ಭೀಮ
"ಅವಮಾನವಿದ್ದಲ್ಲಿ ಪ್ರತೀಕಾರವಿರುತ್ತದೆ"
ಭೀಮನು ಪಂಚ ಪಾಂಡವರಲ್ಲಿ ಎರಡನೆಯವನು. ಅಷ್ಟೇ ಅಲ್ಲ ದ್ರೌಪದಿಯ ಅಚ್ಚುಮೆಚ್ಚಿನ ಗಂಡ ಇವನು. ಗಂಡನಿದ್ದರೆ ಇಂತವನಿರಬೇಕು ಅಂತ ಎಲ್ಲಾ ಮಹಿಳೆಯರೂ ಬಯಸುವಂತೆ ಇರುವವನು ಭೀಮ. ಕಾರಣವೇನೆಂದರೆ ಇಡೀ ಮಹಾಭಾರತದಲ್ಲಿ ದ್ರೌಪದಿಯ ಎಲ್ಲಾ ಆಸೆಗಳನ್ನು ಯಾಕೆ, ಏನು ಅಂತ ಒಂದು ಮಾತೂ ಕೇಳದೇ ನೆರವೇರಿಸಿದವನು ಭೀಮನೊಬ್ಬನೇ. ಹಾಗಾಗಿ ದ್ರೌಪದಿಗೂ ಇವನ ಬಗ್ಗೆ ಕೊಂಚ ಮೃದು ಧೋರಣೆ ಇತ್ತು.
ಇವನು ವಾಯುವಿನ ಮಗ ಆದ್ದರಿಂದ ಮಹಾನ್ ಶಕ್ತಿವಂತ.
ಎಷ್ಟೆಂದರೆ ಇವನ ಹುಟ್ಟಿನ ಬಗ್ಗೆಯೇ ಒಂದು ಕಥೆಯಿದೆ. ಇವನು ಹುಟ್ಟಿದ ಕೂಡಲೇ ಹುಲಿಯ ಘರ್ಜನೆ ಕೇಳಿಸಿತೆಂದು ಕುಂತಿ ಮಗುವನ್ನು ಬೆಟ್ಟದ ಮೇಲಿನಿಂದ ಕೆಳಗೆ ಬೀಳಿಸಿಬಿಡುತ್ತಾಳಂತೆ. ಆದರೆ ಕೆಳಗಿಳಿದು ಬಂದು ನೋಡಿದಾಗ ಮಗುವಿಗೆ ಏನೂ ಆಗಿರುವುದಿಲ್ಲ. ಬದಲಿಗೆ ಬಂಡೆಯೇ ಬಿರುಕು ಬಿಟ್ಟಿರುತ್ತದಂತೆ.
ಇವನ ಶಕ್ತಿಯ ಪರಿಚಯ ಮತ್ತೊಮ್ಮೆ ನಮಗಾಗುವುದು ಕುರುಕ್ಷೇತ್ರ ಯುದ್ಧದಲ್ಲಿ.
ತುಂಬಿದ ಸಭೆಯಲ್ಲಿ ದ್ರೌಪದಿಗೆ ಆದ ಅವಮಾನಕ್ಕೆ ತಕ್ಕ ಪ್ರತೀಕಾರ ತೀರಿಸಲು ಭೀಮನು ಹದಿಮೂರು ವರ್ಷ ತಾಳ್ಮೆಯಿಂದ ಕಾದಿರುತ್ತಾನೆ. ಕಾದಷ್ಟೂ ಸಿಟ್ಟು ಹೆಚ್ಚಾಗುವುದೇ ಹೊರತೂ ಕಡಿಮೆಯಾಗುವುದಿಲ್ಲ. ಮನಸ್ಸಿನೊಳಗೆ ಉರಿವ ಜ್ವಾಲಾಮುಖಿಯನ್ನು ಇರಿಸಿಕೊಂಡೇ ಹನ್ನೆರೆಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮುಗಿಸಿರುತ್ತಾನೆ. ಅವನಿಗಿರುವ ಶಕ್ತಿಗೆ ಒಂದೇ ಬಾರಿಗೆ ಇಡೀ ಕೌರವರನ್ನು ಸದೆಬಡಿಯಬಹುದಿತ್ತು. ಆದರೆ ಅಣ್ಣನ ಆಜ್ಞೆಗೆ ಎದುರಾಗಿ ಏನೂ ಮಾಡದೇ ಸುಮ್ಮನಿರುತ್ತಾನೆ. ಇದರಿಂದ ಅರ್ಥವಾಗುವುದು ಏನೆಂದರೆ ಬರೀ ಕೋಪ ಇದ್ದರೆ ಸಾಲದು, ಸಹನೆಯಿಂದ ಅದನ್ನು ಸಾಕುವ ಶಕ್ತಿಯೂ ಇರಬೇಕು.
