಯ ಮಹರ್ಷಿಗಳನ್ನು ಈ‌ ಕಳ್ಳರ ಗುಂಪಿನ ನಾಯಕ ಎಂದು ತಿಳಿಯುತ್ತಾರೆ. ಕಳ್ಳರ ಜೊತೆ ಮಹರ್ಷಿಗಳನ್ನೂ ರಾಜನ ಬಳಿ ಎಳೆದುಕೊಂಡು ಹೋಗುತ್ತಾರೆ. 


ರಾಜ ಸಹ ಹಿಂದೆ ಮುಂದೆ ಯೋಚಿಸದೇ ಕಳ್ಳರ ಜೊತೆ ಮಹರ್ಷಿಗಳಿಗೂ ಮರಣದಂಡನೆಯ ಶಿಕ್ಷೆ ವಿಧಿಸುತ್ತಾನೆ. ಸೈನಿಕರು ಎಲ್ಲರನ್ನೂ ಕರೆದುಕೊಂಡು ಹೋಗಿ ಸಾಲಾಗಿ ಶೂಲಕ್ಕೇರಿಸುತ್ತಾರೆ. ಮರಣದಂಡನೆಯ ಶಿಕ್ಷೆ ಅಂತ ಕೇಳಿಯೇ ಅರ್ಧ ಜೀವವಾಗಿದ್ದ ಕಳ್ಳರು, ಶೂಲಕ್ಕೇರಿದ ಕೂಡಲೇ ಪ್ರಾಣ ಬಿಡುತ್ತಾರೆ. ಆದರೆ ಯಾವ ಚಿಂತೆಯೂ ಇಲ್ಲದ ಮಹರ್ಷಿಗಳು ಮಾತ್ರ ಶೂಲದ ಮೇಲೆಯೂ ತಮ್ಮ ತಪೋ ಮಹಿಮೆಯಿಂದ ಧ್ಯಾನ ನಿರತರಾಗಿರುತ್ತಾರೆ. 


ಶೂಲದಿಂದ ಅವರ ಬೆನ್ನನ್ನು ಚುಚ್ಚಿದ್ದರೂ ಅದರಿಂದ ಪ್ರಾಣ ಹೋಗಿರುವುದಿಲ್ಲ. 


ಈ ವಿಷಯ ತಿಳಿದಾಗ ರಾಜನಿಗೆ ಮೊದಲು ಆಶ್ಚರ್ಯವಾಗುತ್ತದೆ. ನಂತರ ತಾನೇ ಮಹರ್ಷಿ ಇದ್ದಲ್ಲಿಗೆ ಓಡೋಡಿ ಬರುತ್ತಾನೆ. ರಾಜ ಬಂದರೂ ಅಷ್ಟೇ, ಸೈನಿಕ ಬಂದರೂ ಅಷ್ಟೇ... ಮಹರ್ಷಿಗಳದ್ದು ಅದೇ ಧ್ಯಾನಮುದ್ರೆಯೇ...


ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಸೈನಿಕರಿಗೆ ಮಹರ್ಷಿಗಳನ್ನು ಶೂಲದಿಂದ ಕೆಳಗೆ ಇಳಿಸುವಂತೆ ಹೇಳುತ್ತಾನೆ. ಸೈನಿಕರು ಇಳಿಸುತ್ತಾರೆ. ಆದರೆ ಶೂಲ ಮಾತ್ರ ಮಹರ್ಷಿಗಳ ಬೆನ್ನಿನಲ್ಲಿಯೇ ಉಳಿದು ಬಿಡುತ್ತದೆ. ಏನು ಮಾಡಿದರೂ. ಎಷ್ಟು ಪ್ರಯತ್ನ ಪಟ್ಟರೂ ಅದನ್ನು ಅವರ ಬೆನ್ನಿನಿಂದ ತೆಗೆಯಲು ಆಗುವುದೇ ಇಲ್ಲ. ಆಗ ಶೂಲದ ಸ್ವಲ್ಪ ಭಾಗವನ್ನು ಮಹರ್ಷಿಗಳ ದೇಹದಲ್ಲಿಯೇ ಉಳಿಸಿ ಉಳಿದ ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. 


ಇದರಿಂದಾಗಿ ಮಾಂಡವ್ಯ ಮಹರ್ಷಿಗಳು ತಾವು ಎಲ್ಲಿಗೆ ಹೋದರೂ ಅಲ್ಲಿಗೆ ಶೂಲವನ್ನು ತಮ್ಮ ಬೆನ್ನಿನಲ್ಲಿಯೇ ಹೊತ್ತೊಯ್ಯಬೇಕಾಗುತ್ತದೆ. ಮಹರ್ಷಿಗಳಿಗೆ ಇದರಿಂದ ಬಹಳ ಕಿರಿಕಿರಿಯಾಗತೊಡಗುತ್ತದೆ. ಮೊದಲಿನ ಹಾಗೆ ಸಲೀಸಾಗಿ ಓಡಾಡಲು ಅಥವಾ ಕೂತು ಎದ್ದು ಮಾಡಲು ಆಗದೇ ತೊಂದರೆಯಾಗತೊಡಗುತ್ತದೆ. ತಾವು ಮಾಡಿರಬಹುದಾದ ಯಾವ ತಪ್ಪಿಗೆ ತಮಗೆ ಈ ಶಿಕ್ಷೆ ಎಂದು ಅವರಿಗೆ ಅರ್ಥವಾಗುವುದಿಲ್ಲ. 


