ಪರೀಕ್ಷಿತ
"ಆಗಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ"
ಮನುಷ್ಯನಾದವನು ಎಂಥದೇ ಪರಿಸ್ಥಿತಿಯಲ್ಲಿ ಪ್ರಚೋದನೆಗೆ ಒಳಗಾಗದೇ, ಸಿಟ್ಟಿನ ಕೈಗೆ ಬುದ್ಧಿ ಕೊಡದೇ ಶಾಂತನಾಗಿ ಬದುಕಿದರೆ ಅದೇ ಒಂದು ದೊಡ್ಡ ಸಾಧನೆ. ಈ ಸಿಟ್ಟು ಉಂಟುಮಾಡುವ ಅವಿವೇಕತನದಿಂದ ಎಂತಹ ಘಟಾನುಘಟಿಗಳೇ ಮಣ್ಣು ಮುಕ್ಕಿದ್ದಾರೆ. ಅದೇ ರೀತಿ ಸಿಟ್ಟಿನಲ್ಲಿ ಯೋಚಿಸುವ ಬದಲು ಸ್ವಲ್ಪ ಸಹನೆಯಿಂದ ಯೋಚಿಸಿದ್ದರೆ ಬಹುಶಃ ಪರೀಕ್ಷಿತ ಮಹಾರಾಜನಿಗೆ ಅಂತಹಾ ಸ್ಥಿತಿ ಬರುತ್ತಿರಲಿಲ್ಲ. ಆದರೆ ವಿಧಿಯಲ್ಲಿ ಹಾಗೆ ಆಗಲೇಬೇಕೆಂದು ಬರೆದಿದ್ದರೆ ತಡೆಯುವವರಾದರೂ ಯಾರು?
ಪರೀಕ್ಷಿತ ಮಹಾರಾಜ ಮಧ್ಯಮ ಪಾಂಡವನಾದ ಅರ್ಜುನನ ಮೊಮ್ಮಗ. ಧರ್ಮಭೀರುವಾಗಿದ್ದ ಆತ ನ್ಯಾಯಮಾರ್ಗದಿಂದ ಪ್ರಜಾಪಾಲನೆ ಮಾಡುತ್ತಿದ್ದ. ಆತನ ಕಾಲದಲ್ಲಿ ರಾಜ್ಯವು ಸುಭಿಕ್ಷವಾಗಿತ್ತು. ಪ್ರಜೆಗಳು ಆನಂದದಿಂದ ಇದ್ದರು. ಅಷ್ಟೇ ಆಗಿದ್ದರೆ ಚಂದವಿತ್ತು. ಆದರೆ ಜೀವನದಲ್ಲಿ ಅಡೆತಡೆ ಅನ್ನುವುದೇ ಇರದಿದ್ದರೆ ನಮಗೆ ಗೊತ್ತಿಲ್ಲದೆಯೇ ಒಂದು ರೀತಿಯ ದುರಹಂಕಾರ ಬೆಳೆದು ಬಿಡುತ್ತದಂತೆ. ಒಮ್ಮೆ ಹೀಗಾಯಿತು.
ಪರೀಕ್ಷಿತ ಮಹಾರಾಜ ಕಾಡಿನಲ್ಲಿ ಬೇಟೆಯಾಡುತ್ತಾ ಒಂದು ಜಿಂಕೆಯ ಬೆನ್ನಟ್ಟುತ್ತಾನೆ. ಜಿಂಕೆ ಜಿಗಿಯುತ್ತಾ ಕುಣಿಯುತ್ತಾ ಕಾಡಿನ ಒಳಭಾಗದಲ್ಲಿದ್ದ ಒಂದು ಆಶ್ರಮದೊಳಗೆ ಸಾಗಿ ಮರೆಯಾಗುತ್ತದೆ. ಹಿಂದೆಯೇ ಪರೀಕ್ಷಿತನೂ ಆಶ್ರಮದ ಒಳ ಪ್ರವೇಶಿಸುತ್ತಾನೆ. ಅಲ್ಲಿ ಶಮೀಕ ಮಹರ್ಷಿಗಳು ಧ್ಯಾನದಲ್ಲಿರುತ್ತಾರೆ. ಅವರ ಧ್ಯಾನವೆಂದರೆ ಬ್ರಹ್ಮದಂತೆ. ನಿಲುಕೆಗೆ ಸಿಗಲಾರದಷ್ಟು ಆಳವಾದ ಧ್ಯಾನ ಅವರದ್ದು. ಹಾಗಾಗಿ ಪರೀಕ್ಷಿತ ಅವರ ಬಳಿ ಜಿಂಕೆಯ ಬಗ್ಗೆ ವಿಚಾರಿಸಿದಾಗ ಎಚ್ಚರವೇ ಇರಲಿಲ್ಲ ಅವರಿಗೆ. ಪರೀಕ್ಷಿತ ಕಿರಿಚಿ ಕೇಳಿ ಕೇಳಿ ಸುಸ್ತಾಗುತ್ತಾನೆ. ರಾಜನಲ್ಲವೇ? ಸರ್ರನೆ ಸಿಟ್ಟೇರುತ್ತದೆ ಅವನಿಗೆ. ಕೋಪದ ಕೈಗೆ ಬುದ್ಧಿ ಕೊಟ್ಟಾಗ ಸಂಸ್ಕಾರ ಮರೆಯಾಗುತ್ತದಂತೆ. ಅಲ್ಲೇ ಸತ್ತು ಬಿದ್ದಿದ್ದ ಹಾವಿನ ಶವವನ್ನು ಕೋಲಿನಿಂದೆತ್ತಿ ಮಹರ್ಷಿ ಶಮೀಕರ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ.
