ಪರಶುರಾಮ

 


ಈಗಿನ ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಇರುವುದು ಒಂದೇ ದೂರು... ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲ ಎನ್ನುವುದು, ಓದಿ ಎಂದರೆ ಓದುವುದಿಲ್ಲ, ಮೊಬೈಲ್ ಮುಟ್ಟಬೇಡಿ ಎಂದರೆ ಮೊಬೈಲ್ ಬಿಟ್ಟು ಇರುವುದಿಲ್ಲ, ಒಟ್ಟಿನಲ್ಲಿ ತಮ್ಮ ಮಾತಿಗೆ ಬೆಲೆಯೇ ಇಲ್ಲ ಎನ್ನುವುದು ಪೋಷಕರ ಅಳಲು. ಆದರೆ ಜಮದಗ್ನಿ ಮಹರ್ಷಿಯ ಪುತ್ರನಾದ ಪರಶುರಾಮನು ಎಂತಹಾ ಪಿತೃವಾಕ್ಯ ಪರಿಪಾಲಕನೆಂದರೆ ತಂದೆಯು ತನ್ನ ತಾಯಿಯ ತಲೆ ಕಡಿಯಲು ಹೇಳಿದಾಗಲೂ ಯಾಕೆಂದು ಕೇಳದೇ ಕಡಿದು ಹಾಕುವಷ್ಟು ತಂದೆಯ ಮಾತು ಕೇಳುತ್ತಿದ್ದ.



ಕಥೆ ಹೀಗಿದೆ.


ಪರಶುರಾಮನ ತಾಯಿಯಾದ ರೇಣುಕಾದೇವಿಯು ಜಲದ ಮೇಲೆ ತನ್ನ ಹಿಡಿತ ಹೊಂದಿದ್ದಳು. ಅಸಾಧಾರಣ ಆಧ್ಯಾತ್ಮ ಸಾಧನೆಯಿಂದ ಒದ್ದೆಯಾದ ಮರಳಿನಿಂದ ಮಡಿಕೆ ತಯಾರಿಸಿ ಅದರಲ್ಲಿ ನೀರು ತುಂಬಿಸಿ ತರುವ ಪ್ರತಿಭೆ ಅವಳಲ್ಲಿತ್ತು. ಒದ್ದೆ ಮರಳಿನ ಮಡಿಕೆಯಿಂದ ಒಂದು ಹನಿ ನೀರೂ ಸಹ ಹೊರಗೆ ಸೋರುತ್ತಿರಲಿಲ್ಲ ಮತ್ತು ಮಡಿಕೆ ಒಡೆಯುತ್ತಲೂ ಇರಲಿಲ್ಲ. ಅವಳ ಮನೋನಿಗ್ರಹ ಅಷ್ಟು ಶಕ್ತಿಶಾಲಿಯಾಗಿತ್ತು. ಪ್ರತಿನಿತ್ಯ ಇದೇ ರೀತಿ ಪತಿಯ ದೇವತಾ ಕಾರ್ಯಕ್ಕೆ ನೀರು ತಂದು ಕೊಡುತ್ತಿದ್ದಳು.


ಒಂದು ದಿನ ಆಕೆ ಎಂದಿನಂತೆ ಸಮುದ್ರ ತೀರಕ್ಕೆ ಹೋಗಿ ಒದ್ದೆ ಮರಳಿನಿಂದ ಮಡಿಕೆ ಮಾಡುತ್ತಿರುವಾಗ, ತೀರದಲ್ಲಿ ಜಲಕ್ರೀಡೆಯಾಡುತ್ತಿದ್ದ ಗಂಧರ್ವರು ಕಣ್ಣಿಗೆ ಬೀಳುತ್ತಾರೆ. ಒಂದು ಕ್ಷಣ ಆಕೆಯ ಮನಸ್ಸು ಚಂಚಲವಾಗುತ್ತದೆ. ಅವಳೂ ಮನುಷ್ಯಳಲ್ಲವೇ? ಆದರೆ ಆ ಕ್ಷಣದಿಂದ ಶೀಘ್ರವೇ ಎಚ್ಚೆತ್ತು ತನ್ನ ಕರ್ತವ್ಯಕ್ಕೆ ಮರಳುತ್ತಾಳೆ. ಆದರೆ ಏನು ಮಾಡಿದರೂ ಒದ್ದೆ ಮರಳಿನಿಂದ ಮಡಿಕೆ ಮಾಡಲು ಆಗುವುದಿಲ್ಲ. ಹೇಗೋ ಮಾಡಿ ನೀರು ತುಂಬಿಸಿದರೂ ಮಡಿಕೆ ಒಡೆದು ಹೋಗಿ ನೀರೆಲ್ಲಾ ಮೈ ಮೇಲೆ ಚೆಲ್ಲಿ ಬಿಡುತ್ತದೆ. ಖಾಲಿ ಕೈಯಲ್ಲಿ ಪತಿಯ ಬಳಿ ಬರುತ್ತಾಳೆ. 


