ಮೂಲಪುರುಷ ಮನು
ನಾವು ಈ ಭೂಮಿಯ ಮೇಲೆ ಹುಟ್ಟಿದ್ದೇವೆ. ನಮ್ಮನ್ನು ಮಾನವರು ಅಥವಾ ಮನುಷ್ಯರು ಎಂದು ಕರೆಯಲಾಗುತ್ತದೆ. "ಮಂಗನಿಂದ ಮಾನವ" ಎಂಬ ಥಿಯರಿಗಳು ಏನೇ ಇರಬಹುದು. ಆದರೆ ನಮ್ಮ ಪುರಾಣಗಳು ಹೇಳುವುದೇ ಬೇರೆ. ಹಾಗಾಗಿ ನಮ್ಮನ್ನು ಮನುಷ್ಯರು ಕರೆಯಲು ಏನಾದರೂ ನಿರ್ದಿಷ್ಟ ಕಾರಣವಿದೆಯೇ? ಮನುಷ್ಯರ ಜನ್ಮ ಹೇಗಾಯಿತು... ನಮ್ಮ ಮೂಲ ಪುರುಷ ಯಾರು... ಹಿಂದೂ ಧರ್ಮದ ಪುರಾಣದ ಅನುಸಾರ ನಾವು ಯಾರು ಎಂದು ತಿಳಿಯೋಣ ಬನ್ನಿ.
ಮನುಷ್ಯನ ಹುಟ್ಟಿನ ಬಗ್ಗೆ ಒಂದೊಂದು ಧರ್ಮಗಳಲ್ಲಿಯೂ ಒಂದೊಂದು ರೀತಿಯ ಕಥೆಗಳಿವೆ. ಹಿಂದೂಗಳಲ್ಲಿಯೂ ಈ ಕುರಿತು ಪುರಾಣವಿದೆ. ಆದರೆ ಈ ಪುರಾಣದಲ್ಲಿ ಈಗಿರುವ ಮನುಕುಲದ ಮೂಲ ಪುರುಷ ಯಾರು ಅಂತ ಮಾತ್ರವಿದೆ. ಏಕೆಂದರೆ ಮನು ಸಂರಕ್ಷಿಸುವ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ತಳಿಗಳು ಈ ಮೊದಲೇ ಇದ್ದವಲ್ಲ.
ಸಂಸ್ಕೃತ ಪದವಾದ "ಮಾನವ" ಅಥವಾ "ಮನುಷ್ಯ" ಎಂಬ ಪದದ ಅರ್ಥ "ಮನುವಿನಿಂದ ಹುಟ್ಟಿದವರು" ಅಥವಾ "ಮನುವಿನ ಮಕ್ಕಳು" ಎಂದಾಗುತ್ತದೆ. ಮನುಗಳಲ್ಲಿ ಏಳನೆಯವನು ವೈವಸ್ವತ ಮನು. ಈತ ಜಗತ್ಪ್ರಳಯದಿಂದ ಮಾನವ ಕುಲವನ್ನು ಮತ್ತು ಉಳಿದ ಜೀವಿಗಳನ್ನು ರಕ್ಷಿಸಿದವನು ಮತ್ತು ನಮ್ಮ ವಂಶಾಭಿವೃದ್ಧಿಗೆ ಕಾರಣನಾದವನು. ಹಾಗಾಗಿ ನಾವೆಲ್ಲರೂ ಅವನ ಮಕ್ಕಳೇ.
ಕಥೆ ಹೀಗಿದೆ.
ಒಮ್ಮೆ ನದಿಯಲ್ಲಿ ವೈವಸ್ವತ ಮನು ಸ್ನಾನ ಮಾಡುತ್ತಿದ್ದಾಗ ಒಂದು ಸಣ್ಣ ಮೀನು ಬಂದು ಮನುವಿನ ಕಾಲನ್ನು ಕಚ್ಚುತ್ತದೆ. ಮನು ಅದನ್ನು ಬೊಗಸೆಯಲ್ಲಿ ಎತ್ತಿಕೊಂಡು ವಿಷಯ ಏನೆಂದು ವಿಚಾರಿಸಿದಾಗ 'ದೊಡ್ಡ ಮೀನುಗಳಿಂದ ತನ್ನನ್ನು ರಕ್ಷಿಸಲು ಕೋರುತ್ತದೆ' ಆ ಸಣ್ಣ ಮೀನು. ಮನುವು ತಕ್ಷಣಕ್ಕೆ ಆ ಮೀನನ್ನು ತನ್ನ ಕಮಂಡಲದಲ್ಲಿಟ್ಟು ರಕ್ಷಿಸಿ ನಂತರ ಒಂದು ಸರೋವರದಲ್ಲಿ ಬಿಡುತ್ತಾನೆ.