ಸ್ವಲ್ಪ ಸಮಯದ ನಂತರ ಶಮೀಕರ ಮಗ ಶೃಂಗಿಯು ಆಶ್ರಮಕ್ಕೆ ಬರುತ್ತಾನೆ. ಬಂದ ಕೂಡಲೇ ತನ್ನ ತಂದೆಯ ಕತ್ತಿನಲ್ಲಿರುವುದನ್ನು ಗಮನಿಸಿ ಕೋಪೋದ್ರಿಕ್ತನಾಗುತ್ತಾನೆ. ಯೋಗದ ಬಲದಿಂದ ಈ ಕಾರ್ಯ ಯಾರು ಮಾಡಿರುವುದೆಂದು ಗ್ರಹಿಸಿ ಆ ಕಾರ್ಯ ಮಾಡಿದವರು ಏಳು ದಿನದೊಳಗಾಗಿ ಹಾವು ಕಚ್ಚಿ ಸಾಯಲಿ ಅಂತ ಶಾಪ ಕೊಡುತ್ತಾನೆ.
ಪರೀಕ್ಷಿತ ಮಹಾರಾಜನಿಗೆ ಶೃಂಗಿಯ ಶಾಪದ ಬಗ್ಗೆ ತಿಳಿದಾಗ ಸಿಡಿಲು ಬಡಿದಂತಾಗುತ್ತದೆ. ಕೋಪದ ಆಯುಸ್ಸು ಬಹಳ ಕಡಿಮೆ. ಕೋಪ ಸತ್ತಾಗ ವಿವೇಕ ಜಾಗೃತವಾಗುತ್ತದೆ. ತಾನು ಅಂದು ಹಾಗೆ ಮಾಡಬಾರದಿತ್ತು ಅಂತ ಬಹಳ ಪಶ್ಚಾತ್ತಾಪ ಪಡುತ್ತಾನೆ. ಆದರೇನು ಮಾಡಲು ಸಾಧ್ಯ? ಆಗಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ?
ಆದರೆ ಪ್ರಜೆಗಳಿಗೆ ಜನಾನುರಾಗಿಯಾದ ರಾಜನನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ.
ಏಕೆಂದರೆ ಪರೀಕ್ಷಿತನ ಆಡಳಿತ ಅತ್ಯತ್ತಮವಾಗಿಯೇ ಇತ್ತಲ್ಲ. ಹಾಗಾಗಿ ಎಲ್ಲರೂ ಸೇರಿ ಒಂದು ದೊಡ್ಡ ಕಂಬದ ಮೇಲೆ ಅರಮನೆ ಕಟ್ಟಿಸಿ, ಪರೀಕ್ಷಿತನನ್ನು ಅಲ್ಲಿ ಸೇರಿಸಿ ಸುತ್ತಲೂ ಕಾವಲಿಗೆ ನಿಲ್ಲುತ್ತಾರೆ. ರಾಜನನ್ನು ಕೊಲ್ಲಲು ಬರುವ ಹಾವನ್ನು ತಡೆಯಲು ಸಕಲ ಕ್ರಮಗಳನ್ನು ಕೈಗೊಳ್ಳುತ್ತಾರೆ.