ಜಮದಗ್ನಿ ಮಹರ್ಷಿಗಳೋ ತಮ್ಮ ಶೀಘ್ರ ಕೋಪಕ್ಕೆ ಹೆಸರಾದವರು. 


ಪತ್ನಿಯು ಮಡಿಕೆಯಲ್ಲಿ ತರುವ ನೀರಿಗಾಗಿ ಕಾದು ಕುಳಿತಿದ್ದರು. ತಡವಾಗುತ್ತಿದ್ದಂತೆಯೇ ಕೋಪ ಬರತೊಡಗಿತು.  ಅದರ ಜೊತೆ ಪತ್ನಿಯು ನೀರು ತರದೇ ಖಾಲಿಕೈಯಲ್ಲಿ ಬಂದದ್ದು ನೋಡಿ ಅವರ ಕೋಪ ಉಲ್ಬಣಿಸಿತು. ನಡೆದದ್ದೇನೆಂದು ತಮ್ಮ ತಪಃಶ್ಯಕ್ತಿಯಿಂದ ತಿಳಿದು ಕೋಪಕ್ಕೆ ಎಲ್ಲೆಯೇ ಇಲ್ಲವಾಯಿತು. ಮನ ಚಂಚಲವಾಗುವುದು ಸಾಮಾನ್ಯವಾದ ವಿಷಯ. 


ಆದರೆ ಜಮದಗ್ನಿಗಳು ಶೀಘ್ರಕೋಪಿಗಳಲ್ಲವೇ? 


ಪತ್ನಿಯ ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದುಬಿಟ್ಟಿತು ಅವರ ಮನಸ್ಸು. ಅವರ ತಕ್ಷಣದ ಶಿಕ್ಷೆ ಎಂದರೆ ಮರಣ ದಂಡನೆಯೇ!! ಕೂಡಲೇ ತಮ್ಮ ಎಲ್ಲಾ ಪುತ್ರರಿಗೂ ತಾಯಿಯ ಶಿರಚ್ಛೇದ ಮಾಡುವಂತೆ ಆದೇಶಿಸುತ್ತಾರೆ. ಪೂಜೆಯ ಹೊತ್ತಿಗೆ ನೀರು ತರಲಿಲ್ಲವೆಂದು ತಲೆ ಕಡಿಯುವುದೇ? ಇದೆಂಥಾ ಶಿಕ್ಷೆ? ಎಂದು ಮಾತೃಹತ್ಯಾದೋಷದಿಂದ ಬೆದರಿದ ಮಕ್ಕಳು ತಂದೆಯ ಮಾತು ಕೇಳದೇ ಹಿಂದೆ ಉಳಿಯುತ್ತಾರೆ. ಆದರೆ ಪರಶುರಾಮ ಮಾತ್ರ ತಂದೆಯ ಮಾತಿಗೆ ಎದುರಾಡದೇ ತಾಯಿಯ ತಲೆ ಕಡಿದೇ ಬಿಡುತ್ತಾನೆ.


ಜಮದಗ್ನಿ ಮಹರ್ಷಿಗಳು ಇದನ್ನು ನಿರೀಕ್ಷಣೆ ಮಾಡಿದ್ದರೋ ಇಲ್ಲವೋ?


ತಾಯಿಯ ತಲೆ ಕಡಿ ಎಂದರೆ ಯಾರೂ ಕಡಿಯುವುದಿಲ್ಲ ಅಂತಲೇ ಹಾಗೆ ಹೇಳಿದ್ದರೋ ಅಥವಾ ತಾಯಿಯ ತಲೆ ಕಡಿಯಲೂ ಸಿದ್ಧ ಎನ್ನುವುದರ ಮೂಲಕ ತನ್ನ ಮಾತಿಗೆ ಬೆಲೆ ಕೊಡುತ್ತಾರಾ ಅಂತ ಪರೀಕ್ಷಿಸಿದರಾ? ಒಟ್ಟಿನಲ್ಲಿ ಒಬ್ಬ ಮಗ ಅವರು ಹೇಳಿದಂತೆ ನಡೆದುಕೊಂಡ. ತಕ್ಷಣಕ್ಕೆ ಅವರಿಗೆ ಬಹಳ ಸಂತೋಷವಾಯಿತು. 


ಸ್ವಲ್ಪ ಹೊತ್ತಾದ ನಂತರ ಅವರಿಗೆ ತಾವು ಕಳೆದುಕೊಂಡದ್ದು ಏನು ಎಂದು ಅರಿವಿಗೆ ಬರಬಹುದು. 


