ಸುಭದ್ರೆ
"ತನ್ನನ್ನು ತಾನೇ ಅಪಹರಿಸಿಕೊಂಡ ಸುಭದ್ರೆ"
ಹೆಣ್ಣುಮಕ್ಕಳಲ್ಲಿ ಸದಾ ಒಂದು ದ್ವಂದ್ವ ಕಾಡುತ್ತಿರುತ್ತದೆ. ಏನೆಂದರೆ ಅವರು ಯಾವುದನ್ನು ತಮ್ಮ ಮನೆ ಎಂದುಕೊಂಡಿರುತ್ತಾರೋ ವಾಸ್ತವವಾಗಿ ಅವರುಗಳು ಆ ಮನೆಯನ್ನು ಶಾಶ್ವತವಾಗಿ ಬಿಟ್ಟು ಗಂಡನ ಮನೆಗೆ ಹೋಗಬೇಕಾಗಿರುತ್ತದೆ. ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಪತಿಭಕ್ತಿಯ ಬಗ್ಗೆ ಹೇಳಿಕೊಡುವುದರಿಂದ ಅವರುಗಳು ಪತಿ ಸೇವೆಯಲ್ಲಿಯೇ ತಮ್ಮ ಸಾರ್ಥಕ್ಯ ಕಾಣಲು ಮಾನಸಿಕವಾಗಿ ತಯಾರಾಗಿರುತ್ತಾರೆ.
ಆದರೆ ಮದುವೆಯಾಗುವಾಗ ತಾವಿಷ್ಟ ಪಟ್ಟವನ ಜೊತೆಯೇ ಮದುವೆಯಾಗುವಂತಾಗಲಿ ಎಂದು ಬಯಸುತ್ತಾರೆ. ಯಾವುದೋ ಅಪರಿಚಿತನ ಜೊತೆ ತನ್ನ ಮದುವೆ ಮಾಡಲಾಗುತ್ತದೆ ಎಂಬ ಸತ್ಯ ಅರಗಿಸಿಕೊಳ್ಳಲಾಗುವುದಿಲ್ಲ ಅವರಿಂದ.
ಆದರೆ ಮದುವೆ ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಬಾಳಿನಲ್ಲಿಯೂ ಕಡ್ಡಾಯವಾಗಿ ನಡೆಯಬೇಕಾದ ಕ್ರಿಯೆ. ಹಾಗಾಗಿ ವಿಧಿಯಿಲ್ಲದೇ ತಮ್ಮ ಮನಸ್ಸನ್ನು ತಾವೇ ಸಂತೈಸಿಕೊಳ್ಳುತ್ತಾರೆ. ಕೆಲವರು ತಾವು ಇಷ್ಟ ಪಟ್ಟವರೊಂದಿಗೆ ಖುಷಿಯಾಗಿರುತ್ತಾರೆ. ಉಳಿದವರು ಪರಿಸ್ಥಿಯೊಡನೆ ರಾಜಿ ಮಾಡಿಕೊಂಡು ಬದುಕುತ್ತಿರುತ್ತಾರೆ.
ಕೃಷ್ಣನ ತಂಗಿಯಾದ ಸುಭದ್ರೆಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಅವರಿಬ್ಬರಿಗೂ ಹಿರಿಯ ಅಣ್ಣನಾದ ಬಲರಾಮನು ಅವಳನ್ನು ಒಂದು ಮಾತೂ ಕೇಳದೇ ಕೌರವ ರಾಜಕುಮಾರನಾದ ದುರ್ಯೋಧನನೊಡನೆ ಅವಳ ಮದುವೆಯನ್ನು ನಿಶ್ಚಯಿಸಿಕೊಂಡು ಬಂದು ಬಿಡುತ್ತಾನೆ.
ಸುಭದ್ರಗೆ ದುರ್ಯೋಧನ ಇಷ್ಟವಿರಲಿಲ್ಲ ಅಂತಲ್ಲ.
ವಿಷಯವೇನೆಂದರೆ ಅವಳು ಈಗಾಗಲೇ ಅರ್ಜುನನಲ್ಲಿ ಅನುರಕ್ತಳಾಗಿದ್ದಳು. ಆದರೆ ಈ ವಿಷಯ ತಿಳಿಯದ ಬಲರಾಮ ಅವಳನ್ನು ಕೇಳದೇ ಮದುವೆ ನಿಶ್ಚಯ ಮಾಡಿಬಿಟ್ಟಿದ್ದ. ತಂಗಿಗಾಗಿ ತಾನು ಏನು ಮಾಡಿದರೂ ಸರಿ ಇರುತ್ತದೆ ಎಂಬ ಆತ್ಮವಿಶ್ವಾಸ ಅವನದ್ದು.
