ಅಪರ್ಣೆ

 


ತನ್ನ ಜೀವಕ್ಕೆ ಜೀವವಾಗಿದ್ದ ದಾಕ್ಷಾಯಿಣಿಯನ್ನು ಈಶ್ವರ ಕಳೆದುಕೊಂಡಿದ್ದ ದಿನಗಳು‌ ಅವು. ವಿರಹ ಸಹಿಸಲಾಗದ ಮಹಾದೇವ ಸೃಷ್ಟಿಕ್ರಿಯೆಯಲ್ಲಿ ತನ್ನ ಪಾತ್ರವೇನು ಎನ್ನುವುದನ್ನೇ ಮರೆತು ಗಾಢವಾದ ಧ್ಯಾನದಲ್ಲಿ ಮುಳುಗಿ ಹೋಗಿದ್ದ. 


ಹಿರಿಯರು ಒಂದು ಮಾತು ಹೇಳ್ತಾರೆ. 


ಕೋಪ ಬಂದಾಗ ಸುಮ್ಮನಿದ್ದುಬಿಡಬೇಕು‌ ಅಂತ. ಈಗ ಪರಮಶಿವ ಆ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದ. ಅವನು ಧ್ಯಾನ ಬಿಟ್ಟು ಎದ್ದರೆ ಜಗತ್ ಪ್ರಳಯವಾಗುತ್ತಿದ್ದುದು ಖಂಡಿತಾ. ಅಷ್ಟು ಕೋಪವಿತ್ತು ಅವನಿಗೆ. ಅದಕ್ಕಾಗಿ ಧ್ಯಾನದ ಮೂಲಕ ತನಗೆ ತಾನೇ ಸಮಾಧಾನಿಯಾಗುವ ಪ್ರಯತ್ನ ಮಾಡುತ್ತಿದ್ದ.


ಇದೊಂದು ಕಡೆಯಾದರೆ ಮತ್ತೊಂದು ಕಡೆ ತಾರಕಾಸುರ ಎಂಬ ರಾಕ್ಷಸನ ಉಪಟಳ ದೇವತೆಗಳನ್ನು ಕಾಡುತ್ತಿತ್ತು. ಈ ರಾಕ್ಷಸನ ಸಾವು ಪರಮಶಿವನ ಮಗನ ಕೈಯಲ್ಲಿ ಆಗಬೇಕು ಎನ್ನುವುದು ವಿಧಿನಿಯಮ. ಎಲ್ಲಿಯ ಮಗ? ಪ್ರೀತಿಸುವ ಹೆಂಡತಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ ಶಿವ. 


ಹೆಂಡತಿಯೂ ಇಲ್ಲ... ಮಗನೂ ಇಲ್ಲ.. ಹಾಗಾಗಿ ತಾರಕ ಅಮರ! ಅವನನ್ನು ನಾಶಪಡಿಸುವವರೇ ಇರಲಿಲ್ಲ. ಆದರೆ ಅವನಿಗೆ ಗೊತ್ತಿರಲಿಲ್ಲ. ಸತಿಯೇ ಪರ್ವತರಾಜನ ಪುತ್ರಿಯಾಗಿ ಮರುಹುಟ್ಟು ಪಡೆದು ಪಾರ್ವತಿ ದೇವಿಯಾಗಿ ಅವತರಿಸಿದ್ದಾಳೆ ಅಂತ.


ಪಾರ್ವತಿಯೂ ಶಿವನ‌ ಪರಮ ಭಕ್ತೆ. ಮಹರ್ಷಿ ನಾರದರಿಂದ ಶಿವನ ಬಗ್ಗೆ ತಿಳಿದಾಗಿನಿಂದ ಮದುವೆಯಾದರೆ ಶಿವನನ್ನೇ ಎಂಬ ಹಠ ಅವಳದ್ದು. ಅವನಿಗಾಗಿ ರಾಜಭೋಗಗಳನ್ನು ತೊರೆದು ಶಿವನಿರುವಲ್ಲಿಗೆ ಬಂದು ಧ್ಯಾನದಲ್ಲಿದ್ದ ಶಿವನ ಸೇವೆ ಮಾಡುತ್ತಾ ಕಾಲಕಳೆಯುತ್ತಿದ್ದಳು. 