ಆದರೆ ಮಾರನೇ ದಿನಕ್ಕೆ ಆ ಮೀನು ಸರೋವರದ ಉದ್ದಗಲಕ್ಕೂ ಸರಿಸಮವಾಗಿ ಬೆಳೆದು ಬಿಟ್ಟಿರುತ್ತದೆ. ಆಗ ಆ ಮೀನನ್ನು ಗಂಗಾ ನದಿಗೆ ಸಾಗಿಸುತ್ತಾನೆ. ಆದರೆ ಆ ಮೀನು ಬೆಳೆಯುತ್ತಿದ್ದ ವೇಗಕ್ಕೆ ಗಂಗಾನದಿಯೂ ಸಾಲದಾಗುತ್ತದೆ. ಹಾಗಾಗಿ ಮನು ಆ ಮೀನನ್ನು ಸಮುದ್ರಕ್ಕೆ ಕೊಂಡೊಯ್ಯುತ್ತಾನೆ.
ಆಗ ಆ ಮೀನು "ನಿನ್ನನ್ನು ಪರೀಕ್ಷಿಸಲು ನಾನು ಆ ಸಣ್ಣ ಮೀನಿನ ರೂಪದಲ್ಲಿ ಬಂದೆ. ಕ್ಷುಲ್ಲಕ ಜೀವಿಗಳಿಗೆ ನೀನು ಬೆಲೆ ಕೊಡುವೆಯೋ ಇಲ್ಲವೋ ಎಂದು ಪರೀಕ್ಷಿಸಬೇಕಿತ್ತು. ಆದರೆು ನೀನು ಪುಟ್ಟ ಮೀನೆಂದು ಉಪೇಕ್ಷಿಸದೇ ನನ್ನನ್ನು ರಕ್ಷಿಸಿದೆ. ಇದರಿಂದ ಈ ಪರಿಸರದ ಸಣ್ಣಾತಿಸಣ್ಣ ಅತ್ಯಂತ ಸೂಕ್ಷ್ಮ ಜೀವಿಯೂ ಸಹ ನಿನ್ನಿಂದ ರಕ್ಷಿಸಲ್ಪಡುತ್ತದೆ ಎಂಬುದು ಸಾಬೀತಾಯಿತು. ಈಗ ನಾನೊಂದು ರಹಸ್ಯ ಹೇಳುವೆ ಕೇಳು" ಎಂದು ಆ ಮೀನು ಇನ್ನೇಳು ದಿನಗಳಲ್ಲಿ ನಡೆಯಲಿರುವ ಮಹಾಪ್ರಳಯದ ಮುನ್ಸೂಚನೆ ಕೊಡುತ್ತದೆ.
ಆ ಪ್ರಳಯದಿಂದ ತಪ್ಪಿಸಿಕೊಳ್ಳಬೇಕೆಂದರೆ ಒಂದು ದೊಡ್ಡ ಹಡಗನ್ನು ತಯಾರಿಸಿ ಅದರಲ್ಲಿ ಮುಂದಿನ ಯುಗಗಳಲ್ಲಿ ಮನುಷ್ಯರ ಜನ್ಮಕ್ಕೆ ಕಾರಣವಾಗುವ ಏಳು ಮಹರ್ಷಿಗಳನ್ನು, ಭೂಮಿಯ ಮೇಲಿನ ಎಲ್ಲಾ ಜಾತಿಯ ಪ್ರಾಣಿ, ಪಕ್ಷಿ, ಮರ, ಗಿಡ, ಎಲ್ಲಾ ಬಗೆಯ ಉತ್ಪತ್ತಿಗಳ ಒಂದೊಂದು ಬೀಜಗಳನ್ನು, ಹೂವು, ಹಣ್ಣು ಮುಂತಾದವುಗಳ ಒಂದೊಂದು ಸ್ಯಾಂಪಲ್ಲುಗಳನ್ನು ಆ ಹಡಗಿನಲ್ಲಿ ಇರಿಸಲು ಹೇಳುತ್ತದೆ. ಮುಂದೆ ಪ್ರಳಯವಾಗಿ ಇಡೀ ಜಗತ್ತೇ ನಾಶವಾದರೂ ಸಹ ಮನುವಿನ ಹಡಗಿನಲ್ಲಿದ್ದವರು ಸುರಕ್ಷಿತವಾಗಿರುತ್ತಾರೆ ಎಂಬುದು ಇದರ ಹಿಂದಿನ ಆಶಯ.
ಅದರಂತೆ ಮನುವು ಆ ಮೀನು ಹೇಳಿದ್ದ ಎಲ್ಲವನ್ನೂ ಹಡಗಿನಲ್ಲಿ ಸಂರಕ್ಷಿಸಿದ ಸ್ವಲ್ಪ ದಿನದಲ್ಲಿಯೇ ಭೀಕರ ಪ್ರಳಯ ಉಂಟಾಗುತ್ತದೆ. ಎಲ್ಲವೂ ಕೊಚ್ಚಿಕೊಂಡು ಹೋದರೂ ಹಡಗು ಮತ್ತು ಹಡಗಿನಲ್ಲಿದ್ದವರು ಮಾತ್ರ ಸುರಕ್ಷಿತವಾಗಿರುತ್ತಾರೆ. ಆದರೆ ಆಗೊಂದು ಸಮಸ್ಯೆ ಉದ್ಭವವಾಗುತ್ತದೆ. ಆ ಹಡಗು ನೀರಿನಲ್ಲಿ ತೇಲುತ್ತಿದ್ದರೂ ಸಹ ದಿಕ್ಕು ದೆಸೆಯಿಲ್ಲದೇ ಇಷ್ಟ ಬಂದ ಕಡೆ ಓಲಾಡುತ್ತಿರುತ್ತದೆ. ಕಣ್ಣು ಹಾಯಿಸಿದಷ್ಟೂ ಜಲದ ರಾಶಿ.