ಇತ್ತ ಅರ್ಜುನನೂ ಆಕೆಯನ್ನು ಅಷ್ಟೇ ಉತ್ಕಟವಾಗಿ ಪ್ರೀತಿಸುತ್ತಿದ್ದ.
ಆದರೆ ಅವಳ ಮದುವೆ ದುರ್ಯೋಧನನೊಡನೆ ನಿಶ್ಚಯವಾದ ಸುದ್ದಿ ಕೇಳಿ ಒಳಗೊಳಗೇ ಕೊರಗುತ್ತಿದ್ದ. ಇಬ್ಬರೂ ಪ್ರೇಮಿಗಳೂ ಹಿರಿಯರ ಬಳಿ ಈ ವಿಷಯ ಪ್ರಸ್ತಾಪಿಸಲಾಗದೇ ತಮ್ಮೊಳಗೇ ಬಚ್ಚಿಟ್ಟುಕೊಂಡು ನೋವು ಅನುಭವಿಸುತ್ತಿದ್ದರು.
ಆದರೆ ಈ ಎಲ್ಲವನ್ನೂ ಬಲ್ಲವನು ಕೃಷ್ಣ ಮಾತ್ರ.
ಆದರೆ ಅವನಿಗೂ ಸಹ ವಿವಾಹ ನಿಶ್ಚಯವಾದ ಮೇಲೆ ತನ್ನಣ್ಣ ಬಲರಾಮನ ಬಳಿ ಈ ವಿಷಯ ಹೇಳಲು ಸಂಕೋಚ ಅಡ್ಡ ಬಂತು. ಮೊದಲೇ ತನ್ನನ್ನು ಒಂದು ಮಾತು ಕೇಳಿದ್ದರೆ ಏನಾದರೂ ಹೇಳಬಹುದಿತ್ತು. ಆದರೆ ಈಗ ಹೇಳಿಯೂ ಪ್ರಯೋಜನವಿಲ್ಲ.
ಏಕೆಂದರೆ ಮದುವೆ ನಿಶ್ಚಯವಾಗಿ ಹೋಗಿದೆ. ಈಗ ತಾನು ಈ ವಿಷಯನ್ನು ಬಲರಾಮನ ಬಳಿ ಹೇಳಿದರೆ ಆತ ಏನು ಮಾಡಬಹುದು? ಮದುವೆ ನಿಲ್ಲಿಸಲೂ ಸಾಧ್ಯವಿಲ್ಲ, ಸುಭದ್ರೆಯನ್ನು ಅರ್ಜುನನೊಡನೆ ಮದುವೆ ಮಾಡಲೂ ಸಹ ಸಾಧ್ಯವಿಲ್ಲ. ಇದರಿಂದ ಬಲರಾಮ ಆಂತರಿಕವಾಗಿ ಕೊರಗುವ ಹಾಗೆ ಆಗುತ್ತದೆ.
ಹಾಗಾಗಿ ಈ ವಿಷಯ ಅವನಿಗೆ ತಿಳಿಯುವುದು ಬೇಡ ಅಂತ ತೀರ್ಮಾನಿಸಿದ. ಹಾಗಂತ ಆ ಇಬ್ಬರು ಪ್ರೇಮಿಗಳೂ ಜೀವನಪರ್ಯಂತ ದೂರವಾಗಿ ಕಣ್ಣೀರು ಹಾಕುತ್ತಾ ಬದುಕುವುದು ಅವನಿಗೆ ಬೇಕಿರಲಿಲ್ಲ.
ಅದಕ್ಕಾಗಿಯೇ ಕೃಷ್ಣ ಅರ್ಜುನನಿಗೆ ಪ್ರೇಮದ ಧರ್ಮವನ್ನು ಬೋಧಿಸಿದ.