ಆಕೆಯ ಗುರಿ ಒಂದೇ ಶಿವನೊಂದಿಗೆ ಮದುವೆಯಾಗುವುದು. ಆದರೆ ಈ ಶಿವನೋ... ಧ್ಯಾನದಿಂದ ಏಳುವ ಲಕ್ಷಣವೇ ಕಾಣುತ್ತಿರಲಿಲ್ಲ. ಅತ್ತ ದಿನದಿನವೂ ತಾರಕಾಸುರನ ಉಪಟಳ ಹೆಚ್ಚಾಗುತ್ತಲೇ ಇತ್ತು. ಹಾಗಾಗಿ ಹೇಗಾದರೂ ಮಾಡಿ ಶಿವನನ್ನು ಧ್ಯಾನದಿಂದ ಎಬ್ಬಿಸಿ ಅವನ ಗಮನ ಪಾರ್ವತಿಯ ಮೇಲೆ ಹರಿಯುವಂತೆ ಮಾಡಬೇಕಿತ್ತು. ಅವರಿಬ್ಬರ ಮದುವೆಯಿಂದಲೇ ಲೋಕದ ಉದ್ಧಾರ ಸಾಧ್ಯವಾಗುತ್ತಿತ್ತು.

ಆದರೆ ಶಿವನನ್ನು ಎಚ್ಚರವಾಗುವಂತೆ ಮಾಡುವುದು ಹೇಗೆ?

ಮನ್ಮಥ ಈ ಕೆಲಸ ಮಾಡಲು ಒಪ್ಪಿಕೊಂಡ. ಮೊದಲೇ ಅವನಿಗೆ ತನ್ನ ಮೇಲೆಯೇ ಬಹಳ ದುರಭಿಮಾನವಿತ್ತು. ಕಾಮಕ್ಕೆ ಸೋಲದವರು ಯಾರೂ ಇಲ್ಲ ಅಂತ ಅವನ ಅಭಿಪ್ರಾಯವಾಗಿತ್ತು. ತಾನೊಂದು ಬಾಣ ಹೂಡಿದರೆ ಸಾಕು ಮನುಷ್ಯ, ದೇವತೆಗಳಾದಿಯಾಗಿ ಎಲ್ಲರೂ ತನಗೆ ಶರಣಾಗುತ್ತಾರೆ ಎನ್ನುವ ಅಹಂ ಇತ್ತು. 


ಅದೇ ರೀತಿ ಶಿವನ ಮೇಲೆ ತನ್ನ ಬಾಣ ಪ್ರಯೋಗಿಸಿದರೆ ಶಿವ ಧ್ಯಾನದಿಂದ ಎಚ್ಚರಗೊಳ್ಳುತ್ತಾನೆ. ಆಗ ಕೋಪಗೊಂಡ ಅವನ ಮುಂದೆ ಗಿರಿಜೆಯನ್ನು ನಿಲ್ಲಿಸಿದರೆ ಅವನಿಗೆ ಅವಳ ಮೇಲೆ ಪ್ರೇಮ ಉಂಟಾಗುತ್ತದೆ. ನಂತರ ಅವಳೊಂದಿಗೆ ವಿವಾಹ.. ನಂತರ ಅವರಿಬ್ಬರಿಗೆ ಪುತ್ರಜನನ.. ನಂತರ ಆ ಸಂತಾನದಿಂದ ತಾರಕನ ಸಂಹಾರ! ಕಲ್ಪನೆಯೇನೋ ಚೆನ್ನಾಗಿಯೇ ಇತ್ತು. ಆದರೆ ಆದದ್ದೇ ಬೇರೆ.


ಮೊದಲೇ ವಿರಹದ ಬೆಂಕಿಯಲ್ಲಿ ಕೊತಕೊತನೆ ಕುದಿಯುತ್ತಿದ್ದ ಈಶ್ವರನಿಗೆ ಧ್ಯಾನ ಮಾಡಲೂ ಅಡ್ಡಿ ಉಂಟಾದಾಗ ಕೋಪ ಮಿತಿ ಮೀರಿತು. ಧ್ಯಾನದಿಂದ ಎಚ್ಚರಗೊಂಡ ಈಶ್ವರ ಇದಕ್ಕೆ ಕಾರಣ ಯಾರು ಅಂತ ಸುತ್ತಲೂ ನೋಡಿದ. ತನ್ನ ಬಳಿಯೇ ನಿಂತಿದ್ದ ಗಿರಿಜೆಯನ್ನು ಕಣ್ಣೆತ್ತಿಯೂ ನೋಡದೇ ತನಗೆ ಬಾಣ ಹೂಡಿದ ಮನ್ಮಥನನ್ನು ತೀಕ್ಷ್ಣವಾಗಿ ನೋಡಲು ಶುರು ಮಾಡಿದ. 