ಕುರುಕ್ಷೇತ್ರ ಯುದ್ಧದಲ್ಲಿ ಅಂತೂ ಆ ದಿನ ಬಂದೇ ಬಿಡುತ್ತದೆ.
ದ್ರೌಪದಿಯ ಬಟ್ಟೆ ಸೆಳೆದಿದ್ದ ದುಶ್ಯಾಸನ ಭೀಮನಿಗೆ ಮುಖಾಮುಖಿಯಾಗಿಯೇ ಬಿಡುತ್ತಾನೆ. ಇನ್ನೇನು....? ಹದಿಮೂರು ವರ್ಷಗಳಿಂದ ತಡೆಹಿಡಿದಿದ್ದ ಕೋಪವು ಪ್ರವಾಹೋಪಾದಿಯಲ್ಲಿ ಭೀಮನ ಮುಖದಿಂದ ಹೊರಹೊಮ್ಮಲಾರಂಭಿಸುತ್ತದೆ. ತನ್ನಲ್ಲಿದ್ದ ಅಸ್ತ್ರಗಳನ್ನೆಲ್ಲಾ ಗೊತ್ತು-ಗುರಿಯಿಲ್ಲದೇ ದುಶ್ಯಾಸನನತ್ತ ಹಾರಿಸುತ್ತಾನೆ ಭೀಮ. ದುಶ್ಯಾಸನನೂ ಗಾಬರಿಯಾಗಿ ತನ್ನಲ್ಲಿದ ಶಸ್ತ್ರಗಳನ್ನು ಖಾಲಿ ಮಾಡಿಕೊಳ್ಳುತ್ತಾನೆ.
ಅಸ್ತ್ರ ಮುಗಿದ ಮೇಲೆ ಇಬ್ಬರೂ ರಥದಿಂದ ಜಿಗಿಯುತ್ತಾರೆ. ಇಬ್ಬರ ನಡುವೆ ಮಲ್ಲಯುದ್ಧ ನಡೆಯುತ್ತದೆ. ಆದರೆ ಸುಖವಾಗಿ ಅರಮನೆಯಲ್ಲಿ ಬೆಳೆದ ದುಶ್ಯಾಸನನು ಇಷ್ಟು ವರ್ಷ ಕಾಡಿನಲ್ಲಿ ಬಿಸಿಲು-ಮಳೆಯೆನ್ನದೇ ಸಂಚರಿಸುತ್ತಿದ್ದ ಭೀಮನನ್ನು ಸೋಲಿಸಲಾಗುವುದಿಲ್ಲ. ಶ್ರಮದಿಂದ ಮೈಯಲ್ಲಿ ಕಸುವು ತುಂಬುವುದೇ ಹೊರತೂ ಸೋಮಾರಿತನದಿಂದಲ್ಲ. ಅಲ್ಲದೇ ಕೌರವರ ಕಡೆಯ ಯುದ್ಧಗಳೆಲ್ಲವನ್ನೂ ಬಹುಪಾಲು ಕರ್ಣನೇ ಗೆದ್ದುಕೊಂಡು ಬರುತ್ತಿದ್ದುದರಿಂದ ಧೃತರಾಷ್ಟ್ರನ ಮಕ್ಕಳಿಗೆ ಇಷ್ಟು ದಿನವೂ ಶಸ್ತ್ರ ಹಿಡಿಯುವ ಪ್ರಮೇಯವೇ ಬಂದಿರುವುದಿಲ್ಲ.
ಆದರೆ ಈಗ ದ್ವೇಷದಿಂದ ತುಂಬಿ ತುಳುಕುತ್ತಿರುವ ಭೀಮ ನೇರವಾಗಿ ಎದುರಾಗಿದ್ದಾನೆ.