ಇತ್ತ ಶೃಂಗಿಯ ಶಾಪವನ್ನು ಪೂರ್ಣಗೊಳಿಸಲು ಸರ್ಪಗಳ ರಾಜ ತಕ್ಷಕ ತಯಾರಿದ್ದ. ಆದರೆ ಪರೀಕ್ಷಿತನ ಬಳಿ ತಲುಪುವುದು ಹೇಗೆ? ಹೇಗೆ ಹೋದರೂ ಸುತ್ತಲಿರುವ ಜನ ತನ್ನನ್ನು ಬಡಿದು ಹಾಕುತ್ತಾರೆ. ಏನು ಮಾಡುವುದೆಂದು ಯೋಚಿಸಿ ಏಳು ದಿನಗಳ ಕಾಲ ಪರೀಕ್ಷಿತ ಹಸಿವೆಯಿಂದ ಇರಲಾಗೋಲ್ಲ, ಆತನಿಗೆ ಹಣ್ಣು-ಹಂಪಲು ಸರಬರಾಜು ಆಗಿಯೇ ಆಗುತ್ತದೆ ಎಂದು ಸಣ್ಣ ಕೀಟವಾಗಿ ಬದಲಾಗಿ ಒಂದು ಹಣ್ಣಿನೊಳಗೆ ತೂತು ಕೊರೆದು ಅಡಗಿ ಕುಳಿತುಕೊಳುತ್ತಾನೆ.
ಅವನ ಅದೃಷ್ಟಕ್ಕೆ ಆ ಹಣ್ಣನ್ನು ಪರೀಕ್ಷಿತನ ಬಳಿ ಕೊಂಡೊಯ್ಯುತ್ತಾರೆ ದಾಸಿಯರು. ಕೋಣೆ ತಲುಪಿದ ಕೂಡಲೇ ತಕ್ಷಕನು ಹಾವಾಗಿ ಬದಲಾಗಿ ಪರೀಕ್ಷಿತನನ್ನು ಕಚ್ಚುತ್ತಾನೆ. ಹಾವಿನ ವಿಷ ರಕ್ತದಲ್ಲಿ ಬೆರೆಯುವ ಮೊದಲೇ ಇಷ್ಟೆಲ್ಲಾ ಕಾವಲಿದ್ದರೂ ಬರುವ ಹಾವನ್ನು ತಡೆಯಲಾಗಲಿಲ್ಲವಲ್ಲ ಎಂಬ ಆಘಾತದಿಂದ ಪರೀಕ್ಷಿತ ಮರಣವನ್ನಪ್ಪುತ್ತಾನೆ.
ಪ್ರಜೆಗಳಿಗೆ ಉತ್ತಮ ಆಡಳಿತ ಕೊಟ್ಟ ಪರೀಕ್ಷಿತ ಮಹಾರಾಜ ಒಂದು ಕ್ಷಣ ವಿವೇಕ ಕಳೆದುಕೊಂಡದ್ದಕ್ಕೆ ತನ್ನ ಜೀವನವನ್ನೇ ಕಳೆದುಕೊಳ್ಳುತ್ತಾನೆ. ಆದ್ದರಿಂದಲೇ ಎಷ್ಟೇ ವಿದ್ಯಾವಂತ-ಬುದ್ಧಿವಂತರಾಗಿದ್ದರೂ ವಿವೇಕ, ವಿವೇಚನೆ ಅತ್ಯಂತ ಮುಖ್ಯ. ಋಷಿಮುನಿಗಳಿಗೆ ಧ್ಯಾನವೇ ಕರ್ಮ. ಹಾಗಾಗಿ ಧ್ಯಾನದಲ್ಲಿ ಮುಳುಗಿರುವ ಮಹರ್ಷಿಗಳು ತನ್ನನ್ನು ಗಮನಿಸಿರಲಿಲ್ಲ ಅಂತ ಅವನು ಅಂದೇ ತಿಳಿದಿದ್ದರೆ ಇಂದು ಒಂದು ಹಾವಿಗಾಗಿ ಹೆದರಿ ಅಡಗಿ ಕೂರಬೇಕಿರಲಿಲ್ಲ. ಆದರೇನು ಮಾಡುವುದು?
ಆಗಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ?
***********************
ಕೆ ಎ ಸೌಮ್ಯ
ಮೈಸೂರು
ಕೆ ಎ ಸೌಮ್ಯ
ಮೈಸೂರು
(1-15 Dec 2019 Oh Manase)