ಎತ್ತ ಕಡೆಗೆ ಸಾಗಬೇಕೆಂದೇ ಗೊತ್ತಾಗುವಂತಿರಲಿಲ್ಲ. ಆಗ ಮನುವಿಗೆ ಏನು ಮಾಡಬೇಕೆಂದು ತೋಚದೇ ಪ್ರಳಯದ ಮುನ್ಸೂಚನೆ ಕೊಟ್ಟ ಆ ಮತ್ಸ್ಯದ ಕುರಿತಾಗಿಯೇ ಚಿಂತಿಸುತ್ತಾನೆ. ಮಹಾವಿಷ್ಣುವಿನ ಅವತಾರವಾದ ಆ ಮತ್ಸ್ಯ ಮತ್ತೊಮ್ಮೆ ಪ್ರತ್ಯಕ್ಷವಾಗಿ ಹಡಗಿನ ಹಗ್ಗವನ್ನು ತನ್ನ ತಲೆಯ ಮೇಲಿದ್ದ ಕೊಂಬಿಗೆ ಸಿಗಿಸಿಕೊಂಡು ಹಡಗನ್ನು ಎಳೆಯುತ್ತಾ ಸಮುದ್ರದೊಳಗಿನಿಂದಲೇ ಹಿಮಾಲಯದತ್ತ ಹೊರಡುತ್ತದೆ.
ಸುತ್ತಲೂ ಒಂದಿಂಚು ಭೂಮಿಯೂ ಇಲ್ಲದ ಹಾಗೆ ಜಲವು ಇಡೀ ಭೂಮಿಯನ್ನು ಆಕ್ರಮಿಸಿಕೊಂಡಿರುತ್ತದೆ. ಎತ್ತ ನೋಡಿದರೂ ಬರೀ ನೀರೋ ನೀರು. ಬಹಳ ಕಾಲ ಅವರುಗಳು ಹಡಗಿನಲ್ಲಿ ತೇಲುತ್ತಾ ಹಿಮಾಲಯ ತಲುಪುತ್ತಾರೆ. ನಂತರ ಹಡಗಿನ ಹಗ್ಗವನ್ನು ಹಿಮಾಲಯದ ಎತ್ತರೆತ್ತರ ಶಿಖರಗಳಿಗೆ ಕಟ್ಟಿ ಹಡಗನ್ನು ನಿಲ್ಲಿಸುತ್ತಾರೆ.
ಸ್ವಲ್ಪ ಸಮಯದ ನಂತರ ಪ್ರಳಯ ಕಡಿಮೆಯಾಗುತ್ತದೆ.
ಪ್ರಳಯ ಪೂರ್ತಿಯಾಗಿ ಇಳಿದ ಮೇಲೆ ಮನು ಸೃಷ್ಟಿಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾನೆ. ತನ್ನ ಜೊತೆಯಲ್ಲಿ ತಂದಿದ್ದ ವಿವಿಧ ಧಾನ್ಯಗಳನ್ನು ಭೂಮಿಯಲ್ಲಿ ನೆಟ್ಟು ಅದರಿಂದ ಮತ್ತಷ್ಟು ಧಾನ್ಯಗಳನ್ನು ಪಡೆಯುತ್ತಾನೆ. ಏಳು ಜನ ಮಹರ್ಷಿಗಳಿಂದ ಹುಟ್ಟಿದವರು ಆ ಮಹರ್ಷಿಗಳ ಹೆಸರಿನ ಗೋತ್ರವನ್ನು ಪಡೆಯುತ್ತಾರೆ. ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಸಂತಾನಾಭಿವೃದ್ಧಿ್ಯಿಂದ ನೂರಾಗಿ, ಸಾವಿರವಾಗಿ, ಲಕ್ಷವಾಗುತ್ತವೆ. ಮತ್ತೊಮ್ಮೆ ಭೂಮಿಯ ಮೇಲೆ ಮನುಕುಲದ ಅಧ್ಯಾಯ ಆರಂಭವಾಗುತ್ತದೆ. ಇವೆಲ್ಲವೂ ಸಾಧ್ಯವಾದುದು ವೈವಸ್ವತ ಮನುವಿನಿಂದ. ಹಾಗಾಗಿ ಮನು ನಮ್ಮ ಮೂಲಪುರುಷ.
**************
ಕೆ.ಎ.ಸೌಮ್ಯ
ಮೈಸೂರು
(Oh Manase 1-15 may 2019)