ಕಲ್ಪನೆಯಲ್ಲಿ ಹಾಗೆ ಮಾಡಿಬಿಡುತ್ತೇನೆ, ಹೀಗೆ ಮಾಡಿಬಿಡುತ್ತೇನೆ ಎಂದುಕೊಂಡಿದ್ದೆಲ್ಲಾ ಬಡಾಯಿ ಅಂತ ದುಶ್ಯಾಸನನಿಗೆ ಬಹುಬೇಗ ಅರ್ಥವಾಗುತ್ತದೆ. ಭೀಮನ ಸಿಟ್ಟೋ ಕ್ಷಣಕ್ಷಣಕ್ಕೂ ಏರುತ್ತಲೇ ಹೋಗುತ್ತಿರುತ್ತದೆ. ಕೌರವರು ಮಾಡಿದ ಅನ್ಯಾಯಗಳನ್ನು ಒಂದೊಂದಾಗಿ ನೆನೆಸಿಕೊಂಡು ಭೀಮ ಕಿಚ್ಚು ತಡೆಯಲಾಗದೇ ದುಶ್ಯಾಸನನ ಮೇಲೆರಗಿ ಅವನ ಹಲ್ಲು ಮುರಿದು, ಅವನ ಹೃದಯ ಬಗೆದು, ರಕ್ತವನ್ನು ಮೊಗೆಮೊಗೆದು ಕುಡಿಯುತ್ತಾನೆ. ಇದು ವಿಕೃತಿ ಇರಬಹುದು. ಆದರೆ ತಮಗೆ ಆದ ಅವಮಾನಕ್ಕೆ ಆತ ಪ್ರತೀಕಾರ ತೆಗೆದುಕೊಳ್ಳುತ್ತಿದ್ದಾನಷ್ಟೇ. ಅವಮಾನವೇ ಆಗದಿದ್ದರೆ ಪ್ರತೀಕಾರದ ಮಾತೆಲ್ಲಿಯದು?
ಭೀಮನ ಈ ರೌದ್ರಾವತಾರ ನೋಡಿ ಕೌರವ ಸೇನೆ ಗರಬಡಿದಂತೆ ನಿಲ್ಲುತ್ತದೆ.
ಕಾಡಿನಲ್ಲಿ ಸಂಚರಿಸುತ್ತಾ, ಬೇರು-ಗೆಡ್ಡೆಗೆಣಸು ತಿಂದುಕೊಂಡು ಇದ್ದವರು ರಕ್ತ ಕುಡಿಯುತ್ತಿದ್ದಾರೆಂದರೆ ಯಾರು ತಾನೇ ನಂಬುತ್ತಾರೆ? ಮುಂದೆ ಹೋಗಿ ತಮ್ಮವನೇ ಆದ ದುಶ್ಯಾಸನನನ್ನು ತಾವು ಕಾಪಾಡಬೇಕು ಅನ್ನುವುದನ್ನೂ ಮರೆತು ದಂಗುಬಡೆದಂತೆ ನೋಡುತ್ತಾ ನಿಲ್ಲುತ್ತಾರೆ. ಮುಂದೆ ಹೋಗಲು ಭಯವೋ ಅಥವಾ ಕ್ರೌರ್ಯ ನಡೆಯುತ್ತಿರುವಾಗ ನೋಡುವ ಆಸೆಯೋ...
ಅಂತೂ ಯಾರೂ ಮುಂದೆ ಬರುವುದಿಲ್ಲ.
ಆದರೆ ವಿಷಯ ತಿಳಿದ ದ್ರೌಪದಿ ತಾನೊಬ್ಬಳೇ ಭೀಮನ ಬಳಿಗೆ ಹೋಗುತ್ತಾಳೆ. ಅವಳ ಧೈರ್ಯ ಗಮನಿಸಿ. ಗಂಡಸರೇ ಹೋಗಲು ಹೆದರುತ್ತಿರುವೆಡೆ ಮಹಿಳೆಯಾಗಿ ಅದೂ ಒಂಟಿಯಾಗಿ ಹೋಗುತ್ತಾಳೆ. ಏಕೆಂದರೆ ಅವಳಿಗೆ ಸಮಯ-ಸಂದರ್ಭದ ಅರಿವಿರುತ್ತದೆ. ಮುಂದೇನಾಗುತ್ತದೆ ಎಂಬ ವಿವೇಚನೆಯೂ ಇರುತ್ತದೆ. ಹಾಗಾಗಿ ಅವಳು ಹೋದಾಗ ಅವಳಿಗಾಗಿಯೇ ಕಾಯುತ್ತಿದ್ದ ಭೀಮ ದುಶ್ಯಾಸನನ ಹೃದಯದಿಂದ ತೆಗೆದ ರಕ್ತದಿಂದ ದ್ರೌಪದಿಯ ಕೂದಲಿಗೆ ಹಚ್ಚಿ ಮುಡಿ ಕಟ್ಟುತ್ತಾನೆ. ಈ ರೀತಿ ತನ್ನ ಪತ್ನಿಯ ಆಸೆಯನ್ನು ಯಶಸ್ವಿಯಾಗಿ ಈಡೇರಿಸುತ್ತಾನೆ.
ಈ ಸಂದರ್ಭದಲ್ಲಿ ಮುಗ್ಧನೆಂದರೆ ದುಶ್ಯಾಸನ ಒಬ್ಬನೇ.
ಏಕೆಂದರೆ ಪರನಾರಿಯ ಸೀರೆ ಸೆಳೆಯುವಾಗ ಮುಂದೆ ಇಂತಹಾ ಒಂದು ಪರಿಸ್ಥಿತಿ ಎದುರಾಗಬಹುದು ಎಂಬ ಕಲ್ಪನೆಯೇ ಅವನಿಗೆ ಇರಲಿಲ್ಲ. ಇಂದೂ ಸಹ ಯುದ್ಧಕ್ಕೆ ಹೊರಡುವಾಗಲೂ ತಾನು ಹೀಗೆ ಭೀಕರವಾಗಿ ಸಾಯಿಸಲ್ಪಡುತ್ತೇನೆ ಎಂಬ ಕಿಂಚಿತ್ತು ಸುಳಿವೂ ಸಹ ಅವನಿಗೆ ಬಂದಿರಲಿಲ್ಲ. ಪಾಂಡವರು ಏನು ತಾನೇ ಮಾಡಿಬಿಡುತ್ತಾರೆ ಎಂಬ ಉಡಾಫೆಯಿಂದಲೇ ಬಂದು ಭೀಮನ ಕೈಗೆ ಸಿಕ್ಕು ಹತನಾಗಿ ಹೋಗುತ್ತಾನೆ.
ನೋಡುನೋಡುತ್ತಲೇ ತನಗೇನು ಆಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅವನ ಜೀವನದ ಅಂತ್ಯವೇ ಆಗಿಹೋಗುತ್ತದೆ. ಆದರೆ ಇಂತಹಾ ಒಂದು ಸಂದರ್ಭ ಬರುತ್ತದೆ ಅಂತ ಅವನು ಉಹಿಸಿಕೊಳ್ಳದೇ ಹೋದದ್ದು ಅವನ ತಪ್ಪಾಗುತ್ತದೆ. ಗಾಯಗೊಂಡ ಹುಲಿಯು ಯಾವಾಗಲೂ ಪ್ರತೀಕಾರ ಬಯಸುತ್ತಿರುತ್ತದೆ. ಇದು ಅರ್ಥವಾಗದೇ ದುಶ್ಯಾಸನ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.
ಪಾಂಡವರು ಮತ್ತು ಕೌರವರು ಇಬ್ಬರೂ ಒಂದೇ ಗುರುವಿನಿಂದ ಶಿಕ್ಷಣ ಪಡೆದರೂ ಸಹ ಇಬ್ಬರ ಆಲೋಚನೆಗಳು ಅವರವರ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ಸಂಸ್ಕಾರಕ್ಕೆ ತಕ್ಕ ಪ್ರತಿಫಲವನ್ನು ಇಬ್ಬರೂ ಪಡೆಯುತ್ತಾರೆ. ಪಾಂಡವರ ತಾಳ್ಮೆಯಿಂದಾಗಿ ಕೊನೆಗೆ ಸಿಂಹಾಸನವೂ ದೊರಕುತ್ತದೆ. ಆದರೆ ಅದೇ ಸಿಂಹಾಸನ ಪಾಂಡವರಿಗೆ ಸಿಗಬಾರದೆಂದು ಲೆಕ್ಕವಿಲ್ಲದಷ್ಟು ಷಡ್ಯಂತ್ರ ರಚಿಸಿದ್ದ ಕೌರವರು ಒಬ್ಬರೂ ಇಲ್ಲದೇ ಹತವಾಗಿ ಹೋಗುತ್ತಾರೆ.
Published in oh Manase on Oct 1-15 2019
**************