ಅವರಿಗೇ ನೆನಪಿರುವ ಹಾಗೆ ಈ ಜನ್ಮದಲ್ಲಿ ಅವರು ಅಂತಹಾ ಪಾಪ ಯಾವುದೂ ಮಾಡಿರುವುದಿಲ್ಲ. ಹಾಗಿದ್ದರೆ ಇದು ಕಳೆದ ಜನ್ಮದಲ್ಲಿ ತಾವು ಮಾಡಿರಬಹುದಾದ ದುಷ್ಕೃತ್ಯಕ್ಕೆ ಈ ಜನ್ಮದಲ್ಲಿ ಸಿಕ್ಕಿರಬಹುದಾದ ಶಿಕ್ಷೆ ಇರಬಹುದೇ? ಇದನ್ನು ಯಾರ ಬಳಿ ವಿಚಾರಿಸುವುದು? ಬಹುಶಃ ಯಮನಿಗೆ ಈ ಬಗ್ಗೆ ತಿಳಿದಿರುತ್ತದೆ ಎಂದು ನರಕಕ್ಕೆ ಹೋಗುತ್ತಾರೆ.


ಆಗ ಯಮ ಅವರಿಗೆ ಕಳೆದ ಜನ್ಮವನ್ನು ನೆನಪಿಸುತ್ತಾನೆ. "ಕಳೆದ ಜನ್ಮದಲ್ಲಿ ಬಾಲಕರಾಗಿದ್ದಾಗ ಪತಂಗಗಳ ಬೆನ್ನಿಗೆ ಮುಳ್ಳು ಚುಚ್ಚಿ ಹಿಂಸಿಸಿ ಸಂತಸ ಪಡುತ್ತಿದ್ದ ಕಾರಣ ಈ ಜನ್ಮದಲ್ಲಿ ನಿಮ್ಮ ಬೆನ್ನಿಗೆ ಕಬ್ಬಿಣ ಚುಚ್ಚಿಕೊಂಡಿರುವ ಶಿಕ್ಷೆ ನೀಡಲಾಗಿದೆ" ಎಂದು ತಿಳಿಸುತ್ತಾನೆ. 


ಅದನ್ನು ಕೇಳಿ ಕೆರಳಿದ ಮಾಂಡವ್ಯ ಮಹರ್ಷಿಗಳು ಯಮನಿಗೆ "ಹನ್ನೆರೆಡು ವರ್ಷದ ಒಳಗಿನ ಮಕ್ಕಳು ಮಾಡುವುದು ಅಪರಾಧವಲ್ಲ ಎಂದು ನಿನಗೆ ತಿಳಿಯದೇ? ಇದು ಗೊತ್ತಿದ್ದೂ ನನಗೆ ಶಿಕ್ಷೆ ವಿಧಿಸಿರುವ ನೀನು ಭೂಮಿಯಲ್ಲಿ ಹುಟ್ಟುವವನಾಗು" ಎಂದು ಶಾಪ ಕೊಡುತ್ತಾರೆ. ಯಮ ಭೂಮಿಯಲ್ಲಿ ದ್ವಾಪರ ಯುಗದಲ್ಲಿ 'ವಿದುರ' ಎಂಬ ಹೆಸರಿನವನಾಗಿ ದಾಸಿಯ ಮಗನಾಗಿ ಜನಿಸುತ್ತಾನೆ.


ಪುರಾಣದಲ್ಲಿ ಪ್ರತಿಯೊಬ್ಬರ ಹುಟ್ಟಿಗೂ ಒಂದು ಕಥೆಯಿದೆ, ಅದರ ಹಿಂದೆ ಒಂದು ಕಾರಣವಿದೆ. 


ಮಹಾಭಾರತದಲ್ಲಿ ವಿದುರನಾಗಿ ಹುಟ್ಟಲು ಯಮ ತಪ್ಪಾಗಿ ನಿರ್ಣಯ ಕೈಗೊಳ್ಳಬೇಕಾಯಿತು. ಅದರಿಂದ ತೊಂದರೆ ಅನುಭವಿಸಿದವರು ಮಹಾಭಾರತಕ್ಕೆ ಯಾವ ರೀತಿಯೂ ಸಂಬಂಧವಿಲ್ಲದ ಮಾಂಡವ್ಯ ಮಹರ್ಷಿಗಳು. ಅವರು ಯಮನಿಗೆ ಶಾಪ ನೀಡಬೇಕಾದ್ದರಿಂದ ತಮ್ಮ ಬೆನ್ನಿನಲ್ಲಿ ಶೂಲ ಹೊತ್ತು ತಿರುಗಿದರು. ಆ ಶೂಲದಿಂದಾಗಿಯೇ ಅಣಿ ಮಾಂಡವ್ಯ ಎಂಬ ಹೆಸರು ಪಡೆದರು.

(oh Manase on 1-15 July 2019)
 **********
-ಕೆ.ಎ.ಸೌಮ್ಯ
ಮೈಸೂರು                                                                 



Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