"ಪರಿಸ್ಥಿತಿ ನಮಗೆ ವಿರುದ್ಧವಾಗಿದ್ದಾಗ ನಮ್ಮನ್ನು ಪ್ರೀತಿಸುವವರನ್ನು ಉಳಿಸಿಕೊಳ್ಳುವುದೇ ಪರಮ ಧರ್ಮ" ಎಂದು ಮನದಟ್ಟು ಮಾಡಿಸಿದ.
ತಾನು ರುಕ್ಮಿಣಿಯನ್ನು ಅಪರಹರಿಸಿದ ಹಾಗೆ ಅರ್ಜುನನೂ ಸುಭದ್ರೆಯನ್ನು ಅಪಹರಿಸಲಿ ಎಂಬ ಸಲಹೆ ನೀಡಿದ. ಆದರೆ ಹಾಗೆ ಮಾಡಿದರೆ ಬಲರಾಮ ಕೋಪಗೊಳ್ಳುತ್ತಾನೆಂದು ಕೃಷ್ಣ ಒಂದು ಉಪಾಯ ಮಾಡಿದ. ಏನೆಂದರೆ ಅಪಹರಿಸುವಾಗ ರಥವನ್ನು ಸುಭದ್ರೆಯೇ ನಡೆಸಬೇಕೆಂದೂ, ಅರ್ಜುನ ರಥದಲ್ಲಿ ಸುಮ್ಮನೆ ಕುಳಿತಿರಬೇಕೆಂದು ಯೋಜಿಸಿದ. ಅದರಂತೆ ಸುಭದ್ರೆ ದೇವಸ್ಥಾನಕ್ಕೆ ಪೂಜೆಗಾಗಿ ತೆರಳಿದಾಗ ಅರ್ಜುನ ಆಕೆಯ ಅಪಹರಣ ಮಾಡಿದ. ಆಗ ಅರ್ಜುನನನ್ನು ಹಿಂದೆ ಕುಳ್ಳಿರಿಸಿ ಸುಭದ್ರೆಯೇ ರಥ ನಡೆಸುತ್ತಾ ಹೋದಳು.
ಅಪಹರಣದ ವಿಷಯ ತಿಳಿದಾಗ ಬಲರಾಮ ಕೆಂಡಾಮಂಡಲನಾಗಿ ಈಗಲೇ ಸುಭದ್ರೆಯನ್ನು ಅಪಹರಿಸಿದವನನ್ನು ಬಂಧಿಸಿ ಕರೆ ತರಲು ಸೈನಿಕರನ್ನು ಅಟ್ಟಿದ. ಆದರೆ ಸೈನಿಕರು ರಥವನ್ನು ಸುತ್ತುವರಿದಾಗ ಸುಭದ್ರೆಯೇ ರಥ ನಡೆಸುತ್ತಿರುವುದು ತಿಳಿದು ಬಂತು. ಅಪಹರಣಕ್ಕೊಳಗಾದವಳು ರಥ ನಡೆಸುತ್ತಿರುವುದೂ, ಅರ್ಜುನ ಸುಮ್ಮನೆ ಕುಳಿತಿರುವುದನ್ನು ಕಂಡು ಸೈನಿಕರು ಅಯೋಮಯಗೊಂಡರು. ಅಲ್ಲದೇ ಯಾರ ತಪ್ಪು ಎಂದು ನಿರ್ಧರಿಸಲಾಗದೇ ಯಾರನ್ನು ಬಂಧಿಸಬೇಕೆಂದು ಅರ್ಥವಾಗದೇ ಬಲರಾಮನಿಗೆ ಈ ವಿಷಯ ಮುಟ್ಟಿಸಿದರು.
ಆಗ ಕೃಷ್ಣ ಬಲರಾಮನಿಗೆ ಅರ್ಜುನ ಮತ್ತು ಸುಭದ್ರೆಯರ ಪ್ರೇಮದ ವಿಷಯ ತಿಳಿಸಿದ.
ಮದುವೆ ನಿಶ್ಚಯ ಮಾಡುವ ಮೊದಲು ಹೆಣ್ಣಿನ ಸಲಹೆ ಕೇಳುವುದು ಅತೀ ಅವಶ್ಯಕ, ಏಕೆಂದರೆ ನಾಳೆ ಅವನೊಂದಿಗೆ ಬದುಕಬೇಕಾದವಳು ಅವಳು, ತಾನು ಮನಸ್ಸಿನಲ್ಲಿ ಒಬ್ಬನನ್ನು ಇಟ್ಟುಕೊಂಡು ದೈಹಿಕವಾಗಿ ಬೇರೊಬ್ಬರೊಡನೆ ಸಂಸಾರ ಮಾಡುವುದು ಹೆಣ್ಣಿನಿಂದಾಗದು ಎಂದು ತಿಳಿ ಹೇಳಿದ.