ನೀರು ತರಲಿಲ್ಲವೆಂದು ಇಂದು ತಲೆ ಕಡಿದರೆ ಉಳಿದ ಕೆಲಸಗಳಿಗೆ ಸಹಾಯ ಮಾಡುವವರು ಯಾರು ಎಂದು ಯೋಚಿಸಲಿಲ್ಲ ಅವರು. ಮುಂದಾಲೋಚನೆ ಇಲ್ಲದೇ ಆ ಕ್ಷಣಕ್ಕೆ ಅನಿಸಿದ್ದು ಹೇಳಿ ಮಾಡಿಸಿಯೇ ಬಿಟ್ಟರು. ಮನುಷ್ಯರಾದ ಮೇಲೆ ಮನಸ್ಸು ಜಾರುವುದು ಸಹಜ ಎಂದವರು ಯೋಚಿಸಲಿಲ್ಲ. ಹಾಗೆ ನೋಡಿದರೆ ಸರ್ವಸಂಗ ಪರಿತ್ಯಾಗಿಗಳಾದ ಮಹರ್ಷಿಗಳು ಕೋಪ ಮಾಡಿಕೊಳ್ಳುವುದೂ ತಪ್ಪಲ್ಲವೇ?


ಖುಷಿಯಿಂದ ಪರಶುರಾಮನಿಗೆ ನಿನಗೇನು ವರ ಬೇಕು ಬೇಡಿಕೋ ಎಂದುಬಿಟ್ಟರು. 


ಪರಶುರಾಮ ಜಾಣ. ನನಗೆ ನನ್ನ ತಾಯಿಯಲ್ಲದೇ ಬೇರೇನೂ ಬೇಡ, ಅವರನ್ನು ಬದುಕಿಸಿ ಎಂದುಬಿಟ್ಟ. ಮತ್ತೆ ಖುಷಿಯಾದರಾ ಮಹರ್ಷಿಗಳು? ಅವರೂ ಸಹ ಮಗನ ಬೇಡಿಕೆ ಕೇಳಿ ಹಿಂದೆ ಮುಂದೆ ಯೋಚಿಸದೇ ಪತ್ನಿಗೆ ಮತ್ತೆ ಜೀವ ಬರಿಸಿದರು. ಹೀಗೆ ಪರಶುರಾಮ ತಂದೆ ಹೇಳಿದ ಮಾತನ್ನೂ ಕೇಳಿದ, ಜೊತೆಯಲ್ಲಿ ತಾಯಿಯನ್ನೂ ಬದುಕಿಸಿಕೊಂಡ.


ನಮ್ಮ ಕೋಪ ನಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂದು ಈ ಕಥೆ ಹೇಳುತ್ತದೆ. ಕೋಪಗೊಂಡಾಗ ನಮ್ಮೆದುರು ಇರುವವರ ಪ್ರಾಣ ತೆಗೆಯಬೇಕೆಂದು ನಮಗೆ ಅನ್ನಿಸುತ್ತದೆ. ಆಗ ವಿವೇಚನೆ ಇರುವುದಿಲ್ಲವಲ್ಲ. ಆದರೆ ಒಂದು ಬಾರಿ ಜೀವ ಹೋದ ಮೇಲೆ ಮತ್ತೆ ಜೀವ ವಾಪಸ್ ಕೊಡಲು ಸಾಧ್ಯವೇ? ಒಮ್ಮೆ ಉಂಟಾದ ಕೋಪ ತಾನಾಗಿಯೇ ಇಳಿದ ಮೇಲೆ ತಾವು ಕೋಪಿಸಿಕೊಂಡದ್ದು ಎಂತಹಾ ಕ್ಷುಲ್ಲಕ ವಿಚಾರಕ್ಕೆ ಎಂದು ನಮಗೇ ಅರಿವಾಗುತ್ತದೆ.


ಅದಕ್ಕಾಗಿ ಕೋಪ ಬಂದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬಾರದು. ತಾಳ್ಮೆಯಿಂದ ಯೋಚಿಸಿ ನಂತರ ಹೆಜ್ಜೆ ಇಡಬೇಕು. ಏಕೆಂದರೆ ಜೀವ ಹೋದರೆ ಮತ್ತೆ ತರಲು ಈಗ ಪರಶುರಾಮನೂ ಇಲ್ಲ, ಜಮದಗ್ನಿಯೂ ಇಲ್ಲ.


**********
-ಕೆ.ಎ.ಸೌಮ್ಯ
ಮೈಸೂರು

(oh Manase on may 15-31 2019)         

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