ಮನ್ಮಥ ಇದನ್ನು ನಿರೀಕ್ಷಿಸಿರಲಿಲ್ಲ. 


ತಕ್ಷಣ ಅವನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ತನ್ನ ಪುಷ್ಪಬಾಣ ಈಶ್ವರನಲ್ಲಿ ಯಾವ ಕಾಮನೆಯನ್ನೂ ಬಡಿದೆಬ್ಬಿಸಲಿಲ್ಲ ಎಂಬ ವಿಚಾರ ಅವನನ್ನು ವಿಚಲಿತಗೊಳಿಸಿತು. ತನ್ನ ಸೋಲನ್ನು ಆತ ಒಪ್ಪಲು ತಯಾರಿರಲಿಲ್ಲ. ತಾನೂ ಮಹದೇವನತ್ತ ದೃಷ್ಟಿ ಹರಿಸಿದ. ಆದರೆ ಮಹದೇವನ ಕಣ್ಣೋಟದ ಜ್ವಾಲೆಗಳು ಕ್ರಮೇಣ ಉಗ್ರರೂಪ ಪಡೆದು ಮನ್ಮಥನನ್ನು ಆಪೋಶನ ಪಡೆದುಕೊಂಡಿತು. ಮನ್ಮಥ ಸುಟ್ಟು ಬೂದಿಯಾದ. ನಂತರ ಈಶ್ವರ ಮತ್ತೆ ಧ್ಯಾನಕ್ಕೆ ಹೊರಟುಹೋದ.


ಗಿರಿಜೆಗೆ ಅವಮಾನವಾದಂತಾಯ್ತು.


ತಾನು ಹಗಲೂ-ರಾತ್ರಿ, ಬಿಸಿಲು-ಮಳೆ ಎನ್ನದೇ ಈಶ್ವರನ ಸೇವೆ ಮಾಡಿದ್ದೇನೆ. ಇವನು ತನ್ನ ಕಡೆ ತಿರುಗಿಯೂ ನೋಡಲಿಲ್ವಲ್ಲ ಅಂತ ಆಕ್ರೋಶ ಸಿಡಿಯಿತು. ಅಂದಿನಿಂದಲೇ ತಾನೂ ಕಠಿಣ ವ್ರತ ಕೈಗೊಂಡಳು ಪಾರ್ವತಿ. ಕಠಿಣವೆಂದರೆ ಬರೀ ಬಾಯಿ ಮಾತಿನಲ್ಲಲ್ಲ. ಒಂದು ಪರ್ಣ ಎಂದರೆ ಒಂದು ಗಿಡದ ಎಲೆಯನ್ನೂ ಸಹ ಸೇವಿಸದೇ ವ್ರತ ಕೈಗೊಂಡಳು. 


ಅವಳ ಈ ವ್ರತಕ್ಕೆ ಶಿವನೇ ಬೆರಗಾದ, ಮೆಚ್ಚಿದ, ಆಕೆಯನ್ನು ವರಿಸಿದ. ಅವರಿಗೆ ಹುಟ್ಟಿದ ಪುತ್ರ ತಾರಕನನ್ನು ಸಂಹರಿಸಿದ. ಆಕೆ ಒಂದು ಪರ್ಣವನ್ನೂ ಸೇವಿಸದೇ ವ್ರತ ಮಾಡಿದ್ದರಿಂದ ಆಕೆಗೆ ಅಪರ್ಣ ಎಂಬ ಹೆಸರು ಬಂದಿತು.

(Published in oh Manase on 16-31 Oct 2019)


*********


ಕೆ.ಎ.ಸೌಮ್ಯ

ಮೈಸೂರು

Popular posts from this blog

ಸೈರಂಧ್ರಿ ಎಂಬ ಅಗ್ನಿಕನ್ಯೆ

ಶಾಕುಂತಲೆ-ದುಶ್ಯಂತ

ಕುಂತಿ