ಈಗ ಓಡಿ ಹೋಗಿರುವ ಅವರಿಬ್ಬರನ್ನೂ ಹಿಂದಕ್ಕೆ ಕರೆಸಿ ವಿಧಿಪೂರ್ವಕವಾಗಿ ವಿವಾಹ ಮಾಡಬೇಕೆಂದೂ ಸಲಹೆ ನೀಡಿದ. ಸಹೋದರಿ ಸುಖವಾಗಿರಬೇಕೆಂದರೆ ಅದು ಅವಳು ಇಷ್ಟಪಟ್ಟವನೊಂದಿಗೆ ವಿವಾಹ ಮಾಡಿಸಿದರೆ ಮಾತ್ರ, ಬಲವಂತದಿಂದ ಅವಳ ವಿವಾಹ ಬೇರೊಬ್ಬರೊಡನೆ ಮಾಡಿಸಿದರೆ ಅವಳು ಸುಖವಾಗಿರಬಲ್ಲಳೇ ಎಂದು ಬಲರಾಮನ ಮನಸ್ಸನ್ನು ತಿಳಿಗೊಳಿಸಿದ. ಕೃಷ್ಣನ ಮಾತಿನಿಂದ ಪ್ರಸನ್ನನಾದ ಬಲರಾಮ ಅವರಿಬ್ಬರನ್ನು ಹಿಂದಕ್ಕೆ ಕರೆಸಿ ವೈಭವದಿಂದಲೇ ವಿವಾಹವನ್ನಾಚರಿಸಿದ.
ಹೆಣ್ಣುಮಕ್ಕಳು ಮನೆಯ ಬೆಳಕು ನಿಜ. ಆದರೆ ತಮ್ಮ ಪ್ರೀತಿ-ಪ್ರೇಮದ ವಿಚಾರ ಬಂದಾಗ ಅವರು ತಮ್ಮ ಪ್ರೀತಿ ಉಳಿಸಿಕೊಳ್ಳಲು ಮನೆಯವರನ್ನೂ ಗಮನಿಸುವುದಿಲ್ಲ. ಎಷ್ಟೇ ಆಗಲಿ ನಮ್ಮ ಪ್ರಕೃತಿಯಲ್ಲಿ ಸಂತಾನಾಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಹೆಣ್ಣು ಮತ್ತು ಗಂಡಿಗೆ ತಮ್ಮ ಲೈಂಗಿಕ ಸಂಗಾತಿಯೇ ಅತಿ ಹೆಚ್ಚು ಎನ್ನಿಸುವುದರಲ್ಲಿ ಅತಿಶಯೋಕ್ತಿ ಎನಿಸಲಾರದು.
ಹುಟ್ಟಿದಾಗಿನಿಂದಲೇ ಆಕೆ ಗಂಡನ ಮನೆಗೆ ಹೋಗಲೆಂದೇ ಹುಟ್ಟಿದವಳು ಎಂಬಂತೆ ಬೆಳೆಸಿ ಆಕೆ ಬೆಳೆದು ದೊಡ್ಡವಳಾದ ಮೇಲೆ ತನಗೆ ಬೇಕಾದ ಗಂಡನ್ನು ಆರಿಸಿಕೊಂಡಾಗ ತಪ್ಪು ಎನ್ನುವವರು ಸ್ವಲ್ಪ ಯೋಚಿಸಿ. ಆಕೆ ತನಗಿಷ್ಟ ಆದವರ ಜೊತೆ ಸಂಸಾರ ಮಾಡಬೇಕಾಗಿರುವುದು.
ಏಕೆಂದರೆ ಜೀವನ ಅವಳದ್ದು.
ಬಲರಾಮ ಆಕೆಯ ಆಯ್ಕೆಗೆ ಬೆಲೆ ಕೊಟ್ಟು ನಿಜವಾದ ಸಹೋದರ ಪ್ರೀತಿ ಏನೆಂದು ಜಗತ್ತಿಗೆ ಸಾರಿದ.
-ಕೆ.ಎ.ಸೌಮ್ಯ
ಮೈಸೂರು