ಬಲಿ ಚಕ್ರವರ್ತಿ
ಜೀವನದಲ್ಲಿ ಯಾವುದೇ ವಿಷಯವಾಗಲೀ ಯಾವುದೂ ಅತಿಯಾಗಬಾರದು. ಎಲ್ಲವೂ ಹಿತ-ಮಿತವಾಗಿ ಇರಬೇಕು. ಸದಾ ಕಾಲವೂ ಎಲ್ಲರನ್ನೂ ಪ್ರೀತಿಸುತ್ತಲೇ ಇರುವುದು ಅಥವಾ ದ್ವೇಷಿಸುತ್ತಲೇ ಇರುವುದು ನಮ್ಮಿಂದಾಗದು. ಸದಾ ಒಳ್ಳೆಯವರಾಗಿ ಇರುವುದೂ ಅಥವಾ ಕೆಟ್ಟವರಾಗಿ ಇರುವುದೂ ಕೂಡ ಕಷ್ಟವೇ.
ಚೂರೂ ದ್ವೇಷವಿಲ್ಲದೇ ಧಾರಾಳವಾಗಿ ಒಳ್ಳೆಯತನ ತೋರುವವರಿಗೆ ನಮ್ಮ ಜನ ಬೆಲೆ ಕೊಡುವುದೇ ಇಲ್ಲ. ಆದರೆ ಧಾರಾಳಿಗಳಿಗೆ ಅದು ಅರ್ಥವಾಗೋಲ್ಲ. ಆಗವರಿಗೆ ಅದನ್ನು ಮನವರಿಕೆ ಮಾಡಿಸಬೇಕಾಗುತ್ತದೆ.
ಹೇಗೆಂದರೆ ದೈತ್ಯ ರಾಜ ಬಲಿ ಚಕ್ರವರ್ತಿಯು ತನ್ನ ಒಳ್ಳೆಯತನದಿಂದ ಜನಾನುರಾಗಿ ರಾಜನಾಗಿದ್ದ. ಜನರು ಆತನ ಆಳ್ವಿಕೆಗೆ ಮನ ಸೋತಿದ್ದರು. ರಾಕ್ಷಸನಾಗಿದ್ದರೂ ಸಹ ಜನರಿಂದ ಗೌರವ ಪಡೆದಿದ್ದವನು ಈತ. ಆದರೆ ಅವನ ಈ ಒಳ್ಳೆಯತನ ಕೆಲವು ದುಷ್ಟರಿಗೆ ಸಹಾಯಕವಾಗಿದೆ ಎನ್ನುವ ವಿಷಯವನ್ನು ಅವನಿಗೆ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಇದನ್ನು ಆತನಿಗೆ ತಿಳಿಸಬೇಕಿತ್ತು.
ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಕೆಲವೊಮ್ಮೆ ನಮ್ಮನ್ನು ಆಳುವವರು ಜನರ ಹಿತದೃಷ್ಟಿಯಿಂದ ಕೆಲವು ಕಾನೂನು-ಕಟ್ಟಳೆ ಮಾಡಬೇಕಾಗುತ್ತದೆ. ಆ ಕಾನೂನು ಮೀರುವವರಿಗೆ ಶಿಕ್ಷೆಯನ್ನೂ ವಿಧಿಸಬೇಕಾಗುತ್ತದೆ. ಹಾಗೆ ಮಾಡದೇ ಎಲ್ಲರ ಜೊತೆಗೂ ಒಳ್ಳೆಯತನದ ವರ್ತನೆ ಇದ್ದರೆ ದುರುಳರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
ಇದರ ನೇರ ಪರಿಣಾಮ ಜನರ ಮೇಲೆ ಆಗುತ್ತದೆ.
ಬಲಿ ಚಕ್ರವರ್ತಿ ಯಾವುದೋ ಪ್ರಾಂತ್ಯದ ರಾಜನಾಗಿದ್ದರೆ ಬೇರೆ ರಾಜರು ದಂಡೆತ್ತಿ ಆತನನ್ನು ಸೋಲಿಸಬಹುದಿತ್ತು. ಆದರೆ ಬಲಿ ಚಕ್ರವರ್ತಿಯು ಹೆಸರಿಗೆ ತಕ್ಕಂತೆ ಭೂಮಿ, ಆಕಾಶ, ಸ್ವರ್ಗ ಎಲ್ಲವನ್ನೂ ಗೆದ್ದಿದ್ದ. ಈಗವನ ಎದುರು ನಿಂತು ಸೆಣಸುವವರು ಯಾರೂ ಇರಲಿಲ್ಲ.
ಹಾಗಾಗಿ ಶಕ್ತಿಯಿಂದಾಗದ ಕೆಲಸಕ್ಕೆ ಯುಕ್ತಿ ಬಳಸುವುದೆಂದು ತೀರ್ಮಾನವಾಯ್ತು. ಆತನ ಒಳ್ಳೆಯತನವೇ ಆತನ ಮರಣಕ್ಕೆ ಮುನ್ನುಡಿ ಬರೆಯುತ್ತದೆ ಅಂತ ಎಲ್ಲರೂ ಯೋಚಿಸಿದರು. ಅದರ ಫಲವಾಗಿ ವಾಮನನ ಜನನವಾಯ್ತು. ವಾಮನ ಕುಳ್ಳಗಾತ್ರದ ಬ್ರಾಹ್ಮಣ ವಟುವಾಗಿದ್ದ. ನೋಡಲು ಮುದ್ದು ಮುದ್ದಾದ ಬಾಲಕನಾಗಿದ್ದ 'ವಾಮನ' ಚಕ್ರವರ್ತಿ ಬಲಿ ನಡೆಸುತ್ತಿದ್ದ ಮಹಾ ಯಜ್ಞಕ್ಕೆ ಬರುತ್ತಾನೆ. ಆತ ಬಲಿ ಚಕ್ರವರ್ತಿಯ ಬಳಿ ಹೋದರೆ ಇವನ ಆಕಾರ ಕಂಡು ಯಾರೂ ಅನುಮಾನ ಪಡುವುದಿಲ್ಲ ಅಂತ ಎಲ್ಲರ ಲೆಕ್ಕಾಚಾರವಾಗಿತ್ತು.
ಅದೂ ನಿಜವೇ...
ಜಗತ್ತನ್ನೇ ಗೆದ್ದ ಮಹಾಬಲಿಗೆ ಚೋಟುದ್ದ ವಾಮನ ಯಾವ ಲೆಕ್ಕ? ಎಂತಹಾ ಘಟಾನುಘಟಿಗಳನ್ನು ಯುದ್ಧದಲ್ಲಿ ಸೋಲಿಸಿದವನಿಗೆ ಬಾಲಕನನ್ನು ಕಂಡು ಕಿಂಚಿತ್ತೂ ಅನುಮಾನ ಬರಲಿಲ್ಲ. ಹೇಗಿದ್ದರೂ ಬಾಲಕ ಯುದ್ಧ ಮಾಡೋಲ್ಲ. ಏಕೆಂದರೆ ಬ್ರಾಹ್ಮಣ. ಹೆಚ್ಚೆಂದರೆ ದಾನ ಕೇಳಬಹುದು. ತನ್ನ ಬಳಿ ಏನುಂಟು, ಏನಿಲ್ಲ.. ಕೇಳಿದ್ದಕ್ಕಿಂತ ಹೆಚ್ಚೇ ಕೊಟ್ಟರಾಯ್ತು ಮೀಸೆ ತಿರುವಿಕೊಂಡ ಬಲಿ.
ಆದರೆ ದೈತ್ಯ ಗುರು ಶುಕ್ರಾಚಾರ್ಯರಿಗೆ ಏನೋ ಸಂಶಯ. ಅವರ ಕೆಲಸ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ರೀತಿ. ಶತೃಗಳ ಆಕ್ರಮಣವನ್ನು ತಾವು ಮೊದಲೇ ಊಹಿಸಿ ಅದರಿಂದ ರಾಜನನ್ನು ರಕ್ಷಿಸುವುದು ಅವರ ಕರ್ತವ್ಯ. ಅದಕ್ಕಾಗಿ ಎಲ್ಲರ ಮೇಲೆಯೂ ಅನುಮಾನ ಪಡುತ್ತಿರುವುದೇ ಅವರ ಕೆಲಸ. ಹಾಗಾಗಿಯೇ ಪುಟ್ಟ ಗಾತ್ರದ ವಾಮನನ ಮೇಲೆಯೂ ಅವರು ಅನುಮಾನ ಪಟ್ಟಾಗ ಬಲಿಗೆ ರೇಗಿತು.
ದಾನ ಕೇಳಲು ಬಂದವನನ್ನೂ ಸಂಶಯದ ದೃಷ್ಟಿಯಿಂದ ನೋಡಿದ್ದು ಅವನಿಗೆ ಹಿಡಿಸಲಿಲ್ಲ.
ಶುಕ್ರಾಚಾರ್ಯರ ಕಿವಿ ಮಾತನ್ನು ನಿರ್ಲಕ್ಷಿಸಿ ವಾಮನನ ಬಳಿ ಏನು ಬೇಕೆಂದು ಕೇಳಿದ. ಆಗ ವಾಮನ ಕೇಳಿದ್ದು ಬರೇ ಮೂರೇ ಮೂರು ಹೆಜ್ಜೆಗಳ ಭೂಮಿಯನ್ನು. ವಾಮನನ ಬೇಡಿಕೆ ಕೇಳಿ ಬಲಿ ಚಕ್ರವರ್ತಿಗೆ ನಗು ತಡೆಯಲಾಗಲಿಲ್ಲ. ಶುಕ್ರಾಚಾರ್ಯರ ಕಡೆ ತಿರುಗಿ ಬರೀ ಮೂರು ಹೆಜ್ಜೆ ಭೂಮಿಯಷ್ಟೇ ಅವನು ಕೇಳಿದ್ದು, ನೀವು ನೋಡಿದ್ರೆ ಇಷ್ಟು ಗಾಬರಿಯಾಗಿದ್ದೀರಿ ಅಂತ ಹೇಳುವಷ್ಟರಲ್ಲಿ ವಾಮನ ದೈತ್ಯಾಕಾರವಾಗಿ ಬೆಳೆಯುತ್ತಾ ಹೋದ. ಬೆಳೆದು ಬೆಳೆದು ಭೂಮಿ-ಆಕಾಶ ಒಂದಾಗುವಂತೆ ನಿಂತ.
ದಾನ ಕೊಡಲು ಇತ್ತ ತಿರುಗಿದ ಬಲಿಗೆ ಕಂಡಿದ್ದು ವಾಮನನ ಕಾಲುಗಳು ಮಾತ್ರ. ತಲೆ ಎಷ್ಟು ಎತ್ತರದಲ್ಲಿತ್ತೋ ಕಾಣಲೇ ಇಲ್ಲ. ಆಗ ಅವನಿಗೆ ನಡುಕ ಶುರುವಾಯಿತು. ವಾಮನನು ತನ್ನ ಒಂದು ಹೆಜ್ಜೆಯನ್ನು ಇಡೀ ಭೂಮಿಯ ಮೇಲಿಟ್ಟು, ಮತ್ತೊಂದು ಹೆಜ್ಜೆಗೆ ಆಕಾಶವನ್ನು ನುಂಗಿ, ಕಡೆಯ ಹೆಜ್ಜೆ ಎಲ್ಲಿಡಲೆಂದು ಕೇಳುತ್ತಾನೆ. ಬಲಿಗೆ ಏನೂ ತೋಚುವುದೇ ಇಲ್ಲ. ಈವರೆಗೂ ಅವನು ಗೆದ್ದ ಎಲ್ಲವೂ ವಾಮನನ ಹಿಡಿತಕ್ಕೆ ಬಂದಿತ್ತು. ಕೊಡಲು ಇನ್ನೇನೂ ಉಳಿದಿರಲಿಲ್ಲ ಅವನ ಬಳಿ. ಆದರೆ ಮಾತಿಗೆ ತಪ್ಪುವಂತಿರಲಿಲ್ಲ.
ಮೊದಲೇ ತನ್ನ ಒಳ್ಳೆಯತನಕ್ಕೆ , ದಾನ-ಧರ್ಮಕ್ಕೆ ಹೆಸರುವಾಸಿಯಾಗಿದ್ದವನು. ಈಗ ಆ ಒಳ್ಳೆಯತನ ಹೇಗೆ ಬಿಡಲು ಸಾಧ್ಯ? ಹಾಗಾಗಿಯೇ ವಾಮನನಿಗೆ ಕೊನೆಯ ಹೆಜ್ಜೆಯನ್ನು ತನ್ನ ತಲೆಯ ಮೇಲೆ ಇಡುವಂತೆ ಕೋರುತ್ತಾನೆ. ವಾಮನ ಅವನ ತಲೆ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾನೆ.
ಇಲ್ಲಿಗೆ ವಾಮನನ ಅವತಾರ ಸಮಾಪ್ತಿ.
ಆದರೆ ಜನರು ಇದುವರೆಗೂ ಬಲಿ ಚಕ್ರವರ್ತಿಯನ್ನು ನೆನಪಿಟ್ಟುಕೊಂಡಿದ್ದಾರೆ. ಪ್ರತೀ ವರ್ಷವೂ ಬಲಿಪಾಡ್ಯಮಿಯಂದು ಬಲಿಯು ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಅಂತ ಪ್ರತೀತಿಯಿದೆ. ಆ ದಿನ ಜನರು ದೀಪಗಳನ್ನು ಹಚ್ಚಿ, ಪಟಾಕಿ ಸುಟ್ಟು ಸಂಭ್ರಮಿಸುತ್ತಾರೆ. ಬಹುಶಃ ಅಸುರನಾದರೂ ಜನರ ಮನಸ್ಸಿನಲ್ಲಿ ಸ್ಥಾನ ಪಡೆದವನು ಇವನೊಬ್ಬನೇ ಇರಬೇಕು.
Published in oh Manase on 1-15 Aug 2019
Published in oh Manase on 1-15 Aug 2019
**********
ಸೌಮ್ಯ ಕೆ ಎ
ಮೈಸೂರು